ಬಾಡೂಟಕ್ಕೆ ಅಡ್ಡಿಯಾದ ನೀತಿಸಂಹಿತೆ

7
ಊಟಕ್ಕೆ ಕುಳಿತವರನ್ನು ಎಬ್ಬಿಸಿದ ಪೊಲೀಸರು: ಅಡುಗೆ, ಸಾಮಗ್ರಿ ಜಪ್ತಿ

ಬಾಡೂಟಕ್ಕೆ ಅಡ್ಡಿಯಾದ ನೀತಿಸಂಹಿತೆ

Published:
Updated:
ಬಾಡೂಟಕ್ಕೆ ಅಡ್ಡಿಯಾದ ನೀತಿಸಂಹಿತೆ

ಚಿಕ್ಕಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಬಾಡೂಟಕ್ಕೆ ಕುಳಿತವರನ್ನೂ ಹೊರಗೆ ಕಳುಹಿಸಿದ ಪ್ರಸಂಗ ಮಂಗಳವಾರ ಇಲ್ಲಿ ನಡೆಯಿತು.

ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದ, ಕೋಲಾರ– ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ನಿರ್ದೇಶಕ ಕೆ.ವಿ.ನಾಗರಾಜ್ ಅವರು ಬಾಡೂಟ ಏರ್ಪಡಿಸಿದ್ದರು. ಅವರ ವಿರುದ್ಧ ‘ಮಾದರಿ ನೀತಿ ಸಂಹಿತೆ’ಯ (ಎಂಸಿಸಿ) ಕ್ಷಿಪ್ರ ಕಾರ್ಯ ಪಡೆ ಅಧಿಕಾರಿಗಳು ದೂರು ದಾಖಲಿಸಿದರು.

ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದ ಪ್ರಯುಕ್ತ ನಾಗರಾಜ್ ಮನೆಗೆ ಹೊಂದಿಕೊಂಡಂತೆ ಬೃಹತ್ ಶಾಮಿಯಾನ ಹಾಕಿ ಸಾವಿರಾರು ಕಾರ್ಯಕರ್ತರಿಗೆ ಬಾಡೂಟದ ಆಯೋಜನೆ ಮಾಡಲಾಗಿತ್ತು. ನಾಗರಾಜ್‌ ಅವರ ಮನೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಗಮಿಸುತ್ತಿದ್ದಂತೆ ಬಾಡೂಟಕ್ಕೆ ಜನ ಮುಗಿಬಿದ್ದರು.

ಅಷ್ಟರಲ್ಲಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಕಾರಣಕ್ಕೆ ಚುನಾವಣಾ ಅಧಿಕಾರಿಗಳು, ಪೊಲೀಸರು ಊಟ ಹಾಕುವುದನ್ನು ನಿಲ್ಲಿಸುವಂತೆ ಅಲ್ಲಿದ್ದ ಮುಖಂಡರಿಗೆ ತಿಳಿಸಿದರು. ಆಯೋಜಕರು ಅಧಿಕಾರಿ ಗಳ ಮಾತು ಕೇಳದೆ ಬಾಡೂಟ ಮುಂದುವರಿಸಿದರು.

ಈ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್‌ ವರಿಷ್ಠ (ಎಸ್‌ಪಿ) ಕಾರ್ತಿಕ್ ರೆಡ್ಡಿ ಸ್ಥಳಕ್ಕೆ ದೌಡಾಯಿಸಿದರು. ಬಳಿಕ ಪೊಲೀಸರು ಊಟಕ್ಕೆ ಕುಳಿತವರನ್ನು ಹೊರ ಕಳುಹಿಸಿ ಅಲ್ಲಿದ್ದ ಅಡುಗೆ ಮತ್ತು ಪಾತ್ರೆಗಳನ್ನು ಜಪ್ತಿ ಮಾಡಿದರು.

ವೀಕ್ಷಣೆಗೆ ಸೀಮಿತವಾದ ಚಾಲನೆ ಕಾರ್ಯಕ್ರಮ
ಚಿಕ್ಕಬಳ್ಳಾಪುರ: 
ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಕೋಚಿಮುಲ್‌) ನಂದಿ ಕ್ರಾಸ್‌ ಬಳಿ ₹ 160 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಮೆಗಾ ಡೇರಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಂಗಳವಾರ ಬೆಳಿಗ್ಗೆ ಪ್ರಕಟವಾದ ಚುನಾವಣಾ ನೀತಿ ಸಂಹಿತೆ ಬಿಸಿ ತಟ್ಟಿತು.

ನೀತಿ ಸಂಹಿತೆ ಜಾರಿಗೆ ಬಂದಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಡೇರಿ ಉದ್ಘಾಟನೆ ಮಾಡದೆ ಕಟ್ಟಡ ವೀಕ್ಷಣೆ ಮಾಡಿ ಮರಳಿದರು.

ಸರ್ಕಾರಿ ಕಾರು ವಾಪಸ್‌: ಜಿಲ್ಲಾಧಿಕಾರಿ ದೀಪ್ತಿ ಕಾನಡೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗ್ಡೆ ಅವರು ಸಿದ್ದರಾಮಯ್ಯ ಅವರಿಗೆ ನೀತಿ ಸಂಹಿತೆ ವಿಚಾರ ಗಮನಕ್ಕೆ ತರುತ್ತಿದ್ದಂತೆ ಮುಖ್ಯಮಂತ್ರಿ ಅವರು ಸರ್ಕಾರಿ ಕಾರು ಬಿಟ್ಟು, ಸ್ಥಳೀಯ ಶಾಸಕ ಡಾ.ಕೆ.ಸುಧಾಕರ್ ಅವರ ಕಾರಿನಲ್ಲಿ ಚಿಕ್ಕಬಳ್ಳಾಪುರದತ್ತ ಪ್ರಯಾಣ ಬೆಳೆಸಿದರು.

ಮುಖ್ಯಮಂತ್ರಿ ಅವರ ಕಾರ್ಯಕ್ರಮಕ್ಕೆ ನಿಯೋಜಿಸಿದ್ದ ಭದ್ರತಾ ಸಿಬ್ಬಂದಿಯನ್ನು ನೀತಿ ಸಂಹಿತೆ ಕಾರಣಕ್ಕೆ ಎಸ್ಪಿ ಕಾರ್ತಿಕ್ ರೆಡ್ಡಿ ಅವರು ಕಡಿತಗೊಳಿಸಿ ವಾಪಸ್ ಕರೆಯಿಸಿಕೊಂಡರು.


–ಕೆ.ವಿ.ನಾಗರಾಜ್ ಅವರ ಮನೆ ಬಳಿ ಆಯೋಜಿಸಿದ್ದ ಬಾಡೂಟ ಸವಿಯುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry