ಬ್ಯಾಂಕ್‌ ಖಾಸಗೀಕರಣಕ್ಕೆ ವಿರೋಧ

7
ಗ್ರಾಮೀಣ ಬ್ಯಾಂಕ್‌ ಸಂಘಗಳ ಸದಸ್ಯರಿಂದ ಧರಣಿ

ಬ್ಯಾಂಕ್‌ ಖಾಸಗೀಕರಣಕ್ಕೆ ವಿರೋಧ

Published:
Updated:
ಬ್ಯಾಂಕ್‌ ಖಾಸಗೀಕರಣಕ್ಕೆ ವಿರೋಧ

ಕೋಲಾರ: ಗ್ರಾಮೀಣ ಬ್ಯಾಂಕ್‌ಗಳ ಖಾಸಗೀಕರಣ ವಿರೋಧಿಸಿ ಗ್ರಾಮೀಣ ಬ್ಯಾಂಕ್‌ ಸಂಘಗಳ ಸಂಯುಕ್ತ ವೇದಿಕೆ ಸದಸ್ಯರು ನಗರದಲ್ಲಿ ಸೋಮವಾರ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಧರಣಿ ನಡೆಸಿದರು.

‘ಬ್ಯಾಂಕ್‌ ನೌಕರರ ಬೇಡಿಕೆ ಈಡೇರಿಸುವಂತೆ ಹಲವು ಬಾರಿ ಧರಣಿ ನಡೆಸಿದ್ದೇವೆ. ಆದರೆ ಕೇಂದ್ರ ಹಾಗೂ ರಾಜ್ಯ ಹಣಕಾಸು ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ. ಸರ್ಕಾರಗಳಿಗೆ ನೌಕರರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲಾ ಗ್ರಾಮೀಣ ಬ್ಯಾಂಕ್‌ಗಳ ಪ್ರಧಾನ ಕಚೇರಿಗಳ ಎದುರು ಧರಣಿ ನಡೆಸಿ ಆಯಾ ಗ್ರಾಮೀಣ ಬ್ಯಾಂಕ್‌ಗಳ ಅಧ್ಯಕ್ಷರು ಮತ್ತು ನಬಾರ್ಡ್‌ ಪ್ರಾದೇಶಿಕ ಕಚೇರಿಗಳ ಪ್ರಧಾನ ಪ್ರಬಂಧಕರ ಮೂಲಕ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

ಮಾ.2ರಂದು ದೆಹಲಿಯಲ್ಲಿ ಧರಣಿ ಮಾಡಿ ಸಂಸದರು, ರಾಜ್ಯಸಭಾ ಸದಸ್ಯರು ಮತ್ತು ವೇದಿಕೆ ಪದಾಧಿಕಾರಿಗಳೊಂದಿಗೆ ಕೇಂದ್ರ ಹಣಕಾಸು ಸಚಿವರನ್ನು ಭೇಟಿಯಾಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ವೇದಿಕೆ ಸದಸ್ಯ ತ್ಯಾಗರಾಜ್‌ ದೂರಿದರು.

‘ದೇಶದಲ್ಲಿ 56 ಗ್ರಾಮೀಣ ಬ್ಯಾಂಕ್‌ಗಳಿದ್ದು, 21,398 ಶಾಖೆಗಳು ಮತ್ತು 86,555 ನೌಕರರಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಣಕಾಸು ಸಚಿವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಬ್ಯಾಂಕ್ ನೌಕರರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದರು. ಇಷ್ಟಾದರೂ ಕೇಂದ್ರ ಸರ್ಕಾರ ಮತ್ತು ಹಣಕಾಸು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದು ಹೇಳಿದರು.

‘ನಿವೃತ್ತಿ ಯೋಜನೆಯನ್ನು ಗ್ರಾಮೀಣ ಬ್ಯಾಂಕ್‌ ನೌಕರರಿಗೂ ಜಾರಿಗೊಳಿಸಬೇಕು. ಪ್ರೇರಕ ಬ್ಯಾಂಕ್‌ನ ಸೇವಾ ನಿಯಮ, ನೇರ ನೇಮಕಾತಿ ಮತ್ತು ಬಡ್ತಿ ಯೋಜನೆ ಜಾರಿಗೊಳಿಸಬೇಕು. ಅನುಕಂಪ ಆಧಾರಿತ ನೇಮಕಾತಿ ಜಾರಿಗೊಳಿಸಬೇಕು. ಗ್ರಾಮೀಣ ಬ್ಯಾಂಕ್‌ಗಳಿಗೆ ಐಬಿಎ ಮಾದರಿಯಲ್ಲಿ ಸಂಧಾನ ವೇದಿಕೆ ಸ್ಥಾಪಿಸಬೇಕು’ ಎಂದು ಧರಣಿನಿರತರು ಮನವಿ ಮಾಡಿದರು.

ವೇದಿಕೆ ಸದಸ್ಯರಾದ ಶ್ರೀನಿವಾಸಗೌಡ, ಯಲ್ಲಪ್ಪ, ಆನಂದರೆಡ್ಡಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry