ಟೆನ್ಷನ್‌ ಆದಾಗ ಅಡುಗೆ ಮಾಡ್ತೀನಿ!

7

ಟೆನ್ಷನ್‌ ಆದಾಗ ಅಡುಗೆ ಮಾಡ್ತೀನಿ!

Published:
Updated:
ಟೆನ್ಷನ್‌ ಆದಾಗ ಅಡುಗೆ ಮಾಡ್ತೀನಿ!

ನಾನು ಮೊದಲ ಬಾರಿ ಅಡುಗೆ ಪ್ರಯೋಗ ಮಾಡಿದಾಗ ಮೂರು ಅಥವಾ ನಾಲ್ಕನೇ ಕ್ಲಾಸಿನಲ್ಲಿದ್ದೆ ಅಂತ ನೆನಪು. ನಾನು ಮಾಡಿದ ‘ಅಡುಗೆ’ ಏನು ಗೊತ್ತಾ? ಪುಳಿಯೋಗರೆ ಗೊಜ್ಜಿಗೆ ಅನ್ನ ಹಾಕಿ ಕಲಸಿದ್ದು! ಅಮ್ಮ, ಅಜ್ಜಿ ಮನೆಯಿಂದ ಹೊರಗೆ ಹೋಗುವಾಗ ದಿಢೀರ್‌ ಅಂತ ಮಾಡಿಕೊಳ್ಳಬಹುದಾದ ಪುಳಿಯೋಗರೆ, ಚಿತ್ರಾನ್ನ ಗೊಜ್ಜು ತಯಾರಿಸಿ ಮನೆಯಲ್ಲಿಟ್ಟಿರುತ್ತಿದ್ದರು. ಹಾಗಾಗಿ ಆಗ ಮನೆಯಲ್ಲಿ ಅಮ್ಮ ಇಲ್ಲದಿದ್ದರೂ ಪುಳಿಯೋಗರೆ ಮಾಡಿಕೊಂಡು ತಿನ್ನುತ್ತಿದ್ದೆ.

ಬರುಬರುತ್ತಾ ಬೇರೆ ಬೇರೆ ರೀತಿಯ ಅಡುಗೆಗಳನ್ನು ಕಲಿಯುತ್ತಾ ಬಂದೆ. ನೀರು ದೋಸೆ, ಅಕ್ಕಿ ರೊಟ್ಟಿ, ಚಿಕನ್‌ ಕರಿ ಹೀಗೆ ಹಲವಾರು ಅಡುಗೆಗಳನ್ನು ನಾನು ಚೆನ್ನಾಗೇ ಮಾಡ್ತೀನಿ. ನನಗೆ ತಿನ್ನಲು ಸಹ ಸ್ಥಳೀಯ ರುಚಿಯ ಆಹಾರ ತಿನಿಸುಗಳೇ ಇಷ್ಟ. ಅನಿವಾರ್ಯವಾದಾಗ ಮಾತ್ರ ಹೊರಗೆ ತಿ‌ನ್ತೀನಿ. ಇಲ್ಲದಿದ್ದರೆ ಮನೆಯಲ್ಲಿ ಮಾಡಿದ, ಅದರಲ್ಲೂ ಅಮ್ಮನ ಕೈರುಚಿಯೇ ನನ್ನ ಫೇವರಿಟ್‌.

ನನಗೆ ಅಡುಗೆ ಮಾಡುವುದು ತುಂಬ ಇಷ್ಟ. ಅದರಲ್ಲೂ, ಒತ್ತಡ ಅನಿಸಿದಾಗ ಅಡುಗೆ ಮನೆಗೆ ಹೋಗಿ ಏನಾದರೂ ಸವಿರುಚಿ ಮಾಡಿಬಿಡುತ್ತೇನೆ. ಅಂದರೆ ನನ್ನ ಮಟ್ಟಿಗೆ ಅಡುಗೆ ಮಾಡುವುದೆಂದರೆ ಒತ್ತಡ ನಿಭಾಯಿಸುವ ಮಾರ್ಗ. ನನಗೆ ಸೌತ್‌ ಮತ್ತು ನಾರ್ತ್ ಇಂಡಿಯನ್‌, ಕಾಂಟಿನೆಂಟಲ್‌, ಚೈನೀಸ್‌ ಅಡುಗೆ ಗೊತ್ತಿದೆ. ಆಗಾಗ ಹೊಸ ಪ್ರಯೋಗ ಮಾಡುತ್ತಿರುತ್ತೇನೆ. ಅಡುಗೆ ಮಾಡುವುದು ನನ್ನ ಹವ್ಯಾಸ ಆಗಿಬಿಟ್ಟಿದೆ. ಶೂಟಿಂಗ್‌ನಿಂದ ಬಿಡುವು ಸಿಕ್ಕಾಗ ಅಡುಗೆಮನೆ ಕಡೆ ಹೋಗಿ ಹೊಸ ರುಚಿ ಪ್ರಯೋಗ ಮಾಡುತ್ತೇನೆ.

ನಾನು ಆಹಾರ ತಯಾರಿಸುವಾಗ ಡಯಟ್‌, ಕೊಬ್ಬು ಎಂದೆಲ್ಲಾ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾವಿನ್ನೂ ಯಂಗ್. ಈ ವಯಸ್ಸಿನಲ್ಲಿ ಉಪ್ಪು, ಖಾರ ಎಲ್ಲಾ ತಿನ್ನಬೇಕು. ಸಪ್ಪೆ ಆಹಾರದಿಂದ ಮೂಡ್‌ ಹಾಳಾಗುತ್ತದೆ. ಅಷ್ಟು ಯಾಕೆ ಕಷ್ಟಪಡಬೇಕು. ನಮ್ಮ ಆರೋಗ್ಯಕ್ಕೆ ದಿನಕ್ಕೆ ಒಂದು ಚಮಚ ತುಪ್ಪ ತಿನ್ನಬೇಕು. ಆ ತರನೇ ಆರೋಗ್ಯಯುತ ಆಹಾರ ನಾನು ಸೇವಿಸುತ್ತೇನೆ. ಆದರೂ ಜಂಕ್‌ಫುಡ್‌, ಹೆಚ್ಚು ಮಸಾಲಾ ಹಾಕಿದ ಆಹಾರದಿಂದ ನಾನು ದೂರ.

ಚಿಕನ್‌ ಬ್ಲ್ಯಾಕ್‌ ಪೆಪ್ಪರ್‌

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ –1/2 ಕೆ.ಜಿ, 1 ಚಮಚ ಎಣ್ಣೆ, 2 ಈರುಳ್ಳಿ, ಅರಿಶಿಣ, ಉಪ್ಪು, ಶುಂಠಿ– ಬೆಳ್ಳುಳ್ಳಿ ಪೇಸ್ಟ್‌– 2 ಚಮಚ, ಹಸಿಮೆಣಸಿನಕಾಯಿ 2, ಟೊಮೆಟೊ 2, ಗರಂ ಮಸಾಲ ಪುಡಿ, ಚಕ್ಕೆ ಲವಂಗ, ಕೊತ್ತಂಬರಿ ಸೊಪ್ಪು ಸ್ವಲ್ಪ, ತಲಾ 2 ಚಮಚ ಕಾಳುಮೆಣಸು ಪುಡಿ ಮತ್ತು ಅಚ್ಚಖಾರದಪುಡಿ.

ಮಾಡುವ ವಿಧಾನ: ಮೊದಲು ತವಾದಲ್ಲಿ ಎಣ್ಣೆ ಹಾಕದೇ ಕಾಳುಮೆಣಸು ಪುಡಿ ಹಾಗೂ ಅಚ್ಚಖಾರದಪುಡಿಯನ್ನು ಒಟ್ಟಿಗೆ ಹಾಕಿ ಸ್ವಲ್ಪ ಹುರಿದುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಎಣ್ಣೆ, ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸಿನ ಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಿ, ಬಳಿಕ ತೊಳೆದಿಟ್ಟ ಕೋಳಿ ಮಾಂಸ ಹಾಕಿ ಬೇಯಿಸಿ. ಅದಕ್ಕೆ ಸಣ್ಣದಾಗಿ ಕತ್ತರಿಸಿದ ಟೊಮೆಟೊ, ಗರಂ ಮಸಾಲ, ಚಕ್ಕೆ ಲವಂಗ, ಉಪ್ಪು ಹಾಕಿ ಬೇಯಿಸಬೇಕು. ಕೊನೆಯಲ್ಲಿ ಹುರಿದಿಟ್ಟುಕೊಂಡ ಕಾಳುಮೆಣಸು, ಅಚ್ಚಖಾರದ ಪುಡಿಯನ್ನು ಮೇಲಿಂದ ಉದುರಿಸಿ ಮಿಶ್ರ ಮಾಡಬೇಕು.

ಈ ಹಂತದಲ್ಲಿ ತೇವ ಎಲ್ಲಾ ಆರಿ ಡ್ರೈ ಆಗಿರಬೇಕು. ಅದರ ಮೇಲೆ ಕೊತ್ತಂಬರಿ ಸೊಪ್ಪು ಉದುರಿಸಿದರೆ ಚಿಕನ್‌ ಬ್ಲ್ಯಾಕ್‌ ಪೆಪ್ಪರ್‌ ರೆಡಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry