ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಜನಾಂಗಕ್ಕೆ ರಾಜಕೀಯ ಸ್ಥಾನಮಾನ ಸಿಗಲಿ

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆದ ‘ಬುಡಕಟ್ಟು ಜನಾಂಗ ಮತ್ತು ಅಭಿವೃದ್ಧಿ’ ಕುರಿತ ವಿಚಾರ ಸಂಕಿರಣ
Last Updated 27 ಮಾರ್ಚ್ 2018, 11:29 IST
ಅಕ್ಷರ ಗಾತ್ರ

ತುಮಕೂರು: ಬುಡಕಟ್ಟು ಜನರು ಸರ್ವಾಂಗೀಣ ಅಭಿವೃದ್ಧಿ ಹೊಂದಬೇಕಾದಲ್ಲಿ, ಅವರು ರಾಜಕೀಯ ಸ್ಥಾನಮಾನಗಳನ್ನು ಪಡೆಯಬೇಕಾಗಿರುವುದು ಅವಶ್ಯವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ನಡೆದ ‘ಬುಡಕಟ್ಟು ಜನಾಂಗ ಮತ್ತು ಅಭಿವೃದ್ಧಿ’ ಎನ್ನುವ ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ 400ಕ್ಕೂ ಹೆಚ್ಚು ಬುಡಕಟ್ಟು ಗುಂಪುಗಳಿವೆ. ಇವರು ರಾಜಕೀಯ ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ. ಹೀಗಾಗಿಯೇ ಅವರು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.

ಬುಡಕಟ್ಟು ಜನಾಂಗದವರೂ ಇಂದಿಗೂ ಸಂಪೂರ್ಣವಾಗಿ ನಾಗರಿಕತೆಯತ್ತ ಬಂದಿಲ್ಲ. ಅವರ ಸಂಸ್ಕೃತಿ, ಆಚಾರ–ವಿಚಾರ ಮತ್ತು ಭಾಷೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ನಾಗರಿಕತೆಯಿಂದ ದೂರವಿದ್ದಾರೆ. ಹೀಗಾಗಿ ಸರ್ಕಾರ ಇಂತಹ ಜನಾಂಗಕ್ಕೆ ನಾಗರಿಕತೆಯ ಅರಿವು ಮೂಡಿಸಲು ಬೇಕಾದ ಕಾರ್ಯಕ್ರಮ ಮತ್ತು ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.

‘ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಸಮಾನತೆ ದೊರಕಿಸಲು ಮೀಸಲಾತಿಯನ್ನು ಜಾರಿಗೆ ತರಲಾಗಿದೆ. ಆದರೆ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಬುಡಕಟ್ಟು ಜನಾಂಗದವರು ವಿಫಲರಾಗಿದ್ದಾರೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳದಿದ್ದಲ್ಲಿ, ನಮ್ಮ ಹಿಂದುಳಿಯುವಿಕೆಗೆ ನಾವೇ ಕಾರಣರಾಗುತ್ತೇವೆ’ ಎಂದು ತಿಳಿಸಿದರು.

ದೇಶದಲ್ಲಿ ಪ್ರತಿಯೊಬ್ಬರೂ ಸಮಾನವಾಗಬೇಕು ಎನ್ನುವುದೇ ಸಂವಿಧಾನದ ಆಶಯವಾಗಿದೆ. ಹೀಗಾಗಿ ಇಂತಹ ಜನರು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವುದನ್ನು ತಪ್ಪಿಸಲು ಅವರಿಗೆ ಹೆಚ್ಚೆಚ್ಚು ತರಬೇತಿ ನೀಡಬೇಕು ಎಂದರು.

ಇಂದಿನ ವಿದ್ಯಾರ್ಥಿಗಳು ಕೇವಲ ಪರೀಕ್ಷೆಯನ್ನು ಮತ್ತು ಅಂಕ ಗಳಿಸುವುದನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಓದುವುದನ್ನು ಬಿಡಬೇಕು. ಪರೀಕ್ಷೆ ಎನ್ನುವುದು ಶಿಕ್ಷಣದ ಒಂದು ಭಾಗವಷ್ಟೇ. ಹೀಗಾಗಿ ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ತಮಗೆ ಲಭಿಸುವ ಎಲ್ಲ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ರಾಜಕೀಯ ಶಕ್ತಿಯಾಗಿ ಬೆಳೆಯಲು ಪ್ರಯತ್ನಿಸಬೇಕು ಎಂದು ತಿಳಿಸಿದರು.

ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜೋಗನ್ ಶಂಕರ್ ಮಾತನಾಡಿ, ‘ಕರ್ನಾಟಕ, ಮಹಾರಾಷ್ಟ್ರ, ಒಡಿಶಾ ಮತ್ತು ನಾಗಾಲ್ಯಾಂಡ್‌ನಂತಹ ರಾಜ್ಯಗಳಲ್ಲಿ ಬುಡಕಟ್ಟು ಸಮುದಾಯದ ಜನರು ಹೆಚ್ಚು ವಾಸಿಸುತ್ತಿದ್ದು, ಇವರು ಮೂಲ ಸೌಕರ್ಯಗಳಿಂದ ದೂರವಿದ್ದಾರೆ’ ಎಂದರು.

ದಕ್ಷಿಣ ವಲಯದಲ್ಲಿ ಆದಿವಾಸಿಗಳು ತುಂಬಾ ಹಿಂದುಳಿದಿದ್ದು, ಇತ್ತೀಚೆಗೆ ನಡೆದ ಸರ್ವೆಯೊಂದರ ಪ್ರಕಾರ ಇವರ ಸಂಖ್ಯೆ ಹೆಚ್ಚುತ್ತಿದೆ. ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದು, ಶೇ 90ಕ್ಕಿಂತ ಹೆಚ್ಚಿನ ಜನರು ಬಿಪಿಎಲ್‌ ಕಾರ್ಡನ್ನು ಹೊಂದಿದ್ದಾರೆ ಎಂದರು.

ಈ ಜನಾಂಗದವು ಮುಗ್ದ ಜನಾಂಗದವರಾಗಿರುವುದರಿಂದ ಸಮಾಜದ ಪ್ರಬಲ ಜನಾಂಗದವರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಿದರು.

***

ಮೂಢನಂಬಿಕೆಯನ್ನು ತೊಲಗಿಸಬೇಕು

ಕರ್ನಾಟಕದ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಾಡುಗೊಲ್ಲ ಜನಾಂಗದ ಜನರು ಹೆಚ್ಚಾಗಿ ವಾಸಿಸುತ್ತಾರೆ. ಇವರಲ್ಲಿ ಇಂದಿಗೂ ಹೆಣ್ಣುಮಕ್ಕಳನ್ನು ಋತುಚಕ್ರವಾದಾಗ ಮತ್ತು ಹೆರಿಗೆಯ ಸಮಯದಲ್ಲಿ ಊರಿನಿಂದ ಹೊರಗೆ ಇಡುವ ಪದ್ಧತಿ ರೂಢಿಯಲ್ಲಿದೆ. ಇಂಥಹ ಸಮಯದಲ್ಲಿ ಅನೇಕರು ನೋವು  ತಾಳಲಾರದೇ ಸಾವನ್ನಪುತ್ತಿದ್ದಾರೆ ಎಂದು ಜೋಗನ್‌ ಶಂಕರ್‌ ಹೇಳಿದರು.

ಬುಡಕಟ್ಟು ಜನಾಂಗವು ದೇಶಿಯ ಔಷಧಿ ಪದ್ಧತಿಯನ್ನು ಇನ್ನೂ ಪಾಲಿಸುತ್ತಿದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿಯ ಬಳಕೆಯಿಂದ ಇಂದಿಗೂ ದೂರವಿದ್ದಾರೆ. ಇವರಿಗೆ ಶಿಕ್ಷಣ, ಮೀಸಲಾತಿ ಮುಂತಾದ ವಿಷಯಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾಗಿರುವುದು ಅನಿವಾರ್ಯ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT