7

ರಾಜ್ಯದ 5 ಕಡೆ ಲಾಲ್‌ಬಾಗ್‌ ಮಾದರಿಯ ಸಸ್ಯೋದ್ಯಾನ

Published:
Updated:
ರಾಜ್ಯದ 5 ಕಡೆ ಲಾಲ್‌ಬಾಗ್‌ ಮಾದರಿಯ ಸಸ್ಯೋದ್ಯಾನ

ಬೆಂಗಳೂರು: ರಾಜ್ಯದ ಐದು ಕಡೆಗಳಲ್ಲಿ ಲಾಲ್‌ಬಾಗ್‌ ಮಾದರಿಯ ಸಸ್ಯೋದ್ಯಾನ ನಿರ್ಮಿಸಲು ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.

ತುಮಕೂರು ಜಿಲ್ಲೆಯ ಕೊರಟಗೆರೆಯ ದೊಡ್ಡಸಾಗರೆ, ಚಿಕ್ಕಬಳ್ಳಾಪುರ ಜಿಲ್ಲೆಯ ಅಣಕನೂರು, ಮೈಸೂರು ಜಿಲ್ಲೆಯ ದತ್ತಗಲ್ಲಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತಾರಕನಹಳ್ಳಿ ಹಾಗೂ ಪೂರ್ವ ಬೆಂಗಳೂರಿನ ಕನ್ನಮಂಗಲದಲ್ಲಿ ಸಸ್ಯೋದ್ಯಾನ ನಿರ್ಮಾಣ ಕಾರ್ಯ ಆರಂಭವಾಗಿದೆ.

‘ವಿವಿಧ ಕಡೆಗಳಲ್ಲಿ ಸಸ್ಯೋದ್ಯಾನ ಇರಬೇಕು ಎನ್ನುವ ಆಲೋಚನೆಯಿಂದ ಐದು ಕಡೆ ಸಸ್ಯೋದ್ಯಾನ ನಿರ್ಮಿಸಲು ಉದ್ದೇಶಿಸಿದೆವು. ಒಂದೇ ಸಲ ಐದು ಕಡೆ ಉದ್ಯಾನ ಸ್ಥಾಪಿಸಲು ಅಗತ್ಯ ಅನುದಾನದ ಕೊರತೆ ಇತ್ತು. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಈ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ. ಐದು ವರ್ಷಗಳಲ್ಲಿ ಉದ್ಯಾನಗಳು ಸಿದ್ಧಗೊಳ್ಳಲಿವೆ’ ಎಂದು ಹೆಸರು ಹೇಳಲು ಇಚ್ಛಿಸದ ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ತೋಟಗಾರಿಕೆ ಇಲಾಖೆಗೆ ಸೇರಿದ ಜಾಗದಲ್ಲೇ ಸಸ್ಯವನಗಳು ನಿರ್ಮಾಣಗೊಳ್ಳಲಿವೆ. ಸ್ಥಳೀಯ ಭೌಗೋಳಿಕ ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡು ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಇದುವರೆಗೆ ₹8 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದನ್ನು ಬಳಸಿ ಉದ್ಯಾನಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗಿದೆ. ಈಗಾಗಲೇ ಸ್ಥಳಾಕೃತಿ ನಕ್ಷೆ ರೂಪಿಸುವ ಕಾರ್ಯ ಪೂರ್ಣಗೊಂಡಿದೆ.

ಸಸ್ಯೋದ್ಯಾನಕ್ಕೆ ನೀಲನಕಾಶೆ ರೂಪಿಸಲು ಅ.ನ. ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ವಿಜ್ಞಾನಿ ಸಂಜಪ್ಪ, ಪ್ರೊ. ಬಾಲಕೃಷ್ಣೇಗೌಡ, ಪ್ರೊ. ಶಂಕರ್‌ ರಾವ್‌, ಕೇರಳ ಸಸ್ಯೋದ್ಯಾನದ ಅಧಿಕಾರಿ ಚಂದ್ರಶೇಖರ್‌ ಇದರ ಸದಸ್ಯರು. ಕರ್ನಾಟಕ ಮೂಲಸೌಲಭ್ಯ ಅಭಿವೃದ್ಧಿ ನಿಗಮದ (ಐಡೆಕ್‌) ಸಹಾಯದಿಂದ ಉದ್ಯಾನದ ಸಮಗ್ರ ಯೋಜನೆ ರೂಪಿಸಲಾಗಿದೆ.

ದೊಡ್ಡಸಾಗರೆ:

ಕೊರಟಗೆರೆಯ ದೊಡ್ಡಸಾಗರೆ ತೋಟಗಾರಿಕೆ ಫಾರಂನಲ್ಲಿ ಡಾ.ಎಂ. ಎಚ್‌.ಮರೀಗೌಡ ಸಸ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಹೆಸರಿನಲ್ಲಿ ಸಸ್ಯೋದ್ಯಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿ ಆವರಣ ಗೋಡೆಯನ್ನು ಈಗಾಗಲೇ ನಿರ್ಮಿಸಲಾಗಿದೆ. ಎರಡು ಕೊಳವೆಬಾವಿ ಕೊರೆಯಲಾಗಿದ್ದು, ನೀರು ಮತ್ತು ಮಣ್ಣು ಸಂರಕ್ಷಣೆ ಉದ್ದೇಶದಿಂದ ಕೆರೆ, ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ. ತಗ್ಗು, ದಿಣ್ಣೆಗೆ ಅನುಗುಣವಾಗಿ ಭೂದೃಶ್ಯ ನಿರ್ಮಿಸಲಾಗುತ್ತದೆ.

ಕನ್ನಮಂಗಲ: 

ಕನ್ನಮಂಗಲದಲ್ಲಿ ತೆಂಗಿನ ತೋಟವಿದೆ. ಅಲ್ಲಿ ತೆಂಗಿನ ಮರಕ್ಕೆ ಮೆಣಸಿನ ಬಳ್ಳಿ ಹಾಗೂ ಎಲೆ ಬಳ್ಳಿಯನ್ನು ಹಬ್ಬಿಸಿ, ಅಲ್ಲೊಂದು ಮಲೆನಾಡಿನ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.

ಅಣಕನೂರು:

ಅಣಕನೂರು ಗ್ರಾಮದಲ್ಲಿ ಸರ್‌.ಎಂ.ವಿಶ್ವೇಶ್ವರಯ್ಯ ಸಸ್ಯೋದ್ಯಾನ ನಿರ್ಮಿಸಲಾಗುತ್ತಿದೆ. ಕಾಂಪೌಂಡ್‌ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ₹3.50 ಕೋಟಿ ವೆಚ್ಚದಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಇಲಾಖೆ ಸಿದ್ಧತೆ ನಡೆಸಿದೆ.

ದತ್ತಗಲ್ಲಿ:

ದತ್ತಗಲ್ಲಿ ಗ್ರಾಮದಲ್ಲಿನ ಲಿಂಗಾಂಬುಧಿ ಕೆರೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಉದ್ಯಾನ ಅಭಿವೃದ್ಧಿ ಪಡಿಸಲಾಗುತ್ತಿದೆ. ಇಲ್ಲಿ ದೋಣಿವಿಹಾರ ಸೇರಿ ವಿವಿಧ ಮನರಂಜನಾ ಸೌಕರ್ಯಗಳನ್ನು ಕಲ್ಪಿಸಲು ರೂಪರೇಷೆ ಸಿದ್ಧಪಡಿಸಲಾಗಿದೆ.

ತಾರಕನಹಳ್ಳಿ:

ತಾರಕನಹಳ್ಳಿಯಲ್ಲಿ ಉದ್ಯಾನಕ್ಕೆ ಗುರುತಿಸಿರುವ ಜಾಗದ ಸಂರಕ್ಷಣಾ ಕಾರ್ಯ ಮುಗಿದಿದೆ. ಪರಿಕಲ್ಪನೆ ವಿನ್ಯಾಸವೂ ಪೂರ್ಣಗೊಂಡಿದೆ. ಸಸ್ಯಗಳನ್ನು ನೆಡುವುದು ಮತ್ತು ನೀರು ಸಂರಕ್ಷಣೆ ಕಾರ್ಯ ಬಾಕಿ ಇದೆ ಎಂದು ಅಧಿಕಾರಿ ವಿವರಿಸಿದರು.

ಅಳಿವಿನಂಚಿನ ಸಸ್ಯ ಪ್ರಭೇದಗಳ ಸಂರಕ್ಷಣೆ

ಲಾಲ್‌ಬಾಗ್‌ನಲ್ಲಿ ಸುಮಾರು 2,250 ಸಸ್ಯತಳಿಗಳನ್ನು ಸಂರಕ್ಷಿಸಿ ಪೋಷಿಸಲಾಗುತ್ತಿದೆ. ಇನ್ನೂ ಸಾವಿರಾರು ಸಸ್ಯ ತಳಿಗಳ ರಕ್ಷಣೆ ಸಾಧ್ಯವಾಗುತ್ತಿಲ್ಲ. ಅತ್ಯುತ್ತಮ ತಳಿಯ ಸಸ್ಯಗಳು ಅಳಿವಿನಂಚಿನಲ್ಲಿವೆ. ಅಂತಹ ಸಸ್ಯ ಪ್ರಭೇದಗಳನ್ನು ರಕ್ಷಿಸುವ ಉದ್ದೇಶದೊಂದಿಗೆ, ಸಸ್ಯ ಶಾಸ್ತ್ರಜ್ಞರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸ್ಥಳೀಯವಾಗಿಯೇ ಉತ್ಕೃಷ್ಟ ಉದ್ಯಾನವನ ಸಿಗಬೇಕು ಎಂಬ ಉದ್ದೇಶ ತೋಟಗಾರಿಕೆ ಇಲಾಖೆಯದ್ದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry