ಬೇಲಿಯೇ ಎದ್ದು ಹೊಲ ಮೇಯಿತು!

7
ಪೊಲೀಸರಿಂದಲೇ ಪಾರ್ಲರ್‌ ಸುಲಿಗೆ

ಬೇಲಿಯೇ ಎದ್ದು ಹೊಲ ಮೇಯಿತು!

Published:
Updated:
ಬೇಲಿಯೇ ಎದ್ದು ಹೊಲ ಮೇಯಿತು!

ಬೆಂಗಳೂರು:‌ ಮದ್ಯದ ಅಮಲಿನಲ್ಲಿ ಬ್ಯೂಟಿಪಾರ್ಲರ್‌ಗೆ ನುಗ್ಗಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ₹ 28 ಸಾವಿರ ನಗದು ಹಾಗೂ ಮೊಬೈಲ್ ಕಿತ್ತುಕೊಂಡು ಹೋಗಿದ್ದ ಆರೋಪದಡಿ ಹೆಣ್ಣೂರು ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯ ವಿಠ್ಠಲ್ ದಡ್ಡಿ ಹಾಗೂ ಶಾರೂಖ್ ಡೊಂಗರಗಾಂವ್ ಬಂಧಿತ ಕಾನ್‌ಸ್ಟೆಬಲ್‌ಗಳು. ಮಂಗಳವಾರ ರಾತ್ರಿ ರಾಮಮೂರ್ತಿನಗರ ಸರ್ವಿಸ್ ರಸ್ತೆಯ ‘ಶೈನ್ ಗ್ಲೋ ವೆಲ್ತ್‌ನೆಸ್’ ಪಾರ್ಲರ್‌ಗೆ ನುಗ್ಗಿ ಸುಲಿಗೆ ಮಾಡಿದ್ದರು. ಪಾರ್ಲರ್ ಮಾಲೀಕರ ದೂರಿನ ಅನ್ವಯ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ವೇಶ್ಯಾವಾಟಿಕೆ ಬ್ಲ್ಯಾಕ್‌ಮೇಲ್: ವಿಠ್ಠಲ್ 2009ರಲ್ಲಿ ಹಾಗೂ ಶಾರೂಖ್ 2016ರಲ್ಲಿ ಇಲಾಖೆ ಸೇರಿದ್ದರು. ಒಂದೇ ಊರಿನವರಾದ ಕಾರಣ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಎರಡು ವರ್ಷಗಳಿಂದ ವಿಠ್ಠಲ್ ಹೆಣ್ಣೂರು ಠಾಣೆಯಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಅವರ ಗೆಳೆಯ ಸಹ ಅದೇ ಠಾಣೆಗೆ ವರ್ಗವಾಗಿ ಬಂದಿದ್ದರು. ನಂತರ ಬಾಬುಸಾಬ್‌ಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ಒಟ್ಟಿಗೇ ವಾಸವಾಗಿದ್ದರು.

ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಠಾಣೆಯಿಂದ ಹೊರಟ ಇಬ್ಬರೂ, ಬಾರ್‌ವೊಂದರಲ್ಲಿ ಪಾನಮತ್ತರಾಗಿದ್ದರು. ನಂತರ 8.45ರ ಸುಮಾರಿಗೆ ಬ್ಯೂಟಿ ಪಾರ್ಲರ್‌ಗೆ ತೆರಳಿ, ‘ನಾವು ಬಾಣಸವಾಡಿ ಠಾಣೆಯ ಪೊಲೀಸರು. ನೀವು ವೇಶ್ಯಾವಾಟಿಕೆ ನಡೆಸುತ್ತಿದ್ದೀರಾ ಎಂಬ ಮಾಹಿತಿ ಬಂದಿದೆ.

₹ 50 ಸಾವಿರ ಕೊಡದಿದ್ದರೆ ಎಫ್‌ಐಆರ್ ದಾಖಲಿಸಿ ಬಂಧಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದರು. ಹಣ ಕೊಡಲು ಒಪ್ಪದಿದ್ದಾಗ ಪಾರ್ಲರ್ ಒಡತಿ ಹಾಗೂ ಇಬ್ಬರು ಮಹಿಳಾ ನೌಕರರ ಜತೆ ಅನುಚಿತವಾಗಿ ವರ್ತಿಸಿದ್ದರಲ್ಲದೆ, ಅವರ ಮೇಲೆ ಹಲ್ಲೆಯನ್ನೂ ಮಾಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ಕೊನೆಗೆ, ಗಲ್ಲಾಪೆಟ್ಟಿಗೆಯಲ್ಲಿದ್ದ ₹ 28 ಸಾವಿರ ನಗದು ಹಾಗೂ ಪಾರ್ಲರ್ ಮಾಲೀಕರ ಮೊಬೈಲ್ ಕಿತ್ತುಕೊಂಡ ಆರೋಪಿಗಳು, ‘ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಜೀವಂತವಾಗಿ ಬಿಡುವುದಿಲ್ಲ’ ಎಂದು ಬೆದರಿಸಿ ಹೊರಟು ಹೋಗಿದ್ದರು. ಈ ದೃಶ್ಯಗಳು ಪಾರ್ಲರ್ ಒಳಗಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ನಂತರ ಬಾಣಸವಾಡಿ ಠಾಣೆಗೆ ತೆರಳಿದ ಮಾಲೀಕರು, ಸಿಬ್ಬಂದಿ ವಿರುದ್ಧ ದೂರು ಕೊಟ್ಟಿದ್ದರು. ಪೊಲೀಸರು ತಕ್ಷಣ ಪಾರ್ಲರ್‌ಗೆ ತೆರಳಿ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಅವರು ಹೆಣ್ಣೂರು ಠಾಣೆಯ ಸಿಬ್ಬಂದಿ ಎಂಬುದು ಗೊತ್ತಾಯಿತು.

ದೂರಿನ ಅನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354), ಸುಲಿಗೆ (384), ಹಲ್ಲೆ (324) ಹಾಗೂ ಜೀವಬೆದರಿಕೆ (506) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯಲ್ಲಿ ನಿದ್ರಿಸುತ್ತಿದ್ದ ಕಾನ್‌ಸ್ಟೆಬಲ್‌ಗಳನ್ನು ರಾತ್ರಿಯೇ ವಶಕ್ಕೆ ಪಡೆದುಕೊಂಡರು.

‘ಮೊದಲು ಹೆಬ್ಬಾಳದಲ್ಲಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ, ತಿಂಗಳ ಹಿಂದೆ ಇಲ್ಲಿ ವ್ಯವಹಾರ ಆರಂಭಿಸಿದ್ದರು. ಪಾರ್ಲರ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಯಾವುದೇ ದೂರು ಬಂದಿರಲಿಲ್ಲ. ಅಂಥ ವ್ಯವಹಾರ ನಡೆಸುತ್ತಿದ್ದರೆ, ಅವರು ಸಿ.ಸಿ ಟಿ.ವಿ ಕ್ಯಾಮೆರಾವನ್ನೂ ಹಾಕಿಸುತ್ತಿರಲಿಲ್ಲ. ಕಾನ್‌ಸ್ಟೆಬಲ್‌ಗಳು ಹಣದಾಸೆಗೆ ಈ ಕೃತ್ಯ ಎಸಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ಕಾಲಿಗೆ ಬೀಳುತ್ತೇವೆ’

‘ಕುಡಿದ ಮತ್ತಿನಲ್ಲಿ ನಮ್ಮಿಂದ ತಪ್ಪಾಗಿದೆ. ಸಿ.ಸಿ ಟಿ.ವಿ ಕ್ಯಾಮೆರಾದ ದೃಶ್ಯಗಳನ್ನು ನೋಡಿದ ಬಳಿಕ ನಮ್ಮ ದುರ್ವರ್ತನೆಯ ಅರಿವಾಗಿದೆ. ಬೇಕಿದ್ದರೆ, ಆ ಮಹಿಳೆಯರ ಕಾಲಿಗೆ ಬಿದ್ದು ಕ್ಷಮೆ ಕೋರುತ್ತೇವೆ. ನಮ್ಮ ವಿರುದ್ಧ ಕ್ರಮ ಜರುಗಿಸಬೇಡಿ ಎಂದು ಕಾನ್‌ಸ್ಟೆಬಲ್‌ಗಳು ವಿಚಾರಣೆ ವೇಳೆ ಮನವಿ ಮಾಡಿದರು. ಅವರಿಬ್ಬರನ್ನೂ ಸೇವೆಯಿಂದ ಅಮಾನತು ಮಾಡಲಾಗಿದೆ’ ಎಂದು ಅಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry