ಖುಷಿ ತಂದ ಇಂಗ್ಲಿಷ್‌ ಪ್ರಶ್ನೆಪತ್ರಿಕೆ!

7
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಹರ್ಷ; ಮಕ್ಕಳ ಸಂಭ್ರಮಕ್ಕೆ ನಿಟ್ಟುಸಿರುವ ಬಿಟ್ಟ ಪೋಷಕರು

ಖುಷಿ ತಂದ ಇಂಗ್ಲಿಷ್‌ ಪ್ರಶ್ನೆಪತ್ರಿಕೆ!

Published:
Updated:
ಖುಷಿ ತಂದ ಇಂಗ್ಲಿಷ್‌ ಪ್ರಶ್ನೆಪತ್ರಿಕೆ!

ಬಳ್ಳಾರಿ: ನಗರದ ಕೋಟೆ ಪ್ರದೇಶದಲ್ಲಿರುವ ಸಂತ ಜಾನ್‌ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ 12ಕ್ಕೆ ಹೊರಬಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಲ್ಲಿ ಸಂಭ್ರಮವಿತ್ತು. ಖುಷಿಯ ನಗುವಿತ್ತು. ಏಕೆಂದರೆ ಅವರು ಎದುರಿಸಿದ್ದ ಇಂಗ್ಲಿಷ್‌ ಪ್ರಶ್ನೆಪತ್ರಿಕೆ ಉತ್ತರಿಸಲು ಬಲು ಸುಲಭವಾಗಿತ್ತು!

ಆದರೆ, ಪರೀಕ್ಷೆಯ ಅವಧಿ ಮುಗಿಯುವುದಕ್ಕೂ ಮುಂಚೆ ಶಾಲೆಯ ಹೊರಗೆ ತಮ್ಮ ಮಕ್ಕಳಿಗಾಗಿ ಕಾಯುತ್ತಾ ನಿಂತಿದ್ದ ಪೋಷಕರಲ್ಲಿ ಮಾತ್ರ ದುಗುಡವಿತ್ತು.ಮಕ್ಕಳ ಇಂಗ್ಲಿಷ್‌ ಪರೀಕ್ಷೆ ಕಷ್ಟಕರವಾಗಿರುತ್ತದೇನೋ ಎಂಬ ಆತಂಕವೂ ಇತ್ತು. ಆದರೆ, ಪರೀಕ್ಷೆ ಮುಗಿದ ಬಳಿಕ ಮಕ್ಕಳೊಂದಿಗೆ ಮಾತನಾಡಿದ ಪೋಷಕರು, ಅವರ ಮುಖದ ಮೇಲೆ ಕಂಡ ನಿರಾಳಭಾವವನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

‘ಪ್ರಶ್ನೆಪತ್ರಿಕೆ ಬಹಳ ಈಸಿಯಾಗಿತ್ತು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿರುವೆ. ಪ್ರಶ್ನೆಪತ್ರಿಕೆ ಕಷ್ಟಕರವಾಗಿದ್ದರೆ ಏನು ಮಾಡುವುದು ಎಂದು ಪರೀಕ್ಷೆಯ ಆರಂಭದಲ್ಲಿ ಭಯವಾಗಿತ್ತು. ಆದರೆ ಪ್ರಶ್ನೆಗಳನ್ನು ಓದುತ್ತಿದ್ದಂತೆ ನನ್ನ ಭಯವೆಲ್ಲ ಕರಗಿ ಹೋಯಿತು’ ಎಂದು ಸಂತ ಜೋಸೆಫರ ಶಾಲೆಯ ನಾಜಿಯಾ ಹೇಳಿದರು.

‘ಬಹುತೇಕರಿಗೆ ಗಣಿತ ಮತ್ತು ಇಂಗ್ಲಿಷ್‌ ಬಗ್ಗೆ ಮಾತ್ರ ಭಯ ಹೆಚ್ಚಿರುತ್ತದೆ. ಪರೀಕ್ಷೆ ಆರಂಭವಾಗುವುದಕ್ಕೂ ಮುಂಚೆ ನಮ್ಮ ಮನೆಯಲ್ಲಿ ಎಲ್ಲರಿಗೂ ಆತಂಕವಿತ್ತು. ಮಗಳ ಮಾತು ಕೇಳಿದ ಮೇಲೆ ಸಮಾಧಾನವಾಯಿತು’ ಎಂದು ಆಕೆಯ ತಂದೆ ಮೆಹಬೂಬ್‌ಪಾಷಾ ಹೇಳಿದರು.

ಪರೀಕ್ಷೆಯ ಆರಂಭದಿಂದ ಕೊನೆವರೆಗೂ ಪರೀಕ್ಷಾ ಕೇಂದ್ರದ ಹೊರಗೆ ಅವರು ಮಗಳಿಗಾಗಿ ಕಾಯುತ್ತಿದ್ದರು. ಅವರಂತೆಯೇ ಹತ್ತಾರು ಪೋಷಕರು ರಸ್ತೆ ಬದಿಯ ಮರದ ನೆರಳಲ್ಲಿ ಆಶ್ರಯ ಪಡೆದಿದ್ದರು.

ಓದಿದ್ದೆಲ್ಲ ಬಂತು: ನಗರ ಹೊರ ವಲಯದ ಆದಳ್ಳಿಯ ಸರ್ಕಾರಿ ಪ್ರೌಢ ಶಾಲೆಯ ಶಬೀನಾ ಬಿ, ಬಟ್ಟಿ ಪ್ರದೇಶದ ಶ್ರೀನಾಗಯ್ಯ ಚೌಧರಿ ಪ್ರೌಢಶಾಲೆಯ ಸಿ.ಎಚ್‌.ಹರ್ಷಿತಾ, ಅವರಿಗೂ ಪರೀಕ್ಷೆ ಸುಲಭವಾಗಿತ್ತು.

‘ನಾವು ಓದಿಕೊಂಡ ವಿಷಯಗಳ ಕುರಿತ ಪ್ರಶ್ನೆಗಳಿದ್ದ ಕಾರಣ ನಮಗೆ ಸುಲಭವಾಯಿತು. ಶಾಲೆಯಲ್ಲಿ ಈ ಮುಂಚಿನ ಪ್ರಶ್ನೆಪತ್ರಿಕೆಗಳಿಗೆ ಉತ್ತರ ಬರೆಸಿದ್ದರು. ಪೂರ್ವಸಿದ್ಧತಾ ಪರೀಕ್ಷೆಯನ್ನೂ ಬರೆದಿದ್ದರಿಂದ ಈಗ ಕಷ್ಟವಾಗಲಿಲ್ಲ’ ಎಂದರು.

ಕನ್ನಡವೂ ಸುಲಭವಾಗಿತ್ತು!

ಕನ್ನಡವನ್ನು ದ್ವಿತೀಯ ಭಾಷೆಯಾಗಿ ತೆಗೆದುಕೊಂಡಿದ್ದ ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಸುಮಯಾ ಫಿರ್ದೋಸ್‌ಗೂ ಇಂದು ಸಂತಸದ ದಿನವಾಗಿತ್ತು. ಏಕೆಂದರೆ ಈ ಮುನ್ನ ನಡೆದಿದ್ದ ಪ್ರಥಮ ಭಾಷೆ ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಗೆ ಸಂಪೂರ್ಣವಾಗಿ ಉತ್ತರಿಸಲು ಆಕೆಗೆ ಆಗಿರಲಿಲ್ಲ.

‘ಆಗ ಸಮಯ ಸಾಕಾಗಿರಲಿಲ್ಲ. ಇವತ್ತು ಕನ್ನಡ ಪತ್ರಿಕೆ ಸುಲಭವಾಗಿತ್ತು’ ಎಂದು ಹೇಳಿದರು. ಆಕೆಯ ತಂದೆ ಅಬ್ದುಲ್‌ ಮಾಜಿದ್‌ ಅವರಲ್ಲೂ ಸಂತಸ ಇಣುಕಿತ್ತು.ಮಹಮ್ಮದೀಯ ಶಾಲೆಯ ವಿದ್ಯಾರ್ಥಿ ಸೈಯದ್‌ ಫದನ್‌ ಅಲಿ ಕೂಡ ಕನ್ನಡ ಪ್ರಶ್ನೆಪತ್ರಿಕೆ ಕುರಿತು ಸಂತಸ ವ್ಯಕ್ತಪಡಿಸಿದರು.

ಕನ್ನಡೇತರವಾದದ್ದನ್ನು ಮಾತೃಭಾಷೆಯಾಗುಳ್ಳ ಹಲವರು ಕನ್ನಡವನ್ನು ದ್ವಿತೀಯ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರಥಮ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡುವುದು ಕಷ್ಟಕರ ಎಂಬ ಕಾರಣಕ್ಕೆ ಈ ಆಯ್ಕೆ ನಡೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry