ಎರಡೂ ಕಡೆಯಿಂದಲೂ ಶುಲ್ಕ ಸಂಗ್ರಹ ನಿರ್ಧಾರ ಮುಂದೂಡಿಕೆ

7

ಎರಡೂ ಕಡೆಯಿಂದಲೂ ಶುಲ್ಕ ಸಂಗ್ರಹ ನಿರ್ಧಾರ ಮುಂದೂಡಿಕೆ

Published:
Updated:
ಎರಡೂ ಕಡೆಯಿಂದಲೂ ಶುಲ್ಕ ಸಂಗ್ರಹ ನಿರ್ಧಾರ ಮುಂದೂಡಿಕೆ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ–7ರಲ್ಲಿರುವ (ಬಳ್ಳಾರಿ ರಸ್ತೆ) ನವಯುಗ ಸಂಸ್ಥೆಯ ಟೋಲ್‌ಗೇಟ್‌ನಲ್ಲಿ ಎರಡೂ ಕಡೆಯಿಂದಲೂ (ಟು–ವೇ) ಶುಲ್ಕ ಸಂಗ್ರಹ ಮಾಡುವುದನ್ನು ಸದ್ಯಕ್ಕೆ ಮುಂದೂಡಲಾಗಿದೆ.

‘ಟೋಲ್‌ಗೇಟ್‌ನಲ್ಲಿ 15 ಬೂತ್‌ಗಳನ್ನು ನಿರ್ಮಾಣ ಮಾಡಿ ಮಂಗಳವಾರ (ಮಾರ್ಚ್ . 27)ರಾತ್ರಿಯಿಂದ ಟು–ವೇ ಶುಲ್ಕ ಸಂಗ್ರಹಿಸಲು ತೀರ್ಮಾನಿಸಿದ್ದೆವು. ಇದಕ್ಕೆ ಚಾಲಕರು ಆಕ್ಷೇಪ ವ್ಯಕ್ತಪಡಿಸಿ ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಪೊಲೀಸರ ಭದ್ರತೆ ಕೋರಿದ್ದೆವು. ಸದ್ಯಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲವೆಂದು ಪೊಲೀಸರು ಹೇಳಿದ್ದಾರೆ’ ಎಂದು ನವಯುಗ ದೇವನಹಳ್ಳಿ ಟೋಲ್‌ ಪ್ಲಾಜಾದ (ಎನ್‌ಡಿಟಿಪಿಎಲ್‌) ಅಧಿಕಾರಿಯೊಬ್ಬರು ತಿಳಿಸಿದರು.

‘ಭದ್ರತೆ ಇಲ್ಲದ ಕಾರಣಕ್ಕೆ ನಿರ್ಧಾರ ಮುಂದೂಡುತ್ತಿದ್ದೇವೆ. ಮುಂದಿನ 2–3 ದಿನಗಳಲ್ಲಿ ಈ ನಿರ್ಧಾರ ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

‘ನಗರದಿಂದ ನಿಲ್ದಾಣದತ್ತ ಹೋಗುತ್ತಿದ್ದ ವಾಹನಗಳಿಗೆ ಇದುವರೆಗೂ ಶುಲ್ಕವಿರಲಿಲ್ಲ. ವಾಪಸ್‌ ಬರುವಾಗ ಮಾತ್ರ ಶುಲ್ಕ ಸಂಗ್ರಹಿಸುತ್ತಿದ್ದೆವು. ಎರಡೂ ಕಡೆಯಿಂದಲೂ ಶುಲ್ಕ ಪಡೆಯಲು ನಿರ್ಧರಿಸಿದ್ದೇವೆ. ಶುಲ್ಕ ಹೆಚ್ಚಳ ಪ್ರಸ್ತಾವ ಸದ್ಯಕ್ಕಿಲ್ಲ’ ಎಂದು ಅಧಿಕಾರಿ ಹೇಳಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಶುಲ್ಕ ವಸೂಲಿ ಅವೈಜ್ಞಾನಿಕವೆಂದು ಕೆಲವರು ದೂರಿದ್ದಾರೆ. ಹೀಗಾಗಿ, ಸದ್ಯಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲವೆಂದು ಎನ್‌ಡಿಟಿಪಿಎಲ್‌ ಅಧಿಕಾರಿಗಳಿಗೆ ತಿಳಿಸಿದ್ದೇವೆ’ ಎಂದರು.

‘ಶುಲ್ಕ ವಸೂಲಿ ಬಗ್ಗೆ ದಾಖಲೆಗಳನ್ನು ಕೊಡುವಂತೆ ಕೇಳಿದ್ದೇವೆ. ಅವರು ಕೊಟ್ಟ ಬಳಿಕ ಪರಿಶೀಲಿಸಿ ಭದ್ರತೆ ನೀಡುವ ಬಗ್ಗೆ ತೀರ್ಮಾನಿಸಲಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry