ಸಂಕಷ್ಟದಲ್ಲಿ ಮೆಣಸಿನಕಾಯಿ ಬೆಳೆಗಾರರು

7
ಇಳುವರಿಯೊಂದಿಗೆ ಬೆಲೆಯೂ ಕುಸಿತ: ಸಂಗ್ರಹಿಸಲು ಹವಾನಿಯಂತ್ರಿತ ಗೋದಾಮೂ ಇಲ್ಲ

ಸಂಕಷ್ಟದಲ್ಲಿ ಮೆಣಸಿನಕಾಯಿ ಬೆಳೆಗಾರರು

Published:
Updated:
ಸಂಕಷ್ಟದಲ್ಲಿ ಮೆಣಸಿನಕಾಯಿ ಬೆಳೆಗಾರರು

ಕುರುಗೋಡು: ತಾಲ್ಲೂಕಿನಲ್ಲಿ ಮೆಣಸಿನಕಾಯಿ ಇಳುವರಿ ಕುಸಿದಿದೆ. ಇದೇ ವೇಳೆ ಬೆಲೆಯೂ ಕುಸಿದಿರುವುದು ರೈತರನ್ನು ಸಂಕಷ್ಟಕ್ಕೆ ನೂಕಿದೆ.ಹಿಂದಿನ ವರ್ಷ ಉತ್ತಮ ಮಳೆಯೊಂದಿಗೆ ಕಾಲುವೆ ನೀರು ಸಮರ್ಪಕವಾಗಿ ದೊರೆತಿತ್ತು. ರೋಗ ಬಾಧೆಯೂ ಇರಲಿಲ್ಲ. ಇಳುವರಿಯೂ ಸಮಾಧಾನಕರವಾಗಿತ್ತು. ದರ ಕುಸಿತವಾಗಿರಲಿಲ್ಲ. ಈ ಬಾರಿ ಸನ್ನಿವೇಶ ಸಂಪೂರ್ಣ ವ್ಯತಿರಿಕ್ತವಾಗಿದೆ.

ರೋಗಬಾಧೆ: ನೀರಿನ ಕೊರತೆಯ ಜೊತೆಗೆ ಮಳೆಯೂ ಬಾರದಿರುವುದು ಹಾಗೂ ಬೆಳೆ ರೋಗಕ್ಕೆ ತುತ್ತಾಗಿರುವುದು ಈ ವರ್ಷದ ಪರಿಸ್ಥಿತಿ. ಕ್ರಿಮಿನಾಶಕ ಮತ್ತು ರಸಗೊಬ್ಬರದ ಬೆಲೆ ದುಪ್ಪಟ್ಟಾಗಿದ್ದು, ಬೆಳೆ ನಿರ್ವಹಣಾ ವೆಚ್ಚವೂ ಹೆಚ್ಚಾಗಿದೆ. ರೋಗ ಬಾಧೆಯಿಂದ ಇಳುವರಿಯೂ ಕುಸಿದಿದೆ.

‘ಎಕರೆಗೆ ಮೂವತ್ತು ಸಾವಿರ ರೂಪಾಯಿಯಂತೆ ನಾಲ್ಕು ಎಕರೆಯನ್ನು ಗುತ್ತಿಗೆ ಪಡೆದಿರುವೆ. ನೀರು ಸರಿಯಾಗಿ ಸಿಗದೆ ಎರಡು ಎಕರೆಯಲ್ಲಿ ಬೆಳೆ ಒಣಗಿದೆ. ಉಳಿದ ಜಮೀನಿನಲ್ಲಿ ಬೆಳೆದ 10 ಕ್ವಿಂಟಲ್ ಬೆಳೆಯನ್ನು ಪ್ರತಿ ಎಕರೆಗೆ ₹10 ಸಾವಿರದಂತೆ ಮಾರಾಟ ಮಾಡಿರುವೆ. ಬೆಳೆ ಕೈಗೆ ಬರೋದಕ್ಕಿಂತ ಮುಂಚೆ ₹18 ಸಾವಿರದಿಂದ ₹20 ಸಾವಿರ ದವರೆಗೆ ಬೆಲೆ ಇತ್ತು. ಬೆಳೆ ಬಂದ ಮೇಲೆ ₹ 9ಸಾವಿರದಿಂದ ₹10 ಸಾವಿರಕ್ಕೆ ಕುಸಿದಿದೆ’ ಎಂದು ಪಟ್ಟಣದ ಬೆಳೆಗಾರ ಕೆ. ದೊಡ್ಡಬಸಪ್ಪ ಅಳಲು ತೋಡಿಕೊಂಡರು.

ದಲ್ಲಾಳಿ ಕಾಟ: ರೈತರ ಹೊಲಗಳಿಗೆ ಬಂದು ಖರೀದಿಸುವ ಮಧ್ಯವರ್ತಿಗಳು ಪ್ರತಿ ಕ್ವಿಂಟಲ್‌ನಲ್ಲಿ ಐದು ಕೆ.ಜಿ. ಬೆಳೆಯನ್ನು ತಮ್ಮದೆಂದು ತೆಗೆದಿರಿಸಿಕೊಳ್ಳುತ್ತಾರೆ. ಬ್ಯಾಡಿಗಿಗೆ ಕೊಂಡೊಯ್ದರೆ ಪ್ರತಿ ಕ್ವಿಂಟಲ್‌ಗೆ ₹100 ಸಾರಿಗೆ ವೆಚ್ಚದ ಜೊತೆಗೆ ಖರೀದಿದಾರರಿಗೆ ಶೇ3 ರಷ್ಟು ಕಮಿಷನ್ ನೀಡಬೇಕಾದ ಅನಿವಾರ್ಯತೆಯಿದೆ. ರೈತರು ಇದ್ದ ಸ್ಥಳದಲ್ಲಿ ಮಾರಿದರೂ ಮಾರುಕಟ್ಟೆಗೆ ಹೋಗಿ ಮಾರಿದರೂ ಒಂದೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.

ಕೃತಕ ಬೆಲೆ ಕುಸಿತ:

ಪ್ರಸಕ್ತ ವರ್ಷ ಪ್ರಾರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹17 ಸಾವಿರದಿಂದ ₹20 ಸಾವಿರದವರೆಗೆ ಬೆಲೆ ಇತ್ತು. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮೆಣಸಿನಕಾಯಿ ಬರುತ್ತಿರುವುದರಿಂದ ಖರೀದಿದಾರರು ಕೃತಕ ಬೆಲೆ ಕುಸಿತ ಉಂಟುಮಾಡಿ ರೈತರಿಗೆ ಸಂಕಷ್ಟ ತಂದಿದ್ದಾರೆ ಎಂಬ ಆರೋಪವೂ ಇದೆ.

ಈ ಭಾಗದಲ್ಲಿ ಬೆಳೆಯನ್ನು ದಾಸ್ತಾನು ಮಾಡಲು ಸೂಕ್ತ ಹವಾನಿಯಂತ್ರಿತ ಗೋದಾಮುಗಳಿಲ್ಲದ ಕಾರಣ ಬೆಲೆ ಕಡಿಮೆ ಇದ್ದರೂ ರೈತರು ಮಾರಾಟ ಮಾಡಬೇಕಾಗಿದೆ.

–ವಾಗೀಶ್ ಕುರುಗೋಡು

10 ಕ್ವಿಂಟಲ್‌ ಈ ಬಾರಿ ಪ್ರತಿ ಎಕರೆಗೆ ಗರಿಷ್ಠ ಇಳುವರಿ ₹10,000 ಪ್ರತಿ ಕ್ವಿಂಟಲ್‌ ದರ

15 ಕ್ವಿಂಟಲ್‌ ಹಿಂದಿನ ವರ್ಷದ ಗರಿಷ್ಠ ಇಳುವರಿ ₹14,000 ಪ್ರತಿ ಕ್ವಿಂಟಲ್‌ ದರ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry