ದೇಶದ ಮೊದಲ ಜಾನಪದ ರಂಗಮಂದಿರ

7
ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್‌ನಿಂದ ಈ ಭಾಗದ ಕಲಾವಿದರಿಗೆ ಜೀವಕಳೆ

ದೇಶದ ಮೊದಲ ಜಾನಪದ ರಂಗಮಂದಿರ

Published:
Updated:
ದೇಶದ ಮೊದಲ ಜಾನಪದ ರಂಗಮಂದಿರ

ಶಿಗ್ಗಾವಿ: ಕಲೆ ಕಲಾವಿದರು ನಾಡಿನ ಅಮೂಲ್ಯವಾದ ಆಸ್ತಿ. ಅದರ ಉಳಿವಿಗಾಗಿ ದೇಶದಲ್ಲೇ ಪ್ರಥಮವಾಗಿ ಜಾನಪದ ರಂಗಮಂದಿರ ನಿರ್ಮಿಸುವ ಮೂಲಕ ಎಲೆಮರೆ ಕಾಯಿಯಂತೆ ಕಲಾವಿದರ ತಾಣವಾಗಿ ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿ ಉತ್ಸವ ರಾಕ್‌ ಗಾರ್ಡನ್‌ ಬೆಳೆಯುತ್ತಿರುವುದು ಈ ಭಾಗದ ಕಲಾವಿದರಿಗೆ ಜೀವಕಳೆ ತುಂಬಿ ದಂತಾಗಿದೆ.

ರಂಗಭೂಮಿ ಎಂದಾಗ ಕೇವಲ ಹವ್ಯಾಸಿ ನಾಟಕಗಳು ಅಥವಾ ಕಂಪನಿ ನಾಟಕಗಳು ಎಂದು ಮಾತ್ರ ಬಹಳಷ್ಟು ಜನ ಪರಿಭಾವಿಸುತ್ತಾರೆ. ಇದರೊಟ್ಟಿಗೆ ನಮ್ಮ ಜಾನಪದ ರಂಗಭೂಮಿಯ ಕುರಿತು ನಾವು ಯೋಚಿಸಬೇಕಾದ, ಚಿಂತನೆಯನ್ನು ಇಲ್ಲಿ ಕಾಣಬಹುದು.

ಕರ್ನಾಟಕದ ಮಟ್ಟಿಗೆ ಜಾನಪದ ರಂಗಭೂಮಿ ಎಂದರೆ ದೊಡ್ಡಾಟ, ಸಣ್ಣಾಟ ಹಾಗೂ ಯಕ್ಷಗಾನ. ಕರ್ನಾಟಕದ ಮುಕ್ಕಾಲು ಪಾಲು ಪ್ರದೇಶದಲ್ಲಿ ಪ್ರಚಲಿತವಿರುವ ರಂಗಭೂಮಿ ದೊಡ್ಡಾಟ ಇದಕ್ಕೆ ಮೂಡಲಪಾಯ, ದೊಡ್ಡಾಟ, ಬಯಲಾಟಗಳೆಂದು ಹೆಸರು ಪಡೆದಿದೆ. ದೊಡ್ಡಾಟಕ್ಕೆ ಪರಿಪೂರ್ಣವಾದ ಕೆಲಸಮಾಡಿ, ದೊಡ್ಡಾಟದ ಉಳಿವಿಗಾಗಿ, ಏಳ್ಗೆಗಾಗಿ ಮುಂದಿನ ಪೀಳಿಗೆಗೆ ವರ್ಗಾಯಿಸಲು ನಿರಂತರ ತರಬೇತಿ ಮಾಡಿ, ದೊಡ್ಡಾಟವನ್ನು ಸಮಕಾಲೀನಗೊಳಿಸಿ ದೊಡ್ಡಾಟಕ್ಕೆ ಮಹತ್ವದ ಕೊಡುಗೆ ನೀಡಿದವರು ಕಲಾವಿದ ಪ್ರೊ.ಟಿ.ಬಿ.ಸೊಲಬಕ್ಕನವರ. ಅವರ ನೇತೃತ್ವದಲ್ಲಿ ದೊಡ್ಡಾಟದ ಹಲವಾರು ಆಯಾಮಗಳು ಉಜ್ವಲ ಗೊಂಡಿವೆ.

ಕರ್ನಾಟಕ ದೊಡ್ಡಾಟ (ಬಯ ಲಾಟ) ಟ್ರಸ್ಟ್‌ ಸ್ಥಾಪಿಸಿ ಕಳೆದ 35 ವರ್ಷಗಳಿಂದ ನಿರಂತರ ದೊಡ್ಡಾಟ ತರಬೇತಿ ನೀಡುತ್ತಿದ್ದಾರೆ. ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯ ಕಟ್ಟಿಕೊಡುವಲ್ಲಿ ಇವರ ಪಾತ್ರ ಅವಿಸ್ಮರಣೀಯ. ಅವರ ಮಾರ್ಗದರ್ಶನದಲ್ಲಿ ಈಗ ದೇಶದಲ್ಲೇ ಮೊದಲ ಬಾರಿಗೆ ಜಾನಪದ ರಂಗಮಂದಿರವೊಂದು ಗೊಟಗೋಡಿಯ ‘ಉತ್ಸವ ರಾಕ್ ಗಾರ್ಡನ್’ದಲ್ಲಿ ನಿರ್ಮಿಸಲ್ಪಟ್ಟಿದೆ. ಈ ರಂಗಮಂದಿರ ಸೃಜನಶೀಲತೆಗೆ ಹಿಡಿದ ಕನ್ನಡಿ. ಈ ಜಾನಪದ ರಂಗಮಂದಿರದಲ್ಲಿ ಕುಳಿತು ಪ್ರದರ್ಶನ ನೋಡಿದರೆ ಹಳ್ಳಿಯಲ್ಲಿಯೇ ಕುಳಿತು ನಾಟಕ ನೋಡಿದಂತೆ ಭಾಸವಾಗುತ್ತದೆ. ಅಂತಹ ಅದ್ವಿತೀಯ ಕಲಾನೈಪುಣ್ಯತೆಯನ್ನು ಈ ರಂಗಮಂದಿರದಲ್ಲಿ ಕಾಣಬಹುದು.

ಪ್ರೊ.ಟಿ.ಬಿ.ಸೊಲಬಕ್ಕನವರ ಅವರ ಮಾರ್ಗದರ್ಶನದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಕನ್ನಡ ಜಾನಪದ ಶಿಕ್ಷಣ ಸಂಸ್ಥೆ ಪ್ರಾರಂಭವಾಗಿದ್ದು, ಇಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ದೊಡ್ಡಾಟ, ಡೊಳ್ಳು, ವೀರಗಾಸೆ, ಭಜನೆ, ದೊಡ್ಡಾಟದ ವೇಷಭೂಷಣಗಳ ತಯಾರಿಕೆ ಹಾಗೂ ದೊಡ್ಡಾಟದ ತರಬೇತಿ ನೀಡುತ್ತಿದ್ದು ಇದು ದೇಶದಲ್ಲಿಯೇ ಮೊದಲ ಪ್ರಯತ್ನ. ಹೀಗೆ ಜಾನಪದ ರಂಗಭೂಮಿಯ ಹಲವಾರು ಮಗ್ಗಲುಗಳು ಇಲ್ಲಿ ಕ್ರಿಯಾಶೀಲವಾಗಿವೆ.

ರಂಗಭೂಮಿ ಎಂದರೆ ಕೇವಲ ನಾಟಕಗಳಿಗೆ ಮಾತ್ರ ಸೀಮಿತವಾಗದೆ ನಾಟಕಕ್ಕೆ ಮಾತೃವಾಗಿರುವ ಜಾನಪದ ರಂಗಭೂಮಿಯನ್ನು ನಾವು ಎಂದು ಮರೆಯಬಾರದು. ಅದಕ್ಕೆ ಸಮಕಾಲೀನ ಸ್ಪಂದನೆ ನೀಡುತ್ತ ನಮ್ಮ ನಾಡಿನ ಜಾನಪದ ರಂಗಭೂಮಿಯ ಸತ್ವವನ್ನು ಸಮಾಜಕ್ಕೆ ತಲುಪಿಸುವಲ್ಲಿ ನಿರಂತರ ತೆರೆಮರೆಯಲ್ಲಿ ಶ್ರಮಿಸುತ್ತಿರುವ ಸೊಲಬಕ್ಕನವರ ಕಾಯಕ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಇಲ್ಲಿನ ಕಲಾವಿದರು ವ್ಯಕ್ತಪಡಿಸುತ್ತಾರೆ.

**

ಉತ್ತರ ಕರ್ನಾಟಕದ ಕಲಾವಿದರ ಬೆಳವಣಿಗೆಗೆ ಪ್ರೊ.ಟಿ.ಬಿ. ಸೊಲಬಕ್ಕನವರ ಶ್ರಮ ಅಪಾರವಾಗಿದೆ. ಅವರ ಗರಡಿಯಲ್ಲಿ ಸಾವಿರಾರು ಕಲಾವಿದರು ಬೆಳೆಯಲು ಸಹಕಾರಿಯಾಗಿದೆ.

–ಬಸವರಾಜ ಶಿಗ್ಗಾವಿ, ಕಲಾವಿದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry