ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುತ್ತಿಗೆ ಕಾರ್ಮಿಕರಿಂದ ಧರಣಿ ಆರಂಭ

ಮುಧೋಳ: ಆರು ತಿಂಗಳಿಂದ ವೇತನ ನೀಡದ ನಗರಸಭೆ; ಸ್ಪಂದಿಸದ ಗುತ್ತಿಗೆದಾರರು
Last Updated 27 ಮಾರ್ಚ್ 2018, 4:40 IST
ಅಕ್ಷರ ಗಾತ್ರ

ಮುಧೋಳ: ‘ಆರು ತಿಂಗಳಿಂದ ಸಂಬಳ ನೀಡಿಲ್ಲ. ದುಬಾರಿ ಬಡ್ಡಿಯಿಂದ ಹಣ ತಂದು ಜೀವನ ನಿರ್ವಹಿಸುವು ಕಷ್ಟವಾಗಿದೆ. ನಮ್ಮ ಬಾಕಿ ಸಂಬಳವನ್ನು ಪಾವತಿಸುವವರೆಗೆ ನಾವು ಕೆಲಸ ನಿರ್ವಹಿಸುವುದಿಲ್ಲ’ ಎಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದ ಮುಂದೆ ಗುತ್ತಿಗೆ ಕಾರ್ಮಿಕರು ಸೋಮವಾರ ಧರಣಿ ನಡೆಸಿದರು.

‘ನಮಗೆ ಬರಬೇಕಾದ ಹಣ ನೀಡಿ. ನಾವು ಸ್ವಂತ ಹಣದಿಂದ ಕಸಬರಿಗೆ, ಬುಟ್ಟಿ ತಂದು ನಗರವನ್ನು ಸ್ವಚ್ಛಗೊಳಿಸುತ್ತಿದ್ದೇವೆ. ಯಾರೂ ನಮಗೆ ಸ್ಪಂದಿಸುತ್ತಲ್ಲ. ನಮಗೆ ನೀಡಬೇಕಾದ ಸಮವಸ್ತ್ರ ನೀಡಿಲ್ಲ. ಎಪಿಎಫ್ ಭರಿಸಿದ ಪಾವತಿ ರಸೀದಿ ನೀಡಿಲ್ಲ. ಎಎಸ್‌ಐ ಕಾರ್ಡ್ ನೀಡಿಲ್ಲ’ ಎಂದು ನೋವು ತೊಡಿಕೊಂಡರು.

‘ನಗರಸಭೆ ಗುತ್ತಿಗೆದಾರರಿಗೆ ಹಣ ನೀಡಿಲ್ಲ. ಗುತ್ತಿಗೆದಾರರು ಕಾರ್ಮಿಕರಿಗೆ ಹಣ ನೀಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಈ ಸಮಸ್ಯೆ ಬಗೆಹರಿಸಿ ನೈರ್ಮಲ್ಯದ ಬಗ್ಗೆ ಕಾಳಜಿವಹಿಸಲು ಮುಂದಾಗಬೇಕು. ನಗರದಲ್ಲಿ ಚಿಕೂನ್‌ ಗುನ್ಯಾ, ಡೆಂಗಿ ಕಾಯಿಲೆ ಹರಡುತ್ತಿರುವ ಈ ಸಂದರ್ಭದಲ್ಲಿ ಕಾರ್ಮಿಕರು ಕೆಲಸ ನಿಲ್ಲಿಸಿದರೆ ಸಾರ್ವಜನಿಕರ ತೊಂದರೆ ತಪ್ಪಿದಲ್ಲ’ ಎಂದು ಎಂದು ದಲಿತ ಸಂಘಟನೆ ಒಕ್ಕೂಟದ ಜಿಲ್ಲಾ ಸಂಚಾಲಕ ಗಣೇಶ ಮೇತ್ರಿ ಆಗ್ರಹಿಸಿದರು.

ಮುಖಂಡ ಪ್ರಕಾಶ ಮಾಂಗ ಮಾತನಾಡಿ ‘ನಗರಸಭೆ ಆಯುಕ್ತರ ಬೇಜವಾಬ್ದಾರಿಯಿಂದ ಇದು ನಡೆದಿದೆ. ವರ್ಷದಲ್ಲಿ 6 ತಿಂಗಳು ಸಂಬಳ ನೀಡದಿದ್ದರೆ ಬಡ ಕಾರ್ಮಿಕರು ಜೀವನ ಹೇಗೆ ಸಾಗಿಸಬೇಕು ಎಂಬುದರ ಕನಿಷ್ಠ ಪರಿಜ್ಞಾನ ಕೂಡ ಇಲ್ಲ. ಜಿಲ್ಲಾ ಆಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಮುಖಂಡರಾದ ಸತೀಶ ಗಾಡಿ, ಪ್ರಕಾಶ ಮಾಂಗ, ನಾಗಪ್ಪ ದೊಡಮನಿ ನೇತೃತ್ವವಹಿಸಿದ್ದರು. ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಪೌರಾಯುಕ್ತರ ವಿರುದ್ಧ ಘೋಷಣೆ ಕೂಗಿದರು. ರೇಖಾ ಪೂಜಾರಿ, ಅನ್ನಪೂರ್ಣ ಕಾಂಬಳೆ, ಇಂದ್ರವ್ವ ಪೂಜಾರಿ, ಮಹಾದೇವ ಗಾಯಕವಾಡ, ಪರಸರಾಮ ಚಲವಾದಿ ತಾವು ಅನುಭವಿಸುತ್ತಿರುವ ಸಂಕಷ್ಟಗಳನ್ನು ಬಿಚ್ಚಿಟ್ಟರು.

**

ಸಹಕರಿಸಿ...

ಗುತ್ತಿಗೆದಾರರು ಅನಿವಾರ್ಯ ಸಂದರ್ಭಗಳಲ್ಲಿ 3 ತಿಂಗಳವರೆಗೆ ವೇತನ ನೀಡಬೇಕು ಎಂಬುದು ಒಪ್ಪಂದವಿದೆ. ಅವರು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ನಾನು ಏಪ್ರಿಲ್‌ ತಿಂಗಳಲ್ಲಿ ಬಾಕಿ ಸಂಬಳ ಪಾವತಿಸುವುದಾಗಿ ಹೇಳಿದ್ದೇನೆ. ಅವರು ಕೆಲಸಕ್ಕೆ ಹಾಜರಾಗಿ ಸಹಕರಿಸಬೇಕು ಎಂದು ನಗರಸಭೆ ಆಯುಕ್ತ ರಮೇಶ ಜಾಧವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT