ಹಿಂದೂಗಳೆಲ್ಲಾ ವೈದಿಕರೇ?

7

ಹಿಂದೂಗಳೆಲ್ಲಾ ವೈದಿಕರೇ?

Published:
Updated:

‘ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ. ಹಿಂದೂ ಎಂದು ಈಗ ಕರೆದುಕೊಳ್ಳುತ್ತಿರುವ ವೈದಿಕ ಅಥವಾ ಮನುಧರ್ಮ ಪ್ರಣೀತ ವರ್ಣ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ ಜೀವ ತಳೆದ ಹೊಸ ಕ್ರಾಂತಿಕಾರಿ ಧರ್ಮ’ ಎಂದು ವೀರಶೈವ - ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವ ಸಂಬಂಧ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಪ್ರತಿಪಾದಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ.

ಹುಟ್ಟನ್ನು ಆಧರಿಸಿದ ಮೇಲು–ಕೀಳಿನ ಶ್ರೇಣೀಕರಣಕ್ಕೆ ವಿರುದ್ಧವಾಗಿ ಬಸವಣ್ಣರಂಥ ಕಾಯಕಜೀವಿಗಳ ಚಳವಳಿ ರೂಪುಗೊಂಡಿತು ಎಂದು ಈ ತಜ್ಞರು ಹೇಳುವುದು ಸರಿ. ಅದೇ ರೀತಿ ಲಿಂಗಾಯತಕ್ಕೆ ಸ್ಪಷ್ಟ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಎನ್ನುವುದು ವಿಶಿಷ್ಟವೆನ್ನುವುದರಲ್ಲಿ ಎರಡು ಮಾತಿಲ್ಲ.

ಧರ್ಮ ಎನ್ನುವ ಪದದ ಬಳಕೆ ಬಗ್ಗೆ ಇರುವ ಚರ್ಚೆಸದ್ಯಕ್ಕೆ ಬದಿಗಿಡೋಣ. ಆದರೆ ಹಿಂದೂ ಎಂಬ ಧರ್ಮದ ಬಗ್ಗೆ ಈ ಸಮಿತಿಗೆ ಇಷ್ಟು ಗೊಂದಲಗಳಿರುವುದು ಅಚ್ಚರಿಯ ಸಂಗತಿ. ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳಬೇಕಾದರೆ ‘ಹಿಂದೂ ಧರ್ಮ ಅಂದರೆ ಏನು, ಯಾವುದು’ ಮುಂತಾದ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಡಲು ಸಾಧ್ಯವಾಗಬೇಕು ಎಂಬ ಸಾಮಾನ್ಯ ಜ್ಞಾನವನ್ನೂ ತಜ್ಞರ ಸಮಿತಿ ಪರಿಗಣಿಸಿದಂತೆ ಕಾಣುವುದಿಲ್ಲ.

‘ಪ್ರತಿ ಧರ್ಮಕ್ಕೂ ಅದರದ್ದೇ ಆದ ತಾತ್ವಿಕ ಆಚಾರ ವಿಚಾರಗಳನ್ನು ಸಾರುವ ಪಠ್ಯ ಇರುತ್ತದೆ; ವೈದಿಕ ಧರ್ಮಕ್ಕೆ ವೇದಾಗಮ ಶಾಸ್ತ್ರ ಪುರಾಣಗಳು ಇದ್ದಂತೆ, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇದ್ದಂತೆ ಲಿಂಗಾಯತರಿಗೆ ವಚನಗಳೇ ಧಾರ್ಮಿಕ ಪಠ್ಯಗಳಾಗಿವೆ’ ಎಂದು ವರದಿ ಹೇಳುತ್ತದೆ. ಹಾಗೆಯೇ ಜೈನ, ಬೌದ್ಧ, ಮುಸ್ಲಿಂ, ಸಿಖ್ ಧರ್ಮಗಳಂತೆ ಪ್ರತ್ಯೇಕ ಧರ್ಮವಾಗುವ ಎಲ್ಲ ಅರ್ಹತೆಗಳೂ ಲಿಂಗಾಯತ ಪರಂಪರೆಗೆ ಇದೆ ಎಂದು ಸಮಿತಿ ಪ್ರತಿಪಾದಿಸಿದೆ. ಜೊತೆಗೆ ಜನಗಣತಿಯ ವಿವರ ನೀಡಿ ಲಿಂಗಾಯತರು ಅಲ್ಪಸಂಖ್ಯಾತ ಸಮುದಾಯದವರೇ ಆಗಿದ್ದಾರೆ ಎಂದು ಪ್ರತಿಪಾದಿಸಲಾಗಿದೆ.

ಹಿಂದೂಗಳು ಎಂದು ಕರೆದುಕೊಳ್ಳುವವರು ಸಂಸ್ಕೃತದ ಮಂತ್ರಗಳನ್ನು ನೆಚ್ಚಿಕೊಂಡಿದ್ದಾರೆ ಎಂದೂ ವರದಿ ಹೇಳುತ್ತದೆ. 2011ರ ಜನಗಣತಿಯ ಪ್ರಕಾರ, ಈ ದೇಶದಲ್ಲಿ ಹಿಂದೂ ಸಮುದಾಯದ ಜನಸಂಖ್ಯೆ ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇಕಡ 84ರಷ್ಟು. ಈಗ ಕೇಳಿಕೊಳ್ಳಬೇಕಾದ ಪ್ರಶ್ನೆ: ಈ ಶೇಕಡ 84ರಷ್ಟು ಮಂದಿಯೂ ತಮ್ಮ ಆಚಾರ ವಿಚಾರಗಳಿಗೆ ವೇದಗಳನ್ನು ಆಧರಿಸುವವರೇ? ಅವರೆಲ್ಲರೂ ಸಂಸ್ಕೃತ ಮಂತ್ರಗಳನ್ನು ನೆಚ್ಚಿಕೊಂಡಿದ್ದಾರೆಯೇ? ಹಿಂದೂಗಳು ಎಂದು ಕರೆದುಕೊಳ್ಳುವವರಲ್ಲಿ ನಾಸ್ತಿಕರೂ ಇಲ್ಲವೇ? ಜಾತ್ಯತೀತವಾದಿಗಳಿಲ್ಲವೇ?

‘ಲಿಂಗಾಯತ ಎನ್ನುವುದು ಹಿಂದೂ ಧರ್ಮ ಅರ್ಥಾತ್ ವೈದಿಕಕ್ಕಿಂತ ಭಿನ್ನ’ ಎಂದು ವರದಿ ಹೇಳಿದೆ. ಮಾತೆತ್ತಿದರೆ ಬಹುತ್ವ, ಬಹುಸಂಸ್ಕೃತಿ ಎಂದೆಲ್ಲ ಹೇಳುವವರು ಅದು ಹೇಗೆ ಎಲ್ಲ ಹಿಂದೂಗಳನ್ನು ‘ಒಂದು’ ವೈದಿಕ ಅಥವಾ ಬ್ರಾಹ್ಮಣ ಧರ್ಮಕ್ಕೆ ಸಮೀಕರಿಸುತ್ತಾರೆ? ಹಾಗೆ ಸಮೀಕರಿಸಿದಾಗ ತಾನೇ ಅಲ್ಪಸಂಖ್ಯೆಯ ಪರಿಕಲ್ಪನೆ ತರುವುದು ಸಾಧ್ಯ? ಒಂದು ಸಮುದಾಯ ಅಥವಾ ಸಂಪ್ರದಾಯವನ್ನು ಪ್ರತ್ಯೇಕ ಎಂದು ಪ್ರತಿಪಾದಿಸಲು ಇನ್ನುಳಿದ ನೂರಾರು ಸಮುದಾಯ ಅಥವಾ ಸಂಪ್ರದಾಯಗಳನ್ನು ಏಕ ಎಂದು ಪರಿಗಣಿಸಿದರೇ?

ಇಂದು ಯಾರೂ ವೇದಾಗಮಗಳಲ್ಲಿ ಹೇಳಿದಂತೆ ಜೀವನಪದ್ಧತಿ ಹೊಂದಿಲ್ಲ ಎಂಬುದು ಬೇರೆ ಮಾತು. ಅಂಥವರು ಇದ್ದಾರೆ ಎಂದಾದರೂ ವೇದ ಇತ್ಯಾದಿಗಳಲ್ಲಿ ಹೇಳಿದಂತೆ ಚಾಚೂ ತಪ್ಪದೆ ಬದುಕುತ್ತಿರುವವರನ್ನು ಅಥವಾ ಬ್ರಾಹ್ಮಣ ಧರ್ಮವನ್ನು ಇಂದಿಗೂ ಪಾಲಿಸುತ್ತಿರುವವರನ್ನು ಮಾತ್ರ ಪರಿಗಣಿಸಿದರೆ, ಲಿಂಗಾಯತರಿಗಿಂತ ಮೊದಲು ಅಂಥವರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡಬೇಕಲ್ಲವೆ?

ವೇದಾಗಮ, ಶಾಸ್ತ್ರ ಪುರಾಣಗಳು ವೈದಿಕ ಧರ್ಮದವರ ತಾತ್ವಿಕ ಆಚಾರ ವಿಚಾರಗಳನ್ನು ಸಾರುವ ಪಠ್ಯಗಳು ಅಂತಾದರೆ (ಕುರಾನ್, ಬೈಬಲ್ ಇದ್ದಂತೆ) ಸಂವಿಧಾನ ಕೊಡಮಾಡಿದ ಧಾರ್ಮಿಕ ಸ್ವಾತಂತ್ರ್ಯದ ಪ್ರಕಾರ ವೈದಿಕ ಧರ್ಮದವರಿಗೆ ತಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳಿದಂತೆ ಬದುಕಲು ಯಾವ ಕಾನೂನಾತ್ಮಕ ನಿರ್ಬಂಧವೂ ಇರಬಾರದಲ್ಲವೇ? ಮನುಧರ್ಮ ಪ್ರಣೀತ ವರ್ಣವ್ಯವಸ್ಥೆಯನ್ನು ಕೂಡ ವೈದಿಕರು ಆಚರಿಸಬಾರದೆಂದು ಈ ತಜ್ಞರು ಯಾವ ತರ್ಕದಿಂದ ಹೇಳಿಯಾರು? ಆದರೆ ಸಮಾನತೆಯ ಆದರ್ಶವನ್ನು ಹೊಂದಿದ ಸಮಾಜಕ್ಕಾಗಿ ಮನುಧರ್ಮಶಾಸ್ತ್ರದಲ್ಲಿ ಹೇಳಲಾದ, ಹುಟ್ಟನ್ನಾಧರಿಸಿದ ಮೇಲುಕೀಳನ್ನು ಪ್ರತಿಪಾದಿಸುವ ಅಂಶಗಳನ್ನು ಪಾಲಿಸುವುದು ಇಂದು ಕಾನೂನು ಪ್ರಕಾರ ಶಿಕ್ಷಾರ್ಹ. ಹೀಗಿದ್ದರೂ ವೇದಾಗಮ ಶಾಸ್ತ್ರ ಪುರಾಣಗಳೇ ಕೆಲವರ ತಾತ್ವಿಕ ಆಚಾರ ವಿಚಾರಗಳನ್ನು ಇಂದಿಗೂ ಸಾರುತ್ತಿವೆ ಎನ್ನುವುದು ಸಮಂಜಸವಲ್ಲ.

ಶಾಸ್ತ್ರಗಳ ಈ ಮೇಲುಕೀಳಿನ ಅಂಶವನ್ನೇ ಉಲ್ಲೇಖಿಸಲು ಕಾರಣವಿದೆ. ಅದೇನೆಂದರೆ ವಚನ ಚಳವಳಿ ಇಂಥ ವಿಚಾರಗಳನ್ನು ವಿರೋಧಿಸಿರುವುದೇ ಲಿಂಗಾಯತ ಧರ್ಮವು ಹಿಂದೂ ಧರ್ಮಕ್ಕಿಂತ ಭಿನ್ನ ಎನ್ನಲು ಒಂದು ಮುಖ್ಯ ಕಾರಣವೆಂದು ಸಮಿತಿ ಪರಿಗಣಿಸಿರುವುದು.

‘ಈ ಇಡೀ ಲಿಂಗಾಯತ- ಹಿಂದೂ- ವೈದಿಕ ಇತ್ಯಾದಿ ತತ್ವಗಳನ್ನು ನಾವು ವಚನಕಾಲದ ಹಿನ್ನೆಲೆಯಲ್ಲಿ ನೋಡುತ್ತಿದ್ದೇವೆ; ಇಂದಿನ ವೈದಿಕರ ಬಗ್ಗೆ ನಾವು ಹೇಳುತ್ತಿಲ್ಲ; ಹಿಂದಿನ ಕಾಲದ, ಅಂದರೆ ವಚನಕಾರರ ಕಾಲದ ವ್ಯವಸ್ಥೆಗಳ ಬಗ್ಗೆ ನಾವು ಹೇಳುತ್ತಿದ್ದೇವೆ’ ಎಂದು ಸಮಿತಿ ಪ್ರತಿಪಾದಿಸುತ್ತದೆಯೇ? ಒಂದು ವೇಳೆ ಹಾಗೆ ಅಂತಾದರೆ, 12ನೇ ಶತಮಾನದಲ್ಲಿ ಯಾವ ರೀತಿ ಜನಜೀವನ ಇತ್ತು ಅನ್ನುವುದನ್ನು ಆಧರಿಸಿ ಇಂದಿನ ಈ 21ನೇ ಶತಮಾನದ ನೀತಿಗಳನ್ನು ನಿರೂಪಿಸಬೇಕೇ ಎಂಬ ಪ್ರಶ್ನೆ ಬರುತ್ತದೆ. ಅಷ್ಟೇ ಅಲ್ಲ; ಲಿಂಗಾಯತ ಧರ್ಮದ ಗುಣಲಕ್ಷಣಗಳನ್ನು ಹೇಳುವಾಗಲೂ ಈಗ ಲಿಂಗಾಯತರು ಹೇಗೆ ಬದುಕುತ್ತಿದ್ದಾರೆ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸದೆ, ವಚನಗಳು ಏನು ಹೇಳಿವೆ ಎನ್ನುವುದನ್ನು ಮಾತ್ರ, ಅದೂ ಆಯ್ದ ವಚನಗಳನ್ನು ಮಾತ್ರ ಸಮಿತಿ ಪರಿಗಣಿಸಿದೆ.

ವೈದಿಕ ಧರ್ಮ ನಂಬುವ ಮೂಢನಂಬಿಕೆ, ವಾಸ್ತು, ಜ್ಯೋತಿಷ, ಪಂಚಾಂಗವನ್ನು ವಿರೋಧಿಸುವುದು, ಕಂದಾಚಾರಗಳನ್ನು ನಿರಾಕರಿಸುವುದು ಲಿಂಗಾಯತ ಧರ್ಮದ ಗುಣಲಕ್ಷಣವೆಂದು ಸಮಿತಿ ಹೇಳಿದೆ. ಈ ಕಾಲದಲ್ಲಿ ವಾಸ್ತು, ಜ್ಯೋತಿಷ, ಪಂಚಾಂಗವನ್ನು ನಂಬುವ ಲಿಂಗಾಯತರಿಲ್ಲವೇ? ಶುದ್ಧ ಲಿಂಗಾಯತದಲ್ಲಿ ಜಾತಿ ಮತ್ತು ಲಿಂಗಭೇದಕ್ಕೆ ಅವಕಾಶವೇ ಇಲ್ಲ ಎಂದು ಹೇಳುವ ಸಮಿತಿ ‘ಶುದ್ಧ’ ಲಿಂಗಾಯತವೆಂದು ಕರೆಯುವುದು ಯಾವುದನ್ನು? ಬಸವಣ್ಣನವರ ಕಾಲದಲ್ಲಿ ಹೇಳಿದ್ದನ್ನು ಶುದ್ಧ ಎನ್ನುತ್ತಾರಾದರೆ, ಅಂಥ ಶುದ್ಧವಾದದ್ದು ಈಗ ಎಲ್ಲಿದೆ? ಹೀಗಿರುವಾಗ ಈ ಸಮಿತಿಯ ನೀತಿ ನಿರೂಪಣೆ ವಚನಕಾಲದಲ್ಲಿದೆಯೇ ಹೊರತು ಈ ಕಾಲದಲ್ಲಿಲ್ಲ ಎಂದು ಅನಿಸುವುದಿಲ್ಲವೆ?

ಲಿಂಗಾಯತವು ವೈದಿಕ ಧರ್ಮಕ್ಕಿಂತ ಭಿನ್ನವೆಂದು ಸಾಧಿಸಲು ಸಮಿತಿ ಯತ್ನಿಸಿದಂತೆ ತೋರುತ್ತದೆ. ಆದರೆ ಹಿಂದೂಗಳು ಎಂದು ಕರೆದುಕೊಳ್ಳುವವರ ಮತ್ತು ಆ ಮೂಲಕ ಬಹುಸಂಖ್ಯಾತರು ಎನಿಸಿಕೊಂಡವರ ಜೀವನ ಪದ್ಧತಿಗಳಿಗಿಂತ ಲಿಂಗಾಯತ ಹೇಗೆ ಭಿನ್ನ ಎಂದು ಹೇಳಲು ಈ ತಜ್ಞರ ಸಮಿತಿಗೆ ಸಾಧ್ಯವಾಗಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry