ಗೆದ್ದು ಗೌರವ ಉಳಿಸಿಕೊಂಡ ಭಾರತ

7
ಮಹಿಳಾ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌: ಇಂಗ್ಲೆಂಡ್ ಮಣಿಸಿದ ಆತಿಥೇಯರು

ಗೆದ್ದು ಗೌರವ ಉಳಿಸಿಕೊಂಡ ಭಾರತ

Published:
Updated:
ಗೆದ್ದು ಗೌರವ ಉಳಿಸಿಕೊಂಡ ಭಾರತ

ಮುಂಬೈ: ಸತತ ಸೋಲುಗಳಿಂದ ಕಂಗೆಟ್ಟಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡದವರು ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಅಂತಿಮ ಪಂದ್ಯದಲ್ಲಿ ಸಮಾಧಾನಕರ ಗೆಲುವು ಸಾಧಿಸಿದ್ದಾರೆ.

ಬ್ರೆಬೊರ್ನ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ 8 ವಿಕೆಟ್‌ಗಳಿಂದ ಇಂಗ್ಲೆಂಡ್‌ ತಂಡವನ್ನು ಸೋಲಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹೀಥರ್‌ ನೈಟ್‌ ಪಡೆ 18.5 ಓವರ್‌ಗಳಲ್ಲಿ 107ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ಭಾರತ 15.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಇಂಗ್ಲೆಂಡ್‌ ತಂಡ ನಾಲ್ಕನೇ ಓವರ್‌ನಲ್ಲಿ ಆ್ಯಮಿ ಅಲೆನ್‌ (15; 12ಎ, 3ಬೌಂ) ಅವರ ವಿಕೆಟ್‌ ಕಳೆದುಕೊಂಡಿತು. ಪೂಜಾ ವಸ್ತ್ರಕರ್‌ ಹಾಕಿದ ಎರಡನೇ ಎಸೆತದಲ್ಲಿ ಆ್ಯಮಿ, ಮಿಥಾಲಿರಾಜ್‌ಗೆ ಕ್ಯಾಚ್‌ ನೀಡಿದರು.

ಇದರ ಬೆನ್ನಲ್ಲೇ ಡ್ಯಾನಿಯಲ್‌ ವೈಟ್‌ (31; 22ಎ, 4ಬೌಂ, 1ಸಿ) ಕೂಡ ವಿಕೆಟ್‌ ಒಪ್ಪಿಸಿದರು. ನಂತರ ತಂಡ ಕುಸಿತದ ಹಾದಿ ಹಿಡಿಯಿತು. ತಮ್ಸಿನ್‌ ಬೆಮಾಂಟ್‌ (10; 9ಎ, 1ಬೌಂ), ನಥಾಲಿ ಶೀವರ್‌ (15; 12ಎ, 1ಬೌಂ) ಮತ್ತು ಹೀಥರ್‌ ನೈಟ್‌ (11; 12ಎ, 1ಬೌಂ) ಅಲ್ಪ ಪ್ರತಿರೋಧ ಒಡ್ಡಿದರು. ಕೆಳಕ್ರಮಾಂಕದ ಆಟಗಾರ್ತಿಯರನ್ನು ಬೇಗನೆ ಔಟ್‌ ಮಾಡಿದ ಭಾರತದ ಬೌಲರ್‌ಗಳು ಎದುರಾಳಿಗಳನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕಿದರು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಸಂಕಷ್ಟ ಎದುರಾಯಿತು. ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ 15 ಎಸೆತಗಳಲ್ಲಿ ಒಂದು ಬೌಂಡರಿ ಸಹಿತ 6ರನ್‌ ಗಳಿಸಿ ಡ್ಯಾನಿಯಲ್‌ ಹೇಜಲ್‌ಗೆ ವಿಕೆಟ್‌ ನೀಡಿದರು.

ಜೆಮಿಮಾ ರಾಡ್ರಿಗಸ್‌ (7; 7ಎ, 1ಬೌಂ) ಕೂಡ ಬೇಗನೆ ಪೆವಿಲಿಯನ್‌ ಸೇರಿಕೊಂಡರು. ಆಗ ತಂಡದ ಖಾತೆಯಲ್ಲಿ 48ರನ್‌ಗಳಿದ್ದವು. ಬಳಿಕ ಸ್ಮೃತಿ ಮಂದಾನ (ಔಟಾಗದೆ 62; 41ಎ, 8ಬೌಂ, 1ಸಿ) ಮತ್ತು ನಾಯಕಿ ಹರ್ಮನ್‌ಪ್ರೀತ್‌ (ಔಟಾಗದೆ 20; 31ಎ, 2ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 60ರನ್‌ ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌, 18.5 ಓವರ್‌ಗಳಲ್ಲಿ 107 (ಡ್ಯಾನಿಯಲ್‌ ವೈಟ್‌ 31, ಆ್ಯಮಿ ಅಲೆನ್‌ ಜೋನ್ಸ್‌ 15, ತಮ್ಸಿನ್‌ ಬೆಮಾಂಟ್ 10, ನಥಾಲಿ ಶೀವರ್‌ 15, ಹೀಥರ್‌ ನೈಟ್‌ 11, ಫ್ರಾನ್‌ ವಿಲ್ಸನ್‌ 12; ‍ಪೂಜಾ ವಸ್ತ್ರಕರ್‌ 17ಕ್ಕೆ1, ಅನುಜಾ ಪಾಟೀಲ್‌ 21ಕ್ಕೆ3, ರಾಧಾ ಯಾದವ್‌ 16ಕ್ಕೆ2, ದೀಪ್ತಿ ಶರ್ಮಾ 24ಕ್ಕೆ2, ಪೂನಮ್‌ ಯಾದವ್‌ 17ಕ್ಕೆ2).

ಭಾರತ: 15.4 ಓವರ್‌ಗಳಲ್ಲಿ 2 ವಿಕೆಟ್‌ಗೆ 108 (ಮಿಥಾಲಿ ರಾಜ್‌ 6, ಸ್ಮೃತಿ ಮಂದಾನ ಔಟಾಗದೆ 62, ಜೆಮಿಮಾ ರಾಡ್ರಿಗಸ್‌ 7, ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 20; ಡ್ಯಾನಿಯಲ್‌ ಹೇಜಲ್‌ 17ಕ್ಕೆ2). ಫಲಿತಾಂಶ: ಭಾರತಕ್ಕೆ 8 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry