ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ: ಮಣ್ಣಿನ ಪೈಪ್‌ಲೈನ್‌ ಕುರುಹು ಪತ್ತೆ

ಕುಡಿಯುವ ನೀರಿನ ಸರಬರಾಜಿಗೆ ವಿಶಿಷ್ಟ ವ್ಯವಸ್ಥೆ
Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹಂಪಿ (ಹೊಸಪೇಟೆ ತಾಲ್ಲೂಕು): ವಿಜಯನಗರ ಅರಸರ ಕಾಲದ ಕುಡಿಯುವ ನೀರಿನ ಪೈಪ್‌ಲೈನ್‌ ಕುರುಹುಗಳು, ರಾಜರ ಖಾಸಾ ಜಾಗದಿಂದ ತುಸು ದೂರದಲ್ಲಿ ಶನಿವಾರ ಪತ್ತೆಯಾಗಿವೆ.

ಇಲ್ಲಿಯ ಕುಡಿಯುವ ನೀರಿನ ಅರವಟಿಗೆ ಸ್ಮಾರಕದ ಬಳಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ (ಎ.ಎಸ್‌.ಐ.) ಕಾಂಪೌಂಡ್‌ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ನೆಲ ಅಗೆಯುತ್ತಿದ್ದ ಸಂದರ್ಭದಲ್ಲಿ, ಕುಡಿಯುವ ನೀರು ಪೂರೈಕೆಗಾಗಿ ಅಳವಡಿಸಿದ್ದ ಪೈಪ್‌ಗಳು ಪತ್ತೆಯಾಗಿವೆ. ಎರಡು ಹಂತದಲ್ಲಿ ಪೈಪ್‌ಲೈನ್‌ ವ್ಯವಸ್ಥೆ ಇದೆ.

ಎರಡೂವರೆಯಿಂದ ಮೂರು ಅಡಿ ನೆಲದಾಳದಲ್ಲಿ ಒಂದು ಹಾಗೂ ಅದರ ಮೇಲ್ಭಾಗದಲ್ಲಿ ಇನ್ನೊಂದು ಪೈಪ್‌ಲೈನ್‌ ಇದೆ. 4X4 ಅಡಿ ಆಳ, ಅಗಲದ ತೊಟ್ಟಿ ಕೂಡ ಈ ವೇಳೆ ಸಿಕ್ಕಿದೆ. ತೊಟ್ಟಿಗೆ ಒಂದು ಕಡೆ ನೀರಿನ ಸಂಪರ್ಕ ಕಲ್ಪಿಸಿದರೆ, ಅದರಿಂದ ಬೇರೆ ಬೇರೆ ಕಡೆ ನೀರು ಹರಿದು ಹೋಗಲು ಮೂರು ಕಡೆಗಳಲ್ಲಿ ಪೈಪ್‌ಲೈನ್‌ ಸಂಪರ್ಕ ಕಲ್ಪಿಸಿರುವುದನ್ನು ಕಾಣಬಹುದು.

‘ಮಡಕೆ ತಯಾರಿಸುವ ಮಣ್ಣಿನಿಂದ ಈ ಪೈಪ್‌ಗಳನ್ನು ಸಿದ್ಧಪಡಿಸಲಾಗಿದ್ದು, ಪೈಪ್‌ಲೈನ್‌ ಕೆಳಭಾಗ ಹಾಗೂ ಮೇಲ್ಭಾಗವನ್ನು ಗಾರೆ, ಇಟ್ಟಿಗೆಯಿಂದ ಕಟ್ಟಲಾಗಿದೆ. ತೊಟ್ಟಿಯನ್ನು ಸಹ ಈ ವಸ್ತುಗಳಿಂದಲೇ ನಿರ್ಮಿಸಲಾಗಿದೆ’ ಎಂದು ಎ.ಎಸ್‌.ಐ. ಹಂಪಿ ವೃತ್ತದ ಸೂಪರಿಂಟೆಂಡೆಂಟ್‌ ಕೆ. ಮೂರ್ತೇಶ್ವರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೇಲ್ನೋಟಕ್ಕೆ, ಈ ಪೈಪ್‌ಲೈನ್‌ ವ್ಯವಸ್ಥೆ ಅರವಟಿಗೆ ಸ್ಮಾರಕಕ್ಕೆ ಹೊಂದಿಕೊಂಡಂತೆ ಇರುವ ಡಾಂಬರ್‌ ರಸ್ತೆಯ ಕೆಳಗಡೆಯಿಂದ ಹಾದು ಹೋಗಿರುವ ಸಾಧ್ಯತೆ ಇದೆ ಎಂದು ಎನಿಸುತ್ತದೆ. ಆದರೆ, ರಸ್ತೆಯನ್ನು ಅಗೆದರೆ ನಿಖರವಾಗಿ ಗೊತ್ತಾಗುತ್ತದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಪತ್ರ ಬರೆದು ಅನುಮತಿ ಪಡೆಯಲಾಗುವುದು’ ಎಂದು ತಿಳಿಸಿದರು.

‘ರಾಜರ ಖಾಸಾ ಜಾಗ, ರಾಣಿ ಸ್ನಾನಗೃಹ, ಪುಷ್ಕರಣಿ ಹಾಗೂ ಭೋಜನ ಶಾಲೆ ಕೂಡ ಸಮೀಪದಲ್ಲೇ ಇದ್ದು, ಈ ಎಲ್ಲ ಸ್ಥಳಗಳಿಗೂ ಪ್ರತ್ಯೇಕವಾಗಿ ನೀರಿನ ಪೈಪ್‌ಲೈನ್‌ ವ್ಯವಸ್ಥೆ ಮಾಡಿದ್ದಿರಬಹುದು.ಆಧುನಿಕ ತಂತ್ರಜ್ಞಾನವನ್ನು ಮೀರಿಸುವಷ್ಟರ ಮಟ್ಟಿಗೆ ಆ ವ್ಯವಸ್ಥೆ ಇದೆ’ ಎಂದರು.

ಉತ್ಖನನ ಸಂದರ್ಭದಲ್ಲಿ, ಇದೇ ಸ್ಥಳದಿಂದ ತುಸು ದೂರದಲ್ಲಿ ವೀರ ಹರಿಹರನ ಅರಮನೆ, ನೆಲಮಾಳಿಗೆ ಸ್ಮಾರಕಗಳ ಕುರುಹುಗಳು ಪತ್ತೆಯಾಗಿದ್ದವು.

**

ಎಲ್ಲಿಂದ ಎಲ್ಲಿಗೆ ಪೈಪ್‌ಲೈನ್‌ ಸಂಪರ್ಕ ಇದೆ ಎನ್ನುವುದು ಉತ್ಖನನದ ಬಳಿಕವಷ್ಟೇ ನಿಖರವಾಗಿ ಗೊತ್ತಾಗಲಿದೆ. ಅದಕ್ಕೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಲಿದ್ದೇವೆ.
– ಕೆ. ಮೂರ್ತೇಶ್ವರಿ, ಎಎಸ್‌ಐ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT