ಜಿಪಿಎಸ್‌ ಸಾಧನ, ಪ್ಯಾನಿಕ್‌ ಬಟನ್‌ ಕಡ್ಡಾಯ

7

ಜಿಪಿಎಸ್‌ ಸಾಧನ, ಪ್ಯಾನಿಕ್‌ ಬಟನ್‌ ಕಡ್ಡಾಯ

Published:
Updated:
ಜಿಪಿಎಸ್‌ ಸಾಧನ, ಪ್ಯಾನಿಕ್‌ ಬಟನ್‌ ಕಡ್ಡಾಯ

ಬೆಂಗಳೂರು: ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕ ಸಾರಿಗೆ ವಾಹನಗಳಿಗೆ ಜಿಪಿಎಸ್‌ (ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌) ಉಪಕರಣ ಹಾಗೂ ಪ್ಯಾನಿಕ್‌ ಬಟನ್‌ (ಅಪಾಯದ ಸೂಚನೆ ನೀಡುವ ಪರಿಕರ) ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಏಪ್ರಿಲ್‌ 1ರಿಂದಲೇ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್ ಸೂಚನೆ ನೀಡಿದ್ದಾರೆ. ಕೇಂದ್ರ ಸಾರಿಗೆ ಸಚಿವಾಲಯವು ಮಾರ್ಚ್‌ 2ರಂದು ಈ ಸಂಬಂಧ ಅಧಿಸೂಚನೆ ಹೊರಡಿಸಿತ್ತು.

ಟ್ಯಾಕ್ಸಿಗಳು, ಬಸ್‌ಗಳು ಹಾಗೂ ಶಾಲಾ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದೆ. ಜತೆಗೆ, ಈ ವಾಹನಗಳಲ್ಲಿ ಸಿ.ಸಿ.ಟಿ.ವಿ ಅಳವಡಿಸುವುದನ್ನೂ ಕಡ್ಡಾಯ ಮಾಡಲಾಗಿದೆ. ಈ ನಿಯಮ ಪಾಲನೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ಏಪ್ರಿಲ್ ಮೊದಲ ವಾರದಿಂದ ಕಾರ್ಯಾಚರಣೆ ನಡೆಸಲಿದ್ದಾರೆ.

‘ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಚಿವಾಲಯವು ಈ ನಿಯಮ ರೂಪಿಸಿದೆ. ಅದನ್ನು ಪಾಲಿಸದ ವಾಹನಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ದಯಾನಂದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಮೊಬೈಲ್‌ ಜಿಪಿಎಸ್‌ ಅವೈಜ್ಞಾನಿಕ: ಕೆಲವು ವಾಹನಗಳಲ್ಲಿ ಮೊಬೈಲ್‌ನಲ್ಲೇ ಜಿಪಿಎಸ್‌ ಬಳಕೆ ಮಾಡಲಾಗುತ್ತಿದೆ. ಆದರೆ, ಇದು ಅವೈಜ್ಞಾನಿಕವಾಗಿದೆ. ಇದರಿಂದ ಪ್ರಯಾಣಿಕರ ಸುರಕ್ಷತೆ ಅಸಾಧ್ಯ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಂಪನಿಯವರು ಟ್ಯಾಕ್ಸಿಗಳಿಗೆ ಮೊಬೈಲ್‌ ಉಪಕರಣ ನೀಡಿದ್ದಾರೆ. ಅವುಗಳನ್ನು ಚಾಲಕರು ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗುತ್ತಿದ್ದಾರೆ. ಅದರಿಂದ ವಾಹನವಿರುವ ನಿರ್ದಿಷ್ಟ ಜಾಗವನ್ನು ಪತ್ತೆ ಹಚ್ಚಲು ಆಗುವುದಿಲ್ಲ.

ಕೆಲವು ಟ್ಯಾಕ್ಸಿಗಳಲ್ಲಿ ಚಾಲಕರು ಎರಡಕ್ಕಿಂತ ಹೆಚ್ಚು ಕಂಪನಿಯ ಮೊಬೈಲ್ ಸಾಧನ ಇಟ್ಟುಕೊಂಡಿರುತ್ತಾರೆ. ಒಂದನ್ನು ಬಂದ್‌ ಮಾಡಿ ಮತ್ತೊಂದನ್ನು ಆನ್‌ ಮಾಡಿಯೇ ಸೇವೆ ನೀಡುತ್ತಾರೆ. ಹೀಗಾಗಿ, ಜಿಪಿಎಸ್‌ ವ್ಯವಸ್ಥೆ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಯಾವುದಾದರೂ ಅವಘಡಗಳು ಸಂಭವಿಸಿದರೆ, ವಾಹನದ ಗುರುತಿಸುವಿಕೆ ಕಷ್ಟವಾಗುತ್ತಿದೆ. ಹೊಸ ನಿಯಮದಿಂದ ಈ ತೊಡಕುಗಳು ನಿವಾರಣೆ ಆಗಲಿವೆ.

ವಾಹನದಲ್ಲೇ ಉಪಕರಣ: ಹೊಸ ನಿಯಮದ ಪ್ರಕಾರ, ಜಿಪಿಎಸ್‌ ಉಪಕರಣವನ್ನು ವಾಹನದಲ್ಲೇ ಅಳವಡಿಸಬೇಕು. ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಅದನ್ನು ವರ್ಗಾಯಿಸಬಾರದು. ಅದನ್ನು ವಾಹನದಿಂದ ಬೇರ್ಪಡಿಸಿ ಬೇರೆ ಕಡೆ ತೆಗೆದುಕೊಂಡು ಹೋಗಬಾರದು. ಆ ರೀತಿ ಮಾಡಿದರೆ, ಅದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ದಂಡ ವಿಧಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಉಪಕರಣ ಹಾಗೂ ಪ್ಯಾನಿಕ್ ಬಟನ್‌ ಅಳವಡಿಕೆ ಹೇಗಿರಬೇಕು ಎಂಬ ಬಗ್ಗೆ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ದೆಹಲಿ ಇಂಟರ್‌ಗ್ರೇಟೆಡ್‌–ಮಾಡೆಲ್ ಟ್ರಾನ್ಸಿಟ್ ಸಿಸ್ಟಮ್ ಕಂಪನಿಯು ಈಗಾಗಲೇ ವರದಿಯೊಂದನ್ನು ಬಿಡುಗಡೆ ಮಾಡಿದೆ. ಅದನ್ನು ಆರ್‌ಟಿಒಗಳಿಗೂ ನೀಡಿದ್ದೇವೆ. ಚಾಲಕರಿಗೆ ಯಾವುದೇ ಸಂದೇಹವಿದ್ದರೆ ಅವರ ಬಳಿ ಪರಿಹರಿಸಿಕೊಳ್ಳಬಹುದು’ ಎಂದರು.

ಹೊಸ ನಿಯಮದಿಂದ ಚಾಲಕರಿಗೆ ಹೊರೆ

‘ಸಾರಿಗೆ ಕ್ಷೇತ್ರದಲ್ಲಿರುವ ಪೈಪೋಟಿಯಿಂದಾಗಿ ವಾಹನ ನಿರ್ವಹಣೆಯೇ ಕಷ್ಟವಾಗಿರುವ ಇಂದಿನ ದಿನಗಳಲ್ಲಿ, ಸಚಿವಾಲಯವು ರೂಪಿಸಿರುವ ಹೊಸ ನಿಯಮವು ಚಾಲಕರಿಗೆ ಮತ್ತಷ್ಟು ಆರ್ಥಿಕ ಹೊರೆಯನ್ನುಂಟು ಮಾಡಲಿದೆ’ ಎಂದು ಓಲಾ, ಉಬರ್‌ ಕಂಪನಿ ಟ್ಯಾಕ್ಸಿಗಳ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ದೂರಿದರು.

‘ದೇಶದಲ್ಲಿ ಸುಮಾರು 25 ಕಂಪನಿಗಳು ಉಪಕರಣಗಳನ್ನು ಸಿದ್ಧಪಡಿಸುತ್ತಿವೆ. ₹1,000ರಿಂದ ₹15,000ಕ್ಕೆ ಮಾರಾಟ ಮಾಡುತ್ತಿವೆ. ಅವುಗಳಿಗೆ ತಗಲುವ ವೆಚ್ಚವನ್ನು ಚಾಲಕರೇ ಭರಿಸಬೇಕಿದೆ. ನಿರ್ದಿಷ್ಟ ಕಂಪನಿಯ ಉಪಕರಣವನ್ನೇ ಖರೀದಿಸುವಂತೆ ಸಾರಿಗೆ ಅಧಿಕಾರಿಗಳು ಮೌಖಿಕವಾಗಿ ತಾಕೀತು ಮಾಡುತ್ತಿದ್ದಾರೆ. ಆದರೆ, ಅವರು ಸೂಚಿಸುವ ಕಂಪನಿಯ ಉಪಕರಣಕ್ಕೆ  ₹6,000 (ಪ್ರತಿ ಸಾಧನಕ್ಕೆ) ಇದೆ. ಈ ಬಗ್ಗೆ ಲಿಖಿತ ಮಾಹಿತಿನ್ನೂ ಕೊಡುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರವೇ ಉಚಿತವಾಗಿ ಜಿಪಿಎಸ್ ಉಪಕರಣ ವಿತರಿಸಬೇಕು. ಅದು ಸಾಧ್ಯವಾಗದಿದ್ದರೆ, ₹1,000 ಮೌಲ್ಯದ ಉಪಕರಣ ಖರೀದಿಗೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

ಗುಣಮಟ್ಟದ ಉಪಕರಣವನ್ನು ಅಧಿಕಾರಿಗಳೇ ಸೂಚಿಸಲಿ

‘ಯಾವುದೇ ಅಕ್ರಮಕ್ಕೆ ಆಸ್ಪದ ನೀಡದ ಹಾಗೂ ಬಹುಕಾಲ ಬಾಳಿಕೆ ಬರುವ ಗುಣಮಟ್ಟದ ಉಪಕರಣವನ್ನು ಅಳವಡಿಸಿಕೊಳ್ಳಲು ಸಿದ್ಧರಿದ್ದೇವೆ. ಆದರೆ, ಅಂಥ ಉಪಕರಣ ಯಾವುದು ಎಂಬುದನ್ನು ಸಾರಿಗೆ ಅಧಿಕಾರಿಗಳು ಸುತ್ತೋಲೆ ಮೂಲಕ ತಿಳಿಸಬೇಕು’ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸಿದರು.

‘ಪ್ರಯಾಣಿಕರ ಜತೆಗೆ ಚಾಲಕರ ಸುರಕ್ಷತೆಗೂ ನಿಯಮ ಅನುಕೂಲವಾಗಿದೆ. ಇಬ್ಬರ ಕೈಗೂ ಸಿಗುವ ಸ್ಥಳದಲ್ಲೇ ಪ್ಯಾನಿಕ್‌ ಬಟನ್‌ ಅಳವಡಿಕೆ ಮಾಡಬೇಕಿದೆ. ತುರ್ತು ಸಂದರ್ಭಗಳಲ್ಲಿ ಆ ಬಟನ್‌ ಒತ್ತಿದರೆ, ಪೊಲೀಸರಿಗೆ ಮಾಹಿತಿ ಹೋಗುತ್ತದೆ’ ಎಂದರು.

**

ಅಂಕಿ–ಅಂಶ: (2018ರ ಜನವರಿವರೆಗೆ)

17.80 ಲಕ್ಷ - ರಾಜ್ಯದಲ್ಲಿರುವ ಸಾರ್ವಜನಿಕ ಸಾರಿಗೆ ವಾಹನಗಳ ಸಂಖ್ಯೆ

3.14 ಲಕ್ಷ - ಕ್ಯಾಬ್‌ಗಳು

99 ಸಾವಿರ - ಬಸ್‌ಗಳು

7.11 ಲಕ್ಷ - ಬೆಂಗಳೂರಿನಲ್ಲಿರುವ ಸಾರ್ವಜನಿಕ ಸಾರಿಗೆ ವಾಹನಗಳ ಸಂಖ್ಯೆ

1.55 ಲಕ್ಷ - ಕ್ಯಾಬ್‌ಗಳು

44 ಸಾವಿರ - ಬಸ್‌ಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry