ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ ನಿವಾಸ ಎದುರು ಧರಣಿ: ಎಚ್ಚರಿಕೆ

Last Updated 27 ಮಾರ್ಚ್ 2018, 7:49 IST
ಅಕ್ಷರ ಗಾತ್ರ

ಹಾಸನ: ಬರ ಪೀಡಿತ ತಾಲ್ಲೂಕುಗಳಿಗೆ ಕುಡಿಯುವ ನೀರು ಸರಬರಾಜಿಗೆ ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡದಿದ್ದರೆ ಮುಖ್ಯಮಂತ್ರಿ ನಿವಾಸದ ಎದುರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಶಾಸಕ ಎಚ್.ಎಸ್. ಪ್ರಕಾಶ್ ಎಚ್ಚರಿಸಿದರು.

ಜಿಲ್ಲೆಯ ಹಲವು ತಾಲ್ಲೂಕುಗಳು ಬರ ಪೀಡಿತ ಎಂದು ಸರ್ಕಾರವೇ ಘೋಷಿಸಿದೆ. ಆದರೆ, ಇದುವರೆಗೂ ಹಣ ಬಿಡುಗಡೆ ಮಾಡಿಲ್ಲ. ಬೇಸಿಗೆ ಆರಂಭವಾಗಿದ್ದು, ಕುಡಿಯುವ ನೀರಿಗೆ ಜನರು ಪರಿತಪಿಸುತ್ತಿದ್ದಾರೆ. ನೀರು ಪೂರೈಕೆಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗೆ ಅನುದಾನ ಬಂದಿಲ್ಲ. ಆದ್ದರಿಂದ ತಕ್ಷಣ ಸರ್ಕಾರ ಕ್ರಮಕ ಕೈಗೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಜಿಲ್ಲೆಯಲ್ಲಿ ಎರಡು ಜಲಾಶಯಗಳಿದ್ದರೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಈ ಬಗ್ಗೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಪ್ರಯೋಜನವಾಗಿಲ್ಲ ಎಂದು ದೂರಿದರು.

ಹಾಸನ ನಗರಕ್ಕೆ ದಿನದ 24 ಗಂಟೆ ನೀರು ಸರಬರಾಜು ಮಾಡುವ ಅಮೃತ್‌ ಯೋಜನೆ ಪೈಪ್‌ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನಗರ ಸುತ್ತಲ 6 ಕಿ.ಮೀ ವ್ಯಾಪ್ತಿಯ ಗ್ರಾಮಗಳಿಗೂ ಯೋಜನೆ ವಿಸ್ತರಿಸಲು ₹ 26 ಕೋಟಿ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಜಿಲ್ಲೆಯ ರಾಜಕೀಯ ಸ್ಥಿತಿ ಅರಿಯದೆ ಮನಬಂದಂತೆ ಆರೋಪ ಮಾಡಿದ್ದಾರೆ.

ರಾಜ್ಯ ಮತ್ತು ಜಿಲ್ಲೆಯ ನಾಯಕರು ಭಾಷಣ ಬರೆದುಕೊಡುವಾಗ ವಾಸ್ತವಾಂಶ ಹೇಳಬೇಕು. ಜತೆಗೆ ಕನ್ನಡ ಭಾಷೆ ಉಚ್ಚರಣೆಯ ಹೇಳಿ ಕೊಡಬೇಕಿದೆ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪ್ರಬಲವಾಗಿ ಇರುವ ಕಡೆ ಕೋಮು ಸಂಘರ್ಷ ಹೆಚ್ಚು ನಡೆಯುತ್ತಿದೆ. ಎರಡೂ ಪಕ್ಷದವರು ಸಾವಿನಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ.

ಜೆಡಿಎಸ್‌ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆಯುತ್ತಿಲ್ಲ ಎಂದು ವಿವರಿಸಿದರು.

2ರಂದು ಜೆಡಿಎಸ್‌ ಸಮಾವೇಶ

ಜಿಲ್ಲಾ ಕ್ರೀಡಾಂಗಣದಲ್ಲಿ ಏ. 2ರ ಸಂಜೆ 4 ಗಂಟೆಗೆ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ಲಿಂಗೇಶ್‌ ಹೇಳಿದರು.

ಜೆಡಿಎಸ್ ವಿರುದ್ಧ ಕಾಂಗ್ರೆಸ್ ಮಾಡಿರುವ ಆರೋಪಗಳಿಗೆ ಸಮಾವೇಶದಲ್ಲಿ ಉತ್ತರ ನೀಡಲಾಗುವುದು. ಐದು ವರ್ಷದ ಆಡಳಿತದಲ್ಲಿ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂಬುದನ್ನು ಜನರಿಗೆ ತಿಳಿಸಲಾಗುವುದು.

ಸಮಾವೇಶದಲ್ಲಿ ಸಂಸದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಪಿ.ಜಿ.ಆರ್. ಸಿಂಧ್ಯಾ, ಬಿಎಸ್ ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ಹಾಗೂ ಜಿಲ್ಲೆಯ ಪಕ್ಷದ ಶಾಸಕರು, ಸ್ಥಳಿಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT