ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಮೌಲ್ಯಗಳು ಕುಸಿತ: ವಿಷಾದ

ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ
Last Updated 29 ಮಾರ್ಚ್ 2018, 13:00 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಶ್ರೀಮಂತಿಕೆ ಹಾಗೂ ಅಧಿಕಾರ ಸಮಾಜದಲ್ಲಿ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಹೀಗಾಗಿ, ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಕಾವೇರಿ ವಿದ್ಯಾಸಂಸ್ಥೆಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಸಮಾಜದಲ್ಲಿ ಅನ್ಯಾಯ ನಡೆಯುತ್ತಿರುವುದಕ್ಕೆ ವ್ಯಕ್ತಿಗಿಂತ ಸಮಾಜವೇ ಕಾರಣವಾಗಿದೆ. ಜೈಲಿಗೆ ಹೋದ ವ್ಯಕ್ತಿಗಳಿಗೆ ಹಾರಹಾಕಿ ಗೌರವ ನೀಡುವ ಪದ್ಧತಿ ನಿಲ್ಲಬೇಕು’ ಎಂದು ಕೋರಿದರು.

‘ಶ್ರೀಮಂತಿಕೆ ಮತ್ತು ಅಧಿಕಾರಕ್ಕೆ ಹೆಚ್ಚು ಮನ್ನಣೆ ಕೊಡುತ್ತಿರುವುದು ಸಮಾಜಕ್ಕೆ ತೊಡಕ್ಕಾಗುತ್ತಿದೆ. ಇದರಿಂದ ಸಾಮಾಜಿಕ ಮೌಲ್ಯ ಕುಸಿಯುತ್ತಿವೆ. ಲೋಕಾಯುಕ್ತರಾಗಿ ಬರುವ ಮುನ್ನ ಜನರು ಸುಖವಾಗಿ ಜೀವಿಸುತ್ತಿದ್ದಾರೆಂದು ಭಾವಿಸಿದ್ದೆ. ಆದರೆ, ಸರ್ಕಾರ ಜನರಿಗೆ ಅನ್ಯಾಯ ಮಾಡುವುದನ್ನು ನೋಡಿ ಅನಿಸಿಕೆ ತಪ್ಪು ಎಂಬುವುದು ಮನದಟ್ಟಾಯಿತು. ದೇಶದಲ್ಲಿ ಹಗರಣಗಳಿಂದ ಅಭಿವೃದ್ದಿ ಕುಂಠಿತವಾಗುತ್ತಿದೆ’ ಎಂದು ಹೇಳಿದರು.

ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ‘ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ಕಟ್ಟುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು’ ಎಂದು ಹೇಳಿದರು.

‘ಸಮಾಜಕ್ಕೆ ಉತ್ತಮ ಸೇವೆ ನೀಡುವುದು ನಮ್ಮಲ್ಲಿ ಅನುವಂಶಿಕವಾಗಿ ಬೆಳೆದು ಬಂದಿದೆ. ಇದನ್ನು ಕಾಪಾಡಿಕೊಳ್ಳುವ ಅವಶ್ಯಕತೆ ಹೆಚ್ಚಿದೆ. ಭವಿಷ್ಯದಲ್ಲಿ ಉತ್ತಮ ಬಾಂಧವ್ಯ ಕಟ್ಟುವ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕು. ಸಮಾಜದಲ್ಲಿನ ವಿವಿಧತೆಯಲ್ಲಿರುವ ಏಕತೆಯನ್ನು ಸಮಾಜಕ್ಕೆ ತೋರಿಸಬೇಕಿದೆ’ ಎಂದು ಕರೆ ನೀಡಿದರು.

ಬೆಂಗಳೂರು ರಾಜೀವ್ ಗಾಂಧಿ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ನಿರ್ದೇಶಕ ಡಾ.ಕೆ.ಆರ್. ಪುತ್ತುರಾಯ ಮಾತನಾಡಿ, ‘ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗುತ್ತಿದ್ದಂತೆ ಉತ್ತಮ ಶಿಕ್ಷಣದ ಕೊರತೆ ಕಾಡುವಂತಾಗಿದೆ’ ಎಂದರು.

ಕುಟುಂಬದಿಂದಲೇ ಸಂಸ್ಕಾರಗಳು ಹೊರಬರಬೇಕು; ಇಂತಹ ಪದ್ಧತಿಯನ್ನು ಮುಂದುವರಿಸುವ ಅವಶ್ಯಕತೆ ಇದೆ ಎಂದರು. ಚೆಕ್ಕೇರ ಬಿ. ಮುತ್ತಣ್ಣ ಅವರ ಪುತ್ಥಳಿಯನ್ನು ಕಾಲೇಜು ಆವರಣದಲ್ಲಿ ಸಂತೋಷ್ ಹೆಗ್ಡೆ ಅನಾವರಣಗೊಳಿಸಿದರು.

ವಿದ್ಯಾರ್ಥಿ ನಾಯಕರಾದ ನೆಲ್ಲಮಕ್ಕಡ ವಿಘ್ನೇಶ್, ಚಮ್ಮಟೀರ ಹರ್ಷಿ ಪಾರ್ವತಿ, ಮಂಗೇರಿರ ಪೂವಮ್ಮ, ರಿಕಿನ್ ಉತ್ತಪ್ಪ, ಪಳೆಯಂಡ ಬೆಳ್ಯಪ್ಪ, ಮಾಳೇಟೀರ ನಯನ ಲೋಕೇಶ್ ಅವರನ್ನು ಗೌರವಿಸಲಾಯಿತು.

ಕಾವೇರಿ ಪಥ ಸಂಚಿಕೆಯನ್ನು ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಡುಗಡೆ ಮಾಡಿದರು.ಬುಟ್ಟಿಯಂಡ ಚೆಂಗಪ್ಪ, ಅಧ್ಯಕ್ಷ ಡಾ.ಎ.ಸಿ. ಗಣಪತಿ, ಉಪಾಧ್ಯಕ್ಷ ಸಿ.ಬಿ. ದೇವಯ್ಯ, ಸಲಹೆಗಾರ ಕೆ.ಎ. ಚಿಣ್ಣಪ್ಪ, ಪ್ರಾಂಶುಪಾಲರಾದ ಪ್ರೊ.ಪಿ.ಎ. ಪೂವಣ್ಣ, ಪ್ರೊ.ಸಿ.ಎಂ. ನಾಚಪ್ಪ, ಎಸ್.ಎಸ್. ಮಾದಯ್ಯ, ಎನ್.ಎಂ. ನಾಣಯ್ಯ, ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT