ಮುಂದುವರಿದ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯ

7
ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿ; ಗೋಡೆ ಮೇಲೆ ಬರೆದಿದ್ದ ಜನಪ್ರತಿನಿಧಿಗಳ ಹೆಸರಿಗೂ ಮುಕ್ತಿ

ಮುಂದುವರಿದ ಫ್ಲೆಕ್ಸ್, ಬ್ಯಾನರ್ ತೆರವು ಕಾರ್ಯ

Published:
Updated:

ಕಂಪ್ಲಿ: ವಿಧಾನಸಭೆ ಚುನಾವಣೆ ಚುನಾವಣೆ ಘೋಷಣೆಯಾಗಿ, ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ, ಇಲ್ಲಿಯ ಪುರಸಭೆ ಅಧಿಕಾರಿಗಳು ಪಟ್ಟಣದ ವಿವಿಧೆಡೆ ಅಳವಡಿಸಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಮಂಗಳವಾರ ಸಂಜೆ ತೆರವುಗೊಳಿಸಿದರು.

ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಹಳೇ ಮತ್ತು ಹೊಸ ಬಸ್‌ ನಿಲ್ದಾಣದಲ್ಲಿ ಹೆಚ್ಚು ಫೆಕ್ಸ್‌ಗಳು ರಾರಾಜಿಸುತ್ತಿದ್ದವು.  ಇದೀಗ ತೆರವು ಕಾರ್ಯಾಚರಣೆ ನಡೆಸಿರುವುದರಿಂದ, ಆ ಭಾಗ ಬಿಕೋ ಎನ್ನುತ್ತಿದೆ.

‘ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಯಾವುದೇ ಕಾರಣಕ್ಕೂ ಗೋಡೆ ಬರಹ ಬರೆಯವುದಾಗಲಿ, ಬ್ಯಾನರ್, ಕಟೌಟ್‌ ಹಾಗೂ ಫ್ಲೆಕ್ಸ್‌ಗಳನ್ನು ಅಳವಡಿಸುವುದಾಗಲಿ ಮಾಡಬಾರದು’ ಎಂದು ಇಲ್ಲಿಯ ತಹಶೀಲ್ದಾರ್‌ ಬಿ. ರವೀಂದ್ರಕುಮಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿ ಸೂಚಿಸಿದ್ದಾರೆ.

ಕಂದಾಯ ನಿರೀಕ್ಷಕ ಕೆ. ವೆಂಕೋಬಾ, ಕಂದಾಯ ಅಧಿಕಾರಿ ಎಸ್.ಎಸ್. ತಂಗಡಗಿ, ಹಿರಿಯ ನೈರ್ಮಲ್ಯ ನಿರೀಕ್ಷಕ ಸಿ. ಫಕ್ರುದ್ದೀನ್‌ಸಾಬ್ ಸೇರಿದಂತೆ ಪುರಸಭೆ, ಕಂದಾಯ ಅಧಿಕಾರಿಗಳು ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಮರೆಯಾದ ಹೆಸರುಗಳು:

ಹಗರಿಬೊಮ್ಮನಹಳ್ಳಿ: ವಿಧಾನಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ಇಲ್ಲಿನ ಆಟೊ ನಿಲ್ದಾಣಗಳ ಮೇಲೆ ಬರೆಯಲಾಗಿದ್ದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರು, ಸ್ಥಾಯಿಸಮಿತಿ ಅಧ್ಯಕ್ಷರು ಹಾಗೂ ಸದಸ್ಯರ ಹೆಸರುಗಳನ್ನೂ ಬುಧವಾರ ತೆಗೆಯಲಾಗಿದೆ.ಪಟ್ಟಣದ ರಾಷ್ಟ್ರೋತ್ಥಾನ ಶಾಲೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಟೋ ನಿಲ್ದಾಣಗಳ ಬೋರ್ಡ್‌ಗಳಿಗೆ ದಿನಪತ್ರಿಕೆಗಳಿಂದ ಮರೆ ಮಾಚಲಾಗುತ್ತಿದೆ. ಕೆಲವು ಕಡೆಗಳಲ್ಲಿ ಬಣ್ಣ ಹಚ್ಚಲಾಗಿದೆ.

ಪುರಸಭೆ ಇಲಾಖೆಯ ಸಿಬ್ಬಂದಿ ಪಟ್ಟಣದಲ್ಲೆಡೆ ತೆರಳಿ ಜನಪ್ರತಿನಿಧಿಗಳ ಹೆಸರುಗಳಿಗೆ ಅಗತ್ಯ ವಸ್ತುಗಳಿಂದ ಮರೆಮಾಚುತ್ತಿರುವುದು ಈಗ ನೀತಿ ಸಂಹಿತೆ ಜಾರಿಯಾದ ಎರಡನೇ ದಿನದಲ್ಲಿ ಸಾಮಾನ್ಯವಾಗಿದೆ.ತಾಲ್ಲೂಕಿನ ಮರಬ್ಬಿಹಾಳು, ಹಂಪಾಪಟ್ಟಣ, ಉಪ್ಪಾರಗಟ್ಟಿ, ಮಾಲವಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರವಾಗಿ ಬರೆಯಲಾಗಿದ್ದ ಗೋಡೆ ಬರಹಗಳಿಗೂ ಸುಣ್ಣ ಬಳಿಯಲಾಗಿದೆ.

ಪಟ್ಟಣದ ಬಸವೇಶ್ವರ ಬಜಾರ್‌ನಲ್ಲಿ ಕೇವಲ ಬ್ಯಾನರ್‌ಗಳಿಂದ ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ಸ್ಥಳ ಈಗ ಬ್ಯಾನರ್‌ ಮುಕ್ತವಾಗಿದೆ. ಒಟ್ಟಾರೆಯಾಗಿ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ ಪ್ರಮುಖ ರಸ್ತೆಗಳ ಚಿತ್ರಣವೇ ಬದಲಾಗಿದೆ. ರಾಜಕೀಯಕ್ಕೆ ಸಂಬಂಧಿಸಿದ ಎಲ್ಲ ತರಹದ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ.

ಪ್ರವಾಸಿ ಮಂದಿರಕ್ಕೆ ಬೀಗ

ಹೂವಿನಹಡಗಲಿ: ವಿಧಾನಸಭೆ ಚುನಾವಣೆ ನೀತಿ ಸಂಹಿತಿ ಜಾರಿಯಾಗುತ್ತಿದ್ದಂತೆ ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರಕ್ಕೆ ಬೀಗ ಜಡಿಯಲಾಯಿತು.ನಿತ್ಯವೂ ರಾಜಕೀಯ ಚಟುವಟಿಕೆಗಳ ತಾಣವಾಗಿರುತ್ತಿದ್ದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಯ ಬಳಿಕ ಮೌನ ಆವರಿಸಿತು. ಆವರಣದಲ್ಲಿ ಬೀಡುಬಿಟ್ಟಿದ್ದ ಖಾಸಗಿ ವಾಹನಗಳನ್ನು ಹೊರ ಹಾಕಿದ ಅಧಿಕಾರಿಗಳು ಪ್ರವಾಸಿ ಮಂದಿರದ ಮುಖ್ಯದ್ವಾರವನ್ನು ಬಂದ್‌ ಮಾಡಿ ಬೀಗ ಜಡಿದರು.

ತಹಶೀಲ್ದಾರ್ ಮೇಘರಾಜ ನಾಯಕ ಅವರು ಸಿಬ್ಬಂದಿ ಸಭೆ ನಡೆಸಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದರು. ಪಟ್ಟಣದ ಅಂಬೇಡ್ಕರ್‌ ವೃತ್ತ, ತಾಲ್ಲೂಕು ಪಂಚಾಯಿತಿ ಕಚೇರಿ, ಪ್ರವಾಸಿ ಮಂದಿರ, ಸರ್ಕಾರಿ ಹಾಸ್ಟೆಲ್, ಎ.ಪಿ.ಎಂ.ಸಿ., ಕೈಗಾರಿಕಾ ಪ್ರದೇಶ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಹಾಕಲಾಗಿದ್ದ ಸರ್ಕಾರದ ವಿವಿಧ ಯೋಜನೆಗಳ ಜಾಹೀರಾತು ಫಲಕ, ರಾಜಕಾರಣಿಗಳ ಫ್ಲೆಕ್ಸ್‌, ಬಂಟಿಂಗ್ಸ್‌ಗಳನ್ನು ತೆರವುಗೊಳಿಸಲಾಯಿತು. ಪಟ್ಟಣದ ರಸ್ತೆ ವಿಭಜಕ ಹಾಗೂ ಇತರೆ ಕಡೆಗಳಲ್ಲಿ ಅಂಟಿಸಿದ್ದ ರಾಜಕೀಯ ಪಕ್ಷಗಳ ಪೋಸ್ಟರ್‌ಗಳನ್ನು ಪುರಸಭೆ ಸಿಬ್ಬಂದಿ ತೆರವುಗೊಳಿಸಿದರು.ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳ ಆವರಣದಲ್ಲಿ ಅಳವಡಿಸಿರುವ ಜಾಹೀರಾತು ಫಲಕ ಹಾಗೂ ಫ್ಲೆಕ್‌ಗಳ ತೆರವು ಕಾರ್ಯ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry