ರಾಜಕೀಯ ಮತ್ತಷ್ಟು ಕೀಳುಮಟ್ಟಕ್ಕೆ ಇಳಿಯದಿರಲಿ

7

ರಾಜಕೀಯ ಮತ್ತಷ್ಟು ಕೀಳುಮಟ್ಟಕ್ಕೆ ಇಳಿಯದಿರಲಿ

Published:
Updated:
ರಾಜಕೀಯ ಮತ್ತಷ್ಟು ಕೀಳುಮಟ್ಟಕ್ಕೆ ಇಳಿಯದಿರಲಿ

ನವದೆಹಲಿ: ರಾಜ್ಯಸಭೆಯ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ವಿರೋಧ ಪಕ್ಷಗಳ ಸಂಸದರನ್ನು ಸಭಾಪತಿ ಎಂ.ವೆಂಕಯ್ಯ ನಾಯ್ಡು ಬುಧವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

‘ರಾಜಕೀಯದ ಗುಣಮಟ್ಟ ಮತ್ತು ಸದನದ ಘನತೆಯನ್ನು ಇನ್ನಷ್ಟು ಕೀಳುಮಟ್ಟಕ್ಕೆ ಕೊಂಡೊಯ್ಯುವುದು ಬೇಡ’ ಎಂದು ಅವರು ಸಂಸದರಲ್ಲಿ ಮನವಿ ಮಾಡಿದರು.

ಸಂವಿಧಾನದ ಆಶಯ ಮತ್ತು ಮೌಲ್ಯಗಳಿಗೆ ಧಕ್ಕೆಯಾಗದಂತೆ ಮತ್ತು ಸದನದ ಗೌರವಕ್ಕೆ ಚ್ಯುತಿಯಾಗದಂತೆ ಸಂಸದರು ಘನತೆಯಿಂದ ವರ್ತಿಸಬೇಕು ಎಂದು ನಾಯ್ಡು ಬುದ್ಧಿಮಾತು ಹೇಳಿದರು.

ನಿವೃತ್ತರಾದ ಸಂಸದರಿಗೆ ಬೀಳ್ಕೊಡುಗೆ ನೀಡುವ ಸಂದರ್ಭದಲ್ಲಿ ಭಾವುಕರಾದ ವೆಂಕಯ್ಯ ನಾಯ್ಡು, ‘ರಾಜಕೀಯ ತಂತ್ರಗಳಿಗೆ ಕಲಾಪಗಳ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಸದನಗಳು ಪ್ರತಿಭಟನೆಯ ವೇದಿಕೆಗಳಾಗಿವೆ’ ಎಂದು ಕಳವಳ

ವ್ಯಕ್ತಪಡಿಸಿದರು.

ಸದನದ ಸದಸ್ಯರು ಪ್ರತಿಯೊಂದಕ್ಕೂ ಸ್ಪೀಕರ್‌ ಅಥವಾ ಸಭಾಪತಿ ಪೀಠದ ಎದುರು ನುಗ್ಗುವುದು, ಎಲ್ಲವೂ ಅಲ್ಲಿಯೇ ನಿರ್ಣಯವಾಗಬೇಕು ಎನ್ನುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ನಾಯ್ಡು ಅಸಮಾಧಾನ ಹೊರ ಹಾಕಿದರು.

‘ಜನರಿಂದ ತಕ್ಕ ಪಾಠ’

ಸಂಸತ್ತಿನ ಉಭಯ ಸದನಗಳ ಕಲಾಪಗಳಿಗೆ ಅಡ್ಡಿಪಡಿಸುತ್ತಿರುವ ಮತ್ತು ಅವಿಶ್ವಾಸ ಗೊತ್ತುವಳಿಯ ಅಣಕವಾಡುತ್ತಿರುವ ವಿರೋಧ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತ್‌ ಕುಮಾರ್‌ ಹೇಳಿದ್ದಾರೆ.

ವಿರೋಧ ಪಕ್ಷಗಳ ಸಂಸದರು ಮತ್ತು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ ಅವರು, ವಿರೋಧ ಪಕ್ಷಗಳ ತಂತ್ರ ಅವರಿಗೆ ತಿರುಮಂತ್ರವಾಗಲಿದೆ ಎಂದರು.

ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ವಿರೋಧ ಪಕ್ಷಗಳು ಅವಿಶ್ವಾಸ ಗೊತ್ತುವಳಿ ಪ್ರಹಸನ ನಡೆಸುತ್ತಿವೆ. ಕರ್ನಾಟಕದ ಮತದಾರರು ಮತ್ತು ದೇಶದ ಜನರು ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ ಎಂದರು.

ರಾಹುಲ್‌ ಅವರು ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಯಾವುದೇ ಪ್ರಗತಿ ಕಂಡಿಲ್ಲ. ಹಾಗೆಯೇ ಸಂಸತ್ತಿನಲ್ಲಿ ಯಾವುದೇ ಉಪಯುಕ್ತ ಚರ್ಚೆಯಲ್ಲಿ ಭಾಗಿಯಾಗಿಲ್ಲ. ಅವರಿಗೆ ಸಂಸದೀಯ ಪ್ರಕ್ರಿಯೆಗಳ ಬಗ್ಗೆ ಅರಿವಿಲ್ಲ. ಹಾಗಾಗಿ ಬಿಕ್ಕಟ್ಟು ಉಂಟಾಗಿದೆ ಎಂದರು.

ಸಂಸದರ ಮಾತು ಕಸಿದ ಗದ್ದಲ: ಪ್ರಧಾನಿ ನರೇಂದ್ರ ಮೋದಿ

ವಿರೋಧ ಪಕ್ಷಗಳು ಸಂಸತ್‌ ಕಲಾಪ ಸಂದರ್ಭದಲ್ಲಿ ಎಬ್ಬಿಸಿದ ಗದ್ದಲದಿಂದಾಗಿ ಹಲವು ಸಂಸದರಿಗೆ ಚರ್ಚೆಯಲ್ಲಿ ಭಾಗವಹಿಸುವುದು ಸಾಧ್ಯವಾಗಲಿಲ್ಲ. ‘ತ್ರಿವಳಿ ತಲಾಖ್‌’ನಂತಹ ಚಾರಿತ್ರಿಕ ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗಿಯಾಗಲು ಈಗ ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ ಹಲವರಿಗೆ ಸಾಧ್ಯವಾಗಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಮುಂದಿನ ಕೆಲವು ವಾರಗಳಲ್ಲಿ ನಿವೃತ್ತಿಯಾಗಲಿರುವ ರಾಜ್ಯಸಭೆಯ 60 ಸದಸ್ಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಪ್ರಧಾನಿ ಮಾತನಾಡಿದರು. ಸಂಸತ್‌ ಕಲಾಪ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ವಿರೋಧ ಪಕ್ಷಗಳ ಹೊಣೆಯಷ್ಟೇ ಅಲ್ಲ, ಅದು ಸರ್ಕಾರದ ಜವಾಬ್ದಾರಿ ಕೂಡ ಎಂದು ಮೋದಿ ಅಭಿಪ್ರಾಯಪಟ್ಟರು.

ಲೋಕಸಭೆಯಲ್ಲಿ ಏನಾಗುತ್ತಿದೆಯೋ ಅದುವೇ ರಾಜ್ಯಸಭೆಯಲ್ಲಿಯೂ ಪ್ರತಿಧ್ವನಿಸಬೇಕಿಲ್ಲ. ಮೇಲ್ಮನೆ ಎಂಬುದು ಗಣ್ಯರು ಇರುವ ಮಹತ್ವದ ಸದನ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಸದನಕ್ಕೆ ಬಹಳ ಮುಖ್ಯ ಪಾತ್ರ ಇದೆ ಎಂದು ಹೇಳಿದರು.

ನಿವೃತ್ತರಾಗುತ್ತಿರುವ ಸದಸ್ಯರು ಪ‍್ರಮುಖ ವಿಚಾರಗಳ ಬಗ್ಗೆ ಭಾಷಣಗಳನ್ನು ಸಿದ್ಧಪಡಿಸಿಕೊಂಡಿರಬಹುದು. ಮೇಲ್ಮನೆಗೆ ವಿದಾಯ ಹೇಳುವ ಮುನ್ನ ತಮ್ಮ ಹೆಜ್ಜೆಗುರುತುಗಳು ಅಲ್ಲಿ ಮೂಡಲಿ ಎಂದು ಅವರು ಬಯಸಿರಬಹುದು. ದುರದೃಷ್ಟವಶಾತ್‌ ಅದಕ್ಕೆ ಅವಕಾಶ ದೊರೆಯಲಿಲ್ಲ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದರು.

ನಿವೃತ್ತರಾಗುತ್ತಿರುವ ಕೆಲವು ಸಂಸದರ ಹೆಸರನ್ನು ತಮ್ಮ ಸಂಕ್ಷಿಪ್ತ ಭಾಷಣದಲ್ಲಿ ಪ್ರಧಾನಿ ಪ್ರಸ್ತಾಪಿಸಿದರು. ಮಾಜಿ ಅಟಾರ್ನಿ ಜನರಲ್‌ ಕೆ. ಪರಾಶರನ್‌, ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌, ಭಾರತದ ಹಾಕಿ ತಂಡದ ಮಾಜಿ ನಾಯಕ ದಿಲೀಪ್ ಟಿರ್ಕೆ ಅವರ ಕೊಡುಗೆಗಳನ್ನು ಸ್ಮರಿಸಿದರು.

ರಾಜ್ಯಸಭೆಯ ಉಪಸಭಾಪತಿ ಪಿ.ಜೆ. ಕುರಿಯನ್‌ ಅವರು ಬಿಕ್ಕಟ್ಟುಗಳ ಸಂದರ್ಭಗಳಲ್ಲಿಯೂ ಸದನವನ್ನು ಸುಗಮವಾಗಿ ನಡೆಸಿಕೊಂಡು ಹೋಗಿದ್ದಾರೆ, ನಗುಮುಖದಲ್ಲಿಯೇ ಗಂಭೀರ ಸಂದೇಶಗಳನ್ನು ನೀಡಿದ್ದಾರೆ ಎಂದು ಪ್ರಧಾನಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry