ರಾಜಕರಣಿಗಳ ಆದಾಯದ ಮೂಲ ಗಮನಿಸಿ

7
ಚುನಾವಣಾ ಅಕ್ರಮ ತಡೆ ಸಂಬಂಧ ಸಭೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ರಾಜಕರಣಿಗಳ ಆದಾಯದ ಮೂಲ ಗಮನಿಸಿ

Published:
Updated:
ರಾಜಕರಣಿಗಳ ಆದಾಯದ ಮೂಲ ಗಮನಿಸಿ

ಕೋಲಾರ: ರಾಜ್ಯ ವಿಧಾನಸಭಾ ಚುನಾವಣೆ ಪ್ರಯುಕ್ತ ರಾಜಕಾರಣಿಗಳ ಆದಾಯ ಮೂಲಗಳ ಮೇಲೆ ಹೆಚ್ಚು ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಆದಾಯ ತೆರಿಗೆ ಇಲಾಖೆ ಹಾಗೂ ಚುನಾವಣಾ ವೆಚ್ಚ ಮೇಲ್ವಿಚಾರಣೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚುನಾವಣಾ ಅಕ್ರಮ ತಡೆ ಸಂಬಂಧ ನಗರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿ, ‘ಜಿಲ್ಲೆಯಾದ್ಯಂತ ಈಗಾಗಲೇ ಚುನಾವಣಾ ನೀತಿಸಂಹಿತೆ ಜಾರಿಯಾಗಿದೆ. ರಾಜಕಾರಣಿಗಳು ಹಾಗೂ ಅವರ ಬೆಂಬಲಿಗರು ಮತದಾರರ ಓಲೈಕೆಗಾಗಿ ಹಣ ಹಾಗೂ ಮದ್ಯ ಹಂಚುವುದು ಸಾಮಾನ್ಯ. ಇಂತಹ ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಬೇಕು’ ಎಂದು

ಹೇಳಿದರು.

‘ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವುದು ಹೀಗೆ ಚುನಾವಣೆಗೆ ಸಂಬಂಧಪಟ್ಟ ಪ್ರತಿ ಚಟುವಟಿಕೆ ಮೇಲೂ ಗಮನ ಹರಿಸಬೇಕು. ಹೊರಗಿನಿಂದ ಜಿಲ್ಲೆಗೆ ಅಕ್ರಮವಾಗಿ ಹಣ ಸಾಗಿಸಿಕೊಂಡು ಬಂದು ಮತದಾರರಿಗೆ ಹಂಚುವ ಸಾಧ್ಯತೆ ಇರುತ್ತದೆ. ಹೀಗಾಗಿ ಅಧಿಕಾರಿಗಳು ಮೈಯೆಲ್ಲಾ ಕಣ್ಣಾಗಿರಬೇಕು’ ಎಂದು ಅವರು ತಿಳಿಸಿದರು.

‘ಚುನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ₹ 50 ಸಾವಿರಕ್ಕಿಂತ ಹೆಚ್ಚಿನ ಹಣ ಕೊಂಡೊಯ್ಯುವಂತಿಲ್ಲ. ಅಭ್ಯರ್ಥಿಗಳ ಚುನಾವಣಾ ವೆಚ್ಚ ₹ 28 ಲಕ್ಷ ಮೀರುವಂತಿಲ್ಲ. ರಾಜಕಾರಣಿಗಳು, ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪ್ರತಿನಿತ್ಯ ಕಲೆ ಹಾಕಬೇಕು. ಜತೆಗೆ ವೆಚ್ಚಕ್ಕೆ ಸಂಬಂಧಿಸಿದ ದಾಖಲೆಪತ್ರಗಳನ್ನು ಸಂಗ್ರಹಿಸಬೇಕು’ ಎಂದು ಅವರು ಹೇಳಿದರು.

ಚೆಕ್‌ಪೋಸ್ಟ್: ‘ಅಕ್ರಮವಾಗಿ ಹಣ, ಮದ್ಯ, ಬಟ್ಟೆ ಹಾಗೂ ಉಡುಗೊರೆ ಸಾಗಿಸುವ ಬಗ್ಗೆ ನಿಗಾ ವಹಿಸಲು ಜಿಲ್ಲೆಯ 20 ಕಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಅಲ್ಲದೇ, 40 ವಿಶೇಷ ತಂಡ ರಚಿಸಲಾಗಿದೆ.ಮಾದರಿ ಚುನಾವಣಾ ನೀತಿಸಂಹಿತೆ ತಂಡಗಳು ದಿನದ 24 ತಾಸೂ ಕಾರ್ಯ ನಿರ್ವಹಿಸಲಿವೆ. ಈ ತಂಡಗಳ ಮೇಲ್ವಿಚಾರಣೆಗೆ ನೋಡಲ್‌ ಅಧಿಕಾರಿ ನೇಮಿಸಲಾಗುತ್ತದೆ’ ಎಂದು ಹೇಳಿದರು.

ಜಪ್ತಿ ಮಾಡಿ: ‘ಯಾವುದೇ ವ್ಯಕ್ತಿ ₹ 10 ಲಕ್ಷಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಿದರೆ ಅವರ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಮನೆಗಳಲ್ಲಿ ಕಾನೂನು ಬಾಹಿರವಾಗಿ ಹಣ ಸಂಗ್ರಹಿಸಿ ಟ್ಟುಕೊಂಡಿದ್ದರೆ ಅದನ್ನು ಜಪ್ತಿ ಮಾಡಬೇಕು. ನೀತಿಸಂಹಿತೆ ಪಾಲನೆ ವಿಷಯದಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ’ ಎಂದು ಖಡಕ್‌ ಎಚ್ಚರಿಕೆ ನೀಡಿದರು.

‘ರಾಜಕಾರಣಿಗಳು ಹಾಗೂ ಅಭ್ಯರ್ಥಿಗಳ ಬ್ಯಾಂಕ್‌ ವ್ಯವಹಾರದ ಮೇಲೆ ಹದ್ದಿನ ಕಣ್ಣಿಡಬೇಕು. ದಾಖಲೆಪತ್ರರಹಿತ ಯಾವುದೇ ಹಣವನ್ನೂ ಮುಲಾಜಿಲ್ಲದೆ ವಶ ಪಡಿಸಿಕೊಳ್ಳಬೇಕು. ಅಧಿಕೃತ ದಾಖಲೆ ಪತ್ರದೊಂದಿಗೆ ಹಣಕಾಸು ವ್ಯವಹಾರ ನಡೆಸಿದರೆ ಅಥವಾ ಹಣ ಸಾಗಿಸುತ್ತಿದ್ದರೆ ಅದಕ್ಕೆ ಅವಕಾಶ ಕೊಡಿ’ ಎಂದು ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಆದಾಯ ತೆರಿಗೆ ಇಲಾಖೆ ಉಪ ಆಯುಕ್ತ ಗುರುಪ್ರಸಾದ್ ಮತ್ತಿತರರು ಹಾಜರಿದ್ದರು.

**

ಅಧಿಕೃತ ದಾಖಲೆಪತ್ರಗಳಿಲ್ಲದೆ ವರ್ಗಾವಣೆಯಾಗುವ ಹಣದ ಮೇಲೆ ನಿಗಾ ವಹಿಸುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳಿಗೆ ಆದೇಶ ಹೊರಡಿಸಲಾಗುತ್ತದೆ. ಆದಾಯ ತೆರಿಗೆ ಹಾಗೂ ಚುನಾವಣಾ ವೆಚ್ಚ ಮೇಲ್ವಿಚಾರಣೆ ಅಧಿಕಾರಿಗಳು ಬ್ಯಾಂಕ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು

–ಜಿ.ಸತ್ಯವತಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry