ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 12ಕ್ಕೆ ಮತದಾನ, 15ಕ್ಕೆ ಫಲಿತಾಂಶ

ಜನತಂತ್ರದ ಹಬ್ಬಕ್ಕೆ ದಿನಾಂಕ ನಿಗದಿ *ಒಂದೇ ಹಂತದಲ್ಲಿ ಪೂರ್ಣ
Last Updated 27 ಮಾರ್ಚ್ 2018, 19:55 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಮೇ12ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 15ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಕರ್ನಾಟಕದಲ್ಲಿ ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಆಯೋಗವು ಏಪ್ರಿಲ್‌ 17ರಂದು ಚುನಾವಣೆ ಕುರಿತ ಅಧಿಸೂಚನೆ ಹೊರಡಿಸಲಿದೆ.

ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಏಪ್ರಿಲ್‌ 24 ಕೊನೆಯ ದಿನವಾಗಿದ್ದು, ನಾಮಪತ್ರ ಪರಿಶೀಲನೆ ಕಾರ್ಯ ಏ. 25ರಂದು ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಏ.27 ಕೊನೆಯ ದಿನವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಕೆ ಮಾಡಲಾಗುತ್ತದೆ. ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಇರುವ ಅನುಮಾನವನ್ನು ಹೋಗಲಾಡಿಸುವ ಉದ್ದೇಶದಿಂದ, ಅವುಗಳ ಜತೆಗೆ ಮತ ದೃಢೀಕರಣ ರಸೀದಿ ಯಂತ್ರ (ವಿ.ವಿ. ಪ್ಯಾಟ್‌) ಬಳಸಲು ನಿರ್ಧರಿಸಲಾಗಿದೆ. ಇವಿಎಂಗಳಲ್ಲಿ ಪ್ರತಿ ಅಭ್ಯರ್ಥಿಯ ಭಾವಚಿತ್ರವನ್ನು ಪ್ರಕಟಿಸಲು ಕ್ರಮ ಕೈಗೊಂಡಿರುವುದರಿಂದ ಮತದಾರರಿಗೆ ಅಭ್ಯರ್ಥಿಯನ್ನು ಸುಲಭವಾಗಿ ಗುರುತಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.

ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಫ್ಲೆಕ್ಸ್‌, ಬಂಟಿಂಗ್ಸ್‌ ಮತ್ತು ಬ್ಯಾನರ್‌ ಅಳವಡಿಸುವುದನ್ನು ನಿರ್ಬಂಧಿಸಲಾಗುವುದು. ಸಾರ್ವಜನಿಕರಿಗೆ ಉಂಟಾಗುವ ಕಿರಿಕಿರಿಯನ್ನು ತಪ್ಪಿಸಲು ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕಗಳ ಬಳಕೆಯನ್ನು ನಿಷೇಧಿಸಲಾಗುವುದು. ಅಂಗವಿಕಲರು ಸುಲಭವಾಗಿ ಮತದಾನ ಮಾಡಲು ನೆರವಾಗುವ ನಿಟ್ಟಿನಲ್ಲಿ ಪ್ರತಿ ಮತಗಟ್ಟೆಯಲ್ಲೂ ಅಗತ್ಯ ವ್ಯವಸ್ಥೆ ಮಾಡುವಂತೆ ಆಯಾ ಜಿಲ್ಲೆಗಳ ಚುನಾವಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಈ ಹಿಂದೆ ನಡೆದ ಚುನಾವಣೆಯ ಸಂದರ್ಭ ಅಹಿತಕರ ಘಟನೆಗಳು ನಡೆದಿರುವುದರಿಂದ ಕೇಂದ್ರೀಯ ಸಶಸ್ತ್ರ ಪಡೆಯನ್ನು ಬಳಸುವ ಮೂಲಕ ಮತದಾರರು, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಸೇರಿದವರು ಹಾಗೂ ಮಹಿಳೆಯರು ಯಾವುದೇ ರೀತಿಯ ಭಯ, ಹಿಂಜರಿಕೆ ಇಲ್ಲದೆ ಮತಗಟ್ಟೆಗೆ ಬರುವಂತೆ ನೋಡಿಕೊಳ್ಳಲಾಗುವುದು. ಮತ ಚಲಾಯಿಸಲು ಬರುವ ಮಹಿಳೆಯರಿಗೆ ಪ್ರತ್ಯೇಕ ಸಾಲು ಇರಲಿದೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಪ್ರತಿ ಮತಗಟ್ಟೆಗಳಲ್ಲಿ ಅಗತ್ಯ ಭದ್ರತೆ ಒದಗಿಸಲಾಗುವುದು ಎಂದು ಅವರು ವಿವರಿಸಿದರು.

ಕಳೆದ ಬಾರಿ ಇದ್ದ 52,034 ಮತಗಟ್ಟೆಗಳಿಗಿಂತ ಈ ಬಾರಿ ಶೇ 9ರಷ್ಟು ಹೆಚ್ಚಿನ ಸಂಖ್ಯೆಯ ಮತಗಟ್ಟೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ರಾಜ್ಯದಾದ್ಯಂತ ಒಟ್ಟು 56,696 ಮತಗಟ್ಟೆ ಸ್ಥಾಪಿಸಲಾಗುತ್ತದೆ. ಕಣದಲ್ಲಿರುವ ಉಮೇದುವಾರರ ವಿವರವನ್ನು ಒಳಗೊಂಡ, ಮತದಾರರ ಭಾವಚಿತ್ರ ಇರುವ ಮತದಾರರ ಸ್ಲಿಪ್‌ ವಿತರಣೆ ಕಾರ್ಯವನ್ನು ಆಯೋಗವೇ ನಡೆಸಲಿದೆ.

ಚುನಾವಣಾ ಕಾರ್ಯಕ್ಕೆ ನಿಯುಕ್ತರಾದ ಸಿಬ್ಬಂದಿಗೆ ಈ ಜವಾಬ್ದಾರಿ ವಹಿಸುವುದರಿಂದ ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷಗಳು ಈ ಬಗ್ಗೆ ಗಮನ ಹರಿಸುವಂತಿಲ್ಲ. ಮತದಾರರು ಇರುವ ಪ್ರತಿ ಕುಟುಂಬಕ್ಕೂ ಚುನಾವಣೆಯ ವಿವರ ಒಳಗೊಂಡ ಪುಸ್ತಿಕೆಯನ್ನು ಮತದಾರರ ಸ್ಲಿಪ್‌ ಜೊತೆಗೆ ತಲುಪಿಸಲಾಗುವುದು ಎಂದು ರಾವತ್‌ ತಿಳಿಸಿದರು.

*

ವೆಚ್ಚ ಮಿತಿ ₹28 ಲಕ್ಷ
ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಪ್ರತಿ ಅಭ್ಯರ್ಥಿಯ ವೆಚ್ಚವನ್ನು ₹28 ಲಕ್ಷಕ್ಕೆ ಮಿತಿಗೊಳಿಸಲಾಗಿದೆ. ರಾಜಕೀಯ ಪಕ್ಷಕ್ಕೆ ಯಾವುದೇ ಮಿತಿ ಇಲ್ಲ. ಫಲಿತಾಂಶ ಪ್ರಕಟವಾದ 30 ದಿನಗಳಲ್ಲಿ ಅಭ್ಯರ್ಥಿಗಳು ತಮ್ಮ ಖರ್ಚು– ವೆಚ್ಚದ ಮಾಹಿತಿಯನ್ನು ಆಯೋಗಕ್ಕೆ ಸಲ್ಲಿಸುವುದು ಕಡ್ಡಾಯ. ರಾಜಕೀಯ ಪಕ್ಷಗಳು 75 ದಿನಗಳಲ್ಲಿ ಮಾಹಿತಿ ನೀಡಬೇಕು ಎಂದು ಅವರು ಪ್ರಕಟಿಸಿದರು. ಚುನಾವಣಾ ಆಯುಕ್ತರಾದ ಸುನೀಲ್‌ ಅರೋರಾ, ಅಶೋಕ್‌ ಲಾವಾಸಾ ಈ ಸಂದರ್ಭ ಹಾಜರಿದ್ದರು.

ಮತಗಟ್ಟೆ ನಿರ್ವಹಣೆ: ಮಹಿಳೆಯರಿಗೆ ಹೊಣೆ
450 ಮತಗಟ್ಟೆಗಳ ನಿರ್ವಹಣೆಯ ಹೊಣೆಯನ್ನು ಮಹಿಳೆಯರಿಗೇ ವಹಿಸಲು ನಿರ್ಧರಿಸಲಾಗಿದೆ. ನಗರದ ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಮತಗಟ್ಟೆಗಳು ಹಾಗೂ ಗ್ರಾಮೀಣ ಭಾಗದ ಪ್ರತಿ ಕ್ಷೇತ್ರದಲ್ಲಿ ತಲಾ ಒಂದು ಮತಗಟ್ಟೆಯನ್ನು ಮಹಿಳಾ ಮತಗಟ್ಟೆ ಎಂದು ಘೋಷಿಸಿ, ನಿರ್ವಹಣೆಯ ಸಂಪೂರ್ಣ ಹೊಣೆಯನ್ನು ಮಹಿಳೆಯರಿಗೆ ವಹಿಸಲಾಗುವುದು. ಈ ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಮಹಿಳಾ ಸಿಬ್ಬಂದಿಯನ್ನೇ ನಿಯೋಜಿಸುವುದರ ಜೊತೆಗೆ, ಭದ್ರತೆಗಾಗಿ ಪೊಲೀಸ್‌ ಹಾಗೂ ಕೇಂದ್ರೀಯ ಪಡೆಗಳ ಮಹಿಳಾ ಸಿಬ್ಬಂದಿಯನ್ನೇ ನೇಮಿಸಲಾಗುವುದು.

ಕಾವೇರಿ ಮಂಡಳಿಗೆ ಅಡ್ಡಿ ಇಲ್ಲ
ಕರ್ನಾಟಕದಲ್ಲಿ ಚುನಾವಣೆ ಮಾದರಿ ನೀತಿಸಂಹಿತೆ ಜಾರಿ ಆಗಿರುವುದರಿಂದ ಕೇಂದ್ರ ಸರ್ಕಾರವು ಕಾವೇರಿ ನದಿ ನೀರು ಹಂಚಿಕೆಗೆ ಯೋಜನೆ ರೂಪಿಸಲು ಅಡ್ಡಿ ಇಲ್ಲ ಎಂದು ರಾವತ್‌ ಸ್ಪಷ್ಟಪಡಿಸಿದರು.

ಸುಪ್ರೀಂ ಕೋರ್ಟ್‌ ಆದೇಶಗಳ ಪಾಲನೆಗೆ ನೀತಿ ಸಂಹಿತೆ ಯಾವುದೇ ರೀತಿಯಿಂದ ಅಡ್ಡಿಪಡಿಸದು ಎಂದು ಅವರು ಹೇಳಿದರು.

ಕಾವೇರಿ ನದಿ ನೀರು ಹಂಚಿಕೆಗಾಗಿ ಆರು ವಾರಗಳಲ್ಲಿ ಯೋಜನೆ ರೂಪಿಸುವಂತೆ ಆದೇಶಿಸಿ, ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರಕ್ಕೆ ನೀಡಿರುವ ಆರು ವಾರಗಳ ಗಡುವು ಇದೇ 29ಕ್ಕೆ ಕೊನೆಯಾಗಲಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಯ ತಮ್ಮ ಬೇಡಿಕೆಯನ್ನು ಕೇಂದ್ರವು ಗುರುವಾರದೊಳಗೆ ಈಡೇರಿಸುವ ವಿಶ್ವಾಸ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.

ವಿ.ವಿ. ಪ್ಯಾಟ್‌ ಪೇಪರ್‌ ಎಣಿಕೆ
ರಾಜ್ಯದಲ್ಲಿ ಸ್ಥಾಪಿಸಲಾಗುವ ಎಲ್ಲಾ ಮತಗಟ್ಟೆಗಳಲ್ಲೂ ಮತ ಖಾತರಿ ಯಂತ್ರಗಳನ್ನು (ವಿ.ವಿ. ಪ್ಯಾಟ್‌) ಬಳಸಲು ನಿರ್ಧರಿಸಲಾಗಿದೆ. ಆದರೆ, ಪ್ರತಿ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ದಾಖಲಾದ ವಿ.ವಿ. ಪ್ಯಾಟ್‌ ಪೇಪರ್‌ ಸ್ಲಿಪ್‌ಗಳನ್ನು ಪ್ರಮಾಣೀಕರಿಸುವ ಉದ್ದೇಶದಿಂದ ಎಣಿಕೆಗೆ ಪರಿಗಣಿಸಲಾಗುವುದು. ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಮಾದರಿಯಾಗಿ ಜಾರಿಗೊಳಿಸುವ ಮೂಲಕ, ಇವಿಎಂಗಳ ಬಗ್ಗೆ ಇರುವ ಅನುಮಾನಗಳಿಗೆ ತೆರೆ ಎಳೆಯಲು ನಿರ್ಧರಿಸಲಾಗಿದೆ.

ಇ– ಪಾವತಿ ವ್ಯವಸ್ಥೆ
ಚುನಾವಣೆ ಕಾರ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿಯ ವೇತನ ಹಾಗೂ ಚುನಾವಣೆ ಕಾರ್ಯಕ್ಕೆ ಬಳಕೆಯಾಗುವ ವಾಹನಗಳ ಬಾಡಿಗೆಯ ಇ– ಪಾವತಿಗೆ ಕ್ರಮ ಕೈಗೊಂಡಿರುವುದು ಈ ಬಾರಿಯ ವಿಶೇಷ. ಚುನಾವಣೆ ಉದ್ದೇಶಕ್ಕಾಗಿ ಯಾವುದೇ ವಸ್ತು ಅಥವಾ ಸರಕು ಖರೀದಿಸಿದರೂ ಇ– ಪಾವತಿ ಮಾಡುವಂತೆ ಸೂಚಿಸಲಾಗಿದೆ.

ಮಾಹಿತಿ ಸೋರಿಕೆ ತನಿಖೆಗೆ ಸಮಿತಿ
ನವದೆಹಲಿ:
ಆಯೋಗವು ಅಧಿಕೃತವಾಗಿ ಚುನಾವಣೆಯ ದಿನಾಂಕ ಪ್ರಕಟಿಸುವ ಮೊದಲೇ ಮತದಾನ ದಿನದ ಮಾಹಿತಿ ಸೋರಿಕೆ ಆಗಿರುವ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

ಮುಖ್ಯಾಂಶಗಳು
* ಮತ ದೃಢೀಕರಣ ರಸೀದಿ ಯಂತ್ರಗಳ (ವಿ.ವಿ. ಪ್ಯಾಟ್‌) ಬಳಕೆ
* ಇವಿಎಂಗಳಲ್ಲಿ ಪ್ರತಿ ಅಭ್ಯರ್ಥಿಯ ಭಾವಚಿತ್ರ
* ನೋಟಾ ಬಳಕೆಗೆ ಇವಿಎಂನಲ್ಲಿ ವಿಶೇಷ ಚಿಹ್ನೆ
* ಮತದಾರರ ಸಹಾಯಕ್ಕೆ ಬೂತ್‌ಗಳು
* ಮತಗಟ್ಟೆಗಳಲ್ಲಿ 4 ಜನಜಾಗೃತಿ ಪೋಸ್ಟರ್‌ ಅಳವಡಿಕೆ
* ಪ್ರತಿ ಮನೆಗೆ ಚುನಾವಣೆ ಮಾಹಿತಿ ಪುಸ್ತಿಕೆ ವಿತರಣೆ
* ನೆಲಮಹಡಿಯಲ್ಲೇ ಮತಗಟ್ಟೆ ಸ್ಥಾಪನೆಗೆ ಕ್ರಮ
* ಅಂಗವಿಕಲರ ನೆರವಿಗೆ ರ್‍ಯಾಂಪ್‌, ಗಾಲಿ ಕುರ್ಚಿ ಸೌಲಭ್ಯ

*
ಮತದಾನದ ದಿನದ ಮಾಹಿತಿ ಸೋರಿಕೆ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿದೆ. ಏಳು ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ.
-ಓಂ ಪ್ರಕಾಶ್‌ ರಾವತ್‌ ,ಮುಖ್ಯ ಚುನಾವಣಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT