ಕಾನೂನುಬಾಹಿರ ವರ್ಗಾವಣೆ: ಆಯೋಗದಿಂದ ಕ್ರಮ

7
ಜಿಲ್ಲಾಧಿಕಾರಿಗಳನ್ನು ಎತ್ತಂಗಡಿ ಮಾಡುವಂತಿಲ್ಲ

ಕಾನೂನುಬಾಹಿರ ವರ್ಗಾವಣೆ: ಆಯೋಗದಿಂದ ಕ್ರಮ

Published:
Updated:
ಕಾನೂನುಬಾಹಿರ ವರ್ಗಾವಣೆ: ಆಯೋಗದಿಂದ ಕ್ರಮ

ಬೆಂಗಳೂರು: ರಾಜ್ಯ ಸರ್ಕಾರವು ನೀತಿ ಸಂಹಿತೆ ಜಾರಿಗೆ ಮುನ್ನ ಕಾನೂನು ಬಾಹಿರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ದೂರುಗಳು ಬಂದಿದ್ದು, ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

ವರ್ಗಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದು ಮಂಗಳವಾರ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಯಾವುದೇ ಅಧಿಕಾರಿಯನ್ನು ನೀತಿ ಸಂಹಿತೆ ಜಾರಿ ಆಗುವುದಕ್ಕೆ ಮೊದಲೇ ವರ್ಗಾವಣೆ ಮಾಡಿದ್ದು, ಆದೇಶ ಜಾರಿ ಆಗದಿದ್ದರೆ, ಅಂತಹ ಪ್ರಕರಣಗಳಲ್ಲಿ ವರ್ಗಾವಣೆಗೆ ಚುನಾವಣಾ ಆಯೋಗದ ಅನುಮತಿ ಪಡೆಯುವುದು ಕಡ್ಡಾಯ. ಆಡಳಿತಾತ್ಮಕ ದೃಷ್ಟಿಯಿಂದ ಯಾವುದೇ ಅಧಿಕಾರಿಯ ವರ್ಗಾವಣೆ ಅಗತ್ಯ ಎಂದು ಕಂಡುಬಂದರೆ ಸರ್ಕಾರ ಆಯೋಗಕ್ಕೆ ಮನವರಿಕೆ ಮಾಡಬೇಕು ಎಂದು ಅವರು ತಿಳಿಸಿದರು.

ಚುನಾವಣೆ ಘೋಷಣೆಯಾಗಿ ನೀತಿ– ಸಂಹಿತೆ ಜಾರಿಯಾಗಿರುವುದರಿಂದ ಚುನಾವಣಾ ಆಯೋಗದ ಅಧಿಕಾರಿಗಳು, ಕಂದಾಯ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳನ್ನು, ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ಸಂಜೀವ ಕುಮಾರ್‌ ಮಾಹಿತಿ ನೀಡಿದರು.

ಕಾನೂನು ಸುವ್ಯವಸ್ಥೆ: ರಾಜ್ಯದಲ್ಲಿ ಬಾಕಿ ಉಳಿದಿರುವ 42,815 ಜಾಮೀನು ರಹಿತ ಬಂಧನದ ವಾರೆಂಟ್‌ಗಳನ್ನು ತಕ್ಷಣವೇ ಜಾರಿಗೊಳಿಸಬೇಕು. 92,867 ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಿವೆ. ಅದರಲ್ಲಿ 31,227 ಶಸ್ತ್ರಾಸ್ತ್ರಗಳನ್ನು ತಂದೊಪ್ಪಿಸಲಾಗಿದೆ. 15 ಅಕ್ರಮ ಶಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸೆಕ್ಷನ್‌ 107 ಸಿಆರ್‌ಪಿಸಿಯಡಿ  29,030 ಕೇಸುಗಳನ್ನು  ಹಿಂದಕ್ಕೆ ಪಡೆಯಲಾಗಿದೆ.

ದೂರುಗಳು: ಇಲ್ಲಿಯವರೆಗೆ 7010 ದೂರುಗಳು ದಾಖಲಾಗಿದ್ದು, 6825 ದೂರುಗಳನ್ನು ವಿಲೇವಾರಿ ಮಾಡಲಾಗಿದೆ. 136 ಪ್ರಕರಣಗಳಲ್ಲಿ ಸತ್ಯಾಂಶವಿದೆ.

ಮತದಾನದ ವೆಬ್‌ಕಾಸ್ಟಿಂಗ್‌: 3000 ದಿಂದ 6000 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನವನ್ನು ವೆಬ್‌ಕಾಸ್ಟಿಂಗ್‌ ಮೂಲಕ ಚುನಾವಣಾ ಆಯೋಗ ನೇರವಾಗಿ ವೀಕ್ಷಣೆ ಮಾಡಲಿದೆ.

ದ್ರಾವಿಡ್‌ ಐಕಾನ್‌, ಯೋಗರಾಜ್‌ಭಟ್‌ ಗೀತೆ: ಖ್ಯಾತ ಕ್ರಿಕೆಟಿಗ ರಾಹುಲ್‌ ದ್ರಾವಿಡ್‌ ಅವರನ್ನು ಈ ಚುನಾವಣೆಯ ಬ್ರ್ಯಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆ ಮಾಡಲಾಗಿದೆ. ಚಲನಚಿತ್ರ ನಿರ್ದೇಶಕ ಯೋಗರಾಜ್‌ ಭಟ್‌ 2018 ರ ಚುನಾವಣೆಯ ಶೀರ್ಷಿಕೆ ಗೀತೆ (ಟೈಟಲ್‌ ಸಾಂಗ್‌) ಹಾಡಲಿದ್ದಾರೆ. ಬುಧವಾರ ಈ ಗೀತೆ ಬಿಡುಗಡೆ ಆಗಲಿದೆ.

450 ಮಹಿಳಾ ಮತಗಟ್ಟೆಗಳು: ಈ ಬಾರಿ ಮಹಿಳೆಯರಿಗಾಗಿಯೇ 450 ವಿಶೇಷ ಮಹಿಳಾ ಮತಗಟ್ಟೆಗಳಿರುತ್ತವೆ.

ಯಾವುದು ಕಾಸಿಗಾಗಿ ಸುದ್ದಿ: ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿಯು ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ನೀಡಿ ಮತ ಕೇಳಬಹುದು. ಆದರೆ, ಪಕ್ಷ ಅಥವಾ ಅಭ್ಯರ್ಥಿಯ ಪರವಾಗಿ ಸುದ್ದಿ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದರೆ ಅದನ್ನು ‘ಕಾಸಿಗಾಗಿ ಸುದ್ದಿ’ ಎಂದು ಪರಿಗಣಿಸಲಾಗುತ್ತದೆ. ಇದರ ಪರಿಶೀಲನೆಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ ರಚಿಸಲಾಗುತ್ತದೆ.

ಅಂಕಣಗಳೂ ‘ಕಾಸಿಗಾಗಿ ಸುದ್ದಿ’ ವ್ಯಾಪ್ತಿಗೆ: ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು ಮತ್ತು ಲೇಖನಗಳ ಮೂಲಕ ನಿರ್ದಿಷ್ಟ ಪಕ್ಷದ ಪರ ಒಲವು ವ್ಯಕ್ತಪಡಿಸಿ ಬರೆಯುವುದು ಮತ್ತು ಮತ ಹಾಕಿ ಗೆಲ್ಲಿಸಿ ಎಂಬ ಅಭಿಪ್ರಾಯ ವ್ಯಕ್ತಪಡಿಸುವುದೂ ‘ಕಾಸಿಗಾಗಿ ಸುದ್ದಿ’ ವ್ಯಾಪ್ತಿಗೆ ಬರುತ್ತದೆ.

24 ಗಂಟೆಗಳಲ್ಲಿ ಜಾಹೀರಾತು ತೆಗೆಯಬೇಕು: ಚುಣಾವಣಾ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ 24 ಗಂಟೆಗಳೊಳಗೆ ಸಾರ್ವಜನಿಕ ಸ್ಥಳಗಳಲ್ಲಿರುವ ಎಲ್ಲ ಸರ್ಕಾರಿ ಜಾಹೀರಾತುಗಳನ್ನು ತೆಗೆದುಹಾಕಬೇಕು. ಮಾಧ್ಯಮಗಳಲ್ಲೂ ಜಾಹಿರಾತು ಪ್ರಕಟಿಸುವುದನ್ನು ನಿಲ್ಲಿಸಬೇಕು.

ವಿಶೇಷ ತಂಡಗಳ ರಚನೆ: ಚುನಾವಣಾ ಕಾರ್ಯಕ್ಕಾಗಿ 3,56,552 ಸಿಬ್ಬಂದಿ ಅಗತ್ಯವಿದೆ. ನೀತಿ ಸಂಹಿತೆ ಉಲ್ಲಂಘನೆ ನಿಗಾ ವಹಿಸಲು 1,361 ತಂಡಗಳು, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು 1,503 ತಂಡಗಳು, ಸಂಚಾರಿ ನಿಗಾ ವಹಿಸಲು 1,542 ತಂಡಗಳನ್ನು ರಚಿಸಲಾಗುವುದು ಮತ್ತು 2,018

ಚೆಕ್‍ ಪೋಸ್ಟ್‌ಗಳನ್ನು ಸ್ಥಾಪಿಸಲಾಗುವುದು.

ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್ ಮಾತನಾಡಿ, ಪೊಲೀಸ್ ಇಲಾಖೆಯ ಸೈಬರ್ ಠಾಣೆಯ ಘಟಕಗಳು  ಸಾಮಾಜಿಕ ಜಾಲತಾಣಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುತ್ತಿದ್ದಾರೆ. ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಐಪಿಸಿ,  ಪ್ರಜಾ ಪ್ರತಿನಿಧಿ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಗಳ ಸಾಮಾಜಿಕ ಜಾಲತಾಣಗಳ ಬಳಕೆ ಕುರಿತು ಚುನಾವಣಾ ಆಯೋಗವು ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಏನು ಮಾಡಬಹುದು–ಮಾಡಬಾರದು

* ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊಸ ಯೋಜನೆಗಳು ಅಥವಾ ಕಾರ್ಯಕ್ರಮಗಳನ್ನು ಘೋಷಿಸುವಂತಿಲ್ಲ. ಹಣಕಾಸು ಮಂಜೂರಾತಿ, ಶಂಕುಸ್ಥಾಪನೆ ಮತ್ತು ಅಡಿಗಲ್ಲು ಸಮಾರಂಭ ಹಮ್ಮಿಕೊಳ್ಳುವಂತಿಲ್ಲ.

* ಈಗಾಗಲೇ ಜಾರಿಯಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳನ್ನು ಮುಂದುವರಿಸಬಹುದು. ಇದನ್ನು ಅಧಿಕಾರಿಗಳೇ ಮಾಡಬೇಕು. ರಾಜಕೀಯ ವ್ಯಕ್ತಿಗಳು ಭಾಗವಹಿಸುವಂತಿಲ್ಲ. ಅದರ ಉಸ್ತುವಾರಿಯನ್ನೂ ವಹಿಸುವಂತಿಲ್ಲ.

* ಯಾವುದೇ ಕಾಮಗಾರಿಗೆ ಸಂಬಂಧಿಸಿದ ಕಾರ್ಯಾದೇಶ ಹೊರಡಿಸಿದರೂ, ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕವೇ ಆರಂಭಿಸಬೇಕು. ಪೂರ್ಣಗೊಂಡ ಕಾಮಗಾರಿಗಳಿಗೆ ಹಣ ಪಾವತಿ ಮಾಡಬಹುದು.

* ಬರ, ಪ್ರವಾಹದಂತಹ ತುರ್ತುಸ್ಥಿತಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ಸರ್ಕಾರ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ, ಅದು ಮತದಾರರ ಮೇಲೆ ಪ್ರಭಾವ ಬೀರುವಂತಿರಬಾರದು.

* ಸರ್ಕಾರಿ ವಾಹನಗಳನ್ನು ಚುನಾವಣೆ ಉದ್ದೇಶಕ್ಕೆ ಬಳಸುವಂತಿಲ್ಲ.

* ಕೇಂದ್ರ ಅಥವಾ ರಾಜ್ಯದ ಸಚಿವರು ಅಧಿಕಾರಿಗಳ ಸಭೆ ಕರೆಯುವಂತಿಲ್ಲ.

* ದೇವಸ್ಥಾನ, ಮಸೀದಿ, ಚರ್ಚುಗಳೂ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳನ್ನು ಚುನಾವಣೆ ಉದ್ದೇಶಕ್ಕೆ ಬಳಸಬಾರದು.

* ಲೌಡ್‌ ಸ್ಪೀಕರ್‌ಗಳನ್ನು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ಮಾತ್ರ ಬಳಸಬಹುದು. ಶಾಲೆ, ಆಸ್ಪತ್ರೆಗಳ ಸಮೀಪದಲ್ಲಿ ಲೌಡ್‌ ಸ್ಪೀಕರ್‌ ಬಳಸುವಂತಿಲ್ಲ.

* ಜಾತಿ ಮತ್ತು ಕೋಮು ಭಾವನೆ ಕೆರಳಿಸಬಾರದು. ಜಾತಿ, ಸಮುದಾಯ, ಭಾಷೆ ಮತ್ತು ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿಸಬಾರದು.

* ಸಮಾವೇಶ, ರ್‍ಯಾಲಿ ನಡೆಸಲು ಪೊಲೀಸರಿಂದ ಮೊದಲೇ ಅನುಮತಿ ಪಡೆದುಕೊಳ್ಳಬೇಕು. ರಾತ್ರಿ 10ರ ಬಳಿಕ ಯಾವುದೇ ಸಮಾವೇಶಗಳನ್ನು ಮಾಡುವಂತಿಲ್ಲ.

**

ಸರ್ಕಾರಿ ವಾಹನ ಬಳಸುವಂತಿಲ್ಲ:

ಮುಖ್ಯಮಂತ್ರಿ, ರಾಜ್ಯ ಮತ್ತು ಕೇಂದ್ರದ ಸಚಿವರು ಚುನಾವಣಾ ಉದ್ದೇಶಕ್ಕಾಗಿ ಸರ್ಕಾರಿ ಕಾರು ಬಳಸುವಂತಿಲ್ಲ.

ಕೇಂದ್ರ ಮತ್ತು ರಾಜ್ಯ ಸ್ವಾಮ್ಯದ ಉದ್ಯಮಗಳು, ನಿಗಮ, ಮಂಡಳಿಗಳು, ಸ್ಥಳೀಯ ಸಂಸ್ಥೆಗಳು, ನಗರಸಭೆ, ಪುರಸಭೆ, ಬಿಬಿಎಂಪಿ, ಸಹಕಾರ ಸಂಘಗಳ ವಾಹನಗಳನ್ನು ಚುನಾವಣಾ ಉದ್ದೇಶಕ್ಕೆ ಬಳಸಬಾರದು. ಕಚೇರಿ ಉದ್ದೇಶಕ್ಕೆ ಹೋಗುವುದಿದ್ದರೆ ಬಳಸಲು ಅವಕಾಶವಿದೆ ಎಂದಯ ಸಂಜೀವ್‌ ಕುಮಾರ್‌ ತಿಳಿಸಿದರು.

ಚುನಾವಣೆ ಮತ್ತು ಖಾಸಗಿ ಉದ್ದೇಶಕ್ಕೆ ತೆರಳುವಾಗ ಖಾಸಗಿ ವಾಹನ ಬಳಸಬಹುದು. ಪೈಲಟ್‌ ಕಾರುಗಳು, ವಾಹನದ ಮೇಲೆ ದೀಪ ಬಳಸಲು ಅವಕಾಶವಿಲ್ಲ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry