ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯವಸ್ಥೆಗೆ ಬೇಕು ಮರುಪರೀಕ್ಷೆ’

ಸಿಬಿಎಸ್‌ಇ ಪ್ರಶ್ನೆಪತ್ರಿಕೆ ಸೋರಿಕೆ: ಅಧ್ಯಕ್ಷರ ರಾಜೀನಾಮೆಗೆ ಒತ್ತಾಯ
Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಹತ್ತನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆ ಸೋರಿಕೆ ಕಾರಣಕ್ಕಾಗಿ ಮರುಪರೀಕ್ಷೆ ನಡೆಸಲು ಸಿಬಿಎಸ್‌ಇ ನಿರ್ಧಾರಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಮತ್ತು ಸಿಬಿಎಸ್‌ಇ ಅಧ್ಯಕ್ಷೆ ಅನಿತಾ ಕರ್‌ವಾಲ್‌ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

ವಿದ್ಯಾರ್ಥಿಗಳ ಆಕ್ರೋಶ: ‘ನಮಗೆ ನ್ಯಾಯ ಬೇಕು’ ಎಂಬ ಫಲಕಗಳನ್ನು ಹಿಡಿದ ವಿದ್ಯಾರ್ಥಿಗಳು ದೆಹಲಿಯ ಜಂತರ್‌ ಮಂತರ್‌ನಲ್ಲಿ ಗುರುವಾರ ಬೆಳಿಗ್ಗೆ ಸೇರಿ ಮರುಪರೀಕ್ಷೆ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ನಮ್ಮ ಜೀವನದ ಜತೆ ಚೆಲ್ಲಾಡ ಆಡಬೇಡಿ’, ‘ಮರುಪ‍ರೀಕ್ಷೆ ಬೇಕಿರುವುದು ವಿದ್ಯಾರ್ಥಿಗಳಿಗಲ್ಲ ವ್ಯವಸ್ಥೆಗೆ’ ಎಂಬ ಘೋಷಣೆ ಜಂತರ್‌ ಮಂತರ್‌ನಲ್ಲಿ ಮೊಳಗಿತು. ಮರುಪರೀಕ್ಷೆಯ ನಿರ್ಧಾರ ತಮಗೆ ಯಾವ ರೀತಿಯಲ್ಲಿ ವೇದನೆ ಉಂಟು ಮಾಡಿದೆ ಎಂಬುದನ್ನು ಅವರು ವಿವರಿಸಿದರು.

ಬಹುತೇಕ ಎಲ್ಲ ಪ್ರಶ್ನೆಪತ್ರಿಕೆಗಳು ಪರೀಕ್ಷೆಗೆ ಮೊದಲಿನ ದಿನ ಸೋರಿಕೆಯಾಗಿವೆ. ಮರುಪರೀಕ್ಷೆ ನಡೆಸುವುದಾದರೆ ಎಲ್ಲ ವಿಷಯಗಳಿಗೂ ನಡೆಸ
ಬೇಕು ಎಂದು ಅವರು ಆಗ್ರಹಿಸಿದರು.

‘ಮರುಪರೀಕ್ಷೆಯ ಸುದ್ದಿ ಕೇಳಿ ನಮಗೆ ಆಘಾತವಾಗಿದೆ. ಬೆರಳೆಣಿಕೆಯ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮೊದಲೇ ಪ್ರಶ್ನೆಪತ್ರಿಕೆ ಸಿಕ್ಕಿದೆ ಎಂಬ ಕಾರಣಕ್ಕೆ ನಾವು ಯಾಕೆ ಶಿಕ್ಷೆ ಅನುಭವಿಸಬೇಕು’ ಎಂದು ಸೇಂಟ್‌ ಥಾಮಸ್‌ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥನಿ ಭವಿಕಾ ಯಾದವ್‌ ಪ್ರಶ್ನಿಸಿದ್ದಾರೆ.

ರಾಜಕೀಯ ಬಣ್ಣ: ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ವ್ಯಾಪಕ ಪ್ರತಿಭಟನೆಯ ನಡುವೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಲೇವಡಿ ಮಾಡಿ ಪ್ರಾಸಬದ್ಧವಾದ ಟ್ವೀಟ್‌ ಮಾಡಿದ್ದಾರೆ. ‘ಎಲ್ಲದರಲ್ಲಿಯೂ ಲೀಕ್‌, ಚೌಕಿದಾರ ಬಹಳ ವೀಕ್‌’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರತಿಭಟನೆ ಮತ್ತು ಲೇವಡಿಯಿಂದ ಜಾವಡೇಕರ್‌ ಅವರು ಎದೆಗುಂದಿಲ್ಲ. ಇದೊಂದು ದುರದೃಷ್ಟಕರ ವಿದ್ಯಮಾನ, ತಪ್ಪಿತಸ್ಥರು ನುಣುಚಿ
ಕೊಳ್ಳಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ. ರಾಹುಲ್‌ ಲೇವಡಿಗೆ ತಿರುಗೇಟು ನೀಡಿರುವ ಜಾವಡೇಕರ್‌, ‘ಅವರು ಯುಪಿಎ ಸರ್ಕಾರವನ್ನು ಉಲ್ಲೇಖಿಸಿ ಇಂತಹ ಟ್ವೀಟ್‌ ಮಾಡಿರಬೇಕು’ ಎಂದಿದ್ದಾರೆ.

ಮೂಲಪತ್ತೆಗೆ ಕ್ರಮ: ‘ಸೋರಿಕೆಯ ಮೂಲ ಯಾವುದು ಎಂಬುದನ್ನು ಗುರುತಿಸಲು ಯತ್ನಿಸುತ್ತಿದ್ದೇವೆ. ವಿದ್ಯಾರ್ಥಿಗಳು ಮತ್ತು ಕೋಚಿಂಗ್‌ ಸೆಂಟರ್‌ನ ಬೋಧಕರ ನಡುವೆ ವಾಟ್ಸ್‌ಆ್ಯಪ್‌ ಮೂಲಕ ಪ್ರಶ್ನೆಪತ್ರಿಕೆ ಹರಿದಾಡಿದೆ. ಪರೀಕ್ಷೆಗೆ ಒಂದು ದಿನ ಮೊದಲು ಈ ಸೋರಿಕೆ ನಡೆದಿದೆ. ದೇಶದಾದ್ಯಂತ ಈ ಪ್ರಶ್ನೆ ಪತ್ರಿಕೆ ಹಂಚಿಕೆಯಾಗಿರುವ ಸಾಧ್ಯತೆ ಇಲ್ಲ. ಹಾಗಿದ್ದರೂ ಪೊಲೀಸರ ತಂಡಗಳನ್ನು ವಿವಿಧ ಸ್ಥಳಗಳಿಗೆ ಕಳುಹಿಸಲಾಗುವುದು’ ಎಂದು ಪೊಲೀಸ್‌ ವಿಶೇಷ ಆಯುಕ್ತ ಆರ್‌.ಪಿ. ಉಪಾಧ್ಯಾಯ ಹೇಳಿದ್ದಾರೆ.

ಆಂತರಿಕ ತನಿಖೆ: ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಮಂಡಳಿಯ ಒಳಗಿನ ವ್ಯಕ್ತಿಗಳ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲು ಸಿಬಿಎಸ್‌ಇ ನಿರ್ಧರಿಸಿದೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಸೂಚನೆಯ ಮೇರೆಗೆ ಈ ತನಿಖಾ ಸಮಿತಿ ನೇಮಿಸಲಾಗಿದೆ. ಮಂಡಳಿಯ ಪರೀಕ್ಷಾ ವ್ಯವಸ್ಥೆಯಲ್ಲಿ ಲೋಪಗಳಿವೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ.

25 ಮಂದಿಯ ತನಿಖೆ: ಮಧ್ಯ ದೆಹಲಿಯ ರಾಜಿಂದರ್‌ ನಗರದ ವಿದ್ಯಾ ಕೋಚಿಂಗ್‌ ಸೆಂಟರ್‌ನ ಮಾಲೀಕ ವಿಕಿ ವಾಧ್ವಾ ಎಂಬಾತನೇ ಪ್ರಶ್ನೆಪತ್ರಿಕೆ ಸೋರಿಕೆಯ ಪ್ರಮುಖ ಆರೋಪಿ ಎಂದು ಶಂಕಿಸಲಾಗಿದೆ. ದೆಹಲಿ ಪೊಲೀಸ್‌ ಇಲಾಖೆಯ ವಿಶೇಷ ತನಿಖಾ ತಂಡ 18 ವಿದ್ಯಾರ್ಥಿಗಳು ಸೇರಿ 25 ಮಂದಿಯನ್ನು ತನಿಖೆಗೆ ಒಳಪಡಿಸಿದೆ. ಸಿಬಿಎಸ್‌ಇ ನೀಡಿದ ದೂರಿನಲ್ಲಿ ವಾಧ್ವಾ ಹೆಸರನ್ನು ಉಲ್ಲೇಖಿಸಲಾಗಿತ್ತು.

ತನಿಖೆಗೆ ಒಳಗಾದವರಲ್ಲಿ ಹತ್ತನೇ ತರಗತಿಯ 11 ವಿದ್ಯಾರ್ಥಿಗಳು, 11ನೇ ತರಗತಿಯ ಏಳು ವಿದ್ಯಾರ್ಥಿಗಳು, ಕೋಚಿಂಗ್‌ ಸೆಂಟರ್‌ನ ಐವರು ಮತ್ತು ಇತರ ಇಬ್ಬರು ಸೇರಿದ್ದಾರೆ.

ಉತ್ತರ ಪತ್ರಿಕೆ ರವಾನೆ: 12ನೇ ತರಗತಿ ಅರ್ಥಶಾಸ್ತ್ರದ ನಾಲ್ಕು ಉತ್ತರ ಪತ್ರಿಕೆಗಳನ್ನು ಲಕೋಟೆಯಲ್ಲಿ ಹಾಕಿ ಸಿಬಿಎಸ್‌ಇ ಕಚೇರಿಗೆ ಇದೇ 26ರಂದು ಕಳುಹಿಸಲಾಗಿದೆ. ಈ ಬಗ್ಗೆ ಸಿಬಿಎಸ್‌ಇ ದೂರು ನೀಡಿದೆ.

ಮರುಪರೀಕ್ಷೆ ಎಂದು?
ಹತ್ತನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯಗಳ ಮರುಪರೀಕ್ಷೆಯ ದಿನಾಂಕವನ್ನು ಸೋಮವಾರ ಅಥವಾ ಮಂಗಳವಾರ ಪ್ರಕಟಿಸಲಾಗುವುದು ಎಂದು ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ.

ತನಿಖೆಗೆ ಆಗ್ರಹ
ಪರೀಕ್ಷೆ ನಡೆಸುವಲ್ಲಿ ಸಿಬಿಎಸ್‌ಇ ಹೊಂದಿರುವ ನಿರ್ಲಕ್ಷ್ಯವೇ ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣ. ಸೋರಿಕೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT