ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’ ಮಾಲೀಕ ಬಂಧನ

Last Updated 29 ಮಾರ್ಚ್ 2018, 19:56 IST
ಅಕ್ಷರ ಗಾತ್ರ

ಬೆಂಗಳೂರು: ‘ಜೈನ ಮುನಿ ಉಪಾಧ್ಯಾಯ ಮಾಯಾಂಕ್ ಸಾಗರ್‌ ಜೀ ಅವರ ಮೇಲೆ ಮುಸ್ಲಿಮ್ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ’ ಎಂದು ಸುಳ್ಳು ಸುದ್ದಿ ಪ್ರಕಟಿಸಿದ್ದ ಆರೋಪದಡಿ ‘ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’ ಜಾಲತಾಣದ ಮಾಲೀಕ ಮಹೇಶ್‌ ವಿಕ್ರಮ್ ಹೆಗ್ಡೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಸುಳ್ಳು ಸುದ್ದಿ ಸಂಬಂಧ ಗಫರ್ ಬೇಗ್‌ ಎಂಬುವವರು ದೂರು ನೀಡಿದ್ದರು. ಆ ಬಗ್ಗೆ ತನಿಖೆ ನಡೆಸಿದಾಗ ಪುರಾವೆಗಳು ಸಿಕ್ಕಿದ್ದವು. ಹೀಗಾಗಿ, ಮಹೇಶ್‌ನನ್ನು ಬಂಧಿಸಿದ್ದೇವೆ. ಆತನ ಜಾಲತಾಣದ ನಿರ್ವಹಣೆ ಮಾಡುತ್ತಿದ್ದಾರೆ ಎನ್ನಲಾದ ಗೌರವ್ ಪ್ರಧಾನ್ ಹಾಗೂ ದೀಪಕ್ ಶೆಟ್ಟಿ ಎಂಬುವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮಸ್ಥಳ, ಭಾಷೆಗಳ ಆಧಾರದಲ್ಲಿ ಗುಂಪುಗಳ ಮಧ್ಯೆ ದ್ವೇಷ ಬಿತ್ತುವುದು ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವಂಥ ಕೃತ್ಯಗಳನ್ನೆಸಗುವುದು), 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ) ಮತ್ತು 120ಬಿ (ಅಪರಾಧ ಸಂಚು) ಅನ್ವಯ ಪ್ರಕರಣ ದಾಖಲಿಸಲಾಗಿದೆ.

ಶ್ರವಣಬೆಳಗೋಳದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಂಡಿದ್ದ ಮುನಿ, ಅದನ್ನು ಮುಗಿಸಿಕೊಂಡು ಭಕ್ತರ ಸಮೇತ ಮಹಾರಾಷ್ಟ್ರಕ್ಕೆ ಹೊರಟಿದ್ದರು. ನಂಜನಗೂಡಿನಿಂದ ಕನಕಗಿರಿ ಮಾರ್ಗ ಮಧ್ಯೆ ಇರುವ ಕವಲಂದೆ ಗ್ರಾಮದ ಬಳಿ ಮಾರ್ಚ್‌ 11ರಂದು ಬೈಕೊಂದು ಮುನಿಗಳು ಹಾಗೂ ಅವರ ಭಕ್ತರಿಗೆ ಗುದ್ದಿತ್ತು.

ಅದರಿಂದ ಮುನಿಯವರ ಬಲತೋಳು, ಬಲ ಮೊಣಕೈ, ಹಣೆ ಹಾಗೂ ಮುಖಕ್ಕೆ ಗಾಯವಾಗಿತ್ತು. ಸ್ಥಳೀಯರೇ ಅವರನ್ನು ಗ್ರಾಮಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು ಎಂದರು.

ಅಪಘಾತದ ಸುದ್ದಿ ತಿಳಿದ ಮಹೇಶ್‌, ಎರಡು ಧರ್ಮಗಳ ನಡುವೆ ದ್ವೇಷ ಭಾವನೆ ಹುಟ್ಟುಹಾಕುವ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ, ‘ಕರ್ನಾಟಕದಲ್ಲಿ ಜೈನ ಮುನಿ ಮೇಲೆ ಮುಸ್ಲಿಮ್ ಯುವಕನೊಬ್ಬ ಹಲ್ಲೆ ಮಾಡಿದ್ದಾನೆ. ಇದು ಶೋಚನೀಯ’ ಎಂದು ‘postcard.news’ ಹೆಸರಿನ ಜಾಲತಾಣದಲ್ಲಿ ಸುದ್ದಿ ಪ್ರಕಟಿಸಿದ್ದ. ಜತೆಗೆ, ತನ್ನ ಟ್ವಿಟರ್‌ ಹಾಗೂ ಫೇಸ್‌ಬುಕ್‌ ಖಾತೆಯಲ್ಲೂ ಅದನ್ನೇ ಬರೆದುಕೊಂಡಿದ್ದ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದ ಈ ಸುದ್ದಿಯನ್ನು ಸಾವಿರಾರು ಮಂದಿ ವೀಕ್ಷಿಸಿದ್ದರು. ಅದಕ್ಕೆ ಪ್ರತಿಯಾಗಿ ಧರ್ಮ ನಿಂದಿಸುವ ಪ್ರತಿಕ್ರಿಯೆಗಳನ್ನು ಹಲವರು ವ್ಯಕ್ತಪಡಿಸಿದ್ದರು. ಇದನ್ನು ಗಮನಿಸಿದ್ದ ಗಫರ್, ಠಾಣೆಗೆ ಬಂದು ದೂರು ಕೊಟ್ಟಿದ್ದರು ಎಂದು ಪೊಲೀಸರು ತಿಳಿಸಿದರು.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ವಹಣೆ
‘ಪೋಸ್ಟ್‌ಕಾರ್ಡ್‌ ಡಾಟ್‌ ನ್ಯೂಸ್‌’
ಜಾಲತಾಣವು ಆಂಗ್ಲ ಭಾಷೆಯಲ್ಲಿ ಸುದ್ದಿ ಪ್ರಕಟಿಸುತ್ತಿದೆ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲೂ ಪ್ರತ್ಯೇಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಮೂರು ಜಾಲತಾಣಗಳ ವಿರುದ್ಧ ಸೈಬರ್ ಠಾಣೆಯಲ್ಲಿ 7 ದೂರುಗಳು ದಾಖಲಾಗಿವೆ. ಈ ಬಗ್ಗೆಯೂ ಆರೋಪಿಗಳಿಂದ ಹೇಳಿಕೆ ಪಡೆಯಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

‘ಮಹೇಶ್ ವಿಕ್ರಮ್ ಹೆಗ್ಡೆಯನ್ನು ಇವತ್ತು ಬೆಳಿಗ್ಗೆ ಹೇಡಿ ಕಾಂಗ್ರೆಸ್‌ ಸರ್ಕಾರ ಐಟಿ ಕಾಯ್ದೆ 66 ಅನ್ವಯ ಬಂಧಿಸಿದೆ, ಅದೂ ಸಿಸಿಬಿಯನ್ನು ಬಳಸಿಕೊಂಡು! ನಾಚಿಕೆಗೇಡು  @INCKarnataka.’ ಎಂದು ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT