ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನೆಯೇ ನಿಜವಾದಾಗ

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮೊಬೈಲ್‌ಫೋನ್ ಮುಂದೆ ಇಟ್ಟುಕೊಂಡು ಪೋಕೊಮ್ಯಾನ್ ಪಾತ್ರ ಸೃಷ್ಟಿಸಿ ಗೇಮ್‌ ಆಡಿದ ನೆನಪು ಇನ್ನೂ ಇದೆ. ಅದೇ ಆಗ್ಯುಮೆಂಟೆಡ್‌ ರಿಯಾಲಿಟಿ (ಎಆರ್‌) ತಂತ್ರಜ್ಞಾನದ ಆರಂಭ. ಈ ಆಟದ ಮೂಲಕವೇ ಈ ತಂತ್ರಜ್ಞಾನ ಪರಿಚಯವಾಯಿತು. ಆದರೆ, ಇದು ಕೇವಲ ವಿಡಿಯೋ ಗೇಮ್‌ಗಳಿಗೆ ಮಾತ್ರ ಸೀಮಿತವಾಗದೇ ತನ್ನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಾ ವಿವಿಧ ಕ್ಷೇತ್ರಗಳಿಗೆ ಲಗ್ಗೆ ಇಡುತ್ತಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಸಂಸ್ಥೆಗಳಾದ ಗೂಗಲ್, ಆ್ಯಪಲ್‌ ಸಂಸ್ಥೆಗಳು ಈ ಎಆರ್‌ ತಂತ್ರಜ್ಞಾನವನ್ನು ಮತ್ತಷ್ಟು ವಿಸ್ತರಿಸಲು ಹಲವು ಆವಿಷ್ಕಾರಗಳೊಂದಿಗೆ ಮುಂದೆ ಬರುತ್ತಿವೆ. ಇದರಿಂದ ಎಆರ್ ತಂತ್ರಜ್ಞಾನ ವಾಸ್ತವ ಪ್ರಪಂಚಕ್ಕೆ ಮತ್ತಷ್ಟು ಸನಿಹವಾಗುತ್ತಿದೆ.

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಎಆರ್‌ ತಂತ್ರಜ್ಞಾನ  ವರ್ಚುವಲ್ ಕಾರ್ಡ್‌ಬೋರ್ಡ್‌ಗಳು, ಸಾಧನಗಳು ಮತ್ತು ಪ್ಲೇ ಸ್ಟೋರ್‌ಗಳಲ್ಲಿ ಮೊಬೈಲ್ ತಂತ್ರಾಂಶಗಳು  ಸದ್ದು ಮಾಡುತ್ತಿವೆ.  ಈಗಾಗಲೇ ಆ್ಯಪಲ್‌ ಸಂಸ್ಥೆ ‘ಎಆರ್‌ಕಿಟ್‌’ ಇರುವ ಐಒಎಸ್‌ 11 ಒಎಸ್‌ ಸರಣಿಯ ಐಫೋನ್‌, ಐಪ್ಯಾಡ್‌ಗಳಲ್ಲಿ ಎಆರ್‌ ತಂತ್ರಜ್ಞಾನದ ಅದ್ಭುತಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಮತ್ತೊಂದು ಕಡೆ ಗೂಗಲ್‌ ಸಂಸ್ಥೆ ಕೂಡ ‘ಎಆರ್‌ಕೋರ್‌’ ಹೆಸರಿನಲ್ಲಿ ಎಆರ್‌ ತಂತ್ರಜ್ಞಾನ ಇರುವ ತಂತ್ರಾಂಶಗಳನ್ನು ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸುಲಭವಾಗಿ ಬಳಸಿಕೊಳ್ಳಲು ವಿಶೇಷ ವೇದಿಕೆ ನಿರ್ಮಿಸಿದೆ.

ಮುಂದಿನ ದಿನಗಳಲ್ಲಿ ಎಆರ್‌ಕೋರ್‌ ವರ್ಷನ್ 1.0 ಮೂಲಕ ಸುಮಾರು 10 ಕೋಟಿ ಅಂಡ್ರಾಯ್ಡ್ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಗೂಗಲ್‌ ಸಿದ್ಧತೆ ನಡೆಸುತ್ತಿದೆ. ಇದರಿಂದ ಕೈಗೆಟುಕುವ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲೂ ಎಆರ್‌ ತಂತ್ರಜ್ಞಾನದ ತಂತ್ರಾಂಶಗಳನ್ನು ಬಳಸಿಕೊಳ್ಳಬಹುದು.

ಪ್ರಮುಖ ಮೊಬೈಲ್‌ ತಯಾರಿಕಾ ಸಂಸ್ಥೆಗಳೆಲ್ಲಾ ಈ ದಿಸೆಯಲ್ಲೇ ಹೆಜ್ಜೆ ಇಡುತ್ತಿವೆ. ಇದರಿಂದ ಎಆರ್‌ಕೋರ್ ವರ್ಷನ್ 1.0 ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವವರು ತಮ್ಮ ತಂತ್ರಾಂಶಗಳನ್ನು ಪ್ಲೇ ಸ್ಟೋರ್‌ಗೆ ತರಲು ದಾರಿಗಳು ತೆರೆದುಕೊಳ್ಳುತ್ತಿವೆ.

ಕೇವಲ ತಂತ್ರಾಂಶಗಳಲ್ಲದೇ, ವಿಶೇಷ ಸಾಧನಗಳ ಮೂಲಕವೂ ಈ ತಂತ್ರಜ್ಞಾನವನ್ನು ಪರಿಚಯಿಸಲು ಗೂಗಲ್ ಮುಂದೆ ಬರುತ್ತಿದೆ. ಹಿಂದೆ ಮಾರುಕಟ್ಟೆಗೆ ತಂದು ಮೂಲೆಗೆ ಎಸೆದಿದ್ದ ‘ಗೂಗಲ್‌ ಗ್ಲಾಸ್‌’ ಅನ್ನು ಹೊಸ ರೂಪದಲ್ಲಿ ಮತ್ತೊಮ್ಮೆ ಮಾರುಕಟ್ಟೆಗೆ ತರಲು ಯೋಜನೆ ರೂಪಿಸುತ್ತಿದೆ.

ಏನಿದು ಎಆರ್‌ ತಂತ್ರಜ್ಞಾನ
ಸುತ್ತಮುತ್ತಲಿನ ಭೌತಿಕ ಮತ್ತು ವಾಸ್ತವ ಪ್ರಪಂಚದ ಪರೋಕ್ಷ ವೀಕ್ಷಣೆ ತಂತ್ರಜ್ಞಾನ. ಇದರಲ್ಲಿ ಮಾಹಿತಿಯನ್ನು ಧ್ವನಿ, ವಿಡಿಯೋ, ಗ್ರಾಫಿಕ್ಸ್‌ ಅಥವಾ ಜಿಪಿಎಸ್‌ ಡೇಟಾದಂತಹ ಕಂಪ್ಯೂಟರ್ ಜನರೇಟೆಡ್‌ ಇನ್‌ಪುಟ್‌ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ.ಮೆಡಿಟೆಡೆಡ್ ರಿಯಾಲಿಟಿ ಎಂಬ ಮತ್ತೊಂದು ತಂತ್ರಜ್ಞಾನದ ಮೂಲಕ ನಾವು ನೋಡುವ ದೃಶ್ಯಗಳಲ್ಲಿ ವಸ್ತು ಅಥವಾ ಪರಿಕರಗಳನ್ನು ಸೃಷ್ಟಿಸುವುದು ಮತ್ತು ಇರುವ ವಸ್ತು, ಪರಿಕರ, ಪರಿಸರಗಳನ್ನು ತೊಲಗಿಸಲಾಗುತ್ತದೆ. ಅಲ್ಲದೆ, ಬೇರೆ ಬೇರೆ ಕೋನಗಳಲ್ಲಿ ನೋಡಲು ಸಾಧ್ಯವಾಗುತ್ತದೆ.

ಇದಕ್ಕೆ ಭಿನ್ನವೆಂಬತೆ ವರ್ಚುವಲ್‌ ತಂತ್ರಜ್ಞಾನದಲ್ಲಿ, ನಾವು ನೋಡುವ ವಾಸ್ತವ ದೃಶ್ಯಗಳನ್ನು ಕಂಪ್ಯೂಟರ್ ಸಹಾಯದಿಂದ ಕಲ್ಪಿತ ದೃಶ್ಯಗಳೊಂದಿಗೆ ಜೋಡಿಸಿ ತೋರಿಸಲಾಗುತ್ತದೆ. ಇನ್ನೂ ವಿವರಿಸಿ ಹೇಳುವುದಾದರೆ,  ನಮ್ಮ ಸುತ್ತಲಿನ ವಾಸ್ತವ ಪರಿಸರವನ್ನು ಕಲ್ಪಿತ ವಸ್ತುಗಳೊಂದಿಗೆ ಕಂಪ್ಯೂಟರ್ ಮೂಲಕ ಜೋಡಿಸಿ ತೋರಿಸುವ ನಿರಂತರ ಪ್ರಕ್ರಿಯೆ ಇದಾಗಿದೆ. ಸ್ಮಾರ್ಟ್‌ಫೋನ್‌ ಕೈಯಲ್ಲಿದ್ದರೆ ಸಾಕು ಈ ತಂತ್ರಜ್ಞಾನದ ಸಹಾಯದಿಂದ ನಾವು ನಿತ್ಯ ಟಿವಿ ವಾಹಿನಿಗಳಲ್ಲಿ ನೋಡುವ ಕಾರ್ಟೂನ್‌ ಪಾತ್ರಗಳನ್ನು ರಸ್ತೆಯಲ್ಲಿ ನೋಡಬಹುದು. ಇಲ್ಲಿ ರಸ್ತೆ ಎಂಬ ವಾಸ್ತವ ಪ್ರಪಂಚದಲ್ಲಿ ಕಾರ್ಟೂನ್ ಎಂಬ ಕಲ್ಪನೆಯನ್ನು ಕಾಣುವಂತೆ ತೋರಿಸುವುದೇ ಎಆರ್ ತಂತ್ರಜ್ಞಾನ.

ಈ ತಂತ್ರಜ್ಞಾನದ ಸಹಾಯದಿಂದ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುತ್ತಿರುವ ಘಟನೆಗಳನ್ನು ನಮ್ಮ ಕಣ್ಣಮುಂದೆಯೇ ನಡೆಯುತ್ತಿರುವಂತೆ ತೋರಿಸಬಹುದು. ಇದು ವಿನೋದಕ್ಕಾಗಿ ಮಾತ್ರವಲ್ಲದೇ, ಇನ್ನೂ ಹಲವು ರೀತಿ ಉಪಯೋಗವಾಗುತ್ತದೆ. ಉದಾಹರಣೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಈ ತಂತ್ರಜ್ಞಾನ ಅಳವಡಿಸಿರುವ ಹೆಲ್ಮೆಟ್‌ ಹಾಕಿಕೊಂಡರೆ, ಇಡೀ ಕಟ್ಟಡದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಒಂದೇ ಕಡೆ ನಿಂತು ಪರಿಶೀಲಿಸಬಹುದು.
**
ಏನಿದರ ಉಪಯೋಗಗಳು
* ಫೋನ್‌ ಕ್ಯಾಮೆರಾದಲ್ಲೇ ಕೋಣೆಯ ಅಳತೆ ನೋಡಬಹುದು

* ನಮ್ಮ ಮುಂದೆಯೇ ತ್ರೀಡಿ ಬೊಂಬೆಗಳನ್ನು ಸೃಷ್ಟಿಸಬಹುದು

* ನಿಮ್ಮ ಪಕ್ಕದಲ್ಲೇ ಹಾಲೋಗ್ರಾಮ್ಸ್‌ ಸೃಷ್ಟಿಯಾಗುವಂತೆ ಮಾಡಬಹುದು

* ಆಕಾಶದ ಎಲ್ಲೆ ಮೀರಿ ನಕ್ಷತ್ರಮಂಡಲವನ್ನು ನೋಡಬಹುದು

* ಮೊಬೈಲ್‌ಫೋನನ್ನೇ ಸ್ಕೇಲ್‌ನಂತೆ ಪರಿವರ್ತಿಸಿ ಅಳತೆ ಮಾಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT