ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಡೊನಾಲ್ಡ್‌ ಟ್ರಂಪ್‌ ಪರ ಪ್ರಚಾರ ಮಾಡುತ್ತಿದ್ದ ಬ್ರಿಟಿಷ್‌ ಕಂಪನಿ ಐದು ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ದುರುಪಯೋಗ ಪಡಿಸಿಕೊಂಡಿದೆ ಎಂಬ ಆರೋಪ ಕೇಳಿಬಂದಿತ್ತು. ‘ಕೇಂಬ್ರಿಜ್ ಅನಲಿಟಿಕಾ’ ಎನ್ನುವ ದತ್ತಾಂಶ ವಿಶ್ಲೇಷಣೆ ಕಂಪನಿಯು ಪರ್ಸನಾಲಿಟಿ ಪ್ರೊಫೈಲಿಂಗ್ ಎಂಬ ಅಪ್ಲಿಕೇಷನ್‌ ಮೂಲಕ ಫೇಸ್‌ಬುಕ್ ಬಳಕೆದಾರರ ಖಾತೆಗಳಿಗೆ ಪ್ರವೇಶ ಪಡೆದುಕೊಂಡಿತ್ತು.

ಗುಜರಾತ್‌ ಚುನಾವಣೆ ಸಂದರ್ಭದಲ್ಲಿ, ಟ್ರಂಪ್‌ ಪರವಾಗಿ ಫೇಸ್‌ಬುಕ್‌ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಕಳಂಕ ಹೊತ್ತಿರುವ ಇದೇ ಕಂಪನಿಯ ಸೇವೆಯನ್ನು ಕಾಂಗ್ರೆಸ್‌ ಪಡೆದುಕೊಂಡಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು. ಮೊನ್ನೆಯಷ್ಟೇ, ಭಾರತದಂತಹ ದೇಶಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಮಹತ್ವದ ಚುನಾವಣೆಗಳಲ್ಲಿ ಫೇಸ್‌ಬುಕ್‌ ದುರ್ಬಳಕೆ ಆಗದಂತೆ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲಾಗಿದೆ ಎಂದು ಫೇಸ್‌ಬುಕ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್‌ ಜುಕರ್‌ಬರ್ಗ್‌ ಇತ್ತೀಚೆಗೆ ಭರವಸೆ ನೀಡಿದ್ದಾರೆ.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಕ್ಷಣಗಣನೆ ಪ್ರಾರಂಭವಾದ ಬೆನ್ನಲ್ಲೇ, ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆದಾರರ ವೈಯಕ್ತಿಕ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದಂತಹ ಚರ್ಚೆಗಳು ಮುನ್ನೆಲೆಗೆ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದು ಎಂದರೆ ಸಂತೆಯಲ್ಲಿ ಬೆತ್ತಲಾದಂತೆ ಎಂಬ ಮಾತಿದೆ.

ಈ ತಾಣಗಳಲ್ಲಿರುವ ಬಳಕೆದಾರನ ವೈಯಕ್ತಿಕ ಮಾಹಿತಿ ಎಷ್ಟರ ಮಟ್ಟಿಗೆ ಸುರಕ್ಷಿತ ಎಂದರೆ ಸ್ವಲ್ಪ ಮಟ್ಟಿಗೆ ಅಥವಾ ಸಾಮಾನ್ಯ ಮಟ್ಟಿಗೆ ಎನ್ನಬಹುದು.
ದತ್ತಾಂಶ ಸುರಕ್ಷತೆಗೆ ಸಂಬಂಧಿಸಿದಂತೆ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಿದರೂ, ಸೋರಿಕೆಗೆ ಅವಕಾಶ ಇದ್ದೇ ಇದೆ. ಮಾಹಿತಿ ಚೋರರು ಹೊಸ ಹೊಸ ವಿಧಾನಗಳೊಂದಿಗೆ ಬಳಕೆದಾರರ ಬಳಿಗೆ ಬರುತ್ತಿದ್ದಾರೆ.

ಕೇಂಬ್ರಿಡ್ಜ್‌ ವಿವಿಯ ಅನಲಿಟಿಕಾ ತಂಡ ಫೇಸ್‌ಬುಕ್‌ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಲು ‘ದಿಸ್ ಈಸ್‌ ಯುವರ್‌ ಡಿಜಿಟಲ್ ಲೈಫ್‌ (This is your digitallife) ಎಂಬ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿತ್ತು. ಫೇಸ್‌ಬುಕ್‌ ಬಳಕೆದಾರರು ಈ ಅಪ್ಲಿಕೇಷನ್‌ ಮೂಲಕ ತಮ್ಮ ವೈಯಕ್ತಿಕ ಮಾಹಿತಿಯನ್ನು ಶೈಕ್ಷಣಿಕ ಉದ್ದೇಶದ ಬಳಕೆಗಾಗಿ ನೀಡಬಹುದು ಎಂದು ಹೇಳಿತ್ತು.

ವಾಣಿಜ್ಯ ಉದ್ದೇಶಕ್ಕೆ ಇದನ್ನು ಬಳಸಿಕೊಳ್ಳುವುದಿಲ್ಲ ಎಂದು ಹೇಳಿತ್ತು. ಇದನ್ನು ನಂಬಿದ 2.70ಲಕ್ಷ ಜನರು ಈ ಅಧ್ಯಯನದಲ್ಲಿ ನೇರವಾಗಿ ಭಾಗವಹಿಸಿ, ವೈಯಕ್ತಿಕ ಮಾಹಿತಿ ನೀಡಿದ್ದರು. ಆದರೆ, ಈ 2.70 ಲಕ್ಷ ಫೇಸ್‌ಬುಕ್‌ ಖಾತೆಗಳ ಮೂಲಕ ಕೇಂಬ್ರಿಡ್ಜ್‌ ಅನಲಿಟಿಕಾ ಕಂಪೆನಿ 5 ಕೋಟಿ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಿತ್ತು.

ಇಂತಹ ತಂತ್ರಾಂಶಗಳಿಗೆ data-harvesting apps ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಿಂದ ಮಾಹಿತಿ ಸೋರಿಕೆ ಮಾಡಲು ಇಂತಹ ಅಪ್ಲಿಕೇಷನ್‌ ಬಳಸುತ್ತಾರೆ. ಅಂದರೆ, ಒಬ್ಬ ಫೇಸ್‌ಬುಕ್‌ ಬಳಕೆದಾರ ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡರೆ, ಆತನ ಫ್ರೆಂಡ್ಸ್‌ ಲಿಸ್ಟ್‌ನಲ್ಲಿರುವ ಎಲ್ಲ ಬಳಕೆದಾರರ ( ಪ್ರೈವೆಸಿ ಸೆಟ್ಟಿಂಗ್ಸ್‌ನಲ್ಲಿ ಅಗತ್ಯ ಬದಲಾವಣೆ ಮಾಡಿಕೊಳ್ಳದವರ)ವೈಯಕ್ತಿಕ ಮಾಹಿತಿಯನ್ನು ಈ ಅಪ್ಲಿಕೇಷನ್‌ ಸೋರಿಕೆ ಮಾಡುತ್ತದೆ.

ಬಳಕೆದಾರನ ಅರಿವಿಗೆ ಬಾರದಂತೆ, ಆತನ ವೈಯಕ್ತಿಕ ಮಾಹಿತಿಗಳು ಮೂರನೆಯ ಕಂಪೆನಿಯೊಂದರ ಖಾತೆಗೆ ವರ್ಗಾವಣೆ ಆಗಿರುತ್ತವೆ. ಸಾಮಾಜಿಕ ಜಾಲ ತಾಣಗಳನ್ನು ತೆರೆಯುತ್ತಿದ್ದಂತೆ ಬ್ರೌಸರ್‌ ಬಾರ್‌ನಲ್ಲಿ ಇಂತಹ ಹಲವು ಅಪ್ಲಿಕೇಷನ್‌ಗಳು, ಪ್ರೋಗ್ರಾಂಗಳು, ಟೂಲ್ಸ್‌ಗಳು ಪ್ರತ್ಯಕ್ಷವಾಗುತ್ತವೆ. ಅಪ್ಪಿತಪ್ಪಿ ಇವುಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೆ, ದತ್ತಾಂಶ ಸೋರಿಕೆಗೆ ನಾವಾಗಿಯೇ ಅನುಮತಿ ನೀಡಿದಂತೆ.

ಇದಕ್ಕಿರುವ ಸರಳ ಪರಿಹಾರವೆಂದರೆ, ಫೇಸ್‌ಬುಕ್‌ ಅಪ್ಲಿಕೇಷನ್ಸ್‌ಗಳನ್ನು ಆಗಾಗ್ಗ ಪರಿಶೀಲನೆ ಮಾಡುತ್ತಿರಬೇಕು. ವಿಶೇಷವಾಗಿ, ಥರ್ಡ್‌ ಪಾರ್ಟಿ ವೆಬ್‌ಸೈಟ್‌, ಅಥವಾ ಅಪ್ಲಿಕೇಷನ್‌ ಮೂಲಕ (ಬೇರೆ ವೆಬ್‌ಸೈಟ್‌ಗಳಲ್ಲಿ ನೀಡುವ ಫೇಸ್‌ಬುಕ್‌ ಲಿಂಕ್‌ ಕ್ಲಿಕ್‌ ಮಾಡುವ ಮೂಲಕ) ಫೇಸ್‌ಬುಕ್‌ ತೆರೆಯುವಾಗ ಎಚ್ಚರಿಕೆ ವಹಿಸಬೇಕು. ಇಂತಹ ಸಂದರ್ಭ ಬಂದಾಗ ಫೇಸ್‌ಬುಕ್‌ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿನ ಆಪ್ಸ್ ಟ್ಯಾಬ್‌ನಲ್ಲಿ, ನಿಮ್ಮ ಖಾತೆಗೆ ಸಂಪರ್ಕ ಹೊಂದಿರುವ ಅಪ್ಲಿಕೇಷನ್‌ ವಿವರ ಪರಿಶೀಲಿಸಿಕೊಳ್ಳಬೇಕು.

ಇಲ್ಲಿ ಫೇಸ್‌ಬುಕ್‌ ಖಾತೆಯ ಜತೆಗೆ ಸಂಪರ್ಕ ಹೊಂದಿರುವ ಎಲ್ಲ ಅಪ್ಲಿಕೇಷನ್ಸ್‌ಗಳ ಮಾಹಿತಿ ಲಭಿಸುತ್ತದೆ. ಮತ್ತು ಈ ಅಪ್ಲಿಕೇಷನ್‌ಗಳ ಮೂಲಕ ನಿಮ್ಮ ಖಾತೆಗೆ ಸಂಬಂಧಿಸಿದ ಏನೆಲ್ಲಾ ವೈಯಕ್ತಿಕ ಮಾಹಿತಿಯನ್ನು ಮೂರನೆಯ ವ್ಯಕ್ತಿಗೆ ಹಂಚಿಕೆ ಮಾಡಲು ನೀವು ಒಪ್ಪಿದ್ದೀರಾ ಎಂಬ ಮಾಹಿತಿಯೂ ಲಭಿಸುತ್ತದೆ. ಅನುಮಾನ ಬಂದ, ಅಥವಾ ಸಂಶಯಾಸ್ಪದ ಅಪ್ಲಿಕೇಷನ್‌ ಅನ್ನು ತಕ್ಷಣವೇ ಡಿಲೀಟ್‌ ಮಾಡಿಬಿಡಬೇಕು.

ಸೆಟ್ಟಿಂಗ್ಸ್‌ನಲ್ಲಿ share publicly ಆಯ್ಕೆಯಲ್ಲಿ ಕನಿಷ್ಠ ಮಾಹಿತಿಯನ್ನು ಮಾತ್ರ ಇನ್ನೊಬ್ಬರಿಗೆ ಶೇರ್‌ ಮಾಡುವಂತೆ ಆಯ್ಕೆ ಮಾಡಿಕೊಳ್ಳಬೇಕು. ಅಂದರೆ ನಿಮ್ಮ ಸ್ನೇಹಿತರಿಗೆ ಮಾತ್ರ ನಿಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಬರೆದ ಚಿತ್ರ, ಸಂದೇಶ ಓದಲು ಅವಕಾಶ ಇರಬೇಕು. ಸ್ನೇಹಿತರ ಸ್ನೇಹಿತರಿಗೆ ಈ ಅವಕಾಶ ನಿರಾಕರಿಸಬೇಕು.

ಯಾವುದೇ ಅಪ್ಲಿಕೇಷನ್‌ ಇನ್‌ಸ್ಟಾಲ್‌ಮಾಡಿಕೊಳ್ಳುವ ಮುನ್ನ ಅದರ ಪೈವಸಿ ಪಾಲಿಸಿಯನ್ನೊಮ್ಮೆ ಓದಿಕೊಳ್ಳಬೇಕು. ಅಗತ್ಯ ಬಿದ್ದರೆ ಟ್ರ್ಯಾಕರ್‌ ಅಥವಾ ಬ್ಲಾಕರ್‌ ಆ್ಯಡ್‌ ಆನ್‌ಗಳನ್ನು ಇನ್‌ಸ್ಟಾಲ್‌ಮಾಡಿಕೊಳ್ಳಬಹುದು. ಬ್ರೌಸಿಂಗ್ ಹಿಸ್ಟರಿಯನ್ನು ಆಗಾಗ್ಗ ಸ್ವಚ್ಛ ಮಾಡುತ್ತಿರಬೇಕು.

‘ಇದನ್ನು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ ಬಳಸಿಕೊಳ್ಳಲಾಗುವುದು, ಯಾವುದೇ ರೀತಿಯ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವುದಿಲ್ಲ’ ಎಂಬ ಸಂದೇಶ
ಕೇಂಬ್ರಿಡ್ಜ್‌ ಅಥವಾ ವಿಶ್ವಪ್ರಸಿದ್ಧ ವಿಶ್ವವಿದ್ಯಾಲಯ, ಕಂಪೆನಿಯಿಂದ ಬಂದರೂ, ಕೂಲಂಕಷ ಪರಿಶೀಲನೆ ನಂತರವೇ ಉತ್ತರಿಸಬೇಕು. ಡಾಟಾ ಹಾರ್ವೆಸ್ಟಿಂಗ್ ಕುತಂತ್ರಗಳ ಕಾಲ ಇದು.

ನ್ಯೂಯಾರ್ಕ್‌ ಟೈಮ್ಸ್‌

***

ಚೀನಾದ ವಿಚಾಟ್‌ಗೆ 100 ಕೋಟಿ ಬಳಕೆದಾರರು

ಚೀನಾದ ಜನಪ್ರಿಯ ಸಾಮಾಜಿಕ ಜಾಲತಾಣ ವಿಚಾಟ್‌ ಅನ್ನು ವಿಶ್ವದಾದ್ಯಂತ 100 ಕೋಟಿ ಜನರು ಬಳಕೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ವಿಚಾಟ್ ಬಳಕೆದಾರನು ಈ ಆ್ಯಪ್‌ ಅನ್ನು ದಿನಕ್ಕೆ 90 ನಿಮಿಷಗಳ ಕಾಲ ಬಳಕೆ ಮಾಡುತ್ತಾನೆ ಎಂದು ಅಂದಾಜಿಸಲಾಗಿದೆ.

ವಿಚಾಟ್ ಆ್ಯಪ್ ಮೆಸೇಜಿಂಗ್ ಸೇವೆಯ ಜೊತೆಗೆ  ಮನರಂಜನೆ, ಗೇಮ್ಸ್‌, ಮೊಬೈಲ್‌ ಪೇಮೆಂಟ್ಸ್‌, ಸುದ್ದಿ ಸೇರಿದಂತೆ ಇತರೆ ಸೇವೆಗಳನ್ನು ನೀಡುತ್ತಿದೆ.

ಚೀನಾದ ಕಮ್ಯುನಿಸ್ಟ್‌ ಸರ್ಕಾರದ ನಿಯಂತ್ರಣದ ನಡುವೆಯೂ 100 ಕೋಟಿ ಬಳಕೆದಾರರನ್ನು ಹೊಂದಿರುವುದು ಜಾಗತಿಕವಾಗಿ ಹೆಮ್ಮೆಯ ವಿಚಾರವಾಗಿದೆ ಎಂದು ವಿಚಾಟ್‌ ಕಂಪೆನಿ ಹೇಳಿಕೊಂಡಿದೆ.2016ನೇ ವರ್ಷಕ್ಕೆ ಹೋಲಿಸಿದರೆ 2017ರಲ್ಲಿ ಶೇ 16 ರಷ್ಟು ಹೊಸ ಬಳಕೆದಾರರು ಸೇರ್ಪಡೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT