ಸೆಮಿಫೈನಲ್‌ಗೆ ಅಜರೆಂಕಾ

7
ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿ:ಸ್ಲೊವಾನೆಗೆ ಜಯ

ಸೆಮಿಫೈನಲ್‌ಗೆ ಅಜರೆಂಕಾ

Published:
Updated:
ಸೆಮಿಫೈನಲ್‌ಗೆ ಅಜರೆಂಕಾ

ಮಿಯಾಮಿ: ದಿಟ್ಟ ಆಟ ಆಡಿದ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ಮಿಯಾಮಿ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಮಂಗಳವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್ ಹೋರಾಟದಲ್ಲಿ ಅಜರೆಂಕಾ 7–5, 6–3ರ ನೇರ ಸೆಟ್‌ಗಳಿಂದ ಜೆಕ್‌ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ಅವರನ್ನು ಸೋಲಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ ಐದನೇ ಸ್ಥಾನ ಹೊಂದಿದ್ದ ಕ್ಯಾರೋಲಿನಾ ಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ಆಟಗಾರ್ತಿ ಎನಿಸಿದ್ದರು. ಮೊದಲ ಸೆಟ್‌ನಲ್ಲಿ ಉಭಯ ಆಟಗಾರ್ತಿಯರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಹೀಗಾಗಿ 10 ಗೇಮ್‌ಗಳವರೆಗೆ ಸಮಬಲದ ಪೈಪೋಟಿ ಕಂಡುಬಂತು. 11ನೇ ಗೇಮ್‌ನಲ್ಲಿ ಸರ್ವ್‌ ಉಳಿಸಿಕೊಂಡ ವಿಕ್ಟೋರಿಯಾ ನಂತರದ ಗೇಮ್‌ನಲ್ಲಿ ಪ್ಲಿಸ್ಕೋವಾ ಸರ್ವ್‌ ಮುರಿದು ಸಂಭ್ರಮಿಸಿದರು.

ಎರಡನೇ ಸೆಟ್‌ನಲ್ಲಿ ಅಜರೆಂಕಾ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಿದರು. ಮಿಂಚಿನ ಸರ್ವ್‌ ಮತ್ತು ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು. ಈ ವಿಭಾಗದ ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಸ್ಲೊವಾನೆ ಸ್ಟೀಫನ್ಸ್‌ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟರು. ಕ್ವಾರ್ಟರ್‌ ಫೈನಲ್‌ನಲ್ಲಿ ಸ್ಟೀಫನ್ಸ್‌ 6–1, 6–2ರಲ್ಲಿ ಜರ್ಮನಿಯ ಏಂಜಲಿಕ್‌ ಕೆರ್ಬರ್‌ ಅವರನ್ನು ಸೋಲಿಸಿದರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 13ನೇ ಸ್ಥಾನದಲ್ಲಿರುವ ಸ್ಲೊವಾನೆ ಎರಡೂ ಸೆಟ್‌ಗಳಲ್ಲಿ ಎದುರಾಳಿಯ ಮೇಲೆ ಪಾರಮ್ಯ ಮೆರೆದರು. ಸೆಮಿಫೈನಲ್‌ನಲ್ಲಿ ಸ್ಟೀಫನ್ಸ್‌ ಮತ್ತು ಅಜರೆಂಕಾ ಪೈಪೋಟಿ ನಡೆಸಲಿದ್ದಾರೆ.

ಕ್ವಾರ್ಟರ್‌ ಫೈನಲ್‌ಗೆ ಜ್ವೆರೆವ್‌: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ನಾಲ್ಕನೇ ಸುತ್ತಿನ ಪೈಪೋಟಿಯಲ್ಲಿ ಜ್ವೆರೆವ್‌ 6–4, 6–4ರಿಂದ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ಅವರನ್ನು ಮಣಿಸಿದರು.

ಈ ವಿಭಾಗದ ಇತರ ಪಂದ್ಯಗಳಲ್ಲಿ ಪ್ಯಾಬ್ಲೊ ಕರೆನೊ ಬುಸ್ತ 6–0, 6–3ರಲ್ಲಿ ಫರ್ನಾಂಡೊ ವರ್ಡಾಸ್ಕೊ ಎದುರೂ, ಕೆವಿನ್‌ ಆ್ಯಂಡರ್‌ಸನ್‌ 7–6, 6–4ರಲ್ಲಿ ಫ್ರಾನ್ಸೆಸ್‌ ತಿಯಾಫೊಯೆ ಮೇಲೂ, ಬೊರ್ನಾ ಕೊರಿಕ್‌ 7–6, 4–6, 6–4ರಲ್ಲಿ ಡೆನಿಶ್‌ ಶಪೊವಲೊವ್‌ ಎದುರೂ, ವುವಾನ್ ಮಾರ್ಟಿನ್‌ ಡೆಲ್‌ ಪೊಟ್ರೊ 6–4, 6–2ರಲ್ಲಿ ಫಿಲಿಪ್‌ ಕ್ರಾಜಿನೊವಿಚ್‌ ಮೇಲೂ, ಮಿಲೊಸ್‌ ರಾವನಿಕ್‌ 6–3, 6–4ರಲ್ಲಿ ಜೆರೆಮಿ ಚಾರ್ಡಿ ಎದುರೂ, ಚುಂಗ್‌ ಹ್ಯೆಯೊನ್‌ 6–4, 6–3ರಲ್ಲಿ ಜಾವೊ ಸೌಸಾ ವಿರುದ್ಧವೂ, ಜಾನ್‌ ಇಸ್ನರ್‌ 7–6, 6–3ರಲ್ಲಿ ಮರಿನ್‌ ಸಿಲಿಕ್‌ ಮೇಲೂ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry