ಸಿಎ ಬಳಿ 7 ಲಕ್ಷ ಗ್ರಾಮಗಳ ಮಾಹಿತಿ ಕೋಶ

7
ಭಾರತದ ವಿವಿಧ ಚುನಾವಣೆಗಳಲ್ಲಿ ಹಲವು ಪಕ್ಷಗಳ ಪರವಾಗಿ ಕೆಲಸ ಮಾಡಿದ ಕೇಂಬ್ರಿಜ್‌ ಅನಲಿಟಿಕಾ

ಸಿಎ ಬಳಿ 7 ಲಕ್ಷ ಗ್ರಾಮಗಳ ಮಾಹಿತಿ ಕೋಶ

Published:
Updated:
ಸಿಎ ಬಳಿ 7 ಲಕ್ಷ ಗ್ರಾಮಗಳ ಮಾಹಿತಿ ಕೋಶ

ಲಂಡನ್‌: ಭಾರತದ 600 ಜಿಲ್ಲೆಗಳ ಏಳು ಲಕ್ಷ ಗ್ರಾಮಗಳ ಮಾಹಿತಿಯನ್ನು ಒಳಗೊಂಡ ದತ್ತಾಂಶ ಕೇಂದ್ರವೊಂದನ್ನು ಕೇಂಬ್ರಿಜ್‌ ಅನಲಿಟಿಕಾ (ಸಿಎ) ಹೊಂದಿದೆ. ಈ ಮಾಹಿತಿಯನ್ನು ನಿರಂತರವಾಗಿ ಪರಿಷ್ಕರಿಸಲಾಗುತ್ತಿದೆ ಎಂದು ಕ್ರಿಸ್ಟೊಫರ್‌ ವೈಲಿ ಟ್ವೀಟ್‌ ಮಾಡಿದ್ದಾರೆ.

ಫೇಸ್‌ಬುಕ್‌ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತಿರುವ ಬ್ರಿಟನ್‌ನ ಕೇಂಬ್ರಿಜ್‌ ಅನಲಿಟಿಕಾ ಕಂಪನಿಯು 2003ರಿಂದಲೇ ಭಾರತದಲ್ಲಿ ಕೆಲಸ ಮಾಡುತ್ತಿದೆ ಎಂದು ಕಂಪನಿಯ ಮಾಜಿ ಉದ್ಯೋಗಿ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಕ್ರಿಸ್ಟೊಫರ್‌ ವೈಲಿ ಹೇಳಿದ್ದಾರೆ.

ಸಿಎಯ ಮಾತೃ ಸಂಸ್ಥೆಯಾಗಿರುವ ಸ್ಟ್ರಾಟೆಜಿಕ್‌ ಕಮ್ಯುನಿಕೇಷನ್‌ ಲ್ಯಾಬೊರೇಟರೀಸ್‌ (ಎಸ್‌ಸಿಎಲ್‌) 2010ರ ಬಿಹಾರ ಚುನಾವಣೆ ಸಂದರ್ಭದಲ್ಲಿ ಜೆಡಿಯು ಪರವಾಗಿ ಕೆಲಸ ಮಾಡಿತ್ತು. ಉತ್ತರ ಪ್ರದೇಶದಲ್ಲಿ ಜಾತಿ ಸಮೀಕ್ಷೆಗಳನ್ನೂ ನಡೆಸಿತ್ತು ಎಂದು ವೈಲಿ ತಿಳಿಸಿದ್ದಾರೆ. ಬ್ರಿಟನ್‌ ಸಂಸತ್ತಿನ ಡಿಜಿಟಲ್‌, ಸಂಸ್ಕೃತಿ, ಮಾಧ್ಯಮ ಮತ್ತು ಕ್ರೀಡಾ ಸಮಿತಿಯ ಮುಂದೆ ಸಾಕ್ಷ್ಯ ನುಡಿಯುವಾಗ ಈ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ.

ಭಾರತದಲ್ಲಿ ವ್ಯಾಪಕವಾಗಿ ಕೆಲಸ ಮಾಡುತ್ತಿರುವ ಎಸ್‌ಸಿಎಲ್‌ನ ಗ್ರಾಹಕರಲ್ಲಿ ಕಾಂಗ್ರೆಸ್‌ ಪಕ್ಷವೂ ಒಂದು ಎಂದು ಮಂಗಳವಾರ ಅವರು ಹೇಳಿದ್ದರು.

‘ಭಾರತದ ಪತ್ರಕರ್ತರಿಂದ ವಿವಿಧ ಮಾಹಿತಿಗಳಿಗಾಗಿ ಹಲವು ಕೋರಿಕೆಗಳು ಬಂದಿವೆ. ಹಾಗಾಗಿ ಎಸ್‌ಸಿಎಲ್‌ ಭಾರತದಲ್ಲಿ ಕೈಗೊಂಡಿದ್ದ ಯೋಜನೆಗಳ ವಿವರ ನೀಡುತ್ತಿದ್ದೇನೆ. ಎಸ್‌ಸಿಎಲ್‌ ಮತ್ತು ಸಿಎ ಭಾರತದಲ್ಲಿ ಕೆಲಸ ಮಾಡುತ್ತಿವೆಯೇ, ಕಚೇರಿ ಹೊಂದಿವೆಯೇ ಎಂಬುದು ಸಾಮಾನ್ಯವಾಗಿ ಕೇಳಿದ ಪ್ರಶ್ನೆಗಳಾಗಿವೆ. ಇದು ಒಂದು ರೀತಿಯಲ್ಲಿ ಆಧುನಿಕ ವಸಾಹತೀಕರಣದಂತೆ ಕಾಣಿಸುತ್ತಿದೆ’ ಎಂದು ವೈಲಿ ಟ್ವೀಟ್‌ ಮಾಡಿದ್ದಾರೆ.

ಬಿಹಾರ ಅಲ್ಲದೆ, ಉತ್ತರ ಪ್ರದೇಶದಲ್ಲಿಯೂ ಕಂಪನಿಯು ಕೆಲಸ ಮಾಡಿತ್ತು. ಅಲ್ಲಿನ ಜಾತಿ ಆಧಾರದಲ್ಲಿ ಸಂಶೋಧನೆ ನಡೆಸಿ ಪ್ರಚಾರವನ್ನು ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ 2011–12ರಲ್ಲಿ ರಾಷ್ಟ್ರೀಯ ಪಕ್ಷವೊಂದಕ್ಕೆ ವರದಿ ನೀಡಲಾಗಿತ್ತು ಎಂದು ವೈಲಿ ತಿಳಿಸಿದ್ದಾರೆ.

‘ಜಾತಿ ಲೆಕ್ಕಾಚಾರ, ಜಾತಿಯೊಳಗಿನ ಒಳಸುಳಿಗಳು ಮತ್ತು ಆ ಪಕ್ಷವನ್ನು ಬೆಂಬಲಿಸುತ್ತಿರುವ ಪ್ರಮುಖ ಜಾತಿಗಳು ಹಾಗೂ ಆ ಪಕ್ಷದ ಪರವಾಗಿ ತಿರುಗಬಹುದಾದ ಜಾತಿಗಳ ವಿವರಗಳನ್ನು ಒದಗಿಸಲಾಗಿತ್ತು’ ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ.

ಸಿಎ ಎಲ್ಲೆಲ್ಲಿ ಕೆಲಸ ಮಾಡಿತ್ತು
* ರಾಜಸ್ಥಾನದ ಪ್ರಮುಖ ರಾಜ್ಯ ಮಟ್ಟದ ಪಕ್ಷಕ್ಕಾಗಿ 2003ರಲ್ಲಿ ಸಮೀಕ್ಷೆ
* ಮಧ್ಯಪ್ರದೇಶದ ಯಾವ ಸಮುದಾಯದ ಮತದಾರರು ಪರವಾಗಿ ತಿರುಗಬಹುದು ಎಂಬ ಬಗ್ಗೆ 2003ರಲ್ಲಿ ರಾಷ್ಟ್ರೀಯ ಪಕ್ಷವೊಂದಕ್ಕೆ ವರದಿ
* 2007ರ ಉತ್ತರ ಪ‍್ರದೇಶ ಚುನಾವಣೆ ಸಂದರ್ಭದಲ್ಲಿ ಪ್ರಮುಖ ಪಕ್ಷ ಒಂದಕ್ಕೆ ಪೂರ್ಣ ರಾಜಕೀಯ ಸಮೀಕ್ಷೆ
* 2009ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳಿಗಾಗಿ ಪ್ರಚಾರ ನಿರ್ವಹಣೆ

ಎಸ್‌ಸಿಎಲ್‌–ಇಂಡಿಯಾದ ವೆಬ್‌ಸೈಟ್‌ ಹೇಳುವುದೇನು
ಜನಸಮುದಾಯದೊಳಗಿನ ಪ್ರಮುಖ ಗುಂಪುಗಳನ್ನು ಗುರುತಿಸಿ, ತಮಗೆ ಬೇಕಿರುವ ರೀತಿಯಲ್ಲಿ ಅವರ ವರ್ತನೆ ಬದಲಾವಣೆಗಾಗಿ ಪ್ರಭಾವ ಬೀರಲು ಗ್ರಾಹಕರಿಗೆ ನೆರವು ನೀಡಲಾಗುತ್ತದೆ

ಜಿಹಾದ್‌ ವಿರುದ್ಧ ಕಾರ್ಯಾಚರಣೆ
ಹಿಂಸಾತ್ಮಕವಾದ ಜಿಹಾದ್‌ ಕೆಲಸಗಳಿಗೆ ಜನರ ಬೆಂಬಲ ಮತ್ತು ನಿಯೋಜನೆ ತಡೆಗೆ ಎಸ್‌ಸಿಎಲ್‌ ಕೆಲಸ ಮಾಡಿದೆ. ಅನಪೇಕ್ಷಿತ ವರ್ತನೆ ತಡೆಯವುದಕ್ಕಾಗಿ ಅಂತರರಾಷ್ಟ್ರೀಯ ಯೋಜನೆಯಾಗಿ ಈ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿತ್ತು. ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ, ಜಾರ್ಖಂಡ್‌ ಮತ್ತು ಉತ್ತರ ಪ್ರದೇಶದಲ್ಲಿ 2007ರಲ್ಲಿ ಈ ಕೆಲಸವನ್ನು ಮಾಡಲಾಗಿತ್ತು.

ಭಾರತದಲ್ಲಿ ಕಚೇರಿಗಳು
ಕೇಂಬ್ರಿಜ್‌ ಅನಲಿಟಿಕಾದ ಭಾರತದ ಕೇಂದ್ರ ಕಚೇರಿ ಗಾಜಿಯಾಬಾದ್‌ನಲ್ಲಿದೆ. ಅಹಮದಾಬಾದ್‌, ಬೆಂಗಳೂರು, ಕಟಕ್‌, ಗುವಾಹಟಿ, ಹೈದರಾಬಾದ್‌, ಇಂದೋರ್‌, ಕೋಲ್ಕತ್ತ, ಪುಣೆಯಲ್ಲಿ ಪ್ರಾದೇಶಿಕ ಕಚೇರಿಗಳಿವೆ

ಬಿಹಾರದಲ್ಲಿ ಭಾರಿ ಅಧ್ಯಯನ
ಬಿಹಾರದ 2010ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪರವಾಗಿ ಎಸ್‌ಸಿಎಲ್‌ ಕೆಲಸ ಮಾಡಿದೆ. ಈ ರಾಜ್ಯದ ಶೇ 75ಕ್ಕೂ ಹೆಚ್ಚು ಕುಟುಂಬಗಳ ವರ್ತನಾ ವಿನ್ಯಾಸವನ್ನು ಅಧ್ಯಯನ ಮಾಡಿದೆ. ಚುನಾವಣೆಯ ಮುಖ್ಯ ವಿಷಯ ಯಾವುದು ಎಂಬುದನ್ನು ಗುರುತಿಸಿಕೊಟ್ಟಿದೆ. ಹಾಗೆಯೇ ಮತದಾರರ ಯಾವ ಗುಂಪನ್ನು ಗುರಿ ಮಾಡಿಕೊಂಡು ಪ್ರಚಾರ ಮಾಡಬೇಕು, ಯಾವ ಸಂದೇಶವನ್ನು ಅವರಿಗೆ ನೀಡಬೇಕು, ಯಾವ ಜಾತಿಯವರನ್ನು ಕೇಂದ್ರವಾಗಿಟ್ಟುಕೊಂಡು ಪ್ರಚಾರ ಮಾಡಬೇಕು ಎಂಬ ವರದಿಯನ್ನು ಸಿದ್ಧಪಡಿಸಿದೆ.

ಈ ಚುನಾವಣೆ ಸಂದರ್ಭದಲ್ಲಿ ಜೆಡಿಯು, ಎನ್‌ಡಿಎಯ ಭಾಗವಾಗಿತ್ತು. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಗೆಲುವು ದೊರಕಿತ್ತು.

ಸುರಕ್ಷತೆ ಹೆಚ್ಚಿಸಲು ಫೇಸ್‌ಬುಕ್‌ ಸಜ್ಜು
ವಾಷಿಂಗ್ಟನ್‌ (ಎಎಫ್‌ಪಿ):
ಬಳಕೆದಾರರಿಗೆ ತಮ್ಮ ಮಾಹಿತಿಯ ಮೇಲೆ ಹೆಚ್ಚಿನ ನಿಯಂತ್ರಣ ನೀಡುವುದಕ್ಕಾಗಿ ‘ಪ್ರೈವೆಸಿ ಸೆಟಿಂಗ್‌ ಟೂಲ್‌’ಗಳನ್ನು ಸಂಪೂರ್ಣವಾಗಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಫೇಸ್‌ಬುಕ್‌ ಹೇಳಿದೆ.

ಬಳಕೆದಾರರಿಗೆ ‘ಸೆಟಿಂಗ್‌’ ಸುಲಭವಾಗಿ ಲಭ್ಯವಾಗಲಿದೆ. ಫೇಸ್‌ಬುಕ್‌ನಲ್ಲಿ ಸಂಗ್ರಹವಾಗಿರುವ ವೈಯಕ್ತಿಕ ಮಾಹಿತಿಯ ಶೋಧ, ಡೌನ್‌ಲೋಡ್‌ ಮತ್ತು ಅಳಿಸುವಿಕೆ ಸುಲಭವಾಗಲಿದೆ.

ಹೊಸದಾಗಿ ‘ಪ್ರೈವೆಸಿ ಶಾರ್ಟ್‌ಕಟ್‌ ಮೆನು’ ಆಯ್ಕೆಯನ್ನು ನೀಡಲಾಗುವುದು. ಫೇಸ್‌ಬುಕ್‌ ಖಾತೆಯ ಸುರಕ್ಷತೆಯನ್ನು ಹೆಚ್ಚಿಸಲಾಗುವುದು; ಮಾಹಿತಿ ಮತ್ತು ಫೇಸ್‌ಬುಕ್‌ ಪುಟದ ಚಟುವಟಿಕೆಗಳನ್ನು ಯಾರು ನೋಡಬಹುದು ಎಂಬುದರ ನಿಯಂತ್ರಣ ಹಾಗೂ ಯಾವ ಜಾಹೀರಾತು ಕಾಣಿಸಬಹುದು ಎಂಬುದನ್ನು ನಿರ್ಧರಿಸುವ ಅವಕಾಶ ಬಳಕೆದಾರರಿಗೆ ದೊರಕಲಿದೆ.

‘ಪ್ರೈವೆಸಿ ಸೆಟಿಂಗ್ಸ್‌ ಮತ್ತು ಇತರ ‍ಪ್ರಮುಖ ಟೂಲ್‌ಗಳನ್ನು ಗುರುತಿಸುವುದೇ ಕಷ್ಟ ಎಂಬ ಬಳಕೆದಾರರ ಸಮಸ್ಯೆ ನಮಗೆ ಅರ್ಥವಾಗಿದೆ. ಹಾಗಾಗಿ ಬಳಕೆದಾರರಲ್ಲಿ  ಜಾಗೃತಿ ಮೂಡಿಸುವ ಕೆಲಸವನ್ನು ನಾವು ಮಾಡಲೇಬೇಕಿದೆ’ ಎಂದು ಪ್ರೈವೆಸಿ ವಿಭಾಗದ ಮುಖ್ಯಾಧಿಕಾರಿ ಎರಿನ್‌ ಏಗನ್‌ ಹೇಳಿದ್ದಾರೆ.

ಸೇವಾ ನಿಯಮಗಳು ಹಾಗೂ ದತ್ತಾಂಶ ನೀತಿಯನ್ನು ಪರಿಷ್ಕರಿಸಿ ಫೇಸ್‌ಬುಕ್‌ನಲ್ಲಿ ದತ್ತಾಂಶಗಳನ್ನು ಹೇಗೆ ಸಂಗ್ರಹಿಸಲಾಗುತ್ತಿದೆ ಎಂಬುದಕ್ಕೆ ಹೆಚ್ಚಿನ ಪಾರದರ್ಶಕತೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಫೇಸ್‌ಬುಕ್‌ ವಿರುದ್ಧ ದೂರು ದಾಖಲು
ಸ್ಯಾನ್‌ ಫ್ರಾನ್ಸಿಸ್ಕೊ (ಎಪಿ):
ಮೊಬೈಲ್‌ ಕರೆಗಳು ಹಾಗೂ ಸಂದೇಶಗಳನ್ನು ಸಂಗ್ರಹಿಸುವ ಮೂಲಕ ಫೇಸ್‌ಬುಕ್‌ ಮೆಸೆಂಜರ್‌ ಆ್ಯಪ್‌ ತಮ್ಮ ಖಾಸಗಿತನವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿ ಮೂವರು ಬಳಕೆದಾರರು ಉತ್ತರ ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಖಾಸಗಿತನದ ಉಲ್ಲಂಘನೆಗಾಗಿ ಫೇಸ್‌ಬುಕ್‌ ವಿಚಾರಣೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿಯೇ ಈ ವಿದ್ಯಮಾನ ನಡೆದಿದೆ.

ಗೂಗಲ್‌ನ ಆ್ಯಂಡ್ರಾಯ್ಡ್‌ ವ್ಯವಸ್ಥೆ ಇರುವ ಮೊಬೈಲ್‌ಗಳಿಂದ ಕರೆ ಮತ್ತು ಸಂದೇಶದ ಮಾಹಿತಿ ಸಂಗ್ರಹಿಸಲು 2015ರಲ್ಲಿಯೇ ಆರಂಭಿಸಲಾಗಿದೆ ಎಂದು ಫೇಸ್‌ಬುಕ್‌ ಭಾನುವಾರ ಒಪ್ಪಿಕೊಂಡಿತ್ತು.

ಮೆಸೆಂಜರ್‌ ವಿರುದ್ಧ ದೂರು ದಾಖಲು
ಸ್ಯಾನ್‌ ಫ್ರಾನ್ಸಿಸ್ಕೊ (ಎಪಿ):
ಮೊಬೈಲ್‌ ಕರೆಗಳು ಹಾಗೂ ಸಂದೇಶಗಳನ್ನು ಸಂಗ್ರಹಿಸುವ ಮೂಲಕ ಫೇಸ್‌ಬುಕ್‌ ಮೆಸೆಂಜರ್‌ ಆ್ಯಪ್‌ ತಮ್ಮ ಖಾಸಗಿತನವನ್ನು ಉಲ್ಲಂಘಿಸಿವೆ ಎಂದು ಆರೋಪಿಸಿ ಮೂವರು ಬಳಕೆದಾರರು ಉತ್ತರ ಕ್ಯಾಲಿಫೋರ್ನಿಯಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಖಾಸಗಿತನದ ಉಲ್ಲಂಘನೆಗಾಗಿ ಫೇಸ್‌ಬುಕ್‌ ವಿಚಾರಣೆಗೆ ಒಳಗಾಗುತ್ತಿರುವ ಸಂದರ್ಭದಲ್ಲಿಯೇ ಈ ವಿದ್ಯಮಾನ ನಡೆದಿದೆ.

ಗೂಗಲ್‌ನ ಆ್ಯಂಡ್ರಾಯ್ಡ್‌ ವ್ಯವಸ್ಥೆ ಇರುವ ಮೊಬೈಲ್‌ಗಳಿಂದ ಕರೆ ಮತ್ತು ಸಂದೇಶದ ಮಾಹಿತಿ ಸಂಗ್ರಹಿಸಲು 2015ರಲ್ಲಿಯೇ ಆರಂಭಿಸಲಾಗಿದೆ ಎಂದು ಫೇಸ್‌ಬುಕ್‌ ಭಾನುವಾರ ಒಪ್ಪಿಕೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry