ಮಾಹಿತಿ ಸೋರಿಕೆ ಆರೋಪ: ಅಮಾನತು

7

ಮಾಹಿತಿ ಸೋರಿಕೆ ಆರೋಪ: ಅಮಾನತು

Published:
Updated:

ಬೆಂಗಳೂರು: ಸಚಿವಾಲಯದ ವಿವಿಧ ಹುದ್ದೆಗಳಿಗೆ ಬೇಕಾಬಿಟ್ಟಿ ನೇಮಕ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಿಕೆಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆಂಬ ಆರೋಪದ ಮೇಲೆ ಹಿರಿಯ ಮೇಲ್ವಿಚಾರಕ ಎನ್‌.ರಮೇಶ್‌ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸ್ವಚ್ಛತಾ ವಿಭಾಗದ ಜಮೇದಾರ್‌ ರಾಮುಲಮ್ಮ, ಮೇಸ್ತ್ರಿಗಳಾದ ಬೋರೇಗೌಡ ಮತ್ತು  ಧನರಾಜ್‌ ನೀಡಿರುವ ದೂರಿನ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಮಾನತು ಆದೇಶದಲ್ಲಿ ಸಚಿವಾಲಯದ ಅಧೀನ ಕಾರ್ಯದರ್ಶಿ ಎಚ್‌.ಎಸ್‌.ಕಸ್ತೂರಿ ವಿವರಿಸಿದ್ದಾರೆ.

ಇದೇ 5 ರಂದು ಬೆಳಿಗ್ಗೆ ಎನ್‌.ರಮೇಶ್‌ ಸ್ವಚ್ಛತಾ ಸಿಬ್ಬಂದಿ ಜತೆ ಮಾತನಾಡುವಾಗ,  ‘ನೀವು ಎಷ್ಟು ಹಣ ಕೊಟ್ಟು ಇಲ್ಲಿ ಉದ್ಯೋಗ ಪಡೆದಿದ್ದೀರಿ? ನೇಮಕಾತಿ ಸಂಬಂಧ ನೀವು ಯಾರಿಗೆ ಹಣ ಕೊಟ್ಟಿದ್ದೀರಿ? ಕೋಳಿವಾಡ ಅಥವಾ ಮೂರ್ತಿಗೆ ಹಣ ಕೊಟ್ಟಿದ್ದೀರಾ? ಸಚಿವಾಲಯ ನೇಮಕಾತಿಗೊಳ್ಳುವಲ್ಲಿ ಯಾರು ಬ್ರೋಕರ್‌ ಕಾರ್ಯ ನಿರ್ವಹಿಸಿದ್ದಾರೆ? ನಿಮ್ಮ ನೇಮಕಾತಿ ಬಗ್ಗೆ ಪತ್ರಿಕೆಯಲ್ಲಿ ಬರುವಂತೆ ಮಾಡುತ್ತೇನೆ ಮತ್ತು ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ಮಾಡುತ್ತೇನೆ. ಗುರುರಾಜ್‌ ಜತೆ ಸೇರಿ ನೇಮಕಾತಿ ರದ್ದು ಮಾಡಿಸುತ್ತೇನೆ’ ಎಂಬುದಾಗಿ ಹೇಳಿದ್ದಾರೆ. ಹೆದರಿದ ಸಿಬ್ಬಂದಿ ಮೇಲಿನ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಇದೇ 19 ರಂದು ಸ್ವಚ್ಚತಾ ಸಿಬ್ಬಂದಿ ಲಿಖಿತ ದೂರು ನೀಡಿದ್ದಾರೆ. ಈ ದೂರನ್ನು ಖಾತ್ರಿಪಡಿಸಿಕೊಳ್ಳಲು 24 ರಂದು ವಿಧಾನಸಭೆ ಕಾರ್ಯದರ್ಶಿಯವರು ಮೊಗಸಾಲೆಗೆ ಭೇಟಿ ನೀಡಿದಾಗ, ಅಲ್ಲಿರುವ ಸೋಫಾದಲ್ಲಿ ರಮೇಶ್ ಆರಾಮವಾಗಿ ಕುಳಿತಿದ್ದರು. ‘ನಿಮಗೆ ನಿಯೋಜನೆ ಮಾಡಿದ ಶಾಖೆಯಲ್ಲಿ ಕುಳಿತು ಕೆಲಸ ಮಾಡಬೇಕು. ಸೋಫಾ ಮೇಲೆ ಕೂರಬಾರದು’ ಎಂದು ಮೂರ್ತಿ ಹೇಳಿದಾಗ, ‘ಅದನ್ನು ಕೇಳಲು ನೀವು ಯಾರು? ಸ್ವೀಪರ್‌ಗಳು ಸೋಫಾದಲ್ಲಿ ಕೂರಬಹುದಾದರೆ ನಾನ್ಯಾಕೆ ಕೂರಬಾರದು’ ಎಂದು ಮರು ಪ್ರಶ್ನೆ ಹಾಕಿದರು ಮತ್ತು ಮೂರ್ತಿಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

‘ಪ್ರಜಾವಾಣಿ’ ಮತ್ತು ಇತರ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಗಳು ಪ್ರಕಟವಾಗಲು ರಮೇಶ್‌ ಮತ್ತು ಇತರರು ಮಾಹಿತಿ ಸೋರಿಕೆ ಮಾಡಿರು

ವುದು ಕಾರಣ ಎಂಬ ಅನುಮಾನಗಳಿವೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry