ಜಿಂಕೆ ಮಾಂಸ ಸಾಗಣೆ: ನಾಲ್ವರ ಬಂಧನ

7

ಜಿಂಕೆ ಮಾಂಸ ಸಾಗಣೆ: ನಾಲ್ವರ ಬಂಧನ

Published:
Updated:

ಬೀದರ್: ಬಂದೂಕಿನಿಂದ ಬೇಟೆಯಾಡಿ ಕೊಂದ ಜಿಂಕೆಗಳ ಮಾಂಸವನ್ನು ಜೀಪ್‌ನಲ್ಲಿ ಹೈದರಾಬಾದ್‌ಗೆ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಸವಕಲ್ಯಾಣ ತಾಲ್ಲೂಕಿನ ನಾರಾಯಣಪುರ ಕ್ರಾಸ್ ಹತ್ತಿರ ಸೋಮವಾರ ರಾತ್ರಿ ಬಂಧಿಸಿದ್ದಾರೆ.

‘ಹೈದರಾಬಾದ್‌ನ ಡಾ. ಮುಜಾಹಿದ್ ಅಲಿಖಾನ್, ಸೈಯದ್ ಅಜರ್ ಸೈಯದ್ ಉಮರ್, ಯಾಕೂಬ್ ಯುಸೂಫ್ ಶೇಕ್ ಹಾಗೂ ಹುಮನಾಬಾದ್‌ನ ಕೋಳಿವಾಡದ ಶ್ರೀಕಾಂತ ಪ್ರಕಾಶ ಲೋಕಮಣಿ ಎಂಬುವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದ್ದಾರೆ.

‘ಆರೋಪಿಗಳಿಂದ ಮೂರು ಜಿಂಕೆ ತಲೆಗಳು, 12 ಕಾಲುಗಳು, 2 ಕೊಂಬುಗಳು, 40 ಕೆ.ಜಿ. ಮಾಂಸ, ಒಂದು ಎನ್‌ಪಿಬಿ ರೈಫಲ್, 8 ಎಂಟಿ ಕಾರಟ್ರಿಡ್ಜ್, ಗುಂಡುಗಳು, ಟಾರ್ಚ್, ಎರಡು ಚಾಕು ಹಾಗೂ ಒಂದು ಕಬ್ಬಿಣದ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.

‘ಬಸವಕಲ್ಯಾಣ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಹುಲಸೂರು ಕಡೆಯಿಂದ ಬಂದ ಜೀಪ್‌ ತಪಾಸಣೆ ನಡೆಸಿದಾಗ ಜಿಂಕೆ ಮಾಂಸ ಸಾಗಿಸುತ್ತಿದ್ದುದು ಪತ್ತೆಯಾಗಿದೆ’ ಎಂದು ತಿಳಿಸಿದ್ದಾರೆ.

‘ಜಿಂಕೆಗಳನ್ನು ಬಂದೂಕಿನಿಂದ ಬೇಟೆಯಾಡಿ ಕೊಂದು ಅವುಗಳ ಮಾಂಸ ಹೈದರಾಬಾದ್‌ಗೆ ಒಯ್ಯುವಾಗ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಹೇಳಿದ್ದಾರೆ.ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry