ಮಹಾಪ್ರಾಣಪ್ರಿಯೆ ರಾಧಳಿಗೆ...

7

ಮಹಾಪ್ರಾಣಪ್ರಿಯೆ ರಾಧಳಿಗೆ...

Published:
Updated:
ಮಹಾಪ್ರಾಣಪ್ರಿಯೆ ರಾಧಳಿಗೆ...

ಲೋಕ ಪ್ರಸಿದ್ಧವಾದ ಚಂದ್ರಹಾಸನ ಕತೆ, ಪಂಡಿತ ಪಾಮರರೆಲ್ಲರಿಗೂ ಗೊತ್ತಿರುವ ವಿಷಯವೇ ಆಗಿದೆ. ಚಂದ್ರಹಾಸನನ್ನು ನಿವಾರಿಸಿ ರಾಜ್ಯವನ್ನು ಕಬಳಿಸಲು ಹುನ್ನಾರ ಮಾಡಿದ್ದ ದುಷ್ಟಬುದ್ಧಿ, ವಿಧಿಯ ಕೈಯಲ್ಲಿ ಮಣ್ಣು ಮುಕ್ಕುವ ಕತೆ ಸಿನಿಮೀಯವಾಗಿದ್ದರೂ ರಮಣೀಯ ಆಗಿರುವುದರಿಂದ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆ ನಿಂತಿದೆ.

ಚಂದ್ರಹಾಸನು ಹಸುಗೂಸಿರುವಾಗಲೇ ಅವನ ತಂದೆತಾಯಿಯರನ್ನು ಮೋಸದಿಂದ ಕೊಂದು, ಹಸುಳೆ ಎಂಬ ಕನಿಕರವಿಲ್ಲದೆ ಚಂದ್ರಹಾಸನನ್ನು ಮುಗಿಸಲು ಸಂಚು ರೂಪಿಸಿದ ಕ್ರೂರಿ ದುಷ್ಟಬುದ್ಧಿ. ಆತನ ದುಷ್ಟತನವನ್ನು ಅರಿಯದೆ ಆತ ಕೊಟ್ಟ ತನ್ನ ಸಾವಿನ ಸಂದೇಶವನ್ನು ತಾನೇ ಹೊತ್ತು ರಾಜಧಾನಿಗೆ ಬರುತ್ತಾನೆ ಚಂದ್ರಹಾಸ. ಮಾರ್ಗಾಯಾಸದಿಂದ ಬಳಲಿದ್ದ ಆತ, ಪಟ್ಟಣ ಸಮೀಪವಿದ್ದ ಉದ್ಯಾನವನಕ್ಕೆ ಹೋಗಿ ಮರದ ನೆರಳಲ್ಲಿ ವಿಶ್ರಮಿಸುತ್ತಾ ನಿದ್ದೆಗೆ ಜಾರುತ್ತಾನೆ. ಆ ಸಮಯದಲ್ಲಿ ವನ ವಿಹಾರಕ್ಕೆಂದು ಬಂದಿದ್ದ ದುಷ್ಟಬುದ್ಧಿಯ ಮುದ್ದಿನ ಮಗಳು ರೂಪ ವತಿಯೂ ಸೂಕ್ಷ್ಮಮತಿಯೂ ಆಗಿದ್ದ ವಿಷೆಯೆ ತನ್ನ ಸಖಿಯರೊಡನೆ ವಿನೋದ ವಾಡುತ್ತಾ ಅಲ್ಲಿಗೆ ಬರುತ್ತಾಳೆ. ವನದೊಳಗೆ ಮರದ ನೆರಳಲ್ಲಿ ಭುವಿಗೆ ಅವತರಿಸಿದ ಮನ್ಮಥನಂತಹ ಸ್ಫುರದ್ರೂಪಿ ತರುಣನನ್ನು ನೋಡಿದ ಆಕೆಯಲ್ಲಿ ಮೊದಲನೆಯ ನೋಟಕ್ಕೇ ಪ್ರೇಮಾಂಕುರವಾಗುತ್ತದೆ.

ಗಾಢ ನಿದ್ರೆಯಲ್ಲಿದ್ದ ಚಂದ್ರಹಾಸನ ಕೈಯಲ್ಲಿದ್ದ ಓಲೆಯನ್ನು ಓದಿ ಬೆಚ್ಚಿ ಬೀಳುತ್ತಾಳೆ. ಅದು, ತನ್ನ ತಂದೆಯಾದ ದುಷ್ಟಬುದ್ಧಿ, ಅಣ್ಣನಿಗೆ ಬರೆದಿದ್ದ ಪತ್ರ. ‘ಈ ಪತ್ರ ತಂದ ಯುವಕನಿಗೆ ತಕ್ಷಣ ವಿಷ ಕೊಡುವುದು’ ಎಂಬ ಒಂದೇ ಸಾಲಿನ ಆಜ್ಞೆಯಾಗಿತ್ತು ಆ ಪತ್ರ. ನಿಷ್ಕಳಂಕವಾಗಿ ಪ್ರೇಮಮೂರ್ತಿಯಾಗಿ ಯಾವುದೋ ಸ್ವಪ್ನದಲ್ಲಿದ್ದ ಆ ಯುವಕನನ್ನು ತಾನು ವಿವಾಹವಾಗದೇ ಹೋದರೆ ತನ್ನ ಬಾಳಿದು ವ್ಯರ್ಥ ಎಂಬ ನಿಲುವಿಗೆ ಬರುತ್ತಾಳೆ ವಿಷೆಯೆ. ತನ್ನ ಕೈಯಲ್ಲಿರುವ ಪತ್ರದ ಒಂದು ಅಕ್ಷರವನ್ನು, ಉಗುರಿನ ಮೊನೆಯಿಂದ ತೆಗೆದ ಕಣ್ಣ ಕಾಡಿಗೆಯಿಂದ ವಿಷ ಎಂಬ ಪದವನ್ನು ವಿಷೆ ಎಂದು ತಿದ್ದುತ್ತಾಳೆ. ಮರಣ ಪತ್ರವನ್ನೇ ಮದುವೆಯ ಆಮಂತ್ರಣವಾಗಿ ಮಾರ್ಪಾಟು ಮಾಡುತ್ತಾಳೆ. ಕೊಲೆಯಾಗಿ ಚಟ್ಟ ಏರಬೇಕಿದ್ದ ಚಂದ್ರಹಾಸ ಮದುಮಗನಾಗಿ ಹಸೆ ಏರುತ್ತಾನೆ.

ಹೀಗೆ ಒಂದು ಅಕ್ಷರ ವ್ಯತ್ಯಾಸವು, ಹೋಗಬೇಕಿದ್ದ ಪ್ರಾಣವನ್ನು ಉಳಿಸಿದ್ದು ನಮ್ಮ ಸಾಹಿತ್ಯ ಲೋಕದಲ್ಲಿ ಚಿರಸ್ಮರಣೆಯಾಗಿ ಉಳಿದಿದೆ. ಆದರೆ ಈ ಪ್ರಕರಣ ನಡೆದಿದ್ದು ನಿಜವೋ ಸುಳ್ಳೋ ಪುರಾಣವೋ ಇತಿಹಾಸವೋ ಎಂಬ ಗೊಂದಲವಿನ್ನೂ ಬಗೆಹರಿದಿಲ್ಲ.

ನಾನು ತೊಂಬತ್ತರ ದಶಕದ ಆದಿಯಲ್ಲಿ ಕನ್ನಡ ಆಧ್ಯಾಪಕನಾಗಿ ಕೆಲಸಕ್ಕೆ ಸೇರಿದ್ದ ಹೊಸತರಲ್ಲಿ ಒಂದು ಘಟನೆ ನಡೆಯಿತು. ಅದು ಚಂದ್ರಹಾಸನ ಘಟನೆಗೆ ತದ್ವಿರುದ್ಧವಾಗಿ ಘಟಿಸಿತು. ಚರಿತ್ರೆಯ ಚಕ್ರ ಉರುಳುತ್ತದೆ ಎಂಬ ಮಾತು ನಿಮಗೆ ನೆನಪಿರಬೇಕು. ಈಗ ನಾನು ನಿರೂಪಿಸುವ ಘಟನೆಯಲ್ಲಿ ಹೀಗೆಯೇ ತಿದ್ದಿದ ಅಕ್ಷರ ಪ್ರಯೋಗವು ಪ್ರಾಣಾಂತಕವಾಗಿ ಪರಿಣಮಿಸಿದ ಕತೆಯನ್ನು ನಿಮಗೆ ಹೇಳಲು ಹೊರಟಿದ್ದೇನೆ. ನಿಜ ಘಟನೆಯನ್ನು ಕತೆ ಅಂತ ಯಾಕೆ ಕರೆದೆ ಅಂದ್ರೆ, ಈ ಘಟನೆಯ ನಾಟಕೀಯತೆ ಕೆಲವೊಮ್ಮೆ ನನಗೇ ಇದೊಂದು ಕಲ್ಪನೆ ಎನ್ನುವಷ್ಟು ಕೌತುಕವಾಗಿರುವುದರಿಂದ ನನ್ನಲ್ಲಿಯೇ ಅನುಮಾನ ಹುಟ್ಟಿಕೊಂಡಿದೆ. ಆದರೆ ಈ ಘಟನೆಯಲ್ಲಿ ಭಾಗಿಯಾಗಿ ಕಷ್ಟಕ್ಕೆ ಸಿಕ್ಕಿಕೊಂಡ ಹುಡುಗ ಈಗ ಹರೆಯ ಕಳೆದುಕೊಂಡಿರಬೇಕು. ಅವನ ಮಕ್ಕಳು ಬೆಳೆದು ಕಾಲೇಜು ಕಲಿಯುತ್ತಿರಬೇಕು. ಇನ್ನು ಆ ಹುಡುಗಿ ಅಂದರೆ ನಮ್ಮ ಕಥಾನಾಯಕಿ ಈಗ ಯಾವ ರೂಪದಲ್ಲಿ ಯಾವ ವೇಷದಲ್ಲಿರುವಳೋ ನನ್ನ ಕಿವಿಗೆ ಅವಳ ಸುದ್ದಿ ಬಿದ್ದಿಲ್ಲ. ಆದರೆ ಎಲ್ಲಾದರೂ ಒಂದು ಕಡೆ ಆಕೆ ಸುಖವಾಗಿರಲಿ ಎಂಬ ಹಾರೈಕೆ ನನ್ನದು.

ನೇರವಾಗಿ ವಿಷಯಕ್ಕೆ ಬರುತ್ತೇನೆ. ಅದೊಂದು ಜಿಲ್ಲಾ ಕೇಂದ್ರ. ಆ ಊರಿಗೆ ಇದ್ದ ಒಂದೇ ಡಿಗ್ರಿ ಕಾಲೇಜಿಗೆ ನನಗೆ ಪೋಸ್ಟಿಂಗ್ ಆಗಿತ್ತು. ಹೆಸರಿಗೆ ಜಿಲ್ಲಾ ಕೇಂದ್ರವಾದರೂ 90% ವಿದ್ಯಾರ್ಥಿಗಳು ಸುತ್ತಲಿನ ಗ್ರಾಮಾಂತರ ಪ್ರದೇಶಗಳಿಂದ ಬರುತ್ತಿದ್ದರು. ಹುಡುಗರಲ್ಲಿ ಹಳ್ಳಿಯಿಂದ ಬರುವವರು ಜಾಸ್ತಿ ಇದ್ದರೆ, ಹುಡುಗಿಯರಲ್ಲಿ ನಗರದಿಂದ ಬರುವವರ ಸಂಖ್ಯೆ ಹೆಚ್ಚಿತ್ತು. ಈ ಪಟ್ಟಣದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದರೂ ಪಾರಂಪರಿಕವಾಗಿ ಬಂದಿದ್ದ ಊಳಿಗಮಾನ್ಯದ ವ್ಯವಸ್ಥೆ ಇನ್ನೂ ತನ್ನ ಇರುವನ್ನು ಸಾಬೀತು ಮಾಡುತ್ತಿದ್ದ ಕಾಲಘಟ್ಟವದು.

ಜಾತಿ ಮತ್ತು ಧರ್ಮದ ಸಂಗತಿಗಳಲ್ಲಿ ರಣೋತ್ಸಾಹದಿಂದ ಕೂಡಿದ್ದ ಸಮುದಾಯಗಳು ತಮ್ಮ ಪ್ರಾಬಲ್ಯವನ್ನು ಹಿಂಸೆಯ ಮೂಲಕ ಮೆರೆಯುತ್ತಿದ್ದವು. ಮೇಲುನೋಟಕ್ಕೆ ಎಲ್ಲವೂ ಸರಿ ಇರುವಂತೆ ಕಂಡರೂ ಯಾವುದೋ ಒಂದು ಸಣ್ಣ ಪುಕಾರು ಇಡೀ ಪಟ್ಟಣದಲ್ಲಿ ಕ್ಷಣಾರ್ಧದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸುವಷ್ಟು ನಾಜೂಕಿನ ವಾತಾವರಣ ಇದ್ದ ಪ್ರದೇಶವದು.

ಇಂತಹ ಹಿನ್ನೆಲೆಯ ಈ ಪಟ್ಟಣಕ್ಕೆ ಕನ್ನಡ ಅಧ್ಯಾಪಕನಾಗಿ ನಾನು ಬಂದಾಗ ಅಲ್ಲಿ ಇನ್ನೂ ನಾಲ್ಕಾರು ಪೂರ್ವ ಸೂರಿಗಳು ಕನ್ನಡಮ್ಮನ ಸೇವೆಯನ್ನು ಮಾಡುತ್ತಾ ಸುಖವಾಗಿದ್ದರು. ನಾನು ಆ ಕಾಲೇಜಿನಲ್ಲಿ ತೆಗೆದುಕೊಳ್ಳುತ್ತಿದ್ದ ಕ್ಲಾಸುಗಳಲ್ಲಿ ಒಂದು ಕನ್ನಡ ಐಚ್ಛಿಕ ತರಗತಿಯೂ ಇದ್ದು ಅದರಲ್ಲಿ ಮೂವತ್ತು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಅವರಲ್ಲಿ ಹತ್ತೋ ಹನ್ನೆರಡೋ ಹುಡುಗಿಯರಿದ್ದರು. ಬೇರೆ ತರಗತಿಗಳಿಗೆ ಹೋಲಿಸಿದರೆ ಈ ತರಗತಿಯ ವಿದ್ಯಾರ್ಥಿಗಳು ಸ್ವಲ್ಪಮಟ್ಟಿಗೆ ಸಲುಗೆಯಿಂದ ಇದ್ದರು. ಇದನ್ನು ಗಮನಿಸಿದ ನಮ್ಮ ಪ್ರಿನ್ಸಿಪಾಲರು ಮುಂದೆ ಮೂರನೇ ಮಹಾಯುದ್ಧದ ಮುನ್ಸೂಚನೆಯಂತೆ ನನ್ನ ಕರೆದು ವಿದ್ಯಾರ್ಥಿಗಳ ವಿಷಯದಲ್ಲಿ ಸ್ಟ್ರಿಕ್ಟ್‌ ಆಗಿರಲು ವಾರ್ನ್ ಮಾಡಿದ್ದರು.

ರಂಗಭೂಮಿಯ ಹಿನ್ನೆಲೆಯಿಂದ ಬಂದ ನನಗೆ ಇವೆಲ್ಲ ಅತ್ಯಂತ ಮಾಮೂಲಿನ ಸಂಗತಿಗಳಾಗಿದ್ದರಿಂದ ಅವರ ಮಾತನ್ನು ನಾನೇನೂ ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ. ಈ ತರಗತಿಯಲ್ಲಿ ಒಬ್ಬ ಚಂದದ ಹುಡುಗಿ ಇದ್ದಳು. ಮಾತ್ರವಲ್ಲ, ಆಕೆ ಬುದ್ಧಿವಂತೆಯಾಗಿಯೂ ಇದ್ದಳು. ರಿಜಿಸ್ಟರ್‌ನಲ್ಲಿ ಇವಳು ಹೆಸರು ರಾಧ ಎಂದು ಇದ್ದರೂ, ಈ ತರಗತಿಗೆ ಮಾತ್ರ ಇವಳು ಒಬ್ಬ ಕಾಳಿದಾಸನ ಶಕುಂತಲೆಯೋ ಜನ್ನನ ಅಮೃತಮತಿಯೋ ಅಥವಾ ನಾಗವರ್ಮನ ಕಾದಂಬರಿಯೋ ಎಂಬಂತೆ ಇದ್ದಳು. ಅವಳನ್ನು ಗುಟ್ಟಾಗಿ ಆರಾಧಿಸುವ ಅನೇಕ ಹುಡುಗರು ತರಗತಿಯ ಹೊರಗೆ ಮತ್ತು ಒಳಗೆ ಇದ್ದರು.

ಇದೇ ತರಗತಿಯಲ್ಲಿ ಅತ್ಯಂತ ಸೌಮ್ಯ ಸ್ವಭಾವದ ಹಳ್ಳಿ ಹುಡುಗನೊಬ್ಬ ಇದ್ದ. ಅವನ ಹೆಸರು ಮುತ್ತಪ್ಪ ಎಂದಿದ್ದರೂ ಹುಡುಗರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಕತ್ತರಿಸಿಯೋ ಉದ್ದ ಮಾಡಿಯೋ ತಮ್ಮತಮ್ಮ ಇಷ್ಟಾನುಸಾರ ಬಳಸುವುದು ಅವನ ಮುಜುಗರಕ್ಕೆ ಕಾರಣವಾಗಿತ್ತು. ಒಂದುದಿನ ಅವ ತನ್ನ ಹೆಸರನ್ನು ಮಾಧವನೆಂದು ಬದಲಿಸಿಕೊಂಡ. ಅದು ಆಗ, ಮುಂದೊಂದು ದಿನ ಘನಘೋರ ಸಮಸ್ಯೆಯ ರೂಪ ತಳೆಯುವ ಯಾವ ಸೂಚನೆಯೂ ಇರಲಿಲ್ಲ. ಪ್ರತಿಭಾವಂತನಾದರೂ ಹಳ್ಳಿ ಹಾಗೂ ಕೆಳ ಸಮುದಾಯಕ್ಕೆ ಸೇರಿದವನೆಂಬ ಕೀಳರಿಮೆ ಅವನನ್ನು ಕಾಡುತ್ತಿರುವುದನ್ನು ಗಮನಿಸಿದ ನಾನು ಅದಕ್ಕೆ ಮದ್ದು ಮಾಡಲು ಅವನನ್ನೇ ತರಗತಿಯ ಪ್ರತಿನಿಧಿಯಾಗಿ ಆರಿಸಿದೆ.

ಕೆಲ ದಿನಗಳು ಕಳೆದ ನಂತರ ಅವನಿಗೆ ನನ್ನಲ್ಲಿ ವಿಶ್ವಾಸ ಮೂಡಿದ ಮೇಲೆ ತಾನು ಬರೆದು ಗುಟ್ಟಾಗಿ ಇಟ್ಟುಕೊಂಡಿದ್ದ ಕವಿತೆಗಳ ಕಟ್ಟನ್ನು ಕೊಟ್ಟ. ಹರೆಯದ ಹುಡುಗರಂತೆ ಅವನು ಗೀಚಿರಬೇಕೆಂದು ನಾನು ಅವುಗಳನ್ನು ಕಣ್ಣಾಡಿಸಿದರೆ ನನ್ನ ಕಣ್ಣುಗಳಲ್ಲಿ ನನಗೆ ಅರಿವಿಲ್ಲದೆ ನೀರಾಡಿತು. ಅಷ್ಟು ಅದ್ಭುತವಾದ ಕವಿತೆಗಳನ್ನು ಅವನು ಬರೆದಿದ್ದ. ಅವನಿಗೆ ಸರ್‌ಪ್ರೈಜ್ ಕೊಡುವ ಉದ್ದೇಶದಿಂದ ಅವನಿಗೆ ತಿಳಿಯದಂತೆಯೇ ನಾಡಿನ ಹೆಸರಾಂತ ದಿನಪತ್ರಿಕೆಯೊಂದರ ದೀಪಾವಳಿ ಸಂಚಿಕೆಯ ಕವನ ಸ್ಪರ್ಧೆಗೆ ಅವನ ಕವಿತೆಯನ್ನು ನಾನೇ ಕಳುಹಿಸಿಕೊಟ್ಟೆ. ನನ್ನ ನಿರೀಕ್ಷೆಯಂತೆ ಮುತ್ತಪ್ಪ ಉರುಫ್ ಮಾಧವನ ಕವಿತೆಗೆ ಪ್ರಥಮ ಬಹುಮಾನ ಬಂತು. ಮಾಧವ ಯುವ ಕವಿಯೆಂದು ರಾತ್ರೋರಾತ್ರಿ ಪ್ರಸಿದ್ಧನಾದ.

ಬಹುಮಾನ ತೆಗೆದುಕೊಂಡು ಬಂದ ಅವನು ತರಗತಿಯ ತನ್ನ ಸಹಪಾಠಿಗಳಿಗೆ ಸಿಹಿ ಹಂಚಿದ. ತರಗತಿಯ ಸುಂದರಿಯಾಗಿದ್ದ ರಾಧ, ಈ ಕವಿ ಮಾಧವನನ್ನು ‘ನನಗೆ ಒಂದು ಕವಿತೆಯನ್ನು ಬರೆದುಕೊಡು’ ಎಂದು ಕೋರಿದಳು. ಅವಳ ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ತಬ್ಬಿಬಾದ ಈ ಕವಿ ‘ಆಯ್ತು ಮೇಡಂ’ ಎಂದ. ಆ ಹುಡುಗಿ ‘ನೋ ನೋ, ವಿ ಆರ್ ಫ್ರೆಂಡ್ಸ್... ಪ್ಲೀಸ್ ಕಾಲ್ ಮೀ ಬೈ ಮೈ ನೇಮ್’ ಎಂದು ಇಂಗ್ಲಿಷ್‍ನಲ್ಲಿ ಉಲಿದಳು. ‘ಓಕೆ ರಾದ’ ಎಂದವನಿಗೆ ಅವಳು ‘ಸೀ ಮಾಧವ ಆಯಾಮ್ ನಾಟ್ ರಾದ ಅಯಾಮ್ ರಾಧ. ಯು ಗಾಟ್ ಇಟ್’ ಎಂದು ತಿದ್ದಿದಳು.

ಕೇಶಿರಾಜನ ಶಬ್ದಮಣಿ ದರ್ಪಣವು ತರಗತಿಗಳಲ್ಲಿ ಕೊನೆಯುಸಿರು ಎಳೆಯುತ್ತಿದ್ದ ದಿನಗಳವು. ರಾಧ ಹೈಸ್ಕೂಲ್‌ವರೆಗೆ ಸಂಸ್ಕೃತ ಅಭ್ಯಾಸ ಮಾಡಿದ್ದ ಕಾರಣ ಅವಳು ಮಹಾಪ್ರಾಣಗಳನ್ನು ಅಲ್ಪಪ್ರಾಣಗಳನ್ನು ವ್ಯತ್ಯಾಸ ಮಾಡಿ ಉಚ್ಚರಿಸುವುದನ್ನು ರೂಢಿ ಮಾಡಿಕೊಂಡಿದ್ದಳು. ಅಲ್ಲದೆ ಅವರ ಅಪ್ಪ ಆ ನಗರದ ಶ್ರೀಮಂತರ ಮನೆಯ ದೇವಾಲಯದ ಅರ್ಚಕರಾದ ಕಾರಣ ಅವಳಿಗೆ ಬಾಲ್ಯದಿಂದಲೇ ಅಮರಕೋಶದ ಪಾಠಗಳಾಗಿತ್ತು. ಇಂತಹ ಹಿನ್ನೆಲೆಯಲ್ಲಿ ರಾಧ ಮತ್ತು ಮಾಧವರು ತಮ್ಮ ಸ್ನೇಹವನ್ನು ವಯೋಸಹಜ ವ್ಯಾಪಾರಗಳಿಗೆ ಸಿಕ್ಕದಂತೆ ಕಾಪಾಡಿಕೊಂಡು ಬಂದಿದ್ದರು.

‘ಕನ್ನಡಕ್ಕಳವು ಮಹಾಪ್ರಾಣಂಗಳ್’ ಎಂಬ ಕೇಶಿರಾಜನ ನಿಯಮವನ್ನು ನಂಬಿಕೊಂಡಿದ್ದ ಈ ಮಾಧವ, ರಾಧಳನ್ನು ಮಾತ್ರ ಅವಳ ಬಾಯಿಗೆ ಹೆದರಿ ರಾಧ ಎಂದು ಕಾನ್ಶಿಯಸ್ ಆಗಿ ಕರೆಯಲು ವಿಫಲ ಪ್ರಯತ್ನ ಮಾಡುತ್ತಿದ್ದ. ಈ ಪ್ರಯತ್ನಗಳ ಕುರಿತು ಕೆಲವು ಬಾರಿ ನನ್ನ ಕಿವಿಗೂ ಬಿದ್ದಿತ್ತು. ಇಷ್ಟೇ ಆಗಿದ್ದರೆ ನಾನು ಈ ಘಟನೆಯನ್ನು ದಾಖಲಿಸುತ್ತಿರಲಿಲ್ಲ. ಹೀಗೆ ಕಾಲ ಸರಿದು ಈ ಬ್ಯಾಚಿನ ಡಿಗ್ರಿ ಮುಗಿಯುವ ಕಾಲದಲ್ಲಿ ಕವಿ ಮಾಧವ ಹಗಲು ರಾತ್ರಿ ನಿದ್ದೆಗೆಟ್ಟು ಕವಿತೆಯನ್ನು ಬರೆದ, ಹಲವನ್ನು ಹರಿದ. ಏಕೆಂದರೆ ಹೇಗೆ ಬರೆದರೂ ಯಾವುದೋ ಒಂದು ಪ್ರತಿಮೆ-ರೂಪಕ-ಉಪಮೆ ಪ್ರೇಮದ ಅರ್ಥವನ್ನು ಹೊಳೆಯಿಸಿಬಿಡುತ್ತಿತ್ತು ಎಂದು ಅವನಿಗೆ ಭಯವಾಗಿ ಯಾವ ಸಾಲಿನಲ್ಲೂ ಪ್ರೇಮದ ನೆರಳು ಕಾಣದಂತೆ ಕೊನೆಗೂ ಒಂದು ಕವಿತೆ ಬರೆದು ಮುಗಿಸಿದ. ಕೆಳಗೆ ಹೆಸರು ಬರೆಯುವ ಹೊತ್ತಿನಲ್ಲಿ ರಾಧಾಳ ಮಹಾಪ್ರಾಣದ ಬಗೆಗಿನ ಗೀಳನ್ನು ನೆನೆದು ‘ಮಹಾಪ್ರಾಣಪ್ರಿಯೆ ರಾಧಳಿಗೆ –ಮಾಧವ’ ಎಂದು ಸಹಿ ಮಾಡಿ ಗುಟ್ಟಿನಲ್ಲಿ ಕೊಟ್ಟ ಮತ್ತು ಮನೆಯಲ್ಲಿ ಒಂಟಿಯಾಗಿ ಓದಬೇಕೆಂದು ವಿನಂತಿಸಿದ.

ಮುಗ್ಧಳಾದ ರಾಧ ಈ ಕವಿತೆಯನ್ನು ತನ್ನ ಮನೆಯ ಓದುವ ಟೇಬಲಿನಲ್ಲಿ ಓದಿ ನಿರಾಶೆಗೊಂಡಳು. ಒಂಟಿಯಾಗಿ ಓದು ಎಂದ ಮಾಧವನ ಸೂಚನೆಯಿಂದ ಅವಳು ವಯೋಸಹಜವಾಗಿ ಬೇರೇ ಏನನ್ನೋ ನಿರೀಕ್ಷಿಸಿದ್ದಳು. ಇಂತಹ ಎಷ್ಟೋ ಕವಿತೆಗಳು, ಪ್ರೇಮ ಪತ್ರಗಳು ಅವಳಿಗೆ ಈ ಮೊದಲೇ ಬಂದಿದ್ದವು. ಆದರೆ ಅವುಗಳನ್ನು ಓದಿ ತಕ್ಷಣವೇ ಹರಿದು ಗಾಳಿಗೆ ತೂರುತ್ತಿದ್ದ ರಾಧ ಈ ಕವಿತೆಯಲ್ಲಿ ಪ್ರೇಮದ ಸುಳಿವಿಲ್ಲದೆ ಹೋದ ಸಿಟ್ಟಿಗೋ ಅಥವಾ ಮಾಧವನ ಮೇಲಿನ ಕರುಣೆಗೋ ಅದನ್ನು ಹಾಗೇ ಬಿಟ್ಟು ಮಲಗಿದ್ದಳು. ದೀಪ ಆರಿಸಲೆಂದು ಬಂದ ಅವಳ ಅಮ್ಮನ ಕಣ್ಣಿಗೆ ಕವಿತೆ ಬಿದ್ದಿತ್ತು. ಅವಳಿಗೆ ಅರ್ಥವಾಗಿದ್ದು ಒಂದೇ ಸಾಲು ‘ಮಹಾಪ್ರಾಣಪ್ರಿಯೆ ರಾಧ...’ ತಮ್ಮ ಮಗಳು ಕೈಬಿಟ್ಟು ಹೋದಳೆಂದು ಬೊಬ್ಬೆಯಿಟ್ಟ ಹೆಂಡ್ತಿಯ ಬಾಯಿ ಮುಚ್ಚಿಸಿದ ಗಂಡ, ಈ ವಿಷಯವನ್ನು ನಾಜೂಕಾಗಿ ನಿಭಾಯಿಸಲು ಹೆಂಡತಿಗೆ ವಿನಂತಿಸಿದ. ಮರುದಿನ ರಾಧಳಿಗೆ ತಿಳಿಯದಂತೆ ಅವಳ ಸ್ನೇಹಿತೆಯರಿಂದ ಮಾಧವನ ಜಾತಿಯ ಹಿನ್ನೆಲೆಯನ್ನು ಪಡೆದುಕೊಂಡ ನಂತರ ತನ್ನ ತಾಳ್ಮೆ ಕಳೆದುಕೊಂಡ.

ಎಂದೂ ಅವಳ ಮೇಲೆ ಕೈ ಮಾಡದಿದ್ದ ರಾಧಳ ಅಪ್ಪ ಸಂಜೆ ಮನೆಗೆ ಮಗಳು ಬಂದ ತಕ್ಷಣ, ಅವಳ ಕೆನ್ನೆಗೆ ರಫ್ ಎಂದು ಬಾರಿಸಿ ಮಾತನಾಡಲು ಅವಕಾಶಕೊಡದೆ ರೂಮಿನಲ್ಲಿ ಕೂಡಿಹಾಕಿದ. ಅವಳು ‘ನನ್ನ ಮಾತು ಕೇಳಿ’ ಎಂದು ಗೋಗರೆದರೂ ಕೇಳದೆ ಮನೆಯಿಂದ ಧಡಧಡನೆ ನಡೆದುಹೋದ. ಆತನ ಸವಾರಿ ಹೋಗಿದ್ದು ಶ್ರೀಮಂತರೂ ರಾಜಕೀಯ ನಾಯಕರೂ ಆಗಿದ್ದವರೊಬ್ಬರ ಮನೆಗೆ. ಅಲ್ಲಿ ಮಾಧವನೆಂಬ ದಲಿತರ ಹುಡುಗ ಕವಿತೆ ಬರೆದು ತನ್ನ ಮಗಳ ಮನಸ್ಸು ಕೆಡಿಸಿ ಬ್ರಾಹ್ಮಣ್ಯ ಹಾಳು ಮಾಡುತ್ತಿದ್ದಾನೆ ಎಂದು ದೂರು ನೀಡಿದ. ಇಂತಹ ಸಂದರ್ಭಕ್ಕೆ ಕಾಯುತ್ತಿದ್ದ ಜಾತಿ ಸಂರಕ್ಷಕರಾದ ದಳದ ಸದಸ್ಯರು ಏಕಾಏಕಿ ಕಾಲೇಜಿಗೆ ನುಗ್ಗಿ ಮಾಧವನನ್ನು ಥಳಿಸಿದ್ದರು. ಪಾಪ ಯಾಕೆ ಹೊಡೆದರು ಎಂದೂ ತಿಳಿಯದ ಮಾಧವ ಹಣ್ಣು ಹಣ್ಣಾಗಿದ್ದ.

ದಲಿತರ ಹುಡುಗನನ್ನು ಬಲಿತವರ ಗುಂಪು ಹೊಡೆಯಿತು ಎಂಬ ಸುದ್ದಿ ತಿಳಿದ ದಲಿತ ಸಂಘರ್ಷ ಸಮಿತಿಯ ಸದಸ್ಯರು ದಂಡು ಕಟ್ಟಿಕೊಂಡು ನ್ಯಾಯ ಬೇಕೆಂದು ಕಾಲೇಜನ್ನು ಮುಚ್ಚಿಸಿ ಪ್ರತಿಭಟನೆ ಮಾಡಿದರು. ಪೊಲೀಸರ ಮಧ್ಯಸ್ತಿಕೆಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಮಾಧವ ತಾನು ನಿರಪರಾಧಿ ಎಂದು ಸಾಬೀತುಪಡಿಸುವಲ್ಲಿ ಸೋತು ಹೋದ. ‘ಮಹಾಪ್ರಾಣಪ್ರಿಯೆ ಎಂದರೆ ಏನು ಎಂದು ನಿನ್ನಿಂದ ಪಾಠ ಹೇಳಿಸಿಕೊಳ್ಳಬೇಕಿಲ್ಲ’ ಎಂದ ಧಮ್ಕಿದಾರರಿಗೆ ಕನ್ನಡ ವ್ಯಾಕರಣದ ಮಹಾಪ್ರಾಣ ಅಲ್ಪಪ್ರಾಣಗಳ ವ್ಯತ್ಯಾಸ ಹೇಳಿಕೊಡುವುದು ಕಷ್ಟವಿತ್ತು. ಅವರಿಗೆ ಗೊತ್ತಿದ್ದಿದು ಪೂರ್ಣ ಪ್ರಾಣ (ಫುಲ್ ಮರ್ಡರ್) ಅಥವಾ ಅರೆ ಪ್ರಾಣಗಳ (ಹಾಫ್ ಮರ್ಡರ್) ವ್ಯತ್ಯಾಸ ಅಷ್ಟೆ. ಹೀಗೆ ‘ರಾದ’ ಎಂಬ ಹೆಸರಿನಲ್ಲಿದ್ದ ಅಕ್ಷರಕ್ಕೆ ಒಂದು ಗೆರೆ ಎಳೆದು ಮಹಾಪ್ರಾಣ ಸೂಚಕವನ್ನು ಕವಿ ಕಲ್ಪನೆಯಿಂದ ಬರೆದ ಕವಿ ಮಾಧವನನ್ನು ಆ ಸಣ್ಣ ಗೆರೆ ಕೊಲ್ಲುವ ಭರ್ಜಿಯಾಗಿ ಪ್ರಾಣಕ್ಕೆ ಗಂಡಾಂತರವಾಗಿತ್ತು.

ರಾಧ ಮಾಧವ ಲವ್ ಕೇಸ್ ಅಂತ ಪ್ರಸಿದ್ಧಿ ಪಡೆದ ಈ ಪ್ರಕರಣವನ್ನು ತಿಳಿಗೊಳಿಸಲು ನಾನು ಹಲವು ವಾರಗಳ ಕಾಲ ಆ ಪಟ್ಟಣದ ಎಲ್ಲ ಲೆವೆಲ್ಲಿನ ಮುಖಂಡರಿಗೆ ಕನ್ನಡ ವ್ಯಾಕರಣವನ್ನು ಮಹಾಪ್ರಾಣಗಳ ಸಂಗತಿಗಳನ್ನು ಪುಕ್ಕಟೆಯಾಗಿ ಕಲಿಸಬೇಕಾಯಿತು. ನಂತರ ಮುಂದಿನ ವರ್ಷವೇ ನನಗೆ ವರ್ಗವಾಯಿತು. ಅದು ಆಗಿದ್ದೋ ಮಾಡಿಸಿದ್ದೋ ನನಗೆ ಇನ್ನೂ ಸಂದೇಹವಿದೆ. ಆದರೆ ಮಾಧವ ಬರೆದ ಮಹಾಪ್ರಾಣಪ್ರಿಯೆ ಕವಿತೆ ಮಾತ್ರ ನನ್ನ ಬಳಿ ಈ ಪ್ರಕರಣದ ಜೀವಂತ ಸಾಕ್ಷಿಯಾಗಿ ಇನ್ನೂ ಉಳಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry