ಗುರುವಾರ, 28–3–1968

7

ಗುರುವಾರ, 28–3–1968

Published:
Updated:

ಶರಾವತಿ: ರಾಷ್ಟ್ರದ ಅದ್ಭುತ ಪ್ರಗತಿಯ ಸಂಕೇತ

ಶರಾವತಿ, ಮಾ. 27–
ರಾಜ್ಯವು ಬಳಸಲಾರದಷ್ಟು ವಿದ್ಯುಚ್ಛಕ್ತಿಯನ್ನು ಉತ್ಪಾದನೆ ಮಾಡಲಾಗುತ್ತಿದೆಯೆಂಬ ಕಲ್ಪನೆ ತಪ್ಪೆಂದೂ ಇನ್ನು ಮೂರು ನಾಲ್ಕು ವರ್ಷಗಳಲ್ಲಿ ರಾಜ್ಯವು ಮತ್ತೆ ವಿದ್ಯುಚ್ಛಕ್ತಿಯ ಅಭಾವವನ್ನು ಎದುರಿಸಬೇಕಾಗಬಹುದೆಂದೂ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ತಿಳಿಸಿದರು.

ಶರಾವತಿ ವಿದ್ಯುತ್ ಉತ್ಪಾದನಾ ಯೋಜನೆಯ ಮೂರು ಮತ್ತು ನಾಲ್ಕನೇ ಘಟಕಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಿಜಲಿಂಗಪ್ಪನವರು ‘ಇನ್ನು ಮೂರು ನಾಲ್ಕು ವರ್ಷಗಳಲ್ಲಿ ಮತ್ತೆ ವಿದ್ಯುಚ್ಛಕ್ತಿಯ ಅಭಾವ ಉಂಟಾಗುವುದೆಂದೇ ಕಾಳಿ ನದಿ ಯೋಜನೆಯನ್ನು ಬೇಗ ಕೈಗೊಳ್ಳಬೇಕೆಂದಿರುವುದು’ ಎಂದು ಹೇಳಿ ಕೇಂದ್ರ ಸರ್ಕಾರವು ಅಗತ್ಯ ಸಹಾಯ ನೀಡುವುದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿಜ್ಞಾನ ಸಂಸ್ಥೆಯಲ್ಲಿ ಅಜ್ಞಾನ

ನವದೆಹಲಿ, ಮಾ. 27–
1,600 ರೂಪಾಯಿ ಸಂಬಳ ಸ್ಥಾನಕ್ಕೆ ಬಡ್ತಿ ಪಡೆದ ವ್ಯಕ್ತಿಯ ವಿದ್ಯಾರ್ಹತೆ– ಮುಂಬೈ ಪ್ರೌಢಶಾಲೆಯ ಸರ್ಟಿಫಿಕೇಟು! ದೇಶದ ಕೈಗಾರಿಕಾ ‍ಪ್ರಗತಿಗಾಗಿ ವೈಜ್ಞಾನಿಕ ಸಂಶೋಧನೆ ಕೈಗೊಳ್ಳುವ ಹೊಣೆಗಾರಿಕೆ ಅವರದು. ಇದನ್ನು ಕೇಳಿದ ರಾಜ್ಯಸಭೆ ಇಂದು ದಂಗುಬಡಿದು ಕುಳಿತಿತ್ತು.

ರಾಜಸ್ತಾನದ ಕಾಂಗ್ರೆಸ್ ಸದಸ್ಯ ಶ್ರೀ ಪಿ.ಎನ್. ಕಾಟ್ಟು, ಮುಂದುವರೆದು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆಯ ಸಂಸ್ಥೆ ಯಲ್ಲಿ ಕೆಲಸ ಮಾಡುತ್ತಿರುವ 245 ಮಂದಿ ವೈಜ್ಞಾನಿಕರು ಮತ್ತು ತಾಂತ್ರಿಕ ತಜ್ಞರಿಗೆ ಅಗತ್ಯ ಅರ್ಹತೆ ಇಲ್ಲವೆಂದು ಆಪಾದಿಸಿ, ಈ ವಿಷಯದ ವಿಚಾರಣೆಗೆ ಸರ್ಕಾರವನ್ನು ಒತ್ತಾಯಪಡಿಸಿದರು.

ಇಂಡೋನೀಸಿಯ ಅಧ್ಯಕ್ಷರಾಗಿ ಸುಹಾರ್ತೊ ಆಯ್ಕೆ

ಜಕಾರ್ತ, ಮಾ. 27–
ಮುಂದಿನ ಐದು ವರ್ಷಕ್ಕೆ ಇಂಡೋನೀಸಿಯ ರಾಷ್ಟ್ರಾಧ್ಯಕ್ಷರನ್ನಾಗಿ ಸುಹಾರ್ತೊ ಅವರನ್ನು ಇಂಡೋನೀಸಿಯದ ಪೀಪಲ್ಸ್ ಕಾಂಗ್ರೆಸ್ ಇಂದು ಸರ್ವಾನುಮತದಿಂದ ಆಯ್ಕೆ ಮಾಡಿತು. 1971ರ ಜುಲೈವರೆಗೆ ಸಾರ್ವತ್ರಿಕ ಚುನಾವಣೆಯನ್ನು ಮುಂದೆ ಹಾಕಲು ಕಾಂಗ್ರೆಸ್ ಆಜ್ಞೆ ಕೊಟ್ಟಿದೆ. ಅಧ್ಯಕ್ಷರನ್ನು ಆರಿಸಲು 1973ರಲ್ಲಿ ಚುನಾಯಿತ ಕಾಂಗ್ರೆಸ್‌ ಸಭೆ ಸೇರುವುದೆಂದೂ ಅದು ತಿಳಿಸಿದೆ.

ಸಮರ ಸಿದ್ಧತೆ

ಕೈರೊ, ಮಾ. 27–
ಜೋರ್ಡಾನಿನ ಪೂರ್ವ ದಂಡೆ ವಿರುದ್ಧ ಮತ್ತೊಮ್ಮೆ ಮುತ್ತಿಗೆ ಎಸಗಲು ಇಸ್ರೇಲಿ ಪಡೆಗಳು ಒಂದು ಕಡೆ ಸನ್ನದ್ಧವಾಗುತ್ತಿದ್ದಂತೆ ವಿವಿಧ ಅರಬ್ ರಾಷ್ಟ್ರ ಸೈನ್ಯಗಳು ಅದನ್ನು ಎದುರಿಸಲು ಸಿದ್ಧವಾಗಿರುವಂತೆ ಎಚ್ಚರಿಕೆ ಕೊಡಲಾಗಿದೆ ಎಂದು ಅಧಿಕೃತ ವಲಯಗಳಿಂದ ಗೊತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry