ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬ್ಯಾಡ್ಮಿಂಟನ್‌ನಲ್ಲಿ ನಮ್ಮದೇ ನೆಚ್ಚಿನ ತಂಡ’

ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಅಪರ್ಣಾ ಪೋಪಟ್ ವಿಶ್ವಾಸ
Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮುಂಬೈ: ಈ ಬಾರಿಯ ಕಾಮನ್‌ವೆಲ್ತ್‌ ಕ್ರೀಡಾಕೂಟದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಭಾರತದ ಆಟಗಾರರು ಪದಕ ಗೆಲ್ಲುವುದು ನಿಶ್ಚಿತ ಎಂದು ಹಿರಿಯ ಆಟಗಾರ್ತಿ ಅಪರ್ಣಾ ಪೋಪಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ಇಲ್ಲಿ ಸೋನಿ ಟಿ.ವಿ. ಮತ್ತು ಮುಂಬೈ ಕ್ರೀಡಾ ವರದಿಗಾರರ ಸಂಘ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದಲ್ಲಿ ಅವರು ಮಾತನಾಡಿದರು.

‘ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಶ್ರೀಕಾಂತ್ ಮತ್ತು ಪ್ರಣಯ್  ಅವರು ಪದಕ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ. ಇತ್ತೀಚಿನ ಟೂರ್ನಿಗಳಲ್ಲಿ ಅವರೆಲ್ಲರೂ ಉತ್ತಮ ಸಾಧನೆ ಮಾಡಿದ್ದಾರೆ’ ಎಂದರು.

‘ಪುರುಷರ ಮತ್ತು ಮಹಿಳೆಯರ ಡಬಲ್ಸ್‌ ವಿಭಾಗಗಳಲ್ಲಿಯೂ ಪ್ರಶಸ್ತಿ ಗೆಲ್ಲುವ ಅವಕಾಶಗಳು ಹೆಚ್ಚಿವೆ. ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ ರಾಜ್ ರಣಕಿರೆಡ್ಡಿ ವಿಶ್ವದ ಹಲವು ಟೂರ್ನಿಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮೊದಲ ಬಾರಿಗೆ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಆಡುತ್ತಿದ್ದಾರೆ. ಈ ಒತ್ತಡವನ್ನು ಅವರು ಹೇಗೆ ನಿಭಾಯಿಸುತ್ತಾರೆಂದು ನೋಡಬೇಕು’ ಎಂದು 40 ವರ್ಷದ ಅಪರ್ಣಾ ಹೇಳಿದರು. ಅವರು ಒಂಬತ್ತು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದರು.

ಇದೇ ಸಂದರ್ಭದಲ್ಲಿ ಹಾಜರಿದ್ದ ಒಲಿಂಪಿಯನ್ ಹಾಕಿ ಆಟಗಾರ ವಿರೇನ್ ರಸ್ಕೀನಾ, ‘ಪುರುಷರ ಹಾಕಿ ವಿಭಾಗದಲ್ಲಿ ಆಸ್ಟ್ರೇಲಿಯಾ ತಂಡವು ಬಲಿಷ್ಠವಾಗಿದೆ. ಅವರು ಪ್ರಶಸ್ತಿ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ನ್ಯೂಜಿಲೆಂಡ್, ಬ್ರಿಟನ್ ಮತ್ತು ಭಾರತ ತಂಡವು ಕಠಿಣ ಪೈಪೋಟಿ ಒಡ್ಡುವುದು ಖಚಿತ. ಹಾಕಿ ವಿಭಾಗದಲ್ಲಿ ಅತ್ಯಂತ ರೋಚಕ ಪೈಪೋಟಿ ಇರುವುದು ಖಚಿತ’ ಎಂದರು.

‘ಮಹಿಳೆಯರ ವಿಭಾಗದಲ್ಲಿ ಭಾರತ ತಂಡಕ್ಕೆ ಪ್ರಶಸ್ತಿ ಗೆಲ್ಲುವ ಅವಕಾಶ ಇದೆ. ಚೀನಾ, ಜಪಾನ್ ಮತ್ತು ಕೊರಿಯಾ ತಂಡಗಳೂ ಬಲಿಷ್ಠವಾಗಿವೆ’ ಎಂದರು.

ಏ. 4ರಿಂದ ಗೋಲ್ಡ್‌ ಕೋಸ್ಟ್‌ನಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT