ಶೇ 75ಕ್ಕೂ ಅಧಿಕ ಮತದಾನದ ಗುರಿ

7
ಪ್ರತಿ ನಾಗರಿಕರಿಗೂ ಚುನಾವಣಾ ನೀತಿ ಸಂಹಿತೆ ಅನ್ವಯ: ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ.

ಶೇ 75ಕ್ಕೂ ಅಧಿಕ ಮತದಾನದ ಗುರಿ

Published:
Updated:
ಶೇ 75ಕ್ಕೂ ಅಧಿಕ ಮತದಾನದ ಗುರಿ

ಹಾವೇರಿ:  ಪ್ರತಿ ನಾಗರಿಕರಿಗೂ ಚುನಾವಣಾ ನೀತಿ ಸಂಹಿತೆ ಅನ್ವಯಿಸುತ್ತಿದ್ದು, ಕಡ್ಡಾಯವಾಗಿ ಪಾಲಿಸುವ ಮೂಲಕ ಸಹಕಾರ ನೀಡಬೇಕು. ಈ ಬಾರಿ ಶೇ 75ಕ್ಕೂ ಅಧಿಕ ಮತದಾನಕ್ಕೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಮನವಿ ಮಾಡಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸ್ಥಳಗಳಲ್ಲಿನ ಭಿತ್ತಿಪತ್ರ ತೆರವುಗೊಳಿಸುವ ಕಾರ್ಯ ನಡೆದಿದೆ. 48 ಗಂಟೆಯೊಳಗೆ ಎಲ್ಲ ಪ್ರಚಾರ ಫಲಕಗಳನ್ನು ತೆರವುಗೊಳಿಸಬೇಕು’ ಎಂದರು.

ಚುನಾವಣಾ ಪ್ರಚಾರ ಸಾಮಗ್ರಿಗಳ ಮುದ್ರಣ, ಪ್ರಸಾರ, ಪ್ರದರ್ಶನ ಹಾಗೂ ಪತ್ರಿಕಾ, ವಿದ್ಯುನ್ಮಾನ ಮತ್ತು ಸಾಮಾಜಿಕ ಜಾಲತಾಣಗಳ ಜಾಹೀರಾತುಗಳಿಗೆ ಎಂ.ಸಿ.ಸಿ. ಹಾಗೂ ಎಂ.ಸಿ.ಎಂ.ಸಿ.ಎ ಸಮಿತಿ ಅನುಮತಿಯು ಕಡ್ಡಾಯ. ಅನುಮತಿ ರಹಿತವಾಗಿ ಪ್ರಕಟಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.

ಧಾರ್ಮಿಕ ಸ್ಥಳಗಳಲ್ಲಿ ಸಭೆ– ಸಮಾರಂಭ ನಡೆಸುವುದು, ಕೋಮು ಭಾವನೆ ಕೆರಳಿಸುವ, ಗಲಭೆ ಉಂಟು ಮಾಡುವ ಹೇಳಿಕೆಗಳು ಶಿಕ್ಷಾರ್ಹ ಅಪರಾಧವಾಗಿದ್ದು, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.

ಸಾಮಾಜಿಕ ಜಾಲತಾಣಗಳ ಮೂಲಕ ಒಬ್ಬ ವ್ಯಕ್ತಿ ಪರ ಹೆಚ್ಚು ಪ್ರಚಾರ ನಡೆಯುತ್ತಿದ್ದರೆ, ಅದನ್ನು ‘ಕಾಸಿಗಾಗಿ ಸುದ್ದಿ’ ಎಂದು ಪರಿಗಣಿಸಿಕೊಂಡು, ಮೊದಲಿಗೆ ಪಕ್ಷಕ್ಕೆ ಹಾಗೂ ಆ ಬಳಿಕ ಅಭ್ಯರ್ಥಿಯ ಖಾತೆಗೆ ಲೆಕ್ಕ ಸೇರಿಸಲಾಗುವುದು ಎಂದರು.

ಕರಪತ್ರ ಮುದ್ರಿಸಲು ಅಭ್ಯರ್ಥಿಗಳು, ಮುದ್ರಣಕಾರರು ಅನುಮತಿ ಪಡೆಯಬೇಕು. ಇದು ಜಾತ್ರೆ, ಮದುವೆ, ಸಭೆ ಸಮಾರಂಭಗಳಿಗೂ ಅನ್ವಯಿಸುತ್ತದೆ. ರಾಜಕೀಯ ಪಕ್ಷಗಳು ಪರಿಸರ ಸ್ನೇಹಿ ಪ್ರಚಾರ ಸಾಮಗ್ರಿಗಳನ್ನು ಬಳಸಬೇಕು ಎಂದರು.

ಪ್ರಚಾರ ಕಾರ್ಯಕ್ಕೆ 18 ವರ್ಷ ಕೆಳಗಿನ ಮಕ್ಕಳನ್ನು ಬಳಸಿಕೊಂಡರೆ ಬಾಲ ಕಾರ್ಮಿಕ ಕಾಯ್ದೆ ಅನುಸಾರ ಕ್ರಮ ಕೈಗೊಳ್ಳಲಾಗುವುದು ಎಂದರು.

‘186 ಕ್ರಿಟಿಕಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಇವುಗಳಿಗೆ ವೆಬ್‌ಕ್ಯಾಮೆರಾ ಅಳವಡಿಸಲು ನಿರ್ಧರಿಸಲಾಗಿದೆ. ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಗರ್ಭಿಣಿಯರು, ನಿವೃತ್ತಿ ಹಂತದಲ್ಲಿರುವವರು ಹಾಗೂ ಅನಾರೋಗ್ಯ ಪೀಡಿತರನ್ನು ಹೊರತುಪಡಿಸಿ, ಎಲ್ಲ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ತಪ್ಪಿಸಿದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಂ ಮಾತನಾಡಿ, ‘₹50 ಸಾವಿರಕ್ಕಿಂತ ಹೆಚ್ಚು ಹಣವನ್ನು ಅಗತ್ಯ ದಾಖಲೆಗಳು ಇಲ್ಲದೇ ಕೊಂಡೊಯ್ಯುವಂತಿಲ್ಲ. ಭದ್ರತೆಗೆ ಪೊಲೀಸರ ಜೊತೆಗೆ ಕೇಂದ್ರದ ಸಶಸ್ತ್ರ ಪಡೆ ಸಿಬ್ಬಂದಿ ನಿಯೋಜಿಸಲಾಗುವುದು. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚುವರಿ ಬಂದೋಬಸ್ತ್ ಒದಗಿಸಲಾಗುವುದು’ ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ 1,019 ಜಾಮೀನು ರಹಿತ ವಾರೆಂಟ್‌ಗಳನ್ನು ನೀಡಲಾಗಿದೆ. 515 ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳ ಪೈಕಿ 248 ಶಸ್ತ್ರಾಸ್ತ್ರಗಳು ಠೇವಣಿ ಮಾಡಿದ್ದಾರೆ ಎಂದರು.

ಚುನಾವಣೆಯ ಅಂಕಿ ಅಂಶಗಳು

ಚುನಾವಣೆಗೆ ಒಟ್ಟು ಸಿಬ್ಬಂದಿ– 9,000

ಭದ್ರತೆಗೆ ಪೊಲೀಸ್ ಸಿಬ್ಬಂದಿ–2,500

ತೆರೆಯಲಾದ ಚೆಕ್ ಪೋಸ್ಟ್‌ಗಳು –15

ಎಂಸಿಸಿ ತಂಡ–19

ಲೆಕ್ಕಪತ್ರ ಪರಿಶೀಲನೆ ತಂಡ–15

ಸಂಚಾರಿ ವೀಕ್ಷಕರು–19

ಪ್ರತಿ ಮತಗಟ್ಟೆಗೆ ಸಿಬ್ಬಂದಿ–5

ಕಳೆದ ಬಾರಿ (2013)ಗಿಂತ ಶೇಕಡಾ ಮತದಾರರ ಹೆಚ್ಚಳ – 16

ನ್ಯಾಯಾಲಯದಲ್ಲಿರುವ ಕಳೆದ ಚುನಾವಣೆಯ ಪ್ರಕರಣಗಳು–7ನೀರಿನ ಸಮಸ್ಯೆ ನೀಗಿಸಲು ಕ್ರಮ

ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳಲಾಗುವುದು. ಶಾಸಕರ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಉಪ ವಿಭಾಗಾಧಿಕಾರಿ ನಡೆಸುವರು. ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವರು. ಸರ್ಕಾರ ನೀರು ಪೂರೈಕೆಗೆ ₹2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಯಾರೂ ಖಾಸಗಿಯಾಗಿ ಟ್ಯಾಂಕರ್ ಮೂಲಕ ನೀರು ಕೊಡಲು ಅವಕಾಶ ಇಲ್ಲ, ಜಿಲ್ಲಾಡಳಿತವೇ ನೀರು ಪೊರೈಕೆ ಮಾಡಲಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

**

ರಾಣೆಬೆನ್ನೂರು ಕ್ಷೇತ್ರವನ್ನು ಅತಿ ಹೆಚ್ಚು ಹಣ ವೆಚ್ಚ ಮಾಡುವ ಕ್ಷೇತ್ರ ಎಂದು ಆಯೋಗ ಗುರುತಿಸಿದ್ದು, ಅಲ್ಲಿಗೆ ಹೆಚ್ಚುವರಿ ಲೆಕ್ಕ ವೀಕ್ಷಕರನ್ನು ನೇಮಕ ಮಾಡಲಾಗುವುದು – ಡಾ.ವೆಂಕಟೇಶ್ ಎಂ.ವಿ, ಜಿಲ್ಲಾಧಿಕಾರಿ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry