ಮತದಾನ ಜಾಗೃತಿಗೆ ಭಟ್ಟರ ಪದ್ಯಯಾತ್ರೆ

7

ಮತದಾನ ಜಾಗೃತಿಗೆ ಭಟ್ಟರ ಪದ್ಯಯಾತ್ರೆ

Published:
Updated:
ಮತದಾನ ಜಾಗೃತಿಗೆ ಭಟ್ಟರ ಪದ್ಯಯಾತ್ರೆ

ಸಮಕಾಲೀನ ವಿದ್ಯಮಾನಗಳನ್ನು ಇಂದಿನ ಪೀಳಿಗೆಯವರನ್ನು ಆಕರ್ಷಿಸುವ ನುಡಿಗಟ್ಟನ್ನು ಬಳಸಿ ಪದ್ಯದ ಮೂಲಕ ಹೇಳುವುದರಲ್ಲಿ ಯೋಗರಾಜ ಭಟ್ಟರು ನಿಸ್ಸೀಮರು. ಬರೀ ಸಿನಿಮಾಗಳಿಗಷ್ಟೇ ಅಲ್ಲ, ಆಯಾ ಸಂದರ್ಭಗಳಿಗೆ ಹೊಂದಾಣಿಕೆಯಾಗುವ ಬಿಡಿ ಹಾಡುಗಳನ್ನೂ ಅವರು ಆಗೀಗ ರಚಿಸಿ ಹರಿಬಿಡುವುದುಂಟು.

‘ದನ ಕಾಯೋನು’ ಸಿನಿಮಾ ಸಂದರ್ಭದಲ್ಲಿ ಆ ತಂಡದೊಂದಿಗೆ ಸೇರಿಕೊಂಡು ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಅವರು ಬರೆದಿದ್ದ ಹಾಡು ಸಾಕಷ್ಟು ವೈರಲ್‌ ಆಗಿತ್ತು. ನಂತರ ‘ಮುಗುಳು ನಗೆ’ ಸಿನಿಮಾ ಸಂದರ್ಭದಲ್ಲಿ ಜಿಎಸ್‌ಟಿ ಕುರಿತ ಹಾಡೊಂದನ್ನು ರಚಿಸಿ ಹರಿಬಿಟ್ಟಿದ್ದರು. ಇದೀಗ ಅಂಥದ್ದೇ ಮತ್ತೊಂದು ಪ್ರಯತ್ನಕ್ಕೆ ತಮ್ಮ ಹೊಸ ಚಿತ್ರ ‘ಪಂಚತಂತ್ರ’ ತಂಡದ ಜತೆಗೆ ಸೇರಿಕೊಂಡು ಅವರು ಮುಂದಾಗಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ರಾಜಕಾರಣಿಗಳ ಕೆಸರೆರಚಾಟವೂ ಮೇರೆ ಮೀರಿದೆ. ಆದರೆ ಮತದಾನದ ಕುರಿತು ಜಾಗೃತಿ ಮೂಡಿಸುವ ಕುರಿತು ಯಾವ ಪಕ್ಷಗಳಿಗೂ ಅಷ್ಟೊಂದು ಆಸಕ್ತಿ ಇದ್ದಂತಿಲ್ಲ. ಇದೇ ಭಟ್ಟರ ಹೊಸ ಹಾಡಿನ ವಸ್ತು! ಈ ಬಾರಿ ಸ್ವತಃ ಚುನಾವಣಾ ಆಯೋಗವೇ ‘ಪಂಚತಂತ್ರ’ ಚಿತ್ರತಂಡವನ್ನು ಮತದಾನ ಜಾಗೃತಿಯ ಮೂಡಿಸುವಂಥ ಒಂದು ಹಾಡನ್ನು ರೂಪಿಸಿಕೊಡುವಂತೆ ಕೇಳಿಕೊಂಡಿದೆಯಂತೆ. ಇದುವರೆಗೆ ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಜನಪ್ರಿಯ ನಟರನ್ನು ಬಳಸಿಕೊಂಡ ಉದಾಹರಣೆಗಳಿವೆ. ಆದರೆ ಜನಪ್ರಿಯ ನಿರ್ದೇಶಕನೊಬ್ಬನನ್ನು ಬಳಸಿಕೊಳ್ಳುತ್ತಿರುವುದು ಬಹುಶಃ ಇದೇ ಮೊದಲು.

‘ಚುನಾವಣಾ ಆಯುಕ್ತರೇ ಮತದಾನ ಜಾಗೃತಿಯ ಕುರಿತು ಇಂಥದ್ದೊಂದು ಹಾಡನ್ನು ರೂಪಿಸಿಕೊಡುವಂತೆ ನಮ್ಮ ತಂಡವನ್ನು ಕೇಳಿಕೊಂಡಿದ್ದಾರೆ. ಸಂಗೀತಕ್ಕೊಂದು ಶಕ್ತಿ ಇದೆ. ಸಾಹಿತ್ಯದಲ್ಲಿಯೂ ಆ ಆಕರ್ಷಣೆ ಇದೆ. ಅದನ್ನು ಬಳಸಿಕೊಂಡು ಮತದಾರರನ್ನು ಜಾಗೃತಿಗೊಳಿಸುವುದಕ್ಕೆ ಚುನಾವಣಾ ಆಯೋಗ ಕೈಗೊಂಡಿರುವ ಹೊಸ ಕ್ರಮ ಇದು. ಇದೊಂದು ಹೊಸ ಮಾದರಿ ಆಗುವ ಹಾಗೆ ರೂಪಿಸಬೇಕು ಎನ್ನುವುದು ನಮ್ಮ ಕನಸು’ ಎಂದು ಯೋಗರಾಜ ಭಟ್‌ ಹೇಳುತ್ತಾರೆ.

‘ಇಂದು ಶೇ 30ರಷ್ಟು ಜನರು ಮತದಾನ ಮಾಡುತ್ತಿಲ್ಲ. ಈ ಪ್ರಮಾಣದಲ್ಲಿ ಐದು ಪರ್ಸೆಂಟ್‌ ಕಡಿಮೆಯಾದರೂ ನಮ್ಮ ಶ್ರಮ ಸಾರ್ಥಕ’ ಎನ್ನುವುದು ಅವರ ಅಭಿಮತ.

ಹರಿಕೃಷ್ಣ ಅವರು ರಚಿಸಿರುವ ಟ್ಯೂನ್‌ಗೆ ಪದ ಪೋಣಿಸುವ ಕೆಲಸವನ್ನು ಭಟ್ಟರು ಈಗಾಗಲೇ ಮುಗಿಸಿದ್ದಾರೆ. ಈ ಚಿತ್ರಕ್ಕೆ ಇರ್ಮಾನ್‌ ಸರ್ದಾರಿಯಾ ನೃತ್ಯ ಸಂಯೋಜಿಸಲಿದ್ದಾರೆ. ರಾಜ್ಯದ ವಿವಿಧೆಡೆ ಹಾಡನ್ನು ಚಿತ್ರೀಕರಿಸುವ ಕೆಲಸ ಈಗಾಗಲೇ ಆರಂಭವಾಗಿದೆ. ಮಿಡಿಯಾ ಕನೆಕ್ಟ್‌ ಸಂಸ್ಥೆ ಹಾಡನ್ನು ಪ್ರಸ್ತುತಪಡಿಸುತ್ತಿದೆ’ ಎಂದು ಯೋಗರಾಜ್‌ ಭಟ್‌ ವಿವರಣೆ ನೀಡುತ್ತಾರೆ.

ಇದೇ ತಿಂಗಳು 30ನೇ ತಾರೀಖಿನಂದು ಬೆಂಗಳೂರಿನ ವಿಧಾನಸೌಧ ಮತ್ತು ಕಂಠೀರವ ಸ್ಟುಡಿಯೊ ಎದುರು ದೊಡ್ಡ ಪ್ರಮಾಣದಲ್ಲಿ ಚಿತ್ರೀಕರಣ ನಡೆಸಲೂ ತಂಡ ಯೋಜನೆ ಹಾಕಿಕೊಂಡಿದೆ.

ಹರಿತವಾದ ವ್ಯಂಗ್ಯ, ಮಹತ್ವದ ವಿಷಯಗಳನ್ನು ತಮಾಷೆಯ ವೇಷ ತೊಡಿಸಿ ಮನಸ್ಸಿಗಿಳಿಸುವುದು ಭಟ್ಟರ ಶೈಲಿ. ‘ಈ ಹಾಡಿನಲ್ಲಿಯೂ ತಮಾಷೆಯ ಜತೆಗೆ ಗಾಂಭೀರ್‍ಯವನ್ನೂ ಸೇರಿಸಿ ಎರಕ ಹೊಯ್ಯುವ ಪ್ರಯತ್ನವನ್ನು ಮಾಡಿದ್ದೇನೆ. ಇದೊಂದು ಬಗೆಯಲ್ಲಿ ಮಿಕ್ಸ್‌ ಮ್ಯಾಚಿಂಗ್‌ ಮಾಲಿಂಗ’ ಎಂದು ತಮ್ಮದೇ ಶೈಲಿಯಲ್ಲಿ ಭಟ್ಟರು ಉತ್ತರಿಸುತ್ತಾರೆ. ಈ ಹಾಡಿನ ಬಿಡುಗಡೆಯನ್ನೂ ದೊಡ್ಡ ಮಟ್ಟದಲ್ಲಿಯೇ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry