ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ

7
ಸಕಾಲಕ್ಕೆ ಬಾರದ ‘108’ ಆಂಬುಲೆನ್ಸ್: ತಾಯಿ ಹೊಟ್ಟೆಯಲ್ಲೇ ಮಗು ಸಾವು

ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ

Published:
Updated:

ಕೊಪ್ಪ: ಪಟ್ಟಣ ಹೊರವಲಯದ ಮೇಲಿನಕೌರಿಯಲ್ಲಿ ಹೆರಿಗೆ ನೋವು ಕಾಣಿಸಿಕೊಂಡ ತುಂಬು ಗರ್ಭಿಣಿಯನ್ನು ಹೆರಿಗೆಗಾಗಿ ಆಸ್ಪತ್ರೆಗೆ ಸಾಗಿಸಲು ‘108’ ಆಂಬುಲೆನ್ಸ್‌ಗೆ ಕರೆ ಮಾಡಿದರೂ ಸ್ಪಂದಿಸದ ಕಾರಣ, ಅವಧಿ ಮೀರಿದ ಮಗು ತಾಯಿ ಹೊಟ್ಟೆಯಲ್ಲೇ ಮಂಗಳವಾರ ಮೃತಪಟ್ಟಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಕೊಪ್ಪ ಸಾರ್ವಜನಿಕ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.

ಮೇಲಿನಕೌರಿಯ ಗೋವಿಂದರಾಜ್ ಎಂಬ ಕೂಲಿ ಕಾರ್ಮಿಕರ ಪುತ್ರಿ ಚೈತ್ರ (21) ಮಂಗಳವಾರ ಬೆಳಿಗ್ಗೆ ಹೆರಿಗೆ ನೋವಿನಿಂದ ಬಳಲುತ್ತಿದ್ದು, ಕೂಡಲೇ ‘108’ ಸೇವಾಕೇಂದ್ರಕ್ಕೆ ಕರೆ ಮಾಡಲಾಯಿತು. ನಾಲ್ಕೈದು ಭಾರಿ ಕರೆ ಮಾಡಿದಾಗಲೂ ಕರೆ ಸ್ಥಗಿತ ಮಾಡಿದ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ದಾರಿ ಕಾಣದೆ ಪ್ರಯಾಣಿಕರ ಆಟೋದಲ್ಲಿ ಚೈತ್ರರನ್ನು ಕೊಪ್ಪ ಆಸ್ಪತ್ರೆಗೆ ಕರೆತರಲಾಯಿತು. ಆಕೆಯ ಪರೀಕ್ಷೆ ನಡೆಸಿದ ವೈದ್ಯರು ಅವಧಿ ಮೀರಿದ್ದರಿಂದ ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ ಎಂದು ದೃಢಪಡಿಸಿದರು. ತಾಯಿ ಚೈತ್ರಾ ಅವರ ಆರೋಗ್ಯವೂ ಹದಗೆಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊಪ್ಪ ಆಸ್ಪತ್ರೆಯಲ್ಲಿ ಕಾರ್ಯಾಚರಿಸುತ್ತಿರುವ 108 ಆಂಬುಲೆನ್ಸ್‌ ವಾಹನದಲ್ಲಿ ಅಗತ್ಯಕ್ಕೆ ಬೇಕಾದ ಆಕ್ಸಿಜನ್ ಪೂರೈಕೆ ಇಲ್ಲದ ಬಗ್ಗೆಯೂ ಹಲವಾರು ದೂರುಗಳು ಕೇಳಿ ಬಂದಿತ್ತು. ಕಳೆದ ತಿಂಗಳು ಕೆಡಿಪಿ ಸಭೆಯಲ್ಲೂ ಅದರ ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತವಾಗಿತ್ತು. ಅಲ್ಲದೆ, ಕಳೆದೊಂದು ತಿಂಗಳಿಂದ ಆಂಬುಲೆನ್ಸ್‌ ಕೆಟ್ಟು ಆಸ್ಪತ್ರೆಯ ಹಿಂಭಾಗದಲ್ಲಿ ಅನಾಥವಾಗಿ ನಿಂತಿದೆ. ಜಿಲ್ಲಾ ಆರೋಗ್ಯಾಧಿಕಾರಿಯ ಗಮನಕ್ಕೆ ತಂದಿದ್ದು ಇಲ್ಲಿಯವರೆಗೂ ವಾಹನ ರಿಪೇರಿಯಾಗಿಲ್ಲ. ತುರ್ತು ಸಂದರ್ಭಗಳಲ್ಲಿ ಪ್ರಾಣ ಉಳಿಸಲೆಂದೇ ಸರ್ಕಾರದಿಂದ ಮಂಜೂರಾಗಿರುವ ವಾಹನ ಸಕಾಲಕ್ಕೆ ಸಿಗದಿದ್ದರೆ ಇಂತಹ ಯೋಜನೆಗಳಾದರೂ ಏಕೆ ಬೇಕು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಪ್ರತಿಭಟನಾಕಾರರು 108ರ ಗ್ರಾಹಕರ ಸೇವಾ ಕೇಂದ್ರಕ್ಕೆ ಕರೆ ಮಾಡಿದಾಗ 2 ದಿನಗಳಲ್ಲಿ ಆಂಬುಲೆನ್ಸ್ ಸರಿಪಡಿಸುವ ಭರವಸೆ ನೀಡಿದರು. ಎರಡು ದಿನಗಳ ನಂತರವೂ ಆಂಬುಲೆನ್ಸ್ ಸೇವೆ ಸುಸ್ಥಿತಿಗೆ ಬರದಿದ್ದಲ್ಲಿ ಆಸ್ಪತ್ರೆಯ ಹಿಂಭಾಗದಲ್ಲಿ ನಿಂತಿರುವ ವಾಹನವನ್ನು ಸುಟ್ಟು ಹಾಕುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ತಾಲ್ಲೂಕು ರೈತ ಸಂಘದ ಕಾರ್ಯಾಧ್ಯಕ್ಷ ನವೀನ್ ಕರುವಾನೆ, ಪಟ್ಟಣ ಪಂಚಾಯಿತಿ ಸದಸ್ಯ ಸುಬ್ರಹ್ಮಣ್ಯ ಶೆಟ್ಟಿ, ತೆನೆ ಬಳಗದ ಅಧ್ಯಕ್ಷ ಚಿಂತನ್ ಬೆಳಗೊಳ, ಆಟೋ ಚಾಲಕರ ಸಂಘದ ಜಗದೀಶ್ ಸೇರಿದಂತೆ ರೈತ ಸಂಘ, ತೆನೆಬಳಗ, ಸಮನ್ವಯ ಆಟೋ ಚಾಲಕರ ಸಂಘ, ಧ್ರುವತಾರೆ ಕನ್ನಡ ಸಂಘ ಮುಂತಾದ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪರಿಹಾರ ನೀಡಲು ಒತ್ತಾಯ

‘108ರ ಸಿಬ್ಬಂದಿಗೆ ಸಾಕಷ್ಟು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸುವ ಸೌಜನ್ಯವನ್ನು ತೋರುತ್ತಿಲ್ಲ. 108ರ ಕರೆಗಳು ನೇರವಾಗಿ ಗ್ರಾಹಕರ ಸೇವಾ ಕೇಂದ್ರಕ್ಕೆ ಹೋಗಿ ಸಂಬಂಧಪಟ್ಟ ಆಯಾ ಕೇಂದ್ರಗಳಿಗೆ ತಲುಪಿಸುವ ಜವಾಬ್ದಾರಿ ಗ್ರಾಹಕರ ಸೇವಾ ಕೇಂದ್ರದ್ದಾಗಿರುತ್ತದೆ. 108ರ ಆಂಬುಲೆನ್ಸ್‌ ಜವಾಬ್ದಾರಿ ಹೊತ್ತಿರುವ ಜಿವಿಕೆ ಸಂಸ್ಥೆ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಪರಿಹಾರ ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ನವೀನ್ ಕರುವಾನೆ ಒತ್ತಾಯಿಸಿದರು.

‘ನಾನು ಕರೆ ಮಾಡಿದಾಗ 108 ಸಿಬ್ಬಂದಿ ಕರೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದರೆ ನನ್ನ ಮಗಳ ಮಗುವಿನ ಪ್ರಾಣವನ್ನು ಉಳಿಸಬಹುದಿತ್ತು. ಈ ರೀತಿಯ ಬೇಜವಾಬ್ದಾರಿ ವರ್ತನೆ ಪುನರಾವರ್ತನೆಯಾಗದಿರಲಿ. ನಮ್ಮಂತೆ ಬೇರೆ ಯಾರಿಗೂ ಈ ರೀತಿಯ ಪರಿಸ್ಥಿತಿ ಎದುರಾಗುವುದು ಬೇಡ’ ಎಂದು ಮಗುವಿನ ಅಜ್ಜ ಗೋವಿಂದರಾಜ್ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry