ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಹೋರಾಟ; ಈ ಹಠ ಸರಿಯಲ್ಲ: ಎಚ್‌.ಡಿ.ದೇವೇಗೌಡ

Last Updated 29 ಮಾರ್ಚ್ 2018, 11:24 IST
ಅಕ್ಷರ ಗಾತ್ರ

ಹಾಸನ: ಕಾವೇರಿ ನೀರು ಹಂಚಿಕೆ ಸಂಬಂಧ ನೀರು ನಿರ್ವಹಣಾ ಮಂಡಳಿ ರಚನೆಗೆ ಲೋಕಸಭೆಯಲ್ಲಿ ತಮಿಳುನಾಡು ಹೋರಾಟ ನಡೆಸಿರುವ ಹಿನ್ನೆಲೆ, ಯಾರೂ ಉದ್ರೇಕಕ್ಕೆ ಒಳಗಾಗಬಾರದು ಎಂದು ಸಂಸದ ಎಚ್.ಡಿ.ದೇವೇಗೌಡ ಗುರುವಾರ ಮನವಿ ಮಾಡಿದರು.

ಒಮ್ಮೆಗೇ ಸುಪ್ರೀಂ ಆದೇಶ ಜಾರಿ ಮಾಡುವುದು ಕಷ್ಟ ಎಂದು ಕೇಂದ್ರ ಹೇಳಿದೆ. ಆದರೂ ತಮಿಳುನಾಡಿನ ಮಿತ್ರರು ಉಗ್ರ ಹೋರಾಟಕ್ಕೆ ಮುಂದಾಗಿದ್ದು, ಒಬ್ಬ ಸಂಸದರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದಾರೆ. ಒಂದು ರಾಜ್ಯ ಹೀಗೆ ಹಠ ಹಿಡಿಯುವುದು ಸರಿಯಲ್ಲ. ಸೌಹಾರ್ದಯುತವಾಗಿ ಬಗೆ ಹರಿಸಿಕೊಳ್ಳಬೇಕು ಎಂದು ಹೇಳಿದರು.

ಮೊದಲು ಕೇಂದ್ರ‌ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ 4 ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಳಗೊಂಡ ಸಮಿತಿ ರಚಿಸಲಿ. ಅಲ್ಲಿ‌ ನೀರಿನ‌ ಸ್ಥಿತಿಗತಿ ಅಧ್ಯಯನ ಮಾಡುವ ತಜ್ಞರೂ ಇರಲಿ. ಅದರ‌ 5 ವರ್ಷಗಳ ಚಟುವಟಿಕೆ ನೋಡೋಣ, ಸಾಧಕ–ಬಾಧಕ ನೋಡಿ ನಂತರ ಮುಂದಿನ ನಿರ್ಧಾರಕ್ಕೆ ಬರಲಿ ಎಂದರು.

ಜಾತ್ಯಾತೀತ ಶಕ್ತಿಗಳು ಒಂದಾಗಿ..
ದೇಶದಲ್ಲಿ ಜಾತ್ಯಾತೀತ ಶಕ್ತಿಗಳು ಒಂದಾಗುವ ವಿಚಾರವಾಗಿ  ಅನೇಕ ನಾಯಕರು ಮಾತನಾಡಿದ್ದಾರೆ. ನನ್ನದು ಅಸಹಕಾರ ಅಲ್ಲ. ಸದ್ಯಕ್ಕೆ ನಾನು ಒಕ್ಕೂಟ ಸೇರುವುದಿಲ್ಲ ಹಾಗೂ ಕರ್ನಾಟಕ ವಿಧಾನಸಭಾ ಚುನಾವಣೆ ಮುಗಿಯುವರೆಗೆ ಈ ಕುರಿತು ಮಾತನಾಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು. 

ರಾಜ್ಯಕ್ಕೆ 2 ರಾಷ್ಟ್ರೀಯ ಪಕ್ಷಗಳಿಂದ ಪೆಟ್ಟು ಬಿದ್ದಿದೆ. ಇವರಿಬ್ಬರ ವಿರುದ್ಧ ನಾನು ಹೋರಾಡಬೇಕಿದೆ. ಚುನಾವಣೆ ಬಂದಾಗ ಅಡಿಕೆ ಸಮಸ್ಯೆ ಮಾತನಾಡುವವರು ಇಲ್ಲಿವರೆಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದರು. 

ಮಾಯಾವತಿ ರಾಜ್ಯದ 3 ಕಡೆ ಚುನಾವಣಾ ಪ್ರಚಾರಕ್ಕೆ ಬರುತ್ತಾರೆ. ಬಾಂಬೆ, ಹೈದ್ರಾಬಾದ್ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಸಮಾವೇಶ ನಡೆಯಲಿವೆ.

ಏಪ್ರಿಲ್ 2ರಂದು ಹಾಸನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು, ಒಂದು ಲಕ್ಷಕ್ಕೂ ಅಧಿಕ ಜನ‌ ಸೇರಲಿದ್ದಾರೆ ಎಂದರು. ಸಂದೇಶ್ ನಾಗರಾಜ್ ಜತೆಗೆ ಮಾತನಾಡಿದ್ದು, ಅವರು ಜೆಡಿಎಸ್ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT