₹ 500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ

7
ಅಡಿಕೆ ಬೆಳೆಗಾರರ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ

₹ 500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ

Published:
Updated:
₹ 500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ

ಶಿವಮೊಗ್ಗ/ತೀರ್ಥಹಳ್ಳಿ: ರಾಜ್ಯದಲ್ಲಿ ಬಿಜೆಪಿಗೆ ಅಧಿಕಾರ ನೀಡಿದರೆ ಅಡಿಕೆ ಪರ್ಯಾಯ ಉಪಯೋಗ ಕುರಿತು ಅಧ್ಯಯನ ನಡೆಸಲು ₹ 500 ಕೋಟಿ ವೆಚ್ಚದಲ್ಲಿ ಸಂಶೋಧನಾ ಕೇಂದ್ರ ತೆರೆಯಲಾಗುವುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭರವಸೆ ನೀಡಿದರು.

ತೀರ್ಥಹಳ್ಳಿ ಸರ್ಕಾರಿ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಅಡಿಕೆ ಬೆಳೆಗಾರರು ಸೇರಿದಂತೆ ದೇಶದ ರೈತರ ಸಮಸ್ಯೆಗಳಿಗೆ ಹಿಂದಿನ ಯುಪಿಎ ಸರ್ಕಾರ ಕಾರಣ. ಗುಟ್ಕಾ ಜತೆ ಬೆರೆತಿದ್ದ ಅಡಿಕೆಯನ್ನೂ ಹಾನಿಕಾರಕ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದರು. ಅಡಿಕೆಯಲ್ಲಿ ಜೀವ ರಕ್ಷಕ ಅಂಶಗಳಿವೆ ಎಂದು ಸಂಶೋಧನೆಗಳು ದೃಢಪಡಿಸಿವೆ. ಮಧ್ಯಾಹ್ನ ಊಟದ ನಂತರ ಪುರುಷೋತ್ತಮರಾಯರ ಮನೆಯಲ್ಲಿ ಎಲೆ, ಅಡಿಕೆ ಸೇವಿಸಿದೆ. ಅದರಲ್ಲಿ ಹಾನಿಕಾರಕ ಅಂಶ ಇದ್ದಿದ್ದರೆ ಸೇವಿಸಲಾಗುತ್ತಿತ್ತೇ ಎಂದು ಪ್ರಶ್ನಿಸಿದರು.

ಎನ್‌ಡಿಎ ಅಧಿಕಾರಕ್ಕೆ ಬಂದ ನಂತರ ಅಡಿಕೆಗೆ ಬೆಂಬಲ ಬೆಲೆ ನೀಡಿದೆ. ಆಮದು ಸುಂಕವನ್ನು ಕೆ.ಜಿ.ಗೆ ₹ 252ಕ್ಕೆ ಹೆಚ್ಚಿಸಿದೆ. ಆದರೆ, ಈಗಿನ ರಾಜ್ಯ ಸರ್ಕಾರ ಬೆಂಬಲ ಬೆಲೆ ಖರೀದಿಗೆ ಒಲವು ತೋರಲಿಲ್ಲ ಎಂದು ದೂರಿದರು.

ದೇಶದಲ್ಲಿ ಬೆಳೆಯುವ ಅಡಿಕೆಯಲ್ಲಿ ರಾಜ್ಯದ ಪಾಲು ಶೇ 50ರಷ್ಟಿದೆ. ಯುಪಿಎ ಅವಧಿಯಲ್ಲಿ 8 ಸಾವಿರ ಟನ್‌ ಇದ್ದ ಅಡಿಕೆ ಖರೀದಿಯನ್ನು ನರೇಂದ್ರ ಮೋದಿ ಅವರು 40 ಸಾವಿರ ಟನ್‌ಗೆ ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.

ಸಂಸದ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ‘ಬೆಳೆಗಾರರ ಪಾಲಿಗೆ ಅಡಿಕೆ ಪಾಪದ ಕೂಸಾಗಿದೆ. ಅಡಿಕೆ ಬೆಳೆಯುವ ಪ್ರಮಾಣ ಪ್ರತಿ ವರ್ಷ ಶೇ 10ರಷ್ಟು ಹೆಚ್ಚುತ್ತಿದೆ. ಅಡಿಕೆಯ ಪರ್ಯಾಯ ಬಳಕೆಯ ಕುರಿತು ಚಿಂತನೆ ಅಗತ್ಯ’ ಎಂದರು.

ಗುಟ್ಕಾ ನಿಷೇಧವು ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಬೀರಿದೆ. ಗುಟ್ಕಾ ನಿಷೇಧದಂತೆ ತಂಬಾಕು ಉತ್ಪನ್ನಗಳನ್ನೂ ನಿಷೇಧ ಮಾಡಬೇಕು. ಆದರೆ, ಈ ಉತ್ಪನ್ನಗಳ ನಿಷೇಧ ಏಕೆ ಆಗಿಲ್ಲ ಎಂಬ ಪ್ರಶ್ನೆ ಸ್ವಾಭಾವಿಕ. 2007ರಲ್ಲಿ ಕರ್ನಾಟಕದ ಹೈಕೋರ್ಟ್‌ ಅಡಿಕೆ ಹಾನಿಕಾರಕ ಅಲ್ಲ ಎಂದು ತೀರ್ಪು ನೀಡಿದೆ. ಅಡಿಕೆ ಬೆಳೆಗಾರರು ಇಂದು ಗುಟ್ಕಾ ನಿಷೇಧದ ಜತೆ ಕೊಳೆ ರೋಗ, ಬೇರುಹುಳು, ತುಂಡೆರೋಗದಂಥ ಸಮಸ್ಯೆಗಳಿಂದ ನಲುಗುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಡಿಕೆಯನ್ನು ಔಷಧವಾಗಿ, ಸೌಂದರ್ಯವರ್ಧಕವಾಗಿ ಬಳಕೆ ಮಾಡುವ ಕುರಿತು ಸಂಶೋಧನೆ ನಡೆಸಬೇಕಾಗಿದೆ. ಜಿಲ್ಲೆಯಲ್ಲಿ ಅಂದಾಜು 1 ಲಕ್ಷ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಎಲ್ಲಾ ಅಂಶಗಳನ್ನು ಅಡಿಕೆ ಬೆಳೆಗಾರರು ಗಮನಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಒಂದೂವರೆ ತಿಂಗಳಲ್ಲಿ ಮನೆಗೆ ಹೋಗುತ್ತಾರೆ. ಅವರ ಆಡಳಿತದ ಬಗ್ಗೆ ಮಾತನಾಡುವುದಿಲ್ಲ. ಕೇಂದ್ರ ಸರ್ಕಾರ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಈ ಸರ್ಕಾರ ಖರೀದಿಸುತ್ತಿಲ್ಲ. ಕಾಂಗ್ರೆಸ್‌ಮುಕ್ತ ಭಾರತ ಆಗಬೇಕಾದರೆ ಮೊದಲು ಕರ್ನಾಟಕ ಕಾಂಗ್ರೆಸ್‌ಮುಕ್ತ ಆಗಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರ ಆಡಳಿತದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಎಂದರು.

ಬಿಜೆಪಿ ಮುಖಂಡ ಆರಗ ಜ್ಞಾನೇಂದ್ರ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರದಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ರಕ್ಷಣೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಅಡಿಕೆ ಬೆಳೆಗಾರರ ರಕ್ಷಾ ಕವಚವಾಗಿ ನಿಂತಿದೆ. ಅಡಿಕೆ ಬೆಲೆ ಬಿದ್ದು ಹೋದಾಗ ಯಡಿಯೂರಪ್ಪ ಅವರು ಬೆಂಬಲ ಬೆಲೆ ಘೋಷಣೆ ಮಾಡಿದರು. ತೀರ್ಥಹಳ್ಳಿಯಲ್ಲಿ ಆರಂಭ ಮಾಡಿರುವ ಅಡಿಕೆ ಸಂಶೋಧನಾ ಕೇಂದ್ರಕ್ಕೆ ಸಂಶೋಧಕರನ್ನು ನೇಮಕ ಮಾಡಿಲ್ಲ. ಈ ಬಗ್ಗೆ ಇಲ್ಲಿನ ಶಾಸಕರು ಮಾತನಾಡುತ್ತಿಲ್ಲ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್, ಮಾಜಿ ಸಚಿವರಾದ ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ, ಶಾಸಕರಾದ ಬಿ.ವೈ. ರಾಘವೇಂದ್ರ, ಡಿ.ಎನ್‌. ಜೀವರಾಜ್, ಕೇರಳ ಸಂಸದ ಮುರಳೀಧರನ್, ಮಾಜಿ ಶಾಸಕ ಸ್ವಾಮಿರಾವ್, ಸಂತೋಷ್, ಕಂಕೋಡಿ ಪದ್ಮನಾಭ್, ಸಂದೇಶ್ ಜವಳಿ, ನಾಗರಾಜ್ ಶೆಟ್ಟಿ, ಸುಬ್ರಹ್ಮಣ್ಯ ಯಡಗೆರೆ ಉಪಸ್ಥಿತರಿದ್ದರು.

**

ಸಂವಾದ: ಮೂವರಿಗೇ ಮುಕ್ತಾಯ!

ಅಡಿಕೆ ಬೆಳೆಗಾರರ ಜತೆ ಆಯೋಜಿಸಿದ್ದ ಸಂವಾದ ಮೂವರಿಗೇ ಮುಕ್ತಾಯವಾಯಿತು. ಇಬ್ಬರು ಅನಿಸಿಕೆ ಹೇಳಿದ ನಂತರ ದಂತವೈದ್ಯರೊಬ್ಬರು ಮಾತು ಆರಂಭಿಸಿದರು. ಆಗ ಮಧ್ಯ ಪ್ರವೇಶಿಸಿದ ಸಂಸದ ಪ್ರಹ್ಲಾದ ಜೋಷಿ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಸಮಯದ ಅಭಾವದ ಕಾರಣ ಅಮಿತ್ ಶಾ ಮಾತನಾಡುತ್ತಾರೆ ಎಂದು ಘೋಷಿಸಿದರು.

ಶಾ ಭಾಷಣವನ್ನು ಕೇಂದ್ರ ಸಚಿವ ಅನಂತಕುಮಾರ್ ಭಾಷಾಂತರಿಸಿದರು.

ಅಡಿಕೆ ಸುಲಿಯುವ ಯಂತ್ರ ತಯಾರಿಸಿದ ವಿಶ್ವನಾಥ್ ಕುಂಟುವಳ್ಳಿ, ಅಡಿಕೆ ಚಹ ಕಂಡುಹಿಡಿದ ನಿವೇದನ್‌ ನೆಂಪೆ ಅವರನ್ನು ಸನ್ಮಾನಿಸಲಾಯಿತು. ಗುರುಪ್ರಸಾದ್ ದೇವಾಡಿಗ ಮತ್ತು ತಂಡ ರೈತಗೀತೆ ಹಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry