ಆಮ್ಲಜನಕ ಕೊರತೆ: ಕಳವಳಕಾರಿ ಸಂಗತಿ

7
ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ವೀರಭದ್ರಪ್ಪ

ಆಮ್ಲಜನಕ ಕೊರತೆ: ಕಳವಳಕಾರಿ ಸಂಗತಿ

Published:
Updated:

ಹರಪನಹಳ್ಳಿ: ಮನುಷ್ಯನ ದುರಾಸೆಗೆ ಸಸ್ಯ ಸಂಕುಲ ನಾಶವಾಗಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಹೀಗೇ ಮುಂದುವರಿದರೆ ಮಹಾ ನಗರಗಳಲ್ಲಿರುವ ‘ಆಕ್ಸಿಜನ್ ಕ್ಲಬ್’ಗಳು ಮುಂದೊಂದು ದಿನ ಮಧ್ಯ ಕರ್ನಾಟಕದಂತಹ ಪ್ರದೇಶದಲ್ಲೂ ಆರಂಭಗೊಳ್ಳಬಹುದು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ವೀರಭದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಅಂಬ್ಲಿ ದೊಡ್ಡ ಭರಮಪ್ಪ ಪ್ರಥಮದರ್ಜೆ ಕಾಲೇಜಿನಲ್ಲಿ ಬುಧವಾರ ಯುಜಿಸಿ ಸಹಯೋಗದಲ್ಲಿ ‘ಸಮಗ್ರ ಕೃಷಿಯಲ್ಲಿ ಜೀವ ವೈವಿಧ್ಯದ ಬಳಕೆ’ ಕುರಿತು ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನಗರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಾಗುತ್ತಿಲ್ಲ. ಹೀಗಾಗಿ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ವಿವಿಧ ಮಹಾನಗರಗಳ ಕೆಲವೆಡೆ ಆಕ್ಸಿಜನ್ ಕ್ಲಬ್‌ಗಳು ಆರಂಭವಾಗಿವೆ. ಮಧ್ಯ ಕರ್ನಾಟಕದಲ್ಲೂ ಗಿಡ-ಮರಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈಗಲೇ ಎಚ್ಚೆತ್ತುಕೊಂಡು ಎಚ್ಚರಿಕೆಯ ಹೆಜ್ಜೆ ಇಡದಿದ್ದರೆ ಇಲ್ಲಿಯೂ ಸಮಸ್ಯೆ ಬಿಗಡಾಯಿಸಲಿದೆ ಎಂದು ಎಚ್ಚರಿಸಿದರು.

‘ಪ್ರಕೃತಿಯನ್ನು ಅಂಕೆಯಿಲ್ಲದೇ ನಾಶ ಮಾಡುತ್ತಿದ್ದೇವೆ. ಹೀಗಾದರೆ ಪ್ರಕೃತಿ ಮನುಷ್ಯರನ್ನು ಹೇಗೆ ಕಾಪಾಡುತ್ತದೆ ಎಂಬ ಪ್ರಶ್ನೆ ಕಾಡುತ್ತಿದೆ. ಚಂದ್ರನಲ್ಲಿ ಹೆಜ್ಜೆಯಿಟ್ಟು, ಮಂಗಳ ಗ್ರಹದಲ್ಲಿ ಸಂಶೋಧನೆ ನಡೆಸುತ್ತಿರುವ ನಾವು, ದುರಾಸೆ ಬಿಟ್ಟು ಪ್ರಕೃತಿ ಉಳಿಸುವತ್ತ ಗಮನ ಹರಿಸಬೇಕು’ ಎಂದರು.

ತಂತ್ರಜ್ಞಾನದ ದುಷ್ಪರಿಣಾಮದಿಂದಾಗಿ ಗುಬ್ಬಿಯಂಥ ಹಲವು ಪಕ್ಷಿಗಳು ಕಣ್ಮರೆಯಾಗುತ್ತಿವೆ. ಜೀವ ಸಂಕುಲವನ್ನು ಸಂರಕ್ಷಿಸುವ ಕೆಲಸವಾಗಬೇಕು ಎಂದು ಹೇಳಿದರು.

ಶುದ್ಧ ಪರಿಸರ, ಕಲ್ಮಶವಿಲ್ಲದ ಮನಸುಗಳು ನಿರ್ಮಾಣವಾಗಬೇಕು. ಹೀಗಾಗಿ ಸಾವಿರಾರು ಗಿಡಗಳನ್ನು ಮಕ್ಕಳಂತೆ ಬೆಳೆಸಿದ ಸಾಲು ಮರದ ತಿಮ್ಮಕ್ಕ ಮಾದರಿಯಾಗಬೇಕು. ಪ್ರತಿಯೊಬ್ಬರೂ ಜೀವಿತ ಅವಧಿಯಲ್ಲಿ ಕನಿಷ್ಠ ನೂರು ಗಿಡಗಳನ್ನಾದರೂ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಕ್ಕಿ ಶಿವಕುಮಾರ್ ಮಾತನಾಡಿ, ‘ಪರಿಸರ ಉಳಿಯದಿದ್ದರೆ ಮಳೆ ಆಗುವುದಿಲ್ಲ. ಮಳೆ ಬಾರದಿದ್ದರೆ ಹೊಲ ಉಳುಮೆ ಮಾಡಿ, ಬಿತ್ತನೆ ಮಾಡಲು ಸಾಧ್ಯವಿಲ್ಲ. ಆಗ ಸೇವಿಸಲು ಆಹಾರವೂ ಸಿಗದಂತಾಗುತ್ತದೆ. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸಕ್ಕೆ ಒತ್ತು ನೀಡಿದಂತೆ ಪರಿಸರದ ಉಳಿವಿಗೂ ಆದ್ಯತೆ ಕೊಡಬೇಕು’ ಎಂದು ಹೇಳಿದರು.

‘ಕೃಷಿ ಜೀವ ವೈವಿಧ್ಯ ಮತ್ತು ಭಾರತದಲ್ಲಿ ಆಹಾರ ಭದ್ರತೆ’ ಕುರಿತು ಗುಲ್ಬರ್ಗ ವಿಶ್ವವಿದಾಲಯದ ಡಾ.ಇ.ಎಂ. ವಿದ್ಯಾಸಾಗರ, ‘ಜೀವವೈವಿಧ್ಯ ಸಂರಕ್ಷಣೆಯಲ್ಲಿ ಜೈವಿಕ ತಂತ್ರಜ್ಞಾನ’ದ ಬಗ್ಗೆ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಎ.ಬಿ. ವೇದಮೂರ್ತಿ ಉಪನ್ಯಾಸ ನೀಡಿದರು.

ಪ್ರಾಚಾರ್ಯ ಡಾ.ಡಿ. ತಿಪ್ಪೇಸ್ವಾಮಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಎಂ. ಸಿದ್ದಲಿಂಗಮೂರ್ತಿ ಮಾತನಾಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಕೆ.ಎಂ. ಬಸವ ರಾಜಯ್ಯ, ಉಪನ್ಯಾಸಕರಾದ ಜಿ.ಬಿ. ನಾಗನಗೌಡ, ಜಿ. ಮಂಜಣ್ಣ, ಕೆ.ಬಿ. ಶಂಕರನಂದ, ಜಿ. ಉಮೇಶ್, ಎಚ್. ಅಶಾ, ಶಿವಕುಮಾರ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry