ಅಣ್ವಸ್ತ್ರ ನಾಶ: ಷಿ ಬೆಂಬಲ ಕೋರಿದ ಕಿಮ್

7
ಚೀನಾಕ್ಕೆ ಉತ್ತರ ಕೊರಿಯಾ ಅಧ್ಯಕ್ಷರ ರಹಸ್ಯ ಭೇಟಿ: ದ್ವಿಪಕ್ಷೀಯ ಮಾತುಕತೆ

ಅಣ್ವಸ್ತ್ರ ನಾಶ: ಷಿ ಬೆಂಬಲ ಕೋರಿದ ಕಿಮ್

Published:
Updated:
ಅಣ್ವಸ್ತ್ರ ನಾಶ: ಷಿ ಬೆಂಬಲ ಕೋರಿದ ಕಿಮ್

ಬೀಜಿಂಗ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಸಭೆಗೆ ಪೂರ್ವಭಾವಿಯಾಗಿ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಈಚೆಗೆ ಚೀನಾಕ್ಕೆ ರಹಸ್ಯ ಭೇಟಿ ನೀಡಿ,  ಅಧ್ಯಕ್ಷ ಷಿ ಜಿನ್‌ಪಿಂಗ್ ಜೊತೆ ಮಾತುಕತೆ ನಡೆಸಿದ್ದಾರೆ. ತಮ್ಮಲ್ಲಿರುವ ಅಣ್ವಸ್ತ್ರ ನಾಶಮಾಡುವುದಾಗಿ ಈಗಾಗಲೇ ಘೋಷಿಸಿರುವ ಕಿಮ್, ಇದಕ್ಕೆ ಚೀನಾ ಬೆಂಬಲ ಕೋರಿದ್ದಾರೆ.

ಮೇ ತಿಂಗಳಲ್ಲಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಜೊತೆ ಕಿಮ್ ಮಾತುಕತೆ ನಡೆಸುವ ಸಾಧ್ಯತೆಯಿದೆ. ‘ಅಣ್ವಸ್ತ್ರ ನಾಶಗೊಳಿಸುವ ನಮ್ಮ ಯತ್ನಕ್ಕೆ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಸೌಹಾರ್ದದಿಂದ ಪ್ರತಿಕ್ರಿಯಿಸಿದಲ್ಲಿ, ಶಾಂತಿ ಹಾಗೂ ಸ್ಥಿರತೆಯ ವಾತಾವರಣ ನಿರ್ಮಿಸಿದಲ್ಲಿ, ಅಣ್ವಸ್ತ್ರ ನಿಶಸ್ತ್ರೀಕರಣ ವಿಷಯ ಇತ್ಯರ್ಥವಾಗಲಿದೆ’ ಎಂದು ಕಿಮ್ ಹೇಳಿದ್ದಾರೆ.

‘ವಿಶೇಷ ಸಮಯದಲ್ಲಿ ಕಿಮ್ ಅವರು ಚೀನಾಗೆ ಭೇಟಿ ನೀಡಿದ್ದಾರೆ. ಇದು ಅತ್ಯಂತ ಮಹತ್ವದ ಭೇಟಿ’ ಎಂದು ಷಿ ಅವರು ಹರ್ಷ ವ್ಯಕ್ತಪಡಿಸಿದರು.

ಮಿತ್ರದೇಶವಾದ ಉತ್ತರ ಕೊರಿಯಾ ಜೊತೆ ಬೆಂಬಲವಾಗಿ ನಿಲ್ಲುವ ಭರವಸೆಯನ್ನು ಅವರು ನೀಡಿದರು. ಮೈತ್ರಿಯನ್ನು ಇನ್ನಷ್ಟು ಬಲಪಡಿಸುವ ಇಚ್ಛೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

ಟ್ರಂಪ್‌ಗೆ ಮಾಹಿತಿ ನೀಡಿದ್ದ ಷಿ: ಕಿಮ್ ಜಾಂಗ್ ಉನ್ ಅವರು ಚೀನಾಕ್ಕೆ ಭೇಟಿ ನೀಡಿದ್ದಾರೆ ಎಂದು ಚೀನಾ ಅಧ್ಯಕ್ಷರು ಡೊನಾಲ್ಡ್ ಟ್ರಂಪ್‌ಗೆ ಮಂಗಳವಾರ ಮಾಹಿತಿ ನೀಡಿದ್ದರು. ‘ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸುವ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಇದನ್ನು ಮುಖ್ಯ ಬೆಳವಣಿಗೆ ಎಂದು ಅಮೆರಿಕ ಪರಿಗಣಿಸುತ್ತದೆ’ ಎಂದು ಶ್ವೇತಭವನ ತಿಳಿಸಿದೆ.

ನಾಲ್ಕು ದಿನ ಇದ್ದು ಹೋದ ಕಿಮ್!

ಕಿಮ್ ಅವರು ಚೀನಾಗೆ ಭೇಟಿ ನೀಡಿದ್ದಾರೆ ಎಂದು ಎರಡು ದಿನಗಳಿಂದ ವದಂತಿ ಇತ್ತು. ಕಿಮ್ ಅವರು ಭೇಟಿ ಮುಗಿಸಿ ಉತ್ತರ ಕೊರಿಯಾಗೆ ವಾಪಸಾದ ಬಳಿಕ ಇದು ಖಚಿತಪಟ್ಟಿದೆ. ಕಿಮ್ ಅವರ ತಂದೆ ಬಳಸುತ್ತಿದ್ದ ರೀತಿಯ ಹಸಿರು ರೈಲು ಬೀಜಿಂಗ್‌ಗೆ ಬಂದಿರುವುದನ್ನು ಜಪಾನ್ ಸುದ್ದಿಸಂಸ್ಥೆ ವರದಿ ಮಾಡಿತ್ತು. ಆದರೆ ಚೀನಾ ಇದನ್ನು ಅಲ್ಲಗಳೆದಿತ್ತು.

ಕಿಮ್ ಅವರು ಷಿ ಆಹ್ವಾನದ ಮೇರೆಗೆ ಭಾನುವಾರದಿಂದ ಬುಧವಾರದವರೆಗೆ, ಒಟ್ಟು ನಾಲ್ಕು ದಿನ ಚೀನಾದಲ್ಲಿದ್ದರು. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಮೊದಲ ವಿದೇಶ ಪ್ರವಾಸ ಇದಾಗಿತ್ತು. ದೇಶವೊಂದರ ಅತ್ಯುನ್ನತ ನಾಯಕರ ಜೊತೆ ನಡೆದ ಮಾತುಕತೆಯೂ ಇದಾಗಿತ್ತು.

*

ಕಿಮ್ ಜಾಂಗ್ ಉನ್ ಅವರು ಅಣ್ವಸ್ತ್ರ ತ್ಯಜಿಸಲು ಇದು ಒಳ್ಳೆಯ ಅವಕಾಶ.

–ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry