ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಬದಲು ಸೂತಕದ ಛಾಯೆ

ಸಂಭ್ರಮದ ಬದಲು ಸೂತಕದ ಛಾಯೆ
Last Updated 28 ಮಾರ್ಚ್ 2018, 12:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಿ ವಿರೋಧಿ ಪಾಳೆಯಗಳಿಗೆ ಸೆಡ್ಡು ಹೊಡೆಯಲು ‘ಕೈ’ ಮುಖಂಡರು ಮಂಗಳವಾರ ರೂಪಿಸಿದ ಕಾರ್ಯಕ್ರಮಗಳು ತಲೆ ಕೆಳಗಾದವು.

ನಾಗರಾಜ್ ಅವರ ಮನೆ ಬಳಿ ಆಯೋಜಿಸಿದ್ದ ‌ಬಾಡೂಟ ಮತ್ತು ವೇದಿಕೆ ಕಾರ್ಯಕ್ರಮ ಚುನಾವಣೆ ನೀತಿ ಸಂಹಿತೆ ಕಾರಣಕ್ಕೆ ಅಂದುಕೊಂಡಂತೆ ನಡೆಯದೆ ಆಯೋಜಕರಿಗೆ ತೀವ್ರ ಬೇಸರ ಮೂಡಿಸಿದವು.

ಸೋಮವಾರ ನಗರ ಮತ್ತು ನಾಗರಾಜ್ ಅವರ ಊರು ಕಣಜೇನಹಳ್ಳಿ ತುಂಬೆಲ್ಲಾ ನಾಗರಾಜ್ ಮತ್ತು ಶಾಸಕ ಡಾ.ಕೆ.ಸುಧಾಕರ್ ಅವರು ಚಿತ್ರಗಳನ್ನು ಒಳಗೊಂಡ ಫ್ಲೆಕ್ಸ್, ಬ್ಯಾನರ್‌ಗಳು ಎಲ್ಲೆಡೆ ರಾರಾಜಿಸುತ್ತಿದ್ದವು. ಖುದ್ದು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಸಲು ಯೋಜನೆ ರೂಪಿಸಲಾಗಿತ್ತು.

ಅದಕ್ಕಾಗಿ ಕಣಜೇನಹಳ್ಳಿಯಲ್ಲಿ ನಾಗರಾಜ್ ಅವರ ಮನೆ ಮತ್ತು ಬಳಿಯಲ್ಲಿಯೇ ಸಾಕಷ್ಟು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೃಹತ್ ಶಾಮಿಯಾನ ಹಾಕಲಾಗಿತ್ತು. ಸುಮಾರು 5,000 ಜನರಿಗೆ ಬಾಡೂಟದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಸೋಮವಾರದಿಂದ ಮಂಗಳವಾರ ಬೆಳಿಗ್ಗೆ 11 ಗಂಟೆ ವರೆಗೆ ನಾಗರಾಜ್ ಅವರ ಮನೆ ಮತ್ತು ಕಾಂಗ್ರೆಸ್ ಮುಖಂಡರಲ್ಲಿ ಸಂಭ್ರಮ ಮನೆ ಮಾಡಿತ್ತು.

ಆದರೆ ಮುಖ್ಯಮಂತ್ರಿ ಅವರು ಮೆಗಾ ಡೇರಿ ತಲುಪುವ ಹೊತ್ತಿಗೆ ನೀತಿ ಸಂಹಿತೆ ಘೋಷಣೆಯಾದ ಪರಿಣಾಮ ಸಿದ್ದರಾಮಯ್ಯ ಅವರ ನಿಗದಿತ ಕಾರ್ಯಕ್ರಮಗಳೆಲ್ಲವೂ ರದ್ದಾಗಿ ಹೋದವು. ಮುಖ್ಯಮಂತ್ರಿ ಅವರು ನಾಗರಾಜ್ ಅವರ ನಿವಾಸಕ್ಕೆ ಬಂದರೂ ಸಾರ್ವಜನಿಕವಾಗಿ ವೇದಿಕೆ ಕಾರ್ಯಕ್ರಮದಲ್ಲಿ ಕಾಣಸಿಕೊಳ್ಳದೆ, ಮನೆ ಒಳಗೆಯೇ ಔಪಚಾರಿಕ ಮಾತು ಕತೆ, ಮಾಲಾರ್ಪಣೆಯೊಂದಿಗೆ ಪಕ್ಷ ಸೇರ್ಪಡೆ ‘ಶಾಸ್ತ್ರ’ ಮುಗಿಸಿ ಆತುರವಾ ಗಿಯೇ ಖಾಸಗಿ ವಾಹನದಲ್ಲಿ ಬೆಂಗಳೂರಿಗೆ ವಾಪಸಾದರು.

ಬಳಿಕ ಮನೆ ಪಕ್ಕದಲ್ಲಿಯೇ ಇದ್ದ ವೇದಿಕೆಯಲ್ಲಿ ನಾಗರಾಜ್ ಅವರಿಗೆ ಕಾಂಗ್ರೆಸ್ ಮುಖಂಡರು ಮಾಲೆ ಗಳು ಹಾಕಿ ಅಭಿನಂದಿಸಿದರು. ಈ ವೇಳೆ ನಾಗರಾಜ್ ಅವರು ಮಾತ ನಾಡಲು ಆರಂಭಿಸುತ್ತಿದ್ದಂತೆ ಪೊಲೀ ಸರು ನೀತಿ ಸಂಹಿತೆ ಕಾರಣ ಒಡ್ಡಿ ಮಾತು ಮುಗಿಸುವಂತೆ ಮನವಿ ಮಾಡಿದರು. ಅಷ್ಟರಲ್ಲಾಗಲೇ ಬಾಡೂಟದ ಮೊದಲ ಪಂಕ್ತಿ ಕೈತೊಳೆದು ಎದ್ದಿತ್ತು.

ಊಟಕ್ಕೆ ಎರಡನೇ ಪಂಕ್ತಿಯಲ್ಲಿ ಜನರು ಕುಳಿತುಕೊಳ್ಳುವ ಹೊತ್ತಿಗೆ ಎಸ್ಪಿ ಕಾರ್ತಿಕ್ ರೆಡ್ಡಿ, ಮಾದರಿ ನೀತಿ ಸಂಹಿತೆ (ಎಂಸಿಸಿ) ನೋಡಲ್ ಅಧಿಕಾರಿ ಗುರುದತ್ ಹೆಗ್ಡೆ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಪೊಲೀಸರು ಊಟಕ್ಕೆ ಕುಳಿತವರನ್ನು ಖಾಲಿ ಮಾಡಿಸಿ, ಅಡುಗೆ ಮತ್ತು ಅಲ್ಲಿದ್ದ ಪರಿಕರಗಳನ್ನು ಜಪ್ತಿ ಮಾಡಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಕೊನೆಗೆ ನ್ಯಾಯಾಧೀಶರ ಆದೇಶದಂತೆ ಅಡುಗೆ ಪದಾರ್ಥವನ್ನು ಪೊಲೀಸರು ನಾಶ ಮಾಡಿದರು.

ನಾಗರಾಜ್ ಅವರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಮೊದಲ ಪ್ರಕರಣ ದಾಖಲಾಗಿದೆ. ಇದರಿಂದಾಗಿ ಸಂಭ್ರಮ ಮನೆ ಮಾಡಬೇಕಾದ ಮನೆಯಲ್ಲಿ ಮತ್ತು ಕಾಂಗ್ರೆಸ್ ಪಾಳೆಯದಲ್ಲಿ ಸದ್ಯ ಬೇಸರ ಮನೆ ಮಾಡಿದೆ.

ಮೊರೆ ಇಟ್ಟ ನಾಗರಾಜ್

ಪೊಲೀಸರು ಪ್ರಕರಣ ದಾಖಲಿಸಲು ಮುಂದಾಗುತ್ತಿದ್ದಂತೆ ಕೆ.ವಿ.ನಾಗರಾಜ್ ಅವರು ಕಾರ್ತಿಕ್ ರೆಡ್ಡಿ ಅವರಿಗೆ ಪ್ರಕರಣ ದಾಖಲಿಸದಂತೆ ಮೊರೆ ಇಟ್ಟರು. ‘ಮುಖ್ಯಮಂತ್ರಿ ಅವರನ್ನು ಮಾತನಾಡಿಸಿ ಕಳುಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಭೋಜನ ಕೂಟ ನಡೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನೀತಿ ಸಂಹಿತೆ ಬರುತ್ತದೆ ಎನ್ನುವುದು ಗೊತ್ತಿರಲಿಲ್ಲ. ಹೀಗಾಗುತ್ತದೆ ಎಂದು ಗೊತ್ತಿದ್ದರೆ ಊಟದ ಆಯೋಜನೆ ಮಾಡುತ್ತಿರಲಿಲ್ಲ. ದಯವಿಟ್ಟು ಕ್ಷಮಿಸಿ. ಊಟ ತೆಗೆದುಕೊಂಡು ಹೋಗಬೇಡಿ. ಮನೆಗಳಿಗೆ ಕೊಟ್ಟು ಬಿಡುತ್ತೇವೆ. ಬೇಡವಾದರೆ ಬಾವಿಯಲ್ಲಾದರೂ ಹಾಕುತ್ತೇವೆ’ ಎಂದು ಮನವಿ ಮಾಡಿಕೊಂಡರು.

ಪಟ್ಟು ಸಡಿಲಿಸದ ಅಧಿಕಾರಿಗಳು

ಕಾರ್ತಿಕ್ ರೆಡ್ಡಿ ಅವರು ನಾಗರಾಜ್ ಅವರನ್ನು ಕುರಿತು, ‘ನೀತಿ ಸಂಹಿತೆ ಘೋಷಣೆಗೂ ಮುನ್ನ ಸೇರಿದಂತೆ ನಿಮಗೆ ಬೆಳಿಗ್ಗೆಯಿಂದ ಮೂರು ಬಾರಿ ಊಟದ ಕಾರ್ಯಕ್ರಮ ರದ್ದುಪಡಿಸುವಂತೆ ಸೂಚನೆ ನೀಡಿರುವೆ. ಆಗ ಒಪ್ಪಿಕೊಂಡವರು ಬಳಿಕ ಊಟ ಹಾಕಿಸಿದ್ದು ಏಕೆ? ಆಯೋಜಕರು ನೀವು ಆಗಿರುವುದರಿಂದ ಇದಕ್ಕೆಲ್ಲ ನೀವೇ ಹೊಣೆಗಾರರು. ನೀತಿ ಸಂಹಿತೆ ಜಾರಿಗೆ ಬಂದಾಗ ಈ ರೀತಿ ಊಟ ಹಾಕುವುದು ಮತದಾರರಿಗೆ ಆಮಿಷ ಒಡ್ಡಿದಂತೆ. ಕಾನೂನಿನ ಪ್ರಕಾರ ಇಲ್ಲಿರುವುದೆಲ್ಲ ಜಪ್ತಿ ಮಾಡಿ ಕೋರ್ಟ್‌ಗೆ ಹಾಜರುಪಡಿಸುತ್ತೇವೆ. ಅಲ್ಲಿಂದಲೇ ಬಿಡಿಸಿಕೊಳ್ಳಿ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿ ಅಲ್ಲಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT