ಮುದ್ರಣ ಪೂರ್ವ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ

7

ಮುದ್ರಣ ಪೂರ್ವ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ

Published:
Updated:

ಕಲಬುರ್ಗಿ: ‘ಚುನಾವಣೆ ಪ್ರಚಾರದ ಭಿತ್ತಿಪತ್ರ, ಕರಪತ್ರ, ಪೋಸ್ಟರ್ಸ್, ಫ್ಲೆಕ್ಸ್ ಸೇರಿ ಪ್ರಚಾರ ಮಾದರಿ ಪುಸ್ತಕ, ಕಿರು ಹೊತ್ತಿಗೆಗಳ ಮುದ್ರಣಕ್ಕೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜಕೀಯ ಪಕ್ಷಗಳ ನಾಯಕರು ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು. 

‘ಮುದ್ರಣಕ್ಕೂ ಮುನ್ನ ಮುದ್ರಕರು ಸಂಬಂಧಿಸಿದ ಕ್ಷೇತ್ರ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳ ಖರ್ಚು ವಿವರಗಳನ್ನು ಅವರ ಪಕ್ಷ ಮತ್ತು ವೈಯಕ್ತಿಕ ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗಿರುತ್ತದೆ. ಹೀಗಾಗಿ ಯಾವುದೇ ರಾಜಕೀಯ ಪ್ರಚಾರ ಸಾಮಗ್ರಿ ಅಥವಾ ಸಂಘ-ಸಂಸ್ಥೆ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಚಾರ ಸಾಮಗ್ರಿ ಮುದ್ರಿಸುವ ಮುನ್ನವೂ ಸಹ ಚುನಾವಣಾಧಿಕಾರಿ ನೀಡಿರುವ ಅನುಮತಿ ಪತ್ರ ಗಮನಿಸಬೇಕು. ಚುನಾವಣಾಧಿಕಾರಿ ಅನುಮತಿ ಇಲ್ಲದೆ ಮುದ್ರಣ ಮಾಡಿದಲ್ಲಿ ಅಂತಹ ಮುದ್ರಕರ ಅಂಗಡಿಗಳನ್ನು ವಶಪಡಿಸಿಕೊಂಡು ಕಾನೂನಿನನ್ವಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಚುನಾವಣಾ ಪ್ರಚಾರ ಸಾಮಗ್ರಿ ಮೇಲೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸವಿಲ್ಲದೆ ಪ್ರಚಾರ ಸಾಮಗ್ರಿ ಮುದ್ರಿಸುವುದನ್ನು ನಿರ್ಬಂಧಿಸಲಾಗಿದೆ. ಮುದ್ರಣ ಮಾಡುವ ಮುನ್ನ ಪ್ರಕಾಶಕರಿಂದ ಘೋಷಣಾ ಪತ್ರ ಪಡೆಯಬೇಕು. ಆ ಘೋಷಣಾ ಪತ್ರಕ್ಕೆ ಪ್ರಕಾಶಕರ ಪರಿಚಯವುಳ್ಳ ಇಬ್ಬರು ವ್ಯಕ್ತಿಗಳಿಂದ ದೃಢೀಕರಣ ಪಡೆಯಬೇಕು.ಇದನ್ನು ಉಲ್ಲಂಘಿಸಿದಲ್ಲಿ 6 ತಿಂಗಳು ಶಿಕ್ಷೆ ಮತ್ತು ₹2ಸಾವಿರ ದಂಡ ವಿಧಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಯಾವುದೇ ಧರ್ಮ, ಜಾತಿ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಮನವಿ ಮಾಡುವಂತಹ ಮತ್ತು ಪ್ರತಿಸ್ಪರ್ಧಿಯ ಚಾರಿತ್ರ್ಯವಧೆ ಮಾಡುವಂತಹ ವಿಷಯಗಳನ್ನು ಪ್ರಕಟಿಸುವಂತಿಲ್ಲ’ ಎಂದರು.

‘ಜಿಲ್ಲೆಯಲ್ಲಿನ ಎಲ್ಲ ಪ್ರಿಂಟಿಂಗ್ ಪ್ರೆಸ್ ಮಾಲೀಕರು ತಮ್ಮ ಪ್ರಿಂಟಿಂಗ್ ಪ್ರೆಸ್ ವಿವರ ಒಳಗೊಂಡ ಘೋಷಣಾ ಪತ್ರವನ್ನು ಮಾ.29ರ ಒಳಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು’ ಎಂದು ಸೂಚಿಸಿದರು. ತರಬೇತುದಾರ ಮಹಾಂತೇಶ ಸ್ವಾಮಿ ಅವರು, ಮುದ್ರಕರು ಮತ್ತು ರಾಜಕೀಯ ಪಕ್ಷಗಳು ಪ್ರಚಾರ ಸಾಮಗ್ರಿ ಮುದ್ರಣ ಮತ್ತು ಪ್ರಕಾಶನಕ್ಕೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಶಿಷ್ಟಾಚಾರ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಉಪಸ್ಥಿತರಿದ್ದರು.

ನಿಯಂತ್ರಣ ಕೊಠಡಿ ಪ್ರಾರಂಭ

ಕಲಬುರ್ಗಿ: ಕಲಬುರ್ಗಿ ಗ್ರಾಮೀಣ (ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಉಪ ವಿಭಾಗಾಧಿಕಾರಿ ಕಾರ್ಯಾಲಯದಲ್ಲಿ 24/7 ನಿಯಂತ್ರಣ ಕೊಠಡಿಯನ್ನು ಪ್ರಾರಂಭಿಸಲಾಗಿದೆ ಎಂದು ಮತಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಉಪ ವಿಭಾಗಾಧಿಕಾರಿ ಡಾ. ಬಿ.ಸುಶೀಲಾ ತಿಳಿಸಿದ್ದಾರೆ. ಚುನಾವಣೆಗೆ ಸಂಬಂಧಿಸಿದಂತೆ ದೂರವಾಣಿ ಸಂಖ್ಯೆ: 08472-254448ಗೆ ದೂರು ಸಲ್ಲಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry