‘ನಾನೇ ಹಿಂದುಳಿದ ವರ್ಗಗಳ ನೈಜ ನಾಯಕ’

7

‘ನಾನೇ ಹಿಂದುಳಿದ ವರ್ಗಗಳ ನೈಜ ನಾಯಕ’

Published:
Updated:
‘ನಾನೇ ಹಿಂದುಳಿದ ವರ್ಗಗಳ ನೈಜ ನಾಯಕ’

ರಾಮನಗರ: ‘ಹಿಂದುಳಿದ ವರ್ಗಗಳ ನಿಜವಾದ ನಾಯಕ ನಾನೇ. ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳಿಗೆ ಏನೂ ಮಾಡಲಿಲ್ಲ, ಅವರು ಹಿಂದುಳಿದ ವರ್ಗಗಳ ನಾಯಕ ಆಗೋಕೆ ಸಾಧ್ಯವಿಲ್ಲ’ ಎಂದು ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜಿ.ಜೆ.ಪುಟ್ಟಸ್ವಾಮಿ ಹೇಳಿದರು.

ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಜಿಲ್ಲಾ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳನ್ನು ಭೇಟಿ ಮಾಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗದವರ ಅಭಿವೃದ್ದಿಗೆ ಶಾಶ್ವತವಾದ ಸಂವಿಧಾನಾತ್ಮಕವಾದ ಕಾಯ್ದೆ ಜಾರಿ ಮಾಡಿಲ್ಲ. ಆದರೂ ದೇವರಾಜು ಅರಸು ಹಾದಿಯಲ್ಲಿ ನಡೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ ಎಂದರು.

1994ರಲ್ಲಿ ಡಾ.ಚಿನ್ನಪ್ಪರೆಡ್ಡಿ ಆಯೋಗದ ವರದಿ ಪರಿಷ್ಕರಣೆಗೆ ಸಮಿತಿ ರಚಿಸಲಾಗಿತ್ತು. ಮಾಹಿತಿಯಿಂದ ವಂಚಿತರಾಗಿದ್ದ 32 ಹಿಂದುಳಿದ ವರ್ಗಗಳ ಬಗ್ಗೆ ಅಂಕಿ ಅಂಶಗಳ ಮಾಹಿತಿ ನೀಡಲಾಯಿತು. ತದ ನಂತರ ಹಿಂದುಳಿದ ವರ್ಗಗಳಿಗೆ ಮಾರಕವಾಗಿದ್ದ 1986ರ ಮೀಸಲಾತಿ ಆದೇಶವನ್ನು ರದ್ದುಗೊಳಿಸಿ ಕ್ಯಾಟಗರಿ 1 ಮತ್ತು 2ಎ ಮೀಸಲಾತಿಗೆ ಅನುಮೋದನೆ ದೊರೆತಿದೆ ಎಂದರು.

‘ಅಂದಿನಿಂದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ದೊರಕುತ್ತಿದೆ. ಇದು ನನ್ನ ಶ್ರಮ, ಆದರೆ ಸಿದ್ದರಾಮಯ್ಯ ಇಂತಹದೊಂದು ಕಾನೂನು ರೂಪಿಸಲಿಲ್ಲ’ ಎಂದು ಆರೋಪಿಸಿದರು.

ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಬಿಜೆಪಿ ಸರ್ಕಾರ ಸಾಕಷ್ಟು ಕಾಳಜಿಯನ್ನು ವಹಿಸಿತ್ತು. ಸಿದ್ದರಾಮಯ್ಯ ಕೋಟ್ಯಧಿಪತಿಗಳಿಗೆ ಪ್ರಾತಿನಿಧ್ಯ ಕೊಡಿಸಿದ್ದಾರೆ ಎಂದು ತಿಳಿಸಿದರು.

2014ರಲ್ಲಿ ಅಧಿಕಾರ ಹಿಡಿದ ಸಿದ್ದರಾಮಯ್ಯ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ ದುರ್ಬಲ ವರ್ಗದವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಮೀಸಲಾತಿ ದೊರಕಿಸಿಕೊಡುವುದಾಗಿ ಪೌರುಷ ಮೆರೆದಿದ್ದರು. ಆದರೆ 2015ರಲ್ಲೇ ಸಮೀಕ್ಷೆ ಪೂರ್ಣಗೊಂಡಿದೆ. 3 ವರ್ಷ ಕಳೆದರೂ ಸಮೀಕ್ಷೆ ಪ್ರಕಟವಾಗಿಲ್ಲ. ಸಮೀಕ್ಷೆಗೆ ₹200 ಕೋಟಿ ವೆಚ್ಚವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಹಿಂದುಳಿದ ವರ್ಗಗಳ ಹಲ‌ವಾರು ಇತಿಹಾಸ ಪುರುಷರ ಸ್ಮಾರಕ ನಿರ್ಮಾಣಕ್ಕೆ ಮತ್ತು ಸಮುದಾಯಗಳ ಅಭಿವೃದ್ದಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿದ್ದರು ಎಂದರು.

3ರಂದು ಕಾಗಿನೆಲೆಯಲ್ಲಿ ಸಮಾವೇಶ: ಏಪ್ರಿಲ್ 3ರಂದು ಕಾಗಿನೆಲೆಯಲ್ಲಿ ಬಿಜೆಪಿ ವತಿಯಿಂದ ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸಲಾಗಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ರೈಲ್ವೆ ಮಂತ್ರಿ ಪಿಯೂಷ್ ಗೋಯೆಲ್, ಕೇಂದ್ರದ ಸಚಿವರು, ರಾಜ್ಯದ ಬಿಜೆಪಿ ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಮುಂಬರುವ‌ ಚುನಾವಣೆಯ ಹಿನ್ನೆಲೆಯಲ್ಲಿಯೂ ಬಿಜೆಪಿ ಹಿಂದುಳಿದ ಮೋರ್ಚಾದ ಬೂತ್ ಮಟ್ಟದ ಸಮಿತಿಗಳ ಮೂಲಕವೂ ಬಿಜೆಪಿ ಪಕ್ಷದ ಸ್ಪಂದಿಸಿರುವ ಬಗ್ಗೆ ಮಾಹಿತಿ ನೀಡಿ ಮತದಾರರಲ್ಲಿ ಜಾಗೃತಿ ಮೂಡಿಸುವುದಾಗಿ ತಿಳಿಸಿದರು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವರ್ತೂರು ಶ್ರೀಧರ, ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ವಿಷಕಂಠ, ಬಿಜೆಪಿ ಮುಖಂಡರಾದ ಎಸ್.ಆರ್.ನಾಗರಾಜು, ಲೀಲಾವತಿ, ಚಂದ್ರಶೇಖರ ರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry