7
ಮೈತ್ರೇಯಿ ಗುರುಕುಲದ ಅರ್ಧಮಂಡಲೋತ್ಸವ ಸಂಭ್ರಮಕ್ಕೆ ‍ಭಾಗವತ್ ಚಾಲನೆ

ಗುರುಕುಲ ಶಿಕ್ಷಣದಿಂದ ಶ್ರೇಯಸ್ಸು

Published:
Updated:
ಗುರುಕುಲ ಶಿಕ್ಷಣದಿಂದ ಶ್ರೇಯಸ್ಸು

ವಿಟ್ಲ: ‘ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರು ಭಾರತೀಯ ಶಿಕ್ಷಣ ಪದ್ಧತಿಯನ್ನು ಹಾಳುಗೆಡವಿದರು. ಅದೇ ಶಿಕ್ಷಣ ಪದ್ಧತಿ ಇಂದಿಗೂ ಮುಂದುವರಿದಿದ್ದು, ಆಡಳಿತ ವ್ಯವಸ್ಥೆ ನೀಡುವ ಶಿಕ್ಷಣಕ್ಕಿಂತ ಸಮಾಜ ನೀಡುವ ಶಿಕ್ಷಣ ಲೇಸು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್‍ ಭಾಗವತ್ ಅಭಿಪ್ರಾಯಪಟ್ಟರು.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕೊಡಂಗಾಯಿ ಮೂರುಕಜೆಯಲ್ಲಿ ಅಜೇಯ ಟ್ರಸ್ಟ್ ವತಿಯಿಂದ ನಡೆಯುವ ಮೈತ್ರೇಯಿ ಗುರುಕುಲದ ಅರ್ಧಮಂಡಲೋತ್ಸವ ಸಂಭ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಗುರುಕುಲ ಪದ್ಧತಿಯ ಶಿಕ್ಷಣ ಧರ್ಮದ ಅರಿವನ್ನು ಮೂಡಿಸಲಿದ್ದು, ನಿಸ್ವಾರ್ಥ ಜೀವನವನ್ನು ಕಲಿಸುತ್ತದೆ. ಶಿಕ್ಷಣದ ಉದ್ದೇಶ ಎಲ್ಲರಿಗಾಗಿ ಬದುಕಬೇಕು, ತನಗಾಗಿ ಬದುಕು ಅಲ್ಲ ಎಂಬ ತಿಳಿವಳಿಕೆಯನ್ನು ನೀಡುತ್ತದೆ’ ಎಂದು ಹೇಳಿದರು.

ಪ್ರಕೃತಿ ಜೀವನದ ಪಾಠವನ್ನು ಕಲಿಸುತ್ತದೆ. ಆದರೆ ಅದು ಬದುಕು ಕಟ್ಟಿಕೊಳ್ಳುವುದಿಲ್ಲ. ಮನುಷ್ಯನಿಗೆ ಶಿಕ್ಷಣ ಅನಿವಾರ್ಯ. ಜ್ಞಾನ-ವಿಜ್ಞಾನದ ಜತೆಗೆ ಅಧ್ಯಾತ್ಮ ಶಿಕ್ಷಣವಿಲ್ಲದೇ ಹೋದಲ್ಲಿ ಪರಿಪೂರ್ಣವಾಗಲಾರದು. ಕಳ್ಳಸಾಗಣೆ ಕಲಿಸುವುದು ಶಿಕ್ಷಣವಲ್ಲ. ದೇಶದ್ರೋಹಿ ಚಟುವಟಿಕೆಗಳನ್ನು ಕಲಿಸುವುದು ಅಪಚಾರ. ಆದರೆ ಇಂದು ಅಂತಹ ಕೆಟ್ಟ ಕಾರ್ಯಗಳನ್ನು ಕಲಿಸುವುದೇ ಹೆಚ್ಚಾಗುತ್ತಿರುವುದು ದುರಂತ ಎಂದರು.

‘ತ್ಯಾಗ ಮತ್ತು ಸೇವೆಯ ಹೆಸರಲ್ಲಿ ಒಗ್ಗಟ್ಟಾಗುತ್ತೇವೆ. ಸತ್ಯದ ಪರಿಕಲ್ಪನೆಯ ಪರಿಪೂರ್ಣ ದೃಷ್ಟಿ, ವಿಶ್ವಾಸವೇ ಉಸಿರು. ಭಾರತವೇ ಒಂದು ಕುಟುಂಬ ಎಂಬ ನಿರ್ಧಾರ ಭಾರತೀಯರದ್ದು. ಪರಂಪರೆಯ, ಪ್ರಾಚೀನ ಶಿಕ್ಷಣ ಪದ್ಧತಿಯೇ ಶ್ರೇಷ್ಠ. ಗುರುಕುಲ ಪದ್ಧತಿಯ ಶಿಕ್ಷಣದಿಂದ ಶ್ರೇಯಸ್ಸು ಸಿಗಲಿದ್ದು, ಇದು ಎಲ್ಲೆಡೆ ಪಸರಿಸಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ ಗುರೂಜಿ ಅಧ್ಯಕ್ಷತೆ ವಹಿಸಿ, ‘ಆಧುನಿಕ ವಿಜ್ಞಾನ, ಸನಾತನ ಜ್ಞಾನ ಎರಡೂ ಬೇಕು. ಇವನ್ನು ಮೈತ್ರೇಯಿ ಗುರುಕುಲದಲ್ಲಿ ನೀಡುತ್ತಿದ್ದು, ಇದು ಕ್ರಾಂತಿಯನ್ನೇ ಉಂಟುಮಾಡಿದೆ. ದೇಶಪ್ರೇಮ ಮತ್ತು ಧರ್ಮ ಪ್ರೇಮ ಒಂದೇ ನಾಣ್ಯದ ಎರಡು ಮುಖಗಳು. ಚಿಕ್ಕಮಕ್ಕಳಲ್ಲೇ ಅದನ್ನು ಉದ್ದೀಪನಗೊಳಿಸಬೇಕು’ ಎಂದು ಹೇಳಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ‘ಇತಿಹಾಸದ ಪ್ರಜ್ಞೆ ಇಲ್ಲದ ಮನುಷ್ಯನಿಗೆ ತನ್ನ ಶಕ್ತಿಯ ಅರಿವಿರುವುದಿಲ್ಲ. ಇತರರ ಬಗ್ಗೆ ತಿಳಿದುಕೊಳ್ಳಲೂ ಸಾಧ್ಯವಾಗುವುದಿಲ್ಲ. ಭಾರತವೆಂದರೆ ಧರ್ಮ, ಧರ್ಮವಿಲ್ಲದೆ ಭಾರತವಿಲ್ಲ. ಮನುಷ್ಯನ ಧರ್ಮ ಉಸಿರು. ಅದನ್ನು ಹಸಿರಾಗಿಸುವುದೇ ಕರ್ಮ’ ಎಂದರು.

ಹುಬ್ಬಳ್ಳಿ ನಾಗಶಾಂತಿ ಎಜುಕೇಷನಲ್ ಅಂಡ್‌ ಚಾರಿಟೆಬಲ್‌ ಟ್ರಸ್ಟ್ ಅಧ್ಯಕ್ಷೆ ಅನ್ನಪೂರ್ಣ ಅಗಡಿ ಮಾತನಾಡಿದರು. ಅರ್ಧಮಂಡಲೋತ್ಸವ ಸಮಿತಿ ಅಧ್ಯಕ್ಷ ವಿನಯ ಹೆಗ್ಡೆ ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ.ಭಿಂದೇಶ್ವರ ಪಾಠಕ್, ಸುಧೀರ್ ಮಿಶ್ರ, ಥೋನ್ಸೆ, ಐಕಳ ಹರೀಶ್ ಶೆಟ್ಟಿ ಮತ್ತು ಕಲ್ಯಟೆ ವೆಂಕಟ್ರಮಣ ಭಟ್ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry