7

ಬೈಂದೂರು: ಬಿಜೆಪಿಯಲ್ಲಿ ಪೈಪೋಟಿ

Published:
Updated:
ಬೈಂದೂರು: ಬಿಜೆಪಿಯಲ್ಲಿ ಪೈಪೋಟಿ

ಉಡುಪಿ: ಬಿಜೆಪಿ ಟಿಕೆಟ್‌ಗೆ ಪೈಪೋಟಿ ಇರುವ ಹಾಗೂ ಕಾಂಗ್ರೆಸ್‌ನಲ್ಲಿ ಒಂದಕ್ಕಿಂತ ಹೆಚ್ಚಿನ ಆಕಾಂಕ್ಷಿಗಳು ಇಲ್ಲದ ಜಿಲ್ಲೆಯ ಇನ್ನೊಂದು ಕ್ಷೇತ್ರ ಬೈಂದೂರು.

ಕಾಂಗ್ರೆಸ್‌ನ ಹಾಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಈ ಬಾರಿಯೂ ಅಭ್ಯರ್ಥಿಯಾಗಲಿದ್ದಾರೆ. ಬಿಜೆಪಿಯಲ್ಲಿ ಬಿ.ಎಂ. ಸುಕುಮಾರ ಶೆಟ್ಟಿ, ಮಾಜಿ ಸಚಿವ ಇತ್ತೀಚೆಗಷ್ಟೇ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿರುವ ಕೆ. ಜಯಪ್ರಕಾಶ್ ಹೆಗ್ಡೆ ಆಕಾಂಕ್ಷಿಯಾಗಿದ್ದಾರೆ.

ಸುಕುಮಾರ ಶೆಟ್ಟಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೋಪಾಲ ಪೂಜಾರಿ ಎದುರು ಪರಾಭವಗೊಂಡಿದ್ದರು. ಗೆಲುವು ಸಾಧಿಸಿದ್ದ ಅಭ್ಯರ್ಥಿ 82,277 ಮತ ಪಡೆದರೆ, ಸೋತ ಅಭ್ಯರ್ಥಿ 51,128 ಮತ ಗಳಿಸಿದ್ದರು. ಗೆಲುವಿನ ಅಂತರ 31.149 ಆಗಿತ್ತು.

ಆದರೆ ಸೋಲಿನ ನಂತರ ಮನೆ ಸೇರದ ಅವರು ಬರುವ ಚುನಾವಣೆಯಲ್ಲಿ ಜಯ ಸಾಧಿಸುವ ಉದ್ದೇಶದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲ ತಿಂಗಳುಗಳ ವರೆಗೂ ಪಕ್ಷದಲ್ಲಿ ಇನ್ನೊಬ್ಬ ಪ್ರತಿಸ್ಪರ್ಧಿ ಅಭ್ಯರ್ಥಿ ಇರಲಿಲ್ಲ. ಆದರೆ ಹೆಗ್ಡೆ ಅವರು ಆ ಕ್ಷೇತ್ರದಲ್ಲಿ ಅವಕಾಶ ಸಿಕ್ಕರೆ ಒಂದು ಕೈ ನೋಡುವ ಉದ್ದೇಶದಿಂದ ಓಡಾಟ ಆರಂಭಿಸಿದ್ದರು.

ಅಲ್ಲದೆ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಬೈಂದೂರಿನಿಂದ ಸ್ಪರ್ಧಿಸುವರು ಎಂಬ ಸುದ್ದಿ ಸಹ ಇತ್ತು. ಶಿಕಾರಿಪುರದ ಹಾಲಿ ಶಾಸಕರಾಗಿರುವ ಅವರು ತಂದೆಗೆ ಕ್ಷೇತ್ರ ಬಿಟ್ಟುಕೊಡುವ ಅನಿವಾರ್ಯತೆ ಇರುವುದರಿಂದ ವಲಸೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸದ್ಯಕ್ಕೆ ಅಂತಹ ಸುದ್ದಿ ಇಲ್ಲ. ಬೈಂದೂರು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಭಾಗವಾಗಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ ಹೆಗ್ಡೆ ಅವರು ಕುಂದಾಪುರ ಕ್ಷೇತ್ರದಲ್ಲಿ ಹೆಚ್ಚು ಓಡಾಡುತ್ತಿದ್ದಾರೆ. ಆದ್ದರಿಂದ ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ ಅವರೇ ಅಭ್ಯರ್ಥಿಯಾಗುವ ಎಲ್ಲ ಸಾಧ್ಯತೆ ಇದೆ. ಕಾರ್ಮಿಕರ ವೇದಿಕೆಯ ಅಧ್ಯಕ್ಷ ರವಿ ಶೆಟ್ಟಿ ಅವರನ್ನು ಅಭ್ಯರ್ಥಿ ಎಂದು ಜೆಡಿಎಸ್ ಘೋಷಣೆ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry