ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಶಿಕ್ಷಿತರಿಂದ ಆರೋಗ್ಯವಂತ ಸಮಾಜ

ಕಟ್ಟಡದ ದಶಮಾನೋತ್ಸವ– ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ಹೇಳಿಕೆ
Last Updated 29 ಮಾರ್ಚ್ 2018, 9:12 IST
ಅಕ್ಷರ ಗಾತ್ರ

ಬೀರೂರು: ಶಿಕ್ಷಣ ಪಡೆದವರು ಸಮಾಜದಲ್ಲಿ ಸಕ್ರಿಯ ಪಾತ್ರ ವಹಿಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಸರ್ಕಲ್ ಇನ್‌ಸ್ಪೆಕ್ಟರ್ ನಾಗರಾಜ್ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ಕಟ್ಟಡದ ದಶಮಾನೋತ್ಸವ ಮತ್ತು 2017-18ನೇ ಸಾಲಿನ ರಾಷ್ಟ್ರೀಯ ಸೇವಾಯೋಜನೆ, ರೇಂಜರ್ಸ್, ರೋವರ್ಸ್ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಇಂದು ಶಿಕ್ಷಣದ ಕಾರಣದಿಂದ ಸಬಲವಾಗುತ್ತಿದೆ. ಯುವಸಮೂಹ ಜ್ಞಾನದ ಬಲದಿಂದ ಅಜ್ಞಾನ, ದುಷ್ಟತನ, ದೌರ್ಬಲ್ಯಗಳನ್ನು ತೊಲಗಿಸುವ ಸಂಕಲ್ಪ ಮಾಡಬೇಕು. ಓದಿನಲ್ಲಿ ಶ್ರದ್ಧೆ, ಬದುಕಿನಲ್ಲಿ ಶಿಸ್ತು, ಪೋಷಕರು, ಗುರುಗಳನ್ನು ಗೌರವಿಸುವ ಸಂಸ್ಕಾರ ಕಲಿತು ತಾವೇ ಬಾಳಬೇಕಾದ ಸಮುದಾಯಕ್ಕೆ ಸದೃಢ ಬುನಾದಿ ಹಾಕಬೇಕು. ಇದಕ್ಕೆ ಆರೋಗ್ಯಯುತ ಜೀವನವೂ ಮುಖ್ಯ. ಹಿಂದಿನ ಕಾಲದಲ್ಲಿ ಜನರು ಮನರಂಜನೆಗಾಗಿ ರೂಢಿಸಿಕೊಂಡ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ತಮ್ಮ ದೈಹಿಕ ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿದ್ದರು. ಆದರೆ, ಇಂದು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗಿ ಕ್ರೀಡಾ ಚಟುವಟಿಕೆಗಳನ್ನು ಕಡೆಗಣಿಸಲಾಗಿದೆ. ಇದರಿಂದ ಗ್ರಾಮೀಣ ಕ್ರೀಡೆಗಳು ಮರೆಯಾಗುವುದರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳು ದುಶ್ಚಟಗಳಿಗೆ ತುತ್ತಾಗದೆ ಉತ್ತಮ ಜೀವನ ರೂಪಿಸಿಕೊಳ್ಳಲು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿನಿಯರು ಕೀಳರಿಮೆ ಬಿಟ್ಟು ಆತ್ಮಸ್ಥೈರ್ಯ ಮೈಗೂಡಿಸಿಕೊಂಡು ದುಷ್ಟಶಕ್ತಿಗಳನ್ನು ಎದುರಿಸಬೇಕು ಎಂದು ಕಿವಿಮಾತು ಹೇಳಿದರು.

ಚಿಕ್ಕಮಗಳೂರು ಡಯಟ್‌ನ ನಿವೃತ್ತ ಪ್ರಾಂಶುಪಾಲ ಮಾಲತೇಶ್ ಮಾತನಾಡಿ, ‘ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವಿದ್ಯಾರ್ಥಿ ದೆಸೆಯಲ್ಲಿಯೇ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ನಿರ್ಧರಿಸಬೇಕು. ಮುಂದಿನ ಜೀನವದ ಬಗ್ಗೆ ಸ್ಪಷ್ಟ ಗುರಿ, ದಾರಿ ಕಂಡುಕೊಳ್ಳಬೇಕು. ಸಮಾಜ ನಮಗೆ ಗೌರವ, ಅಂತಸ್ತು ಎಲ್ಲವನ್ನು ನಮಗೆ ಕೊಟ್ಟಿದೆ. ಆದರೆ, ಸಮಾಜಕ್ಕೆ ನಮ್ಮ ಕೊಡುಗೆ ಏನು? ಎಂಬುದನ್ನು ಚಿಂತಿಸಬೇಕು. ಪದವಿ ಶಿಕ್ಷಣ ಪಡೆದು ಹೊರಹೊಮ್ಮುತ್ತಿರುವ ನೀವು ಸಮಾಜವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತು, ಸಮಸಮಾಜದ ರಾಯಭಾರಿಗಳಾಗಬೇಕು. ಸೇವೆ ಮಾಡುವ ಮನೋಭಾವವನ್ನು ಕೇವಲ ಮಾತಿನಲ್ಲಿ ಬಿಂಬಿಸದೆ ಸಾಧನೆ ಮೂಲಕ ದೃಢಪಡಿಸಿಸಬೇಕಿದೆ’ ಎಂದು ಹೇಳಿದರು.

ಪರಿಸರ ಪ್ರೇಮಿ ಬಿ.ಸಿ.ವೀರಭದ್ರಪ್ಪ ಮಾತನಾಡಿ, ‘ಜಾಗತೀಕರಣದ ಭರದಲ್ಲಿ ಯಂತ್ರ ಮತ್ತು ತಂತ್ರಜ್ಞಾನ ಆಧಾರಿತ ಜೀವನ ರೂಪಿಸಿಕೊಳ್ಳುತ್ತಿರುವ ನಾವು ಸರಳ ಮತ್ತು ಪರಿಸರಕ್ಕೆ ಪೂರಕ ಜೀವನ ಮಾಡುವುದನ್ನು ಮರೆತಿದ್ದೇವೆ. ಇದರ ಪರಿಣಾಮ ಪರಿಸರ ಬುಡಮೇಲಾಗುತ್ತಿದೆ. ಪರಿಸರ ಕಾಳಜಿ ಇಲ್ಲದೆ ಮರ, ಗಿಡಗಳ ನಾಶ, ಜಲಮೂಲಗಳ ಹಾಳುಗೆಡವುವಿಕೆ, ವಾತಾವರಣ ಕಲುಷಿತವಾಗಿಸುವ ಜೀವನಶೈಲಿ, ಯುವಜನರು ಮೊಬೈಲ್‌ ದಾಸರಾಗುವ ಮೂಲಕ ಪರಿಸರ ನಿರ್ಲಕ್ಷಿಸುತ್ತಿರುವ ಪರಿಣಾಮ ಭೂಮಿ ಕುದಿಯುತ್ತಿದೆ. ನಾವು ಸೃಷ್ಟಿಸಲು ಸಾಧ್ಯವಿಲ್ಲದ ಯಾವುದನ್ನೂ ಹಾಳು ಮಾಡುವ ಅಧಿಕಾರ ನಮಗಿಲ್ಲ ಎನ್ನುವ ಅರಿವು ಮೂಡಿದರೆ ಜಗತ್ತಿಗೆ ಒಳಿತು’ ಎಂದು ಪ್ರತಿಪಾದಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯೆ ಐರಿನ್ ಡಯಾಸ್ ಮಾತನಾಡಿ, ‘ಕೇವಲ ಪುಸ್ತಕ ಓದುವುದರಿಂದ ವಿದ್ಯೆ ಗಳಿಸಲು ಸಾಧ್ಯವಿಲ್ಲ. ಮನುಷ್ಯ ಮೃಗತ್ವದ ಭಾವನೆ ಬಿಟ್ಟು ಶಿಸ್ತು, ಶಾಂತಿ, ತಾಳ್ಮೆಯಿಂದ ಪರೋಪಕಾರಿಯಾಗಿ ಜೀವಿಸಬೇಕು. ನದಿ, ಭೂಮಿ, ಪ್ರಕೃತಿ, ಪರಿಸರ ಸ್ವಾರ್ಥಕ್ಕಾಗಿ ಚಿಂತಿಸಿದ್ದರೆ ಗಾಳಿ, ನೀರು, ಆಹಾರ ಮನುಷ್ಯನಿಗೆ ಮರೀಚಿಕೆಯಾಗುತ್ತಿತ್ತು ಎನ್ನುವ ತಿಳಿವಳಿಕೆ ಬೇಕು. ನಮ್ಮ ಒಳಿತಿಗಾಗಿ ಪರಿಸರಕ್ಕೆ ಧಕ್ಕೆ ಮಾಡುವುದು ಸಲ್ಲದು. ವಿದ್ಯಾರ್ಥಿ ಬದುಕಿನಲ್ಲಿಯೇ ಪರಿಸರ ಪ್ರಜ್ಞೆ ರೂಢಿಸಿಕೊಳ್ಳಿ’ ಎಂದು ಕರೆ ನೀಡಿದರು.

ಪಿಎಸ್‍ಐ ಕೆ.ಆರ್. ವಿನುತ್, ನಿವೃತ್ತ ಪ್ರಾಂಶುಪಾಲೆ ಗ್ಲಾಡಿಸ್ ಡಿಸೋಜ ಮಾತನಾಡಿದರು. ವಿವಿಧ ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕಾಲೇಜಿನ ಸಾಂಸ್ಕೃತಿಕ ವೇದಿಕೆಯ ಜಿ.ಸಿ.ಪ್ರಸಾದ್ ಕುಮಾರ್, ಮಾಧುರಿ ಮಾಳದ್ಕರ್, ಟಿ.ಸಿ.ಚಂದ್ರಶೇಖರ್, ಬಿ.ಗೋವಿಂದ ನಾಯಕ್, ಜಿ.ಎಸ್.ಶಿವಪ್ರಕಾಶ್, ಎಸ್.ಒ.ನಾಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT