ಹಸ್ತಪ್ರತಿಗಳ ಸಂರಕ್ಷಣೆಗೆ ಹೊಸ ಯೋಜನೆ

7
ಧರ್ಮಸ್ಥಳದ ಎಸ್‌ಡಿಎಂ ಸಂಸ್ಕೃತಿ, ಸಂಶೋಧನಾ ಪ್ರತಿಷ್ಠಾನದಿಂದ ರಕ್ಷಣೆ

ಹಸ್ತಪ್ರತಿಗಳ ಸಂರಕ್ಷಣೆಗೆ ಹೊಸ ಯೋಜನೆ

Published:
Updated:
ಹಸ್ತಪ್ರತಿಗಳ ಸಂರಕ್ಷಣೆಗೆ ಹೊಸ ಯೋಜನೆ

ಉಜಿರೆ: ಅಳಿವಿನ ಅಂಚಿನಲ್ಲಿರುವ ಅಮೂಲ್ಯ ಹಸ್ತಪ್ರತಿಗಳ ಸಂರಕ್ಷಣೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಹೊಸ ಯೋಜನೆಯೊಂದನ್ನು ರೂಪಿಸಿದ್ದಾರೆ.

ಶ್ರೀ ಮಂಜುನಾಥೇಶ್ವರ ಸಂಸ್ಕೃತಿ, ಸಂಶೋಧನಾ ಪ್ರತಿಷ್ಠಾನದ ಮೂಲಕ  ಹಸ್ತಪ್ರತಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಾವಿರಾರು ವರ್ಷಗಳಿಂದ ನಮ್ಮ ಹಿರಿಯರು ಕಂಡುಕೊಂಡ ಅನುಭವಗಳು, ಪುರಾಣ, ವ್ಯಾಕರಣ, ಕಾವ್ಯ, ಗಣಿತ, ಆಯುರ್ವೇದ, ಪಾಕಶಾಸ್ತ್ರ, ಗಜಶಾಸ್ತ್ರ, ಕೂಪಶಾಸ್ತ್ರ ಮೊದಲಾದವುಗಳನ್ನು ತಾಳೆಗರಿ ಮತ್ತು ಕಾಗದದ ಹಸ್ತಪ್ರತಿಗಳಲ್ಲಿ ಬರೆದಿಟ್ಟಿದ್ದಾರೆ. ಅವುಗಳು ಜ್ಞಾನದ ಆಕರವಾಗಿದ್ದು, ಅವುಗಳ ಸಂರಕ್ಷಣೆ ಮಾಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ.

‘ಖಾಸಗಿಯವರು, ಮಠ, ಮಂದಿರಗಳು ತಮ್ಮಲ್ಲಿರುವ ಶಿಥಿಲವಾಗುತ್ತಿರುವ ಹಸ್ತಪ್ರತಿಗಳನ್ನು ತಂದು ಕೊಟ್ಟಲ್ಲಿ ಅವುಗಳನ್ನು ಸಂರಕ್ಷಣಾ ವಿಧಿ-ವಿಧಾನಗಳ ಮೂಲಕ ರಾಸಾಯನಿಕಗಳಿಂದ ಶುಚಿಗೊಳಿಸಿ, ಕ್ರಮಬದ್ಧವಾಗಿ ಜೋಡಿಸಿ ಅವರಿಗೆ ಹಿಂದಿರುಗಿಸಲಾಗುವುದು. ಇದು ಉಚಿತ ಯೋಜನೆಯಾಗಿದೆ’ ಎಂದು ಶ್ರೀ ಮಂಜುನಾಥೇಶ್ವರ ಸಂಸ್ಕೃತಿ, ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ.ಎಸ್.ಆರ್. ವಿಘ್ನರಾಜ ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಧರ್ಮಸ್ಥಳದಲ್ಲಿರುವ ಹಸ್ತಪ್ರತಿಗಳನ್ನು ಮಾತ್ರ ವೈಜ್ಞಾನಿಕ ವಿಧಾನಗಳಿಂದ ಸಂರಕ್ಷಿಸಲಾಗಿತ್ತು. ಆದರೆ ಪ್ರಸಕ್ತ ವರ್ಷದಿಂದ ಬೇರೆ ಮಠ, ಮಂದಿರಗಳ ಹಸ್ತಪ್ರತಿಗಳನ್ನು ರಕ್ಷಿಸಿಕೊಡಲಾಗುತ್ತಿದೆ.

ಈಗಾಗಲೇ ಸುಬ್ರಹ್ಮಣ್ಯ ಮಠ, ಹೊಸನಗರದ ಶ್ರೀ ರಾಮಚಂದ್ರಾಪುರ ಮಠ, ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿರುವ ಸಾವಿರಾರು ತಾಡೋಲೆ ಗ್ರಂಥಗಳನ್ನು ಸಂರಕ್ಷಿಸಿ ಕೊಡಲಾಗಿದೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ 70 ಮನೆಗಳಲ್ಲಿದ್ದ 2ಸಾವಿರಕ್ಕೂ ಹೆಚ್ಚು ತಾಡೋಲೆ ಕಟ್ಟುಗಳನ್ನು ಸಂರಕ್ಷಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರತಿಷ್ಠಾನದ ನಿರ್ದೇಶಕರ ಮೊಬೈಲ್ ಸಂಖ್ಯೆ 9741484464 ಅನ್ನು ಸಂಪರ್ಕಿಸಬಹುದು.

–ಆರ್‌.ಎನ್.ಪೂವಣಿ

*

ಪೂರ್ವಜರು ಅನುಭವಗಳನ್ನು ಹಸ್ತಪ್ರತಿಗಳಲ್ಲಿ ಬರೆದಿಟ್ಟಿದ್ದು, ಜ್ಞಾನದ ಆಕರವಾಗಿರುವ ಅವುಗಳ ಸಂರಕ್ಷಣೆ ನಮ್ಮ ಹೊಣೆಗಾರಿಕೆಯೂ ಆಗಿದೆ.

–ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry