ರಾಚೋಟೇಶ್ವರ ಜಾತ್ರಾ ಉತ್ಸವದ ಸಂಭ್ರಮ

7
ಕೆರೂರ: ಭಾವೈಕ್ಯದ ಸಂಗಮದ ಧ್ಯೋತಕ, ಭಕ್ತರ ಹರ್ಷೋದ್ಘಾರ; ಹರಕೆ ತೀರಿಸಲು ಅಗ್ನಿ ಮಹೋತ್ಸವ ಇಂದು

ರಾಚೋಟೇಶ್ವರ ಜಾತ್ರಾ ಉತ್ಸವದ ಸಂಭ್ರಮ

Published:
Updated:
ರಾಚೋಟೇಶ್ವರ ಜಾತ್ರಾ ಉತ್ಸವದ ಸಂಭ್ರಮ

ಕೆರೂರ: ಶ್ರದ್ಧೆ, ಭಕ್ತಿ ಮತ್ತು ಭಾವೈಕ್ಯದ ಸಂಗಮದ ಧ್ಯೋತಕವಾಗಿ ಆಚರಿಸಲಾಗುವ ರಾಚೊಟೇಶ್ವರನ ವೈವಿಧ್ಯಮಯ ಜಾತ್ರಾ ಉತ್ಸವದ ನಿಮಿತ್ತ ಮಂಗಳವಾರ ಸಂಜೆ ಮಹಾ ರಥೋತ್ಸವ ಕಿಕ್ಕಿರಿದು ಸೇರಿದ್ದ ಸಹಸ್ರಾರು ಭಕ್ತರ ಸಂಭ್ರಮ, ಹರ್ಷೋದ್ಘಾರಗಳ ನಡುವೆ ರಥ ಬೀದಿಯಲ್ಲಿ ನಡೆಯಿತು.

ದೇವಸ್ಥಾನದ ಇಕ್ಕೆಲಗಳಲ್ಲಿ ಸೇರಿದ್ದ ಭಕ್ತ ಸಮೂಹ ತಮ್ಮ ಇಷ್ಟಾರ್ಥ ಸಿದ್ಧಿಸಲೆಂದು ಆರಾಧ್ಯದೈವನ ರಥಕ್ಕೆ ಬಾಳೆಹಣ್ಣು,ಉತ್ತತ್ತಿ ತೂರಿ ಭಕ್ತಿ ಭಾವ ಮೆರೆದರು. ರಥವು ಪಾದಗಟ್ಟೆಯವರೆಗೆ ತೆರಳಿ ಯಶಸ್ವಿಯಾಗಿ ಸ್ವಸ್ಥಾನಕ್ಕೆ ಮರಳುತ್ತಿದ್ದಂತೆ ನೆರೆದ ಭಕ್ತ ಸಮೂಹ ಖುಷಿಯಿಂದ ಚಪ್ಪಾಳೆ ತಟ್ಟಿ ನಲಿದರು.

ನೇಸರನ ಪ್ರತಾಪ: ಅಪರಾಹ್ನದ ಹೊತ್ತು ನೆತ್ತಿ ಸುಡುವ ಬಿಸಿಲಲ್ಲಿ ನೇಸರ ತನ್ನ ಪ್ರಖರತೆಯೊಂದಿಗೆ ಧಗೆಯ ದರ್ಬಾರು ತೋರಿದರೆ, ಗೋಧಿ ಹುಗ್ಗಿಯ ಭೋಜನ ಸವಿದ ಭಕ್ತರು ಸೆಕೆಯ ಸಂಕಟ, ಬಿಸಿಲ ಝಳದಲ್ಲಿ ಚಟಪ ಡಿಸಿ, ತಂಪು ಪಾನೀಯಗಳಿಗೆ ಮೊರೆ ಹೋದರು.

ಜಾತ್ರಾ ಉತ್ಸವದಲ್ಲಿ ಬೆಳಿಗ್ಗೆ ವೀರಗಾಸೆ ಕುಣಿತ, ಪಲ್ಲಕ್ಕಿ ಹಾಗೂ ನಂದಿಕೋಲು ಉತ್ಸವಗಳು ಮತ್ತು ಶಸ್ತ್ರ ಹಾಕಿ ಸಿಕೊಳ್ಳುವುದು ಮತ್ತು ಚಿಕ್ಕ ಮಕ್ಕಳು ರಾಚಣ್ಣನ ಖಡೆ ಹೇಳುವ ಸಂಪ್ರದಾಯ, ಆಚರಣೆಗಳು ಜಾತ್ರೆಗೆ ಬಂದ ಭಕ್ತರ ಮೆಚ್ಚುಗೆ ಪಡೆದವು.

ಜಾತ್ರಾ ಉತ್ಸವದಲ್ಲಿ ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬೆಂಗಳೂರು, ಕೊಪ್ಪಳ, ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು, ಕರುಣಾಸಿಂಧು ರಾಚೊಟೇಶ್ವರನ ದರ್ಶನ ಪಡೆದರು. ಮುಂಜಾನೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಹೊತ್ತು ಅರ್ಚಕರಿಂದ ಅವತಾರಗೊಳ್ಳುವ (ಯುವಕ, ತರುಣ ಹಾಗೂ ವೃದ್ಧನಂತೆ) ರಾಚಣ್ಣ ಹಾಗೂ ಭದ್ರಕಾಳಿಯ ಶೃಂಗಾರದ ಅಲಂಕಾರ ವಿಶೇಷವಾಗಿ ಮಹಿಳಾ ಭಕ್ತರನ್ನು ಮೋಡಿಗೊಳಿಸಿತು.

ರಥೋತ್ಸವದಲ್ಲಿ ಚರಂತಿಮಠದ ಡಾ.ಶಿವುಕುಮಾರ ಶಿವಾಚಾರ್ಯ ಸ್ವಾಮೀಜಿ, ಬಾದಾಮಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಹಾಂತೇಶ ಮಮದಾಪೂ, ಸಮಿತಿ ಅಧ್ಯಕ್ಷ ಆರ್‌.ಆರ್‌. ಶೆಟ್ಟರ, ಉಪಾಧ್ಯಕ್ಷ ಆರ್.ಎನ್‌. ಶೆಟ್ಟರ್, ಎಂ.ಸಿ. ಘಟ್ಟದ, ಎಚ್.ಜಿ. ಘಟ್ಟದ, ಮಹಾಂತೇಶ ಮೆಣಸಗಿ, ರಾಚಪ್ಪ ಮುದಕವಿ ಸೇರಿದಂತೆ ವಿವಿಧ ಸಮಾಜಗಳ ಪ್ರಮುಖರು ಪಾಲ್ಗೊಂಡಿದ್ದರು.

ಅಗ್ನಿ ಮಹೋತ್ಸವ: ಈ ಜಾತ್ರೆಯ ವಿಶೇಷ ಆಕರ್ಷಣೆ ಇದೇ 28ರ ಅಗ್ನಿ ಮಹೋತ್ಸವ ನಡೆಯಲಿದೆ. ಬುಧವಾರ ರಾತ್ರಿ ಭಕ್ತರು ಉಗ್ರ ಸ್ವರೂಪಿ ರಾಚೊಟೇಶ್ವರನಲ್ಲಿ ತಮ್ಮ ಹರಕೆ ತೀರಿಸಲು, ಇಷಾರ್ಥ ಸಿದ್ಧಿಗಾಗಿ ಕೆಂಡದ ರಾಶಿ ಮೇಲೆ ಒದ್ದೆ ಬಟ್ಟೆಯಲ್ಲಿ ಅಗ್ನಿ ಹಾಯುವ ದೃಶ್ಯ ಶ್ರದ್ಧೆ, ಭಕ್ತಿಯ ಪರಾಕಾಷ್ಠೆ ಮೇಳೈಸುತ್ತವೆ. ಈ ಆಚರಣೆಯಲ್ಲಿ ರಾಜ್ಯದ ಪ್ರಮುಖ ಸ್ಥಳಗಳ ಭಕ್ತಾದಿಗಳು ಪಾಲ್ಗೊಳ್ಳುವುದು ವಿಶೇಷ.

ನಂತರ (ಮಾ,29 ರಿಂದ 31 ರವರೆಗೆ) ಮೂರು ದಿನ

ರಾಚಣ್ಣನ ಕುಸ್ತಿ ಅಖಾಡದಲ್ಲಿ ‘ಜಂಗೀ ನಿಕಾ ಲಿ ಕುಸ್ತಿ’ ಪಂದ್ಯಗಳು ಕ್ರೀಡಾಪ್ರೇಮಿಗಳ ಮನತಣಿಸುವ ಮೂಲಕ ಜಾತ್ರೆಯ ಸೊಬಗಿಗೆ ಮೆರುಗು ನೀಡುತ್ತವೆ.

ಒಂಟೆಗಳ ಮೋಡಿ

ಈ ಬಾರಿ ವಿಶೇಷ ಆಕರ್ಷಣೆಯಾಗಿ ಜಾತ್ರೆಗೆ ಬಂದಿದ್ದ ಒಂಟೆಗಳು ರಥೋತ್ಸವಕ್ಕೂ ಮುನ್ನ ಭಕ್ತರನ್ನು ಬೆನ್ನ ಮೇಲೆ ಹೊತ್ತು ಸುತ್ತಿ ನೆರೆದಿದ್ದ ಯಾತ್ರಿಕರಿಗೆ ಪುಕ್ಕಟೆ ಮನರಂಜನೆ ಒದಗಿಸಿದವು. ಭಕ್ತರ ನೂಕು ನುಗ್ಗಲು ತಪ್ಪಿಸಲು ಸಿಪಿಐ ಕೆ.ಎಸ್‌. ಹಟ್ಟಿ, ಪಿಎಸ್‌ಐ ಧರ್ಮಾಕರ ಧರ್ಮಟ್ಟಿ ನೇತೃತ್ವದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry