ಬಾಯಾರಿಕೆ ನೀಗಲು...

7

ಬಾಯಾರಿಕೆ ನೀಗಲು...

Published:
Updated:
ಬಾಯಾರಿಕೆ ನೀಗಲು...

ಬೇಸಿಗೆಗೂ ಬಾಯಾರಿಕೆಗೂ ಅವಿನಾಭಾವ ನಂಟು. ಚುಮುಚುಮು ಚಳಿಯನ್ನು ಸರಿಸಿ ಬೇಸಿಗೆ ಕಾಲಿಡುತ್ತಿದ್ದಂತೆಯೇ ನಮಗರಿವಿಲ್ಲದೆ ದ್ರವಾಹಾರ ಸೇವನೆ ಹೆಚ್ಚುತ್ತದೆ. ಅದರಲ್ಲೂ ನೀರು, ಎಳನೀರು, ಜ್ಯೂಸ್‌ಗಳು, ತಂಪು ಪಾನೀಯಗಳು ದೇಹವನ್ನು ಸೇರುವುದು ಮಾಮೂಲಿ. ಬೇಸಿಗೆ ಕಾಲದಲ್ಲಿ ನೀರು ಸೇವನೆ ಹೇಗಿರಬೇಕು, ಯಾವ ಪ್ರಮಾಣದಲ್ಲಿರಬೇಕು ಎನ್ನುವ ಕುರಿತು ಆಯುರ್ವೇದ ತಜ್ಞ ಡಾ.ಎನ್‌ ಅನಂತರಾಮನ್‌ ಸಲಹೆ ನೀಡಿದ್ದಾರೆ.

ಹಸಿವಾದಾಗ ಹೇಗೆ ಊಟ ಮಾಡುತ್ತೇವೆಯೋ ಹಾಗೆ ಬಾಯಾರಿದಾಗ ನೀರನ್ನು ಕುಡಿಯುವುದು ಸಹಜ ಪ್ರಕ್ರಿಯೆ. ಆದರೆ ಬೇಸಿಗೆಯಲ್ಲಿ ಹೆಚ್ಚೆಚ್ಚು ನೀರು ಸೇವಿಸಬೇಕು ಎನ್ನುವ ಕಾರಣಕ್ಕೆ ಅನೇಕರು ಪ್ರಜ್ಞಾಪೂರ್ವಕವಾಗಿ ಯಥೇಚ್ಛವಾಗಿ ನೀರು ಸೇವಿಸುತ್ತಾರೆ. ಆದರೆ ಅನಗತ್ಯವಾಗಿ, ಅತಿಯಾಗಿಯೂ ನೀರನ್ನು ಸೇವಿಸುವುದು ಸರಿಯಲ್ಲ. ದೇಹಕ್ಕೆ ಅಗತ್ಯ ಇರುವುದಕ್ಕಿಂತ ಹೆಚ್ಚಿನ ನೀರು ಸೇವಿಸುವುದರಿಂದ ದೇಹದ ಹಾಗೂ ಮೂತ್ರಪಿಂಡಗಳ ಮೇಲೆ ಒತ್ತಡ ಹೆಚ್ಚುತ್ತದೆ. ಇದು ಮುಂದೆ ನಾನಾ ರೀತಿಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಹೀಗಾಗಿ ಬಾಯಾರಿಕೆ ನೀಗುವಷ್ಟು ಮಾತ್ರ ನೀರು ಸೇವಿಸಬೇಕು.

ದೇಹಕ್ಕೆ ನೀರು ಅತಿಯಾಗಲೂ ಬಾರದು, ಕಡಿಮೆ ಆಗಲೂ ಬಾರದು. ನೀರನ್ನು ಒಂದೇ ಬಾರಿಗೆ ಕುಡಿಯುವುದೂ ಸರಿಯಲ್ಲ ಅಥವಾ ಸಾಕಷ್ಟು ಸಮಯದವರೆಗೆ ನೀರು ಕುಡಿಯದೇ ಇದ್ದರೂ ದೇಹಕ್ಕೆ ಹಾನಿ. ಹೀಗಾಗಿ ಬಾಯಾರಿಕೆ ಆಗಿರಲಿ ಬಿಡಲಿ ನೀರನ್ನು ಆಗಾಗ ಕುಡಿಯಬೇಕು. ಇದರಿಂದ ಪಚನಕ್ರಿಯೆಯೂ ಸರಿಯಾಗಿ ಆಗುತ್ತದೆ. ಪ್ರತಿ ಬಾರಿ ನೀರು ಸೇವಿಸುವಾಗಲೂ ಗುಟುಕು ಗುಟುಕಾಗಿ ಸೇವಿಸಬೇಕು. ಒಂದೇ ಸಮನೆ ನೀರು ಸೇವಿಸುವುದರಿಂದ ಅದು ಶ್ವಾಸಕೋಶಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಕೆಮ್ಮು ಪ್ರಾರಂಭವಾಗುವ ಅಪಾಯವೂ ಇರುತ್ತದೆ.

ಇನ್ನೂ ಅನೇಕರಿಗೆ ಹೊರಗಡೆಯಿಂದ ಮನೆಗೆ ಬಂದಕೂಡಲೇ ನೀರು ಸೇವಿಸುವ ಅಭ್ಯಾಸ ಇರುತ್ತದೆ. ಇದು ಬಹಳ ತಪ್ಪು. ಮನೆಗೆ ಬಂದು ಕೆಲವು ಸಮಯ ವಿಶ್ರಾಂತಿ ಪಡೆದು ನಂತರ ನೀರು ಸೇವಿಸಬೇಕು. ಕ್ರೀಡಾಪ‍ಟುಗಳನ್ನೇ ನೋಡಿ, ಆಟವಾಡಿ ಪೆವಿಲಿಯನ್‌ಗೆ ಬಂದ ತಕ್ಷಣ ಅವರು ನೀರು ಸೇವಿಸುವುದಿಲ್ಲ. ಬಾಯಲ್ಲಿ ಕ್ಷಣಕಾಲ ನೀರನ್ನು ಇಟ್ಟುಕೊಂಡು ಅದನ್ನು ಉಗುಳುತ್ತಾರೆ. ಅತಿಯಾದ ಆಯಾಸವಾದಾಗ ನೀವೂ ಹೀಗೆ ಮಾಡಬಹುದು. ಸ್ವಲ್ಪ ದಣಿವಾರಿದ ನಂತರ ನೀರು ಕುಡಿಯಿರಿ.

ಕೆಲವರಿಗೆ ಬಿಸಿನೀರು ಕುಡಿಯಬೇಕೇ, ತಣ್ಣೀರು ಕುಡಿಯಬೇಕೇ ಎನ್ನುವ ಗೊಂದಲವೂ ಇರುತ್ತದೆ. ಅವರವರ ದೇಹ ಪ್ರಕೃತಿಗೆ ಅನುಗುಣವಾಗಿ ನೀರು ಆಯ್ದುಕೊಳ್ಳಬೇಕು. ಶೀತ, ಕೆಮ್ಮು, ಅಸ್ತಮಾ ಪ್ರಕೃತಿ ಇರುವವರು ಬಿಸಿ ನೀರು ಸೇವಿಸುವುದು ಒಳ್ಳೆಯದು. ಆಯುರ್ವೇದದ ಪ್ರಕಾರ ಬೆಳಿಗ್ಗೆ ಎದ್ದ ತಕ್ಷಣ ನೀರು, ಆಹಾರ ಸೇವನೆಯ ನಂತರ ಮಜ್ಜಿಗೆ, ರಾತ್ರಿ ಮಲಗುವುದಕ್ಕೂ ಮುಂಚೆ ಹಾಲು ಸೇವನೆ ಮಾಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಎಂಟು ಬೊಗಸೆಯಷ್ಟು ನೀರು ಕುಡಿಯಬೇಕು. ಅಂದರೆ ಸುಮಾರು ಅರ್ಧ ಲೀಟರ್‌ನಷ್ಟು ನೀರು ಕುಡಿಯಬೇಕು. ಹೀಗೆ ನೀರು ಕುಡಿಯುವುದರಿಂದ ದೇಹದಲ್ಲಿನ ಆಮ್ಲ ಅಂಶ ಹೊರಗೆ ಹೋಗಿ ಆಸಿಡಿಟಿ ಸಮಸ್ಯೆ ಕಡಿಮೆಯಾಗುತ್ತದೆ.

ಕೆಲವರು ದಿನಕ್ಕೆ ಐದರಿಂದ ಆರು ಲೀಟರ್‌ ನೀರು ಸೇವಿಸಬೇಕು ಎನ್ನುವ ಧಾವಂತಕ್ಕೆ ಬೀಳುತ್ತಾರೆ. ಆದರೆ ಆರೋಗ್ಯವಂತ ಮಧ್ಯ ವಯಸ್ಸಿನ ವ್ಯಕ್ತಿ ದಿನಕ್ಕೆ ಒಂದುವರೆ ಲೀಟರ್‌ನಷ್ಟು ನೀರು ಸೇವಿಸಿದರೆ ಸಾಕು. ಬೇರೆ ಬೇರೆ ದ್ರವಾಹಾರಗಳನ್ನು ಸೇವಿಸುವುದರಿಂದ ಇಷ್ಟು ನೀರು ಸಾಕಾಗುತ್ತದೆ.

ಬೇಸಿಗೆ ಕಾಲದಲ್ಲಿ ನೀರಿನ ಜೊತೆಗೆ ನೀರಿನಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳನ್ನೂ ಹೆಚ್ಚಾಗಿ ಸೇವಿಸಬೇಕು. ಪುದೀನಾ, ನಿಂಬೆ, ಬೇಲದ ಹಣ್ಣಿನಿಂದ ಮಾಡಿದ ಜ್ಯೂಸ್‌ಗಳನ್ನೂ ಹೆಚ್ಚಾಗಿ ಸೇವಿಸಿ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವಲ್ಲಿ ಮಜ್ಜಿಗೆಯದ್ದೂ ಮಹತ್ವದ ಪಾತ್ರ. ಇನ್ನು ಕಲ್ಲಂಗಡಿ ಹಣ್ಣು, ಕರಬೂಜ, ಕಪ್ಪು ದ್ರಾಕ್ಷಿ ಶ್ರೇಷ್ಠ. ಸೋರೆಕಾಯಿ, ಬೂದುಗುಂಬಳಕಾಯಿ, ಸೌತೆಕಾಯಿಗಳಲ್ಲಿಯೂ ನೀರಿನ ಅಂಶ ಹೇರಳವಾಗಿರುವುದರಿಂದ ಅವುಗಳನ್ನು ಹೆಚ್ಚಾಗಿ ಬಳಸಿ. ರಾಮನವಮಿ ಪಾನಕ, ಕೋಸಂಬರಿ ಪರಿಕಲ್ಪನೆ ಬಂದಿದ್ದೂ ಬಾಯಾರಿಕೆಯ ನೀಗುವ ಕಾರಣಗಳಿಂದಾಗಿಯೇ.

ಇತ್ತೀಚೆಗೆ ಫಿಟ್‌ನೆಸ್‌ ಬಗೆಗೆ ಜನರು ಹೆಚ್ಚೆಚ್ಚು ಜಾಗೃತರಾಗಿದ್ದಾರೆ. ಇದು ಒಳ್ಳೆಯದೇ. ವ್ಯಾಯಾಮಕ್ಕೂ ಮುಂಚೆ ನೀರು ಕುಡಿಯಬೇಕು. ವ್ಯಾಯಾಮದ ನಡುವೆ ಹಾಗೂ ವ್ಯಾಯಾಮ ಮುಗಿದ ತಕ್ಷಣವೂ ನೀರನ್ನು ಸೇವಿಸಬಾರದು. ಅತ್ಯಂತ ಅವಶ್ಯಕ ಎನಿಸಿದರೆ ಬಾಯಿ ತಂಪಾಗುವಷ್ಟು ಮಾತ್ರ ನೀರು ಸೇವಿಸಿ. ಇನ್ನು ಬೇಸಿಗೆಯಲ್ಲಿ ಅತಿಯಾದ ವ್ಯಾಯಾಮವೂ ಸರಿಯಲ್ಲ.

ರಾತ್ರಿ ಮಲಗುವಾಗ ಅತಿಯಾದ ನೀರು ಸೇವನೆ ಸರಿಯಲ್ಲ. ಇದರಿಂದ ನಿದ್ರಾಭಂಗ ಉಂಟಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ದೇಹಕ್ಕೆ ಅಗತ್ಯವಾದ ನೀರನ್ನು ಹಗಲು ಹೆಚ್ಚೆಚ್ಚು ಸೇವಿಸಬೇಕು.

**

ಇವಿಷ್ಟು ನಿಮ್ಮ ಬ್ಯಾಗ್‌ನಲ್ಲಿರಲಿ

* ನಿಮ್ಮ ಬ್ಯಾಗ್‌ನಲ್ಲಿ ನೀರಿನ ಬಾಟಲಿ ಸದಾ ಇರಲಿ.

* ಹೆಚ್ಚೆಚ್ಚು ನೀರು ಸೇವಿಸುವುದು ನಿಮಗೆ ಇಷ್ಟವಾಗದೇ ಇದ್ದಲ್ಲಿ ಹೊರ ಹೋಗುವಾಗ ನಿಮ್ಮ ಬ್ಯಾಗ್‌ನಲ್ಲಿ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಇಟ್ಟುಕೊಳ್ಳಿ. ಕಿತ್ತಳೆ, ದ್ರಾಕ್ಷಿ, ಸೇಬುಹಣ್ಣು ಇವುಗಳಲ್ಲಿ ಯಾವುದಾದರೂ ಇರಲಿ. ಸಾಧ್ಯವಾದರೆ ನಿಂಬೆ ಹಣ್ಣನ್ನೂ ಇಟ್ಟುಕೊಳ್ಳಿ. ಇದರಿಂದ ನೀರಿನೊಂದಿಗೆ ನಿಂಬೆ ಸೇರಿಸಿ ಜ್ಯೂಸ್‌ ಕೂಡ ಮಾಡಿಕೊಳ್ಳಬಹುದು.

* ಸಿಹಿ ಪಾನೀಯ ಸೇವನೆಯಿಂದ ಪದೇಪದೇ ಬಾಯಾರಿಕೆ ಆಗುವುದಲ್ಲದೆ ಅದರಲ್ಲಿ ಹಾಕಿರುವ ರಾಸಾಯನಿಕ ಪದಾರ್ಥಗಳು ಹಾಗೂ ಸಕ್ಕರೆ ಅಂಶ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹೀಗಾಗಿ ಸಿಹಿ ಪಾನೀಯ ಕುಡಿಯುವುದನ್ನು ಕಡಿಮೆ ಮಾಡಿ.

* ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಾಗೂ ಆರೋಗ್ಯಕರ ಪಾನೀಯ ಎಳನೀರು. ತಾಜಾ ಎಳನೀರು ಸೇವಿಸಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry