ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫನಾ’ ಹಂತದ ಶೂನ್ಯತೆ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೆಚ್ಚಿನ ಸೂಫಿ ಅನುಭಾವಿಗಳ ಮಟ್ಟಿಗೆ `ಬಖಾ' ಯಾ ಅಮರತ್ವವು ಪ್ರವಾದಿತ್ವದ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ಇದನ್ನು ಪ್ರೀತಿಸುವ ಆತ್ಮಕ್ಕೆ ಅಲ್ಲಾಹ ನೀಡಿದ ಆಶ್ವಾಸನೆಯಾಗಿ `ಅವನು ನೋಡುವ ದೃಷ್ಟಿಗೆ ನೀನು ಕಣ್ಣಾಗು’ ಎಂಬ ಸಂದೇಶವೆಂದು ಪರಿಗಣಿಸಲಾಗಿದೆ. ಬದ್ರ್ ಯುದ್ಧದ ನಂತರ ಪ್ರವಾದಿಯವರಿಗೆ ನೀಡಿದಂತಹ ಸಂದೇಶ `ನೀನು (ದೃಷ್ಟಿ) ಹಾಯಿಸಬೇಕಾದ ಕಡೆ ನೀನು ಹಾಯಿಸಲಿಲ್ಲ, ಆದರೆ ಅಲ್ಲಾಹ ಎಲ್ಲವನ್ನೂ ಕಂಡಿದ್ದಾನೆ’(ಕುರಾನ್ 8:17). ಹಲವಾರು ಸೂಫಿಗಳು `ಬಖಾ’ ಅಮರತ್ವವನ್ನು ಪಡೆದಿದ್ದಾರೆಂದು ಹೇಳುತ್ತಾರಾದರೂ, ಸಂತತ್ವ ಮತ್ತು ಪ್ರವಾದಿತ್ವ ಸಾಧಿಸಿದ ಫನಾ ಮತ್ತು ಬಖಾದ ಸಾಧನೆಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ ಎಂದು ಕೆಲವು ಅನುಭಾವಿಗಳು ಮುಖ್ಯವಾಗಿ `ನಖ್ಶ್‍ಬಂದಿ’ ಪರಂಪರೆಯ ಸೂಫಿಗಳು ವಾದಿಸುತ್ತಾರೆ.

`ಫನಾ’ ಹಂತವನ್ನು `ಇತ್ತಿಹಾದ್’ ಅಥವಾ `ಐಕ್ಯ’ದ ಸಂದರ್ಭಕ್ಕೆ ಹೋಲಿಸಲಾಗದು. ಎರಡು ಭಿನ್ನವಾದ ಜೀವಗಳು ಪರಸ್ಪರ ಅಂತಸ್ಥವಾಗುವ ಅಂದರೆ ಮನುಷ್ಯನಲ್ಲಿ ದೇವರು ಅವತರಿಸುವ, ಹಲ್ಲಾಜನ `ಅನಲ್ ಹಕ್’ನಂತೆ, ಪೂರ್ವಯೋಜಿತ ಸಂಪ್ರದಾಯ ವಿರೋಧಿ ಅಭಿಪ್ರಾಯಕ್ಕೆ `ಫನಾ’ ಹೋಲಿಕೆಯಾಗದು. `ಫನಾ’ ಎಂಬುದು ದೇವರ ಮುಂದೆ ಅಧ್ಯಾತ್ಮ ಸಾಧನೆಯನ್ನು ಶೂನ್ಯವಾಗಿಸುವ ಹಂತವೆಂದು ತಿಳಿಯಬೇಕು. ಸಂತ ಮನ್ಸೂರ್ ಅಲ್ ಹಲ್ಲಾಜ್ ಶೂನ್ಯವವಾಗಿಸುವ ಅಥವಾ ನಾಶಹೊಂದುವ ಈ ಸ್ಥಿತಿಯನ್ನು ವಿವರಿಸಲು ದೀಪ ಮತ್ತು ಪತಂಗದ ಉದಾಹರಣೆಯನ್ನು ನೀಡಿದ್ದರು. ಮೌಲಾನಾ ರೂಮಿ, ಸಂತ ಹಲ್ಲಾಜರ ಈ ವ್ಯಾಖ್ಯಾನವನ್ನು ವಿಮರ್ಶೆಗೆ ಒಳಪಡಿಸುವಂತೆ ಕಮ್ಮಾರನ ಧಗಧಗಿಸುವ ತಿದಿಯೊಳಗೆ ಹಾಕಿದ ಕಬ್ಬಿಣದ ತುಂಡೊಂದರ ರೂಪಕವನ್ನು ನೀಡುತ್ತಾರೆ. ಕಾದು ಕೆಂಪಗಾದಾಗ ಕಬ್ಬಿಣವು ತಾನು ಬೆಂಕಿಯ ಭಾಗವೆಂದುಕೊಳ್ಳುತ್ತದೆ. ಆದರೆ ನಿಜಸ್ಥಿತಿಯಲ್ಲಿ ಸಂಪೂರ್ಣವಾಗಿ ಬೆಂಕಿಯೊಂದಿಗೆ ಬೆರೆತುಕೊಳ್ಳದೆ ತಣ್ಣಗಾದಾಗ ವ್ಯತಿರಿಕ್ತವಾಗಿರುತ್ತದೆ. ಫನಾ ಹಂತದಲ್ಲಿ ಅಧ್ಯಾತ್ಮ ಸಾಧಕನೊಬ್ಬನ ಆತ್ಮವು ಪರಮಾತ್ಮನೊಂದಿಗೆ ಸೇರುವ ಹವಣಿಕೆಯಲ್ಲಿ ತಾನು ಪರಮಾತ್ಮನಲ್ಲಿ ಐಕ್ಯವಾಗಿದ್ದೇನೆ ಎಂದು ತಿಳಿದು ಕೊಂಡರೂ ಬೆಂಕಿಯೊಳಗೆ ಕೆಂಪಗೆ ಕಾದ ಕೆಂಡದಂತೆ ಕಂಡುಬಂದರೂ, ತಣ್ಣಗಾದಾಗ ಕಬ್ಬಿಣದ ತುಂಡಿನಂತೆ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ ಎಂದು ರೂಮಿ ಅಭಿಪ್ರಾಯಪಡುತ್ತಾರೆ. ದೇವರನ್ನು ಸೇರಿಕೊಂಡರೂ ಅಧ್ಯಾತ್ಮ ಸಾಧಕನ ಆತ್ಮ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುತ್ತದೆ ಎಂದು ಮೌಲಾನಾ ರೂಮಿ ಹೇಳುತ್ತಾರೆ.

ಅದೇ ರೂಮಿಯವರು ಇನ್ನೊಂದು ಸಂದರ್ಭದಲ್ಲಿ ಸೂಫಿ ಷೇಖ್ ಖಾರ್‍ಖಾನಿಯವರ `ಜಗತ್ತಿನಲ್ಲಿ ದರವೇಶಿ ಎನ್ನುವವರು ಇಲ್ಲ, ಅವರ ಇರುವಿಕೆಯನ್ನು ಸಾಬೀತುಪಡಿಸಿದರೂ ಕೂಡ ಅವರು ಅಸ್ತಿತ್ವದಲ್ಲಿ ಇರುವುದಿಲ್ಲ’ ಎನ್ನುವ ಮಾತನ್ನು ಸಮರ್ಥಿಸುವಂತೆ `ಫನಾ’ ಹಂತದ ನಿಗೂಢತೆಯನ್ನು ವಿಶದೀಕರಿಸುವಾಗ ಹತ್ತಿರವಾಗುತ್ತಾರೆ. ತನ್ನ ಕಾವ್ಯ `ಮಸ್ನವಿ’ಯಲ್ಲಿ ಹೀಗೆ ವ್ಯಕ್ತಪಡಿಸುತ್ತಾರೆ: ಮೇಣದ ಬತ್ತಿಯ ದೀಪವು ಸೂರ್ಯನ ಬೆಳಕಿನ ಮುಂದೆ ಇದ್ದಾಗ ಆದಂತೆ ತೋರಿಕೆಗೆ ಉರಿಯುತ್ತ ಇದ್ದರೂ, ದೇಪವು ನಿಜಕ್ಕೂ ಅಸ್ತಿತ್ವವನ್ನು ಕಳೆದುಕೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT